ಶನಿವಾರ, ಮೇ 28, 2022
26 °C

ಲೋಕೋಪಕಾರದ ಕವಿ ಶಿವಪ್ರಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೋಕೋಪಕಾರದ ಕವಿ ಶಿವಪ್ರಕಾಶ

ಗುಲ್ಬರ್ಗ: ಶೈವ-ಸೂಫಿ ಸಂಸ್ಕೃತಿಯನ್ನು ಹಾಗೂ ಈ ನೆಲದ ಪರಂಪರೆಯ ಒಳಗಿರುವ ಸಾಮರಸ್ಯದ ಬದುಕನ್ನು ಚಿತ್ರಿಸುವ ಎಚ್.ಎಸ್. ಶಿವಪ್ರಕಾಶರ ಕಾವ್ಯ ಲೋಕೋಪಯೋಗಿ ಆಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ  ಪ್ರೊ. ರಹಮತ್ ತರಿಕೆರೆ ಅಭಿಪ್ರಾಯಪಟ್ಟರು.ಗುಲ್ಬರ್ಗದ ವಿ.ಜಿ. ವುಮೆನ್ಸ್ ಕಾಲೇಜಿನಲ್ಲಿ ಸೋಮವಾರ ಎಚ್.ಎಸ್. ಶಿವಪ್ರಕಾಶ ಅವರ ‘ಕವಿತೆ ಇಂದಿನ ತನಕ’ ಕಾವ್ಯ ಸಂಕಲನ ಕುರಿತು ಅವರು ಮಾತನಾಡಿದರು.

ಸುಮಾರು 4 ದಶಕಗಳ ಕಾಲದಲ್ಲಿ ರಚಿಸಿದ 330 ಕವಿತೆಗಳ ಈ ಸಂಕಲನದಲ್ಲಿ ಮಿಲನೇಪ, ಮೆಳಬಿದ್ದ ನೆಲದಲ್ಲಿ, ಸೂರ್ಯಜಲ, ಮತ್ತೆ ಮತ್ತೆ ಮುಂತಾದ 8 ಕವನಸಂಕಲನಗಳೂ ಇಲ್ಲಿ ಒಟ್ಟಾಗಿ ಸೇರಿಸಿ ‘ಕವಿತೆ ಇಂದಿನ ತನಕ’ ಪ್ರಕಟಿಸಲಾಗಿದ್ದು, ಕನ್ನಡ ಕಾವ್ಯ ಲೋಕದ ವಿಶಿಷ್ಟ ಕೃತಿಯಾಗಿದೆ ಎಂದು ಬಣ್ಣಿಸಿದರು.ಶೈವ ಮತ್ತು ಸೂಫಿ  ಪರಂಪರೆಯನ್ನು ಏಕೀಭವಿಸಿದ ಏಕೈಕ ಕವಿಯಾಗಿರುವ ಶಿವಪ್ರಕಾಶ ಅವರು, ಆಧುನಿಕ ಕಾಲದ ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಎಲ್ಲ ವಿಕಾರಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ಶರಣ ಪರಂಪರೆಯ ಭಾಷಿಕ ಮತ್ತು ದಾರ್ಶನಿಕ ಶಕ್ತಿಗಳ ಮೇಳೈಕೆಯಾಗಿರುವ ಈ  ಕೃತಿ, ಹೊಸ ಕಾಲದ ಕವಿಗಳಿಗೆ ಪಠ್ಯಪುಸ್ತಕವಾಗಿದೆ ಎಂದರು.ಜಗತ್ತಿನ ಸಣ್ಣ ಸಂಗತಿಗಳ ಮೇಲೂ ಕಾವ್ಯ ಬರೆಯುವ ಶಿವಪ್ರಕಾಶರು, ಇಡೀ ಸಮುದಾಯ ಪ್ರಜ್ಞೆಯನ್ನು ಮೆರೆಯುವ ಮೂಲಕ ತಮ್ಮ ಜವಾಬ್ದಾರಿಯನ್ನು ತುಂಬಾ ಉತ್ತಮವಾಗಿ ನಿಭಾಯಿಸಿದ್ದಾರೆ. ಸೂಫಿಗಳ ಪ್ರೇಮ, ಶರಣರ ವೈಚಾರಿಕತೆ, ಬುದ್ಧನ ಕರುಣೆ ತುಂಬಿರುವ ಇಲ್ಲಿನ ಕವಿತೆಗಳನ್ನು ಓದುವಾಗ ಕಾವ್ಯ ಸಂಭ್ರಮವೇ ಕಾಣೆಯಾಗುತ್ತದೆ. ಬೆಳಕು ಮತ್ತು ಕತ್ತಲೆಗಳನ್ನು ಮುಖಾಮುಖಿಯಾಗಿಸುವ ಶಿವಪ್ರಕಾಶರು ಕತ್ತಲೆಯಲ್ಲೇ ಸೃಜನಶೀಲ ಶಕ್ತಿಯನ್ನು ಕಂಡಿದ್ದಾರೆ ಎಂದು ತಿಳಿಸಿದರು.ಪ್ರೊ. ಆರ್.ಕೆ. ಹುಡಗಿ ಕೃತಿ ಲೋಕಾರ್ಪಣೆ ಮಾಡಿದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಎಸ್.ಆರ್. ಹತ್ತಿ ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಸಂಘಟನೆಯ ಜಿಲ್ಲಾಧ್ಯಕ್ಷ ಶರಣಗೌಡ ಪಾಟೀಲ, ಡಾ. ಶಾಂತಾ ಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಸುಜಾತಾ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ವಿಕ್ರಂ ವಿಸಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.‘ಶಿವಪ್ರಕಾಶ ಮತ್ತು ಪರ್ಸಿಕ್ಯೂಷನ್ ಮೇನಿಯಾ’

ತಮ್ಮ ಕಾವ್ಯದ ತುಂಬಾ ಅದ್ಭುತ ಸಾಧ್ಯತೆಗಳನ್ನು ಹೊರಹಾಕಿದ ನಾಡಿನ ಶ್ರೇಷ್ಠ ಬರಹಗಾರ ಎಚ್.ಎಸ್. ಶಿವಪ್ರಕಾಶರು, ನಗರದಲ್ಲಿದ್ದುಕೊಂಡು ಅಲ್ಲಿನ ವಿಕಾರಗಳಿಗೆ ಹೇಸಿಗೆ ವ್ಯಕ್ತಪಡಿಸುತ್ತಾರೆ. ಕೈ ಬಿಡುತ್ತಿರುವ ಕನ್ನಡ ಶಬ್ದಗಳ ಮರು ಬಳಕೆ ಮಾಡುವ ಮೂಲಕ  21ನೇ ಶತಮಾನವನ್ನು ಬಂಡವಾಳದ ತಿಪ್ಪೆ ಎಂದು ಕರೆದವರು.ಆದರೆ ಇವರ ಕಾವ್ಯಗಳನ್ನು ಓದುತ್ತ ಓದರೆ, ಎದುರಾಳಿಯೊಂದಿಗೆ ಬಾಕ್ಸಿಂಗ್‌ಗೆ ಇಳಿಯುತ್ತಾರೆ ಎಂದೆನಿಸುತ್ತದೆ. ಎದುರಾಳಿ ಇವರನ್ನು ಸದಾ ಕಾಡುತ್ತಲೇ ಇರುತ್ತಾನೆ ಎನಿಸುತ್ತದೆ.ಗಾಳಿಯೊಂದಿಗೆ ಗುದ್ದಾಡಿ ಮೈದಣಿಸಿಕೊಳ್ಳುವ ಇವರ ಬರಹ ‘ಪರ್ಸಿಕ್ಯೂಷನ್ ಮೇನಿಯಾ’ ದಿಂದ ಬಳಲುವಂತೆ ಕಾಣುತ್ತವೆ. ಆದರೂ ನಮ್ಮ ಕಾಲದ ಬಿಕ್ಕಟ್ಟು, ತಲ್ಲಣಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದು ತರೀಕೆರೆ ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.