ಭಾನುವಾರ, ಡಿಸೆಂಬರ್ 8, 2019
21 °C

ಲೋಕಾಯುಕ್ತ: ಹೊಸ ಹೆಸರು ಸೂಚನೆಗೆ ಸರ್ಕಾರ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೋಕಾಯುಕ್ತ: ಹೊಸ ಹೆಸರು ಸೂಚನೆಗೆ ಸರ್ಕಾರ ಒಪ್ಪಿಗೆ

ಬೆಂಗಳೂರು: `ಲೋಕಾಯುಕ್ತ ಹುದ್ದೆಗೆ ನ್ಯಾಯಮೂರ್ತಿ ಎಸ್.ಆರ್. ಬನ್ನೂರಮಠ ಅವರನ್ನು ಹೊರತುಪಡಿಸಿ, ಬೇರೊಬ್ಬರ ಹೆಸರು ಸೂಚಿಸಲು ರಾಜ್ಯ ಸರ್ಕಾರ ಒಪ್ಪಿದೆ. ನೂತನ ಲೋಕಾಯುಕ್ತರ ನೇಮಕ ವಿಚಾರ ಇನ್ನು ಹತ್ತು ದಿನಗಳಲ್ಲಿ ಬಗೆಹರಿಯಲಿದೆ~ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ವಿಶ್ವಾಸ ವ್ಯಕ್ತಪಡಿಸಿದರು.ರಾಜ್ಯದ ಎರಡನೆಯ ಉಪ ಲೋಕಾಯುಕ್ತರಾಗಿ ನೇಮಕಗೊಂಡಿರುವ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರಿಗೆ ರಾಜಭವನದಲ್ಲಿ ಭಾನುವಾರ ಪ್ರಮಾಣ ವಚನ ಬೋಧಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.`ಬನ್ನೂರಮಠ ಅವರ ನೇಮಕಕ್ಕೆ ಸಂಬಂಧಿಸಿದ ಕಡತಗಳನ್ನು ನಾನು ಪರಿಶೀಲಿಸುತ್ತಿದ್ದ ಸಂದರ್ಭದಲ್ಲೇ ಕೆಲವು ದಕ್ಷ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು ಅನುಮಾನ ಮೂಡಿಸಿತು. ಅಲ್ಲದೆ, ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಕುರಿತು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ನೀಡಿರುವ ವರದಿಯಲ್ಲಿ ಹೆಸರಿರುವ ಕೆಲವು ಕಳಂಕಿತರು ಬನ್ನೂರಮಠ ಅವರನ್ನೇ ನೂತನ ಲೋಕಾಯುಕ್ತರನ್ನಾಗಿ ನೇಮಕ ಮಾಡಬೇಕು ಎಂಬ ಲಾಬಿ ಆರಂಭಿಸಿದರು~ ಎಂದರು.

ಚಂದ್ರಶೇಖರಯ್ಯ ಪ್ರಮಾಣ ವಚನ ಸ್ವೀಕಾರ
ಬೆಂಗಳೂರು: ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರು ಎರಡನೇ ಉಪ ಲೋಕಾಯುಕ್ತರಾಗಿ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ರಾಜಭವನದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಭಾನುವಾರ ನಡೆದ ಸರಳ ಸಮಾರಂಭದಲ್ಲಿ ಚಂದ್ರಶೇಖರಯ್ಯ ಅವರಿಗೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.ನ್ಯಾಯಮೂರ್ತಿ ಎ.ಜೆ. ಸದಾಶಿವ, ನಿವೃತ್ತ ಲೋಕಾಯುಕ್ತ ಎನ್.ವೆಂಕಟಾಚಲ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್‌ಕುಮಾರ್, ಗೃಹ ಸಚಿವ ಆರ್. ಅಶೋಕ, ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ರಾಮಚಂದ್ರ ಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಜೆಡಿಎಸ್ ಶಾಸಕಾಂಗ ಪಕ್ಷದ ಮುಖಂಡಎಚ್.ಡಿ. ರೇವಣ್ಣ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು. ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸಮಾರಂಭದಲ್ಲಿ ಪಾಲ್ಗೊಂಡಿರಲಿಲ್ಲ.`ಬನ್ನೂರಮಠ ಹೆಸರು ತಿರಸ್ಕರಿಸಲು ಅವರು ಕಾನೂನು ಮೀರಿ ನಿವೇಶನ ಪಡೆದುಕೊಂಡಿದ್ದಾರೆ ಎಂಬ ಆರೋಪ ಕಾರಣವೇ ಅಲ್ಲ. ಅವರನ್ನು ನೇಮಕ ಮಾಡಲು ಏಕೆ ಸಾಧ್ಯವಿಲ್ಲ ಎಂಬುದನ್ನು ವಿವರಿಸಿ ಸರ್ಕಾರಕ್ಕೆ ನಾನು ಎರಡು ಪುಟಗಳ ಪತ್ರ ಬರೆದಿದ್ದೇನೆ. ಪತ್ರದ ವಿವರ ನೀಡಲು ಸಾಧ್ಯವಿಲ್ಲ. ಲೋಕಾಯುಕ್ತರ ನೇಮಕ ವಿಚಾರ ಇನ್ನೊಂದು ವಾರ ಅಥವಾ ಹತ್ತು ದಿನಗಳಲ್ಲಿ ಬಗೆಹರಿಯುತ್ತದೆ~ ಎಂದರು.`ಚೆಂಡೂ ಇಲ್ಲ; ಅಂಗಳವೂ ಇಲ್ಲ~: ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಚೆಂಡು ಈಗ ರಾಜ್ಯಪಾಲರ ಅಂಗಳದಲ್ಲಿದೆ ಎಂಬ ಮಾತಿನ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, `ಈ ವಿಚಾರದಲ್ಲಿ ಚೆಂಡೂ ಇಲ್ಲ, ಅಂಗಳವೂ ಇಲ್ಲ. ಯಾವುದೇ ಬಿಕ್ಕಟ್ಟೂ ಸೃಷ್ಟಿಯಾಗಿಲ್ಲ. ನೂತನ ಲೋಕಾಯುಕ್ತರ ನೇಮಕ ಸಂಬಂಧ ನಾನು ಸರ್ಕಾರಕ್ಕೆ ಯಾವುದೇ ಗಡುವು ವಿಧಿಸಿಲ್ಲ. ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಈ ವಿಚಾರದಲ್ಲಿ ಸಹಕಾರ ನೀಡುತ್ತಿದ್ದಾರೆ. ಎಲ್ಲವೂ ಸರಿಯಾಗಲು ಆರಂಭಿಸಿರುವಾಗ, ವಿಷಯಗಳನ್ನು ಇನ್ನಷ್ಟು ಸಂಕೀರ್ಣಗೊಳಿಸುವುದು ಏಕೆ?~ ಎಂದು ಮರುಪ್ರಶ್ನೆ ಎಸೆದರು.`ಮುಖ್ಯ ವಿಚಕ್ಷಣಾ ಆಯುಕ್ತರನ್ನಾಗಿ ಪಿ.ಜಿ. ಥಾಮಸ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ನನ್ನ ಮನಸ್ಸಿನಲ್ಲಿತ್ತು. ಬನ್ನೂರಮಠರ ಹೆಸರನ್ನು ಸೂಚಿಸುವಾಗ ಸರ್ಕಾರ ವಿಪಕ್ಷಗಳಿಂದ ಸೂಕ್ತ ಸಲಹೆ ಪಡೆದುಕೊಂಡಿರಲಿಲ್ಲ. ಮುಖ್ಯಮಂತ್ರಿಗಳು ಹೊಸ ಹೆಸರನ್ನು ಸೂಚಿಸುವಾಗ ವಿರೋಧ ಪಕ್ಷಗಳು ಮತ್ತು ಇಬ್ಬರು ಉಪ ಲೋಕಾಯುಕ್ತರ ಸಲಹೆ ಪಡೆದುಕೊಳ್ಳಲಿ~ ಎಂದು ಹೇಳಿದರು.`ಲೋಕಾಯುಕ್ತ ಹುದ್ದೆಗೆ ಉತ್ತಮ ವ್ಯಕ್ತಿಯ ಹೆಸರನ್ನು ಸರ್ಕಾರ ಸೂಚಿಸಿದರೆ ಅರ್ಧ ಗಂಟೆಯಲ್ಲಿ ನೇಮಕ ಮಾಡುವುದಾಗಿ ಹಿಂದೆಯೇ ಹೇಳಿದ್ದೇನೆ. ರಾಜ್ಯ ಲೋಕಾಯುಕ್ತ ಹುದ್ದೆಯಲ್ಲಿ ಉತ್ತಮ ವ್ಯಕ್ತಿಗಳನ್ನು ನೋಡಿದೆ. ನ್ಯಾ. ಹೆಗ್ಡೆ ಅವರು ಲೋಕಾಯುಕ್ತರಿಗೆ ಮಾದರಿ. ಅವರ ವರದಿ ಅನುಷ್ಠಾನಕ್ಕೆ ಬರುವಂತೆ ನೋಡಿಕೊಳ್ಳಬೇಕು~ ಎಂದರು.`ದೇವತಾ ಮನುಷ್ಯ~: ಮುಖ್ಯಮಂತ್ರಿಗಳು ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಅವರು ಸ್ಪಂದನಶೀಲರು ಎಂದು ಶ್ಲಾಘಿಸಿದ ರಾಜ್ಯಪಾಲರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರನ್ನು `ದೇವತಾ ಮನುಷ್ಯ~ ಎಂದು ಕರೆದರು.ಪೊಲೀಸ್-ವಕೀಲರ ಸಂಘರ್ಷ: ಪೊಲೀಸರು ಮತ್ತು ವಕೀಲರ ನಡುವೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಂಘರ್ಷ ಅನಾರೋಗ್ಯಕರ ಬೆಳವಣಿಗೆ. ಜವಾಬ್ದಾರಿಯುತ ವೃತ್ತಿಗಳಲ್ಲಿ ಇರುವ ಇವರು ಪರಸ್ಪರ ಸಂಘರ್ಷದಲ್ಲಿ ತೊಡಗಿದರೆ ಅಪರಾಧಿಗಳಿಗೆ ಇನ್ನಷ್ಟು ಬಲ ಬರುತ್ತದೆ. ಅಲ್ಲದೆ, ವಕೀಲರು ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆಸಿದ ಹಲ್ಲೆ ಕೂಡ ಖಂಡನೀಯ ಎಂದರು.`ತನಿಖೆಗೆ ಆಯೋಗ~: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿ.ಟಿ.ಯು.) ಕುಲಪತಿ ಡಾ.ಎಸ್. ಮಹೇಶಪ್ಪ ಅವರ ಮೇಲಿರುವ `ಅಂಕಪಟ್ಟಿ ಆರೋಪ~ದ ಕುರಿತು ತನಿಖೆ ನಡೆಸಲು ಆಯೋಗವನ್ನು ರಚಿಸಲಾಗುವುದು. ಆಯೋಗ ನೀಡುವ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್.ಆರ್. ಭಾರದ್ವಾಜ್ ಅವರು ತಿಳಿಸಿದರು.`ವಿ.ಟಿ.ಯು. ಕಾಯ್ದೆಯ ಅನ್ವಯ ಡಾ. ಮಹೇಶಪ್ಪ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ನನಗೆ ಅಧಿಕಾರ ಇಲ್ಲ. ಆದರೆ ಈಗ ಹೈಕೋರ್ಟ್ ಸೂಚನೆ ನೀಡಿರುವ ಕಾರಣ ತನಿಖಾ ಆಯೋಗವನ್ನು ರಚಿಸುತ್ತೇನೆ.ಹೈಕೋರ್ಟ್ ಆದೇಶದ ಪ್ರತಿ ದೊರೆತ ತಕ್ಷಣ ಆಯೋಗ ರಚಿಸಲಾಗುವುದು~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರತಿಕ್ರಿಯಿಸಿ (+)