ಭಾನುವಾರ, ನವೆಂಬರ್ 17, 2019
27 °C
ಚೆಲ್ಲಿದರು ಮಲ್ಲಿಗೆಯ ಭಾಗ-9

ಲೋಕ ಪ್ರಸಿದ್ಧ ಹೂವಿನ ಕರಗ

Published:
Updated:

ಕರಗ ಶಕ್ತ್ಯೋತ್ಸವದ ಬಹು ಮಹತ್ವದ ಭಾಗವೇ ಹೂವಿನ ಕರಗ. ಸಾಮಾನ್ಯವಾಗಿ ಹುಣ್ಣಿಮೆ ದಿನ ನಡೆಯುವ ಈ ಲೋಕ ಪ್ರಸಿದ್ಧವಾದ ಹೂವಿನ ಕರಗ ಮಹೋತ್ಸವ ಚಂದ್ರ ಗ್ರಹಣದ ಪ್ರಯುಕ್ತ ಒಂದು ದಿನ ಮೊದಲು ಅಂದರೆ ಏಪ್ರಿಲ್ 24ರ ಬುಧವಾರ ರಾತ್ರಿ ನಡೆಯಲಿದೆ.ಬೆಂಗಳೂರು ಕರಗವೆಂದೇ ಪ್ರಸಿದ್ಧವಾಗಿರುವ ಹೂವಿನ ಕರಗ ಮಲ್ಲಿಗೆಮಯ ಕಳಸದ ಮೆರವಣಿಗೆ. ಪರಿಮಳಯುಕ್ತ ಮಲ್ಲಿಗೆ ಹೂವಿಂದ ಅಲಂಕರಿಸಲಾದ ಕರಗವು ಸುವಾಸನೆ ಬೀರುತ್ತಾ ಅಲೌಕಿಕವಾದ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಹೂವಿನ ಕರಗಕ್ಕೂ ಮೊದಲು ಅನೇಕ ಧಾರ್ಮಿಕ ವಿಧಿ ವಿಧಾನಗಳು ಕರಗದ ಕುಂಟೆ ಹಾಗೂ ಶಕ್ತಿ ಪೀಠಗಳಲ್ಲಿ ನಡೆಯುತ್ತವೆ.ವೀರಕುಮಾರರು, ಗೌಡರು, ಗಣಾಚಾರಿ, ಘಂಟೆಪೂಜಾರರು ಹಾಗೂ ಚಾಕರಿದಾರರು ಶಕ್ತಿಪೀಠದಲ್ಲಿ ಕರಗಕರ್ತ ಪೂಜಾರಿಯನ್ನು ಕರಗ ಧರಿಸುವುದಕ್ಕೆ ಧಾರ್ಮಿಕ ಸಂಪ್ರದಾಯಗಳನ್ನು ಅಣಿಗೊಳಿಸುವರು. ಶಕ್ತಿಪೀಠದಿಂದ ಕರಗ ಪೂಜಾರಿಯನ್ನು ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಗರ್ಭಗುಡಿಗೆ ಸೇರಿಸುವರು. ಹೂವಿನ ಕರಗ ಆರಂಭಕ್ಕೆ ಮುನ್ನ ಉತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ವೀರಕುಮಾರರು ಮತ್ತಿತರ ಕುಲಸ್ಥರನ್ನು ಗೌರವಿಸುವುದು ರೂಢಿ. ಉತ್ಸವದ ವ್ಯವಸ್ಥಾಪನಾ ಸಮಿತಿ ಗೌಡರು, ಗಣಾಚಾರಿ, ಘಂಟೆಪೂಜಾರಿ, ವೀರಕುಮಾರರು ಮೊದಲಾದವರಿಗೆ ಪುಷ್ಪಮಾಲೆಗಳನ್ನು ನೀಡುವ ಮೂಲಕ ಗೌರವ ಸಲ್ಲಿಸುವ ಸಮಯ ಅದು. ಇದೇ ಸಂದರ್ಭದಲ್ಲಿ ಅರ್ಜುನ ಹಾಗೂ ದ್ರೌಪದಿ ದೇವಿ ಉತ್ಸವಮೂರ್ತಿಗಳನ್ನು ಸಿಂಗರಿಸಿಟ್ಟು ರಥವನ್ನು ಸಿದ್ಧಗೊಳಿಸಲಾಗುವುದು. ಈ ಮಹಾ ರಥದ ಜೊತೆಗೆ ಶ್ರೀಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿರುವ ಶ್ರೀ ಮುತ್ಯಾಲಮ್ಮ ದೇವಿಯ ರಥವೂ ಸಾಗುತ್ತದೆ.ದೇವಾಲಯದ ಗರ್ಭಗುಡಿಯಲ್ಲಿರುವ ಹಾಗೂ ವರ್ಷವಿಡೀ ಪೂಜಿಸಲಾಗುವ ಶ್ರೀಕೃಷ್ಣ, ಕುಂತಿದೇವಿ, ಧರ್ಮರಾಯ, ಭೀಮ, ನಕುಲ-ಸಹದೇವರು ಹಾಗೂ ಅಭಿಮನ್ಯು ಕಂಚಿನ ವಿಗ್ರಹಗಳನ್ನು ನೀಲಸಂದ್ರದ ಗ್ರಾಮಸ್ಥರು ತಲೆಯ ಮೇಲೆ ಹೊತ್ತು ಸಾಗುವುದು ಇದೇ ಸಮಯದಲ್ಲಿ. ಇದೇ ಸಮಯದಲ್ಲಿ ಬೆಂಗಳೂರಿನ ವಿವಿಧ ದೇವಾಲಯಗಳಿಂದ ಹೊರಡುವ ರಥೋತ್ಸವಗಳು ಕೆ.ಆರ್. ಮಾರುಕಟ್ಟೆ ವೃತ್ತದಲ್ಲಿ ಸೇರುತ್ತವೆ.ವೈವಿಧ್ಯಮಯವಾದ ದ್ರೌಪದಿ ಕರಗ ಮಹೋತ್ಸವಕ್ಕೆ ಮಲ್ಲಿಗೆ ಹೂಗಳದೇ ಮುಖ್ಯ ಪಾತ್ರ. ಹಾಲು ಬಣ್ಣದ ಸುವಾಸನೆ ಬೀರುವ ಸೌಂದರ್ಯದ ಹೂ ಮಲ್ಲಿಗೆ  ಕರಗ ಕಳಸವೂ ಸೇರಿದಂತೆ ಎಲ್ಲೆಡೆ ಸಲ್ಲುತ್ತದೆ. ವೀರಕುಮಾರರ ಹಾರಗಳಿಂದ ಹಿಡಿದು ಕರಗದ ಎಲ್ಲಾ ಉತ್ಸವಗಳಲ್ಲೂ ಮಲ್ಲಿಗೆ ಹೂಗಳಿಗೆ ಮೊದಲ ಆದ್ಯತೆ. ಪ್ರತಿ ಕರಗದ ಉತ್ಸವಕ್ಕೂ ಕನಿಷ್ಠ ಎರಡು ಟನ್ ಮಲ್ಲಿಗೆ ಹೂಗಳು ಬೇಕಾಗುತ್ತವೆ ಎಂಬುದೊಂದು ಅಂದಾಜು.ಬೆಳದಿಂಗಳಲ್ಲಿ ಧಾರ್ಮಿಕ ಪ್ರಕ್ರಿಯೆಗಳು ನಡೆದ ನಂತರ ನಗುವ ಚಂದಿರ ನಡುನೆತ್ತಿಗೆ ಬರುವ ಸಂದರ್ಭಕ್ಕೆ ಸರ್ವಾಲಂಕಾರ ಭೂಷಿತರಾದ ದ್ರೌಪದಿ ಅವತಾರವೆತ್ತಿದ ಮಲ್ಲಿಗೆಮಯ ಕರಗವನ್ನು ತಲೆಯ ಮೇಲಿಟ್ಟುಕೊಂಡು ಪೂಜಾರಿ ಗರ್ಭಗುಡಿಯಿಂದ ಹೊರಕ್ಕೆ ಬರುವುದು. ಈ ಸಂದರ್ಭದಲ್ಲಿ `ಗೋವಿಂದಾ ಗೋವಿಂದಾ' ಎಂಬ ನಾಮಸ್ಮರಣೆಯನ್ನು ಮಾಡುವ ವೀರಕುಮಾರರು ಖಡ್ಗಗಳನ್ನು ಹಿಡಿದು ಕರಗದ ರಕ್ಷಣೆಯಲ್ಲಿರುವರು. ಗುಡಿಯ ಒಳಭಾಗದಲ್ಲಿರುವ ಗಣಪತಿ ಹಾಗೂ ಮುತ್ಯಾಲಮ್ಮ ಆಲಯಗಳಲ್ಲಿ ಪೂಜೆ ಸಲ್ಲಿಸಿ ದೇವಾಲಯವನ್ನು ಪ್ರದಕ್ಷಿಣೆ ಹಾಕಿಕೊಂಡು ಹೊರಡುವ ಹೂವಿನ ಕರಗ ನಿಗದಿತ ಸ್ಥಳಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ಪೂಜೆ ಸ್ವೀಕರಿಸುತ್ತಾ ಸಾಗುತ್ತದೆ.ಅಸಂಖ್ಯ ಜನರು ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದ ಆವರಣ, ಹೊರಭಾಗ ಹಾಗೂ ಕರಗ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ಬೆಳಗಿನ ಜಾವದವರೆಗೂ ನಿಂತು ಕರಗದ ದರ್ಶನ ಪಡೆಯುತ್ತಾರೆ. ಹಳೆಯ ಬೆಂಗಳೂರಿನ ನಿರ್ದಿಷ್ಟ ದೇವಸ್ಥಾನಗಳು, ಮಸ್ತಾನಸಾಬ್ ದರ್ಗಾ ಹಾಗೂ ವಿವಿಧ ಪೇಟೆಗಳ ಮೂಲಕ ಹಾದು ಬರುವ ಹೂವಿನ ಕರಗದ ಪೂಜಾರಿ ಸೂರ್ಯೋದಯಕ್ಕೆ ಮೊದಲು ಧರ್ಮರಾಯಸ್ವಾಮಿ ದೇಗುಲವನ್ನು ಸೇರಿ ಗರ್ಭಗುಡಿಯಲ್ಲಿರುವ ಶಕ್ತಿಪೀಠದ ಮೇಲೆ ಕರಗವನ್ನು ಪ್ರತಿಷ್ಠಾಪಿಸುತ್ತಾರೆ.ದೇವಾಲಯಕ್ಕೆ ಆಗಮಿಸುವ ಜನಸ್ತೋಮ ಶಕ್ತಿಪೀಠದಲ್ಲಿರುವ ಕರಗ ಹಾಗೂ ಕರಗಕರ್ತ ಪೂಜಾರಿಯ ದರ್ಶನ ಪಡೆಯುತ್ತಾರೆ. 

 

ಪ್ರತಿಕ್ರಿಯಿಸಿ (+)