ಲೋಕ್ ಅದಾಲತ್: 1.29ಕೋಟಿ ಪರಿಹಾರ

7

ಲೋಕ್ ಅದಾಲತ್: 1.29ಕೋಟಿ ಪರಿಹಾರ

Published:
Updated:

ಚಿಕ್ಕಮಗಳೂರು: ಜಿಲ್ಲಾ ನ್ಯಾಯಾಲಯ ದಲ್ಲಿ ನಡೆದ ಮೆಗಾ ಲೋಕ್‌ಅದಾಲತ್‌ನಲ್ಲಿ 1.29 ಕೋಟಿ ರೂಪಾಯಿ ಪರಿಹಾರ ಮಂಜೂರು ಮಾಡಲಾಗಿದೆ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶ ಬಸವರಾಜ ಎ.ಪಾಟೀಲ್ ತಿಳಿಸಿದರು. ಜಿಲ್ಲಾ ನ್ಯಾಯಾಲಯ ದಲ್ಲಿ ಮೆಗಾ ಲೋಕ ಅದಾಲತ್‌ನ ಸಮಾರೋಪದಲ್ಲಿ ಅವರು ಶನಿವಾರ ಮಾತನಾಡಿದರು.2011 ಅ.1ರಿಂದ ಇದೇ 3 ರವರೆಗೆ ನಡೆದ ಈ ಮೆಗಾ ಲೋಕ್‌ಅದಾಲತ್‌ನಲ್ಲಿ ಮೋಟಾರು ವಾಹನ ಅಫಘಾತ, ಜನನ-ಮರಣ ಸೇರಿದಂತೆ ಒಟ್ಟು 2510 ಪ್ರಕರಣಗಳನ್ನು ಇತ್ಯರ್ಥಪಡಿಸಿ, ಶಾಶ್ವತ ಪರಿಹಾರ ನೀಡಲಾಗಿದೆ. ಈ ಮೂಲಕ ರಾಜ್ಯದಲ್ಲೇ ಚಿಕ್ಕಮಗಳೂರು ಜಿಲ್ಲೆಯು 3ನೇ ಸ್ಥಾನ ಪಡೆದಿದೆ ಎಂದರು.ಲೋಕ್‌ಅದಾಲತ್ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸುವುದರಿಂದ ಕಕ್ಷಿದಾರರಿಗೆ ಶೀಘ್ರ ಹಾಗೂ ಶಾಶ್ವತ ಪರಿಹಾರ ದೊರೆಯುತ್ತದೆ. ಈ ನಿಟ್ಟಿನಲ್ಲಿ ಇಲ್ಲಿ ನಡೆದ ಈ ಅದಾಲತ್‌ಗೆ ಎಲ್ಲಾ ಇಲಾಖೆಗಳು, ವಕೀಲರು ಮತ್ತು ಸಿಬ್ಬಂದಿ ಸಹಕಾರ ನೀಡಿದ್ದಾರೆ. ಇದು ಸಂತಸದ ವಿಚಾರ ಎಂದರು.ಜಿ.ಪಂ. ಸಿಇಒ ರಂಗೇಗೌಡ ಮಾತನಾಡಿ, ನ್ಯಾಯದಾನದ ವಿಳಂಬ ತಪ್ಪಿಸುವ ನಿಟ್ಟಿನಲ್ಲಿ ಲೋಕ್ ಅದಾಲತ್ ಒಂದು ಪ್ರಮುಖ ಹೆಜ್ಜೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ವಕೀಲರ ಸಂಘದ ಅಧ್ಯಕ್ಷ ಎಸ್.ಎಚ್.ಮಹೇಶ್ ಕುಮಾರ್, ಕಂದಾಯ ಇಲಾಖೆಯಲ್ಲಿನ ವ್ಯಾಜ್ಯಗಳನ್ನು ಲೋಕ ಅದಾಲತ್‌ಗಳ ಮಾದರಿಯಲ್ಲಿ ಇತ್ಯರ್ಥ ಪಡಿಸುವ ಅಗತ್ಯವಿದೆ ಎಂದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಿತ್ರ ಹೆರಾಜೆ, ಉಪವಿಭಾಗಾಧಿಕಾರಿ ಡಾ.ಪ್ರಶಾಂತ್ ಮಾತನಾಡಿದರು. ತ್ವರಿತಗತಿ ನ್ಯಾಯಾಲಯ ನ್ಯಾಯಾಧೀಶ ಜಿ.ಎಸ್.ಸಂಗ್ರೇಶಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಎ ಖಾದರ್ ಶಾ, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಸ್.ಬಿ. ವಸ್ತ್ರದ್‌ಮಠ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ವಿ.ರೇಣುಕಾ, ಸುರೇಶ್ ಇದ್ದರು.`ಪ್ರಕರಣ ಶೀಘ್ರ ಇತ್ಯರ್ಥ~ತರೀಕೆರೆ: ಲೋಕ್‌ಅದಾಲತ್ ಮೂಲಕ ಹಲವು ಪ್ರಕರಣಗಳನ್ನು ಬಗೆಹರಿಸಲಾಗಿದೆ ಎಂದು ಸಿವಿಲ್‌ಕೋರ್ಟ್‌ನ ಕಿರಿಯ ನ್ಯಾಯಾಧೀಶ ಪ್ರಭು ಎನ್.ಬಡಿಗೇರಾ ಹೇಳಿದರು.ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಬೃಹತ್ ಲೋಕ್ ಅದಾಲತ್‌ನಲ್ಲಿ ಅವರು ಮಾತನಾಡಿದರು.ಇತ್ಯರ್ಥಗೊಂಡಿರುವ ಪ್ರಕರಣಗಳ ದೂರುದಾರ ಜನರು ಇಂದು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ, ಇಲ್ಲಿನ ವಕೀಲರು ಮತ್ತು ಕಕ್ಷಿದಾದರ ಸಹಕಾರದಿಂದ ಈ ಕಾರ್ಯವನ್ನು ಸಾಧಿಸಲಾಗಿದೆ ಎಂದರು.ಹಿರಿಯ ಸಿವಿಲ್ ಕೋರ್ಟ್ ನ್ಯಾಯಾಧೀಶ ಹಿದಾಯತ್‌ವುಲ್ಲಾ ಷರೀಫ್ ಮಾತನಾಡಿ, ಲೋಕ್‌ಅದಾಲತ್ ಮೂಲಕ ಪ್ರಕರಣ ಇತ್ಯರ್ಥ ಮಾಡಲು ಯಾವುದೇ ಶುಲ್ಕ ಪಾವತಿಸುವಂತಿಲ್ಲ. ಮೇಲ್ಮನವಿ ಸಲ್ಲಿಸುವಂತಿಲ್ಲ ಎಂದರು.

ಸರ್ಕಾರಿ ವಕೀಲ ಬಿ.ಎಚ್.ಭಾಸ್ಕರ್ ಮಾತನಾಡಿದರು.ವಕೀಲರ ಸಂಘದ ಅಧ್ಯಕ್ಷ ಎಂ.ಕೆ.ತೇಜಮೂರ್ತಿ,  ಕೆ.ಸಿ.ಜ್ಞಾನಮೂರ್ತಿ ಮತ್ತು ಕೆ.ಆರ್.ರೇವಣಸಿದ್ದಪ್ಪ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry