ಮಂಗಳವಾರ, ಏಪ್ರಿಲ್ 20, 2021
32 °C

ಲೋಕ ಅದಾಲತ್ ಸದುಪಯೋಗಕ್ಕೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ‘ಬ್ಯಾಂಕ್‌ನಲ್ಲಿ ಕೃಷಿ ಸಾಲ ಪಡೆಯುವ ರೈತರು ನಿಗದಿತ ವೇಳೆಯಲ್ಲಿ ಮರು ಪಾವತಿ ಮಾಡಬೇಕು. ಇದರಿಂದ ನ್ಯಾಯಾಲಯದ ಮೆಟ್ಟಿಲು ತುಳಿಯುವುದು ತಪ್ಪುತ್ತದೆ. ಜತೆಗೆ, ಕೆಳಹಂತದಲ್ಲೇ ಸಮಸ್ಯೆ ಬಗೆಹರಿಸಿಕೊಂಡರೆ ಸಾಲ ಪಡೆದವರಿಗೂ ಅನುಕೂಲವಾಗುತ್ತದೆ’ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಎ.ಸಿ. ವಿದ್ಯಾಧರ್  ಹೇಳಿದರು.ನಗರದ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಆಶ್ರಯದಡಿ ಬ್ಯಾಂಕ್‌ನಿಂದ ಕೃಷಿ ಸಾಲ ಪಡೆದ ರೈತರಿಗೆ ಹಮ್ಮಿಕೊಂಡಿದ್ದ ಲೋಕ ಅದಾಲತ್ ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಾಲ ಪಡೆದವರು ಲೋಕ ಅದಾಲತ್‌ನಲ್ಲಿ ಕೇಸು ಇತ್ಯರ್ಥಪಡಿಸಿಕೊಂಡರೆ ಬ್ಯಾಂಕ್ ಹಾಗೂ ಸಾಲ ಪಡೆದವರಿಗೆ ಅನುಕೂಲ ಹೆಚ್ಚಿದೆ. ಇಂಥ ಕಾರ್ಯಕ್ಕೆ ವಕೀಲರು ಪ್ರೋತ್ಸಾಹ ನೀಡಬೇಕು. ರಾಜಿ ಸಂಧಾನದ ಮೂಲಕ ಮೊಕದ್ದಮೆ ಇತ್ಯರ್ಥಗೊಂಡರೆ ನ್ಯಾಯಾಲಯದಲ್ಲಿ ಮೊಕದ್ದಮೆಗಳು ವಿಲೇವಾರಿ ಯಾಗದೆ ಉಳಿಯುವುದು ತಪ್ಪುತ್ತದೆ ಎಂದರು.ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಕುಮಾರಸ್ವಾಮಿ ಮಾತನಾಡಿ,  ಸಾಲ ಪಡೆದ ಕೃಷಿಕರು ರಾಜಿ ಸಂಧಾನದ ಮೂಲಕ ಸಾಲದ ವ್ಯವಹಾರ ಇತ್ಯರ್ಥಪಡಿಸಿಕೊಳ್ಳಬೇಕು. ಲೋಕ ಅದಾಲತ್‌ನಲ್ಲಿ ಆಗುವ ತೀರ್ಮಾನವನ್ನು ಪುನಃ ಪ್ರಶ್ನಿಸುವಂತಿಲ್ಲ. ಇದರಿಂದ ಸಮಯವೂ ಉಳಿತಾಯವಾಗುತ್ತದೆ ಎಂದರು.ಬ್ಯಾಂಕ್‌ಗೆ ಬಂದಾಗ ಸಾಲದ ಹಣ ಕಡಿಮೆ ಮಾಡಲು ಸಾಧ್ಯವಿಲ್ಲ. ಆದರೆ, ಲೋಕ ಅದಾಲತ್ ನಲ್ಲಿ ನ್ಯಾಯಾಧೀಶರು ಸೂಚಿಸುವಷ್ಟು ಹಣಕಟ್ಟುವ ಅವಕಾಶ ಇರುತ್ತದೆ. ಎಲ್ಲಾ ಬ್ಯಾಂಕ್‌ನವರು ಲೋಕ ಅದಾಲತ್ ಮೂಲಕ ಬ್ಯಾಂಕುಗಳಲ್ಲಿರುವ ಹಳೆಯ ಪ್ರಕರಣಗಳ ಇತ್ಯರ್ಥಕ್ಕೆ ಮುಂದಾಗಬೇಕು. ಇದರಿಂದ ಬ್ಯಾಂಕ್‌ಗಳಲ್ಲಿ ಸಾಲದ ಕೇಸುಗಳ ಸಂಖ್ಯೆ ಕಡಿಮೆಯಾಗುತ್ತವೆ ಎಂದರು.ವಕೀಲರ ಸಂಘದ ಅಧ್ಯಕ್ಷ ಕೆ.ಎಂ. ಶ್ರೀನಿವಾಸಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶರಾದ ಕೆ.ಎಸ್. ಗಂಗಣ್ಣನವರ್, ರಾಧಾಕೃಷ್ಣ, ವಕೀಲರ ಸಂಘದ ಕಾರ್ಯದರ್ಶಿ ಕೆ. ಪುಟ್ಟಸ್ವಾಮಿ, ಮಾರ್ಗದರ್ಶಿ ಬ್ಯಾಂಕ್‌ನ ಜಿಲ್ಲಾ ವ್ಯವಸ್ಥಾಪಕ ಲಕ್ಷಕುಮಾರ್, ನಬಾರ್ಡ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ.ಎಲ್. ವಿನಯ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಶಾಖಾ ವ್ಯವಸ್ಥಾಪಕ ಬಿ. ಮಹಂತೇಶ್ ಪಾಟೀಲ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.