ಲೋಕಾಯುಕ್ತ ಸಿಡಿಮಿಡಿ

7
ಭ್ರಷ್ಟರ ವಿರುದ್ಧ ವಿಚಾರಣೆಗೆ ಅನುಮತಿ ವಿಳಂಬ

ಲೋಕಾಯುಕ್ತ ಸಿಡಿಮಿಡಿ

Published:
Updated:

ಬೆಂಗಳೂರು: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಪ್ರಸ್ತಾ­ವ­ಗಳ ವಿಲೇವಾರಿಗೆ ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಲೋ­ಕಾ­ಯುಕ್ತ ನ್ಯಾಯಮೂರ್ತಿ ವೈ.­ಭಾಸ್ಕ­ರ­ರಾವ್‌, ಈ ವಿಷಯದಲ್ಲಿ ಮಧ್ಯ­ಪ್ರವೇಶಿ­ಸುವಂತೆ ಕೋರಿ ರಾಜ್ಯಪಾಲರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.ಲೋಕಾಯುಕ್ತ ದಿನದ ಅಂಗವಾಗಿ ಗುರುವಾರ ತಮ್ಮ ಕಚೇರಿಯಲ್ಲಿ ಪತ್ರಿಕಾ­ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತನಿಖಾಧಿಕಾರಿಯು ಆರೋಪಪಟ್ಟಿ ಸಲ್ಲಿ­­ಸಲು ಅನುಮತಿ ಕೋರಿ ಕಳುಹಿಸುವ ಪ್ರಸ್ತಾವಗಳನ್ನು ಸಕ್ಷಮ ಪ್ರಾಧಿಕಾರವು ಮೂರು ತಿಂಗಳೊಳಗೆ ವಿಲೇವಾರಿ ಮಾಡ­­­ಬೇಕೆಂದು ಸುಪ್ರೀಂಕೋರ್ಟ್‌ ಹೇಳಿದೆ. ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ನಾಲ್ಕು ತಿಂಗಳೊಳಗೆ ವಿಲೇ­ವಾರಿ ಮಾಡ­ಬೇಕು. ಹಲವು ಪ್ರಕರಣಗಳಲ್ಲಿ ವರ್ಷ­ಕಳೆ­ದರೂ ಯಾವುದೇ ತೀರ್ಮಾನ ಕೈಗೊ­­ಳ್ಳದೇ ಸತಾಯಿಸ­ಲಾ­ಗುತ್ತಿದೆ’ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.‘ನಾನು ಕಳೆದ ಫೆಬ್ರುವರಿಯಲ್ಲಿ  ಅಧಿಕಾರ ಸ್ವೀಕ­ರಿಸಿದೆ. ಆಗ, ಆರೋಪ­ಪಟ್ಟಿ ಸಲ್ಲಿಸಲು ಅನುಮತಿಗೆ ಕಾದಿದ್ದ ಪ್ರಕರಣಗಳ ಸಂಖ್ಯೆ ದೊಡ್ಡದಿತ್ತು. ಆ ಬಳಿಕ 78 ಪ್ರಕರಣ­ಗಳಲ್ಲಿ ಅನುಮತಿ ನೀಡ­ಲಾಗಿದೆ. ಆದರೆ, ಇನ್ನೂ 94 ಪ್ರಕ­ರಣಗಳಲ್ಲಿ ಅನುಮತಿ ಕೋರಿ ಸಲ್ಲಿಸಿ­ರುವ ಪ್ರಸ್ತಾವಗಳನ್ನು ಸರ್ಕಾರ ಬಾಕಿ ಇರಿಸಿಕೊಂಡಿದೆ’ ಎಂದು ದೂರಿದರು.ಆಪಾದಿತ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವಂತೆ  ಕೋರಿದ ಪ್ರಸ್ತಾ­ವಗಳನ್ನು ಸಕಾಲಕ್ಕೆ ಇತ್ಯರ್ಥ­ಪಡಿಸದೇ ಇರುವ ಅಧಿಕಾರಿಗಳ ವಿರುದ್ಧ ಲೋಕಾ­ಯುಕ್ತ ಕಾಯ್ದೆಯಡಿ ವಿಚಾರಣೆ ಆರಂಭಿ­ಸಲಾಗಿದೆ. ಅಧಿಕಾರಿಗಳ ಈ ಪ್ರವೃತ್ತಿ­ಯನ್ನು ‘ದುರಾಡಳಿತ’ ಎಂದು ವ್ಯಾಖ್ಯಾ­ನಿಸಿ, ಕೆಲವರಿಗೆ ಈಗಾಗಲೇ ನೋಟಿಸ್‌ ಜಾರಿ ಮಾಡಲಾಗಿದೆ ಎಂದರು.ಲೋಕಾಯುಕ್ತಕ್ಕೆ ಸಲ್ಲಿಕೆಯಾದ ದೂರುಗಳ ವಿಚಾರಣೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳು­ವಂತೆ ಲೋಕಾಯುಕ್ತ ಕಾಯ್ದೆಯ ಸೆಕ್ಷನ್‌ 12(3)ರ ಅಡಿಯಲ್ಲಿ 711 ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.ಆಗಿರುವ ಲೋಪಗಳನ್ನು ಸರಿಪಡಿ­ಸುವಂತೆ ಸೆಕ್ಷನ್‌ 12(1)ರ ಅಡಿಯಲ್ಲಿ 25 ವರದಿಗಳನ್ನು ಕಳುಹಿಸಲಾಗಿದೆ. ಆದರೆ, 13 ಪ್ರಕರಣಗಳಲ್ಲಿ ಸರ್ಕಾರ ಸೂಕ್ತ ಕ್ರಮ ಜರುಗಿಸಿಲ್ಲ. ಈ ಪ್ರಕರಣಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೆಕ್ಷನ್‌ 12(5)ರ ಅಡಿಯಲ್ಲಿ ರಾಜ್ಯಪಾಲರಿಗೆ

ವರದಿ ಸಲ್ಲಿಸಲಾಗಿದೆ ಎಂದು ವಿವರ ನೀಡಿದರು.ಸರ್ಕಾರಕ್ಕೆ ಪತ್ರ
ಆಪಾದಿತರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿರುವ ಪ್ರಸ್ತಾವಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸರ್ಕಾರಕ್ಕೆ ಎರಡು ಪತ್ರಗಳನ್ನು ಬರೆದಿದ್ದೇನೆ. ಅವರಿಂದ ಯಾವುದೇ ಪ್ರತಿಕ್ರಿಯೆಯೂ ಬಂದಿಲ್ಲ. ಸುಪ್ರೀಂಕೋರ್ಟ್‌ ಆದೇಶವಿದ್ದರೂ ಸರ್ಕಾರ ಅದರಂತೆ ನಡೆದುಕೊಳ್ಳುತ್ತಿಲ್ಲ. ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡುವಂತೆ ಕೋರಿ ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ

ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry