ಲೋಕ ಅದಾಲತ್ ಬಳ್ಳಾರಿಗೆ ದ್ವಿತೀಯ ಸ್ಥಾನ

7

ಲೋಕ ಅದಾಲತ್ ಬಳ್ಳಾರಿಗೆ ದ್ವಿತೀಯ ಸ್ಥಾನ

Published:
Updated:

ಬಳ್ಳಾರಿ: ಬಳ್ಳಾರಿಯಲ್ಲಿ ನಡೆಸಲಾದ ಮೆಗಾ ಲೋಕ ಅದಾಲತ್‌ನಲ್ಲಿ ಒಟ್ಟು 4401 ಪ್ರಕರಣಗಳು ಇತ್ಯರ್ಥವಾಗಿದ್ದು, ಜಿಲ್ಲೆಯು ಈ ಸಾಧನೆಯಲ್ಲಿ ರಾಜ್ಯದಲ್ಲೇ ದ್ವಿತೀಯ ಸ್ಥಾನ ಪಡೆದಿದೆ ಎಂದು ಜಿಲ್ಲಾ ನ್ಯಾಯಾಧೀಶರಾದ ಎಂ.ಜಿ. ಉಮಾ ತಿಳಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆಗಳ ಆಶ್ರಯದಲ್ಲಿ ಶನಿವಾರ ಸ್ಥಳೀಯ ವಕೀಲರ ಭವನದಲ್ಲಿ ಏರ್ಪಡಿಸಲಾಗಿದ್ದ ಮೆಗಾ ಲೋಕ ಅದಾಲತ್‌ನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ 2011ರ ಅಕ್ಟೋಬರ್ 1ರಿಂದ ಇದೇ ಫೆಬ್ರುವರಿ 3ರವರೆಗೆ ಇತ್ಯರ್ಥವಾದ 4401 ಪ್ರಕರಣಗಳ ಪೈಕಿ ಬಳ್ಳಾರಿಯ 3170, ಹೊಸಪೇಟೆಯಲ್ಲಿ 504, ಹಗರಿಬೊಮ್ಮನಹಳ್ಳಿ 104, ಕೂಡ್ಲಿಗಿಯಲ್ಲಿ 91, ಸಂಡೂರಿನಲ್ಲಿ 326, ಸಿರುಗುಪ್ಪದಲ್ಲಿ 51 ಹಾಗೂ ಹೂವಿನ ಹಡಗಲಿಯಲ್ಲಿ  155 ಪ್ರಕರಣಗಳು ಇತ್ಯರ್ಥಗೊಂಡಿವೆ. ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಬ್ಯಾಂಕ್, ಜೆಸ್ಕಾಂ ಹಾಗೂ ವಿಮಾ ಕಂಪೆನಿಗಳಿಗೆ ಸಂಬಂಧಿಸಿದ  ಪ್ರಕರಣಗಳೂ ಸೇರಿವೆ ಎಂದು ಅವರು ವಿವರಿಸಿದರು.ಜೆಸ್ಕಾಂಗೆ ರೂ 88 ಲಕ್ಷ, ಬ್ಯಾಂಕ್‌ಗಳಿಗೆ ರೂ 17.77 ಲಕ್ಷ, ವಾಹನ ಅಪಘಾತದಿಂದ ರೂ 8.45 ಲಕ್ಷ ಸೇರಿದಂತೆ ಒಟ್ಟು ರೂ 1,14 ಕೋಟಿ ವಸೂಲಿಯಾಗಿದೆ. ದೀರ್ಘಕಾಲ ಬಾಕಿಯಿದ್ದ ಪ್ರಕರಣಗಳನ್ನು ಈ ವೇಳೆ ಬಗೆಹರಿಸಲಾಗಿದೆ ಎಂದು ತಿಳಿಸಿದರು.ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ವಿಮಾ ಕಂಪೆನಿಗಳು, ಸಂಘ-  ಸಂಸ್ಥೆಗಳು, ಕಕ್ಷಿದಾರರು ಸಹಕರಿಸಿದ್ದಾರೆ. ನೊಂದ ಕಕ್ಷಿದಾರರಿಗೆ ಶೀಘ್ರ ನ್ಯಾಯ ಒದಗಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.ಅದಾಲತ್ ಮುಗಿದರೂ ನಿರಂತರವಾಗಿ ರಾಜಿ ಸಂಧಾನ, ಲೋಕ ಅದಾಲತ್, ಮಧ್ಯಸ್ಥಿಕೆ ಕೇಂದ್ರಗಳಿಂದ ತ್ವರಿತವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸುವ ಕಾರ್ಯ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ, ಪೌರಾಯುಕ್ತ ಡಿ.ಎಲ್. ನಾರಾಯಣ್ ಮಾತನಾಡಿದರು.ಜಿಲ್ಲೆಯ ವಕೀಲರ ಸಕ್ರಿಯತೆಯಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ತ್ವರಿತ ವಿಲೇವಾರಿಗೆ ಕಾರಣವಾಗಿರುವ ಎಲ್ಲರೂ ಅಭಿನಂದನೆಗೆ ಅರ್ಹರು ಎಂದು ವಕೀಲರ ಸಂಘದ ಅಧ್ಯಕ್ಷ ಎ.ಜಿ. ಶಿವಕುಮಾರ್ ಪ್ರಶಂಸಿಸಿದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಶೇಖರ ಕ್ಯಾತನ್ ಉಪಸ್ಥಿತರಿದ್ದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೊಸಮನಿ ಸಿದ್ಧಪ್ಪ ಸ್ವಾಗತಿಸಿದರು. ವಕೀಲರ ಸಂಘದ ಉಪಾಧ್ಯಕ್ಷ ಯರ‌್ರೇಗೌಡ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಕಾರ್ಯದರ್ಶಿ ಡಿ.ಎಸ್. ಬದರಿನಾಥ್ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry