ಸೋಮವಾರ, ಮಾರ್ಚ್ 8, 2021
31 °C
ನಗರ ಪ್ರದೇಶ 2ಗಂಟೆ, ಗ್ರಾಮೀಣ ಪ್ರದೇಶ 6ಗಂಟೆ ಕಡಿತ

ಲೋಡ್‌ಶೆಡ್ಡಿಂಗ್‌ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೋಡ್‌ಶೆಡ್ಡಿಂಗ್‌ ಜಾರಿ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಕನಿಷ್ಠ 2  ತಾಸು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 6 ತಾಸು ವಿದ್ಯುತ್‌ ಕಡಿತ ಮಾಡಲಾಗುತ್ತದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಸೋಮವಾರ ಇಲ್ಲಿ ತಿಳಿಸಿದರು.ವಿದ್ಯುತ್‌ ಉತ್ಪಾದನೆಯಲ್ಲಿ ದಿಢೀರ್‌ ಕುಸಿತ ಆಗಿದೆ.  ನಿತ್ಯದ ಸರಾಸರಿ ಉತ್ಪಾದನೆ  8,522 ಮೆಗಾ­ವಾಟ್‌ ಇತ್ತು. ಆದರೆ ಈಗ ಅದು 7,522 ಮೆಗಾವಾಟ್‌ಗೆ ಇಳಿದಿದೆ. ಜತೆಗೆ,  ಖಾಸಗಿ ಕಂಪೆನಿ­ಗಳಿಂದ ದೊರೆಯುತ್ತಿದ್ದ 650 ಮೆಗಾವಾಟ್‌ ವಿದ್ಯುತ್‌ ನ್ಯಾಯಾಲಯಗಳ ತಡೆಯಾಜ್ಞೆಯಿಂದ  ಕೈತಪ್ಪಿದೆ. ಹೀಗಾಗಿ ಪ್ರತಿ ದಿನ 1,650 ಮೆಗಾವಾಟ್‌ ವಿದ್ಯುತ್‌ ಕೊರತೆಯಾಗಿದ್ದು, ಲೋಡ್‌ಶೆಡ್ಡಿಂಗ್‌ ಜಾರಿ ಮಾಡಲಾಗಿದೆ ಎಂದು ಅವರು ಪತ್ರಿಕಾ­ಗೋಷ್ಠಿಯಲ್ಲಿ  ವಿವರಿಸಿದರು.ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರ ಹಾಗೂ ಉಡುಪಿಯ ಯುಪಿಸಿಎಲ್‌ನ ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ ತಲಾ ಒಂದು ಘಟಕ ಸ್ಥಗಿತ­ಗೊಂಡಿವೆ. ಉಡುಪಿ ಸ್ಥಾವರದಿಂದ 600 ಮೆಗಾ­ವಾಟ್‌ ಹಾಗೂ ರಾಯಚೂರು ಮತ್ತು ಬಳ್ಳಾರಿ ಸ್ಥಾವರಗಳಲ್ಲಿ 400 ಮೆಗಾವಾಟ್‌ ಕೊರತೆ­ಯಾಗಿದೆ. ಕಲ್ಲಿದ್ದಲು ಸಮಸ್ಯೆ, ದುರಸ್ತಿ, ನಿರ್ವಹಣೆ ಮತ್ತಿತರ ಕಾರಣಗಳಿಂದ ಉತ್ಪಾದನೆಯಲ್ಲಿ ವ್ಯತ್ಯಯವಾಗಿದೆ ಎಂದು ಸಚಿವರು ಹೇಳಿದರು.ಖಾಸಗಿ ಕಂಪೆನಿಗಳಿಂದ ವಿದ್ಯುತ್‌ ಪಡೆಯಲು ಸರ್ಕಾರ ಕರ್ನಾಟಕ ವಿದ್ಯುತ್‌ ಕಾಯ್ದೆಯ ಸೆಕ್ಷನ್‌ 11 ಜಾರಿ ಮಾಡಿ 650 ಮೆಗಾವಾಟ್‌ ವಿದ್ಯುತ್‌ ಖರೀದಿಸುತ್ತಿತ್ತು (ಪ್ರತಿ ಯೂನಿಟ್‌ ದರ ರೂ.5.50). ಈ ಕಾಯ್ದೆ ಪ್ರಕಾರ ರಾಜ್ಯದ ಸಕ್ಕರೆ ಕಾರ್ಖಾನೆಗಳು ಹೊರ ರಾಜ್ಯಗಳಿಗೆ ವಿದ್ಯುತ್‌ ಮಾರಾಟ ಮಾಡು­ವಂತಿಲ್ಲ. ಆದರೆ, ಇದಕ್ಕೆ ಆಂಧ್ರಪ್ರದೇಶ, ತಮಿಳು­ನಾಡು ಹಾಗೂ ಕೇರಳಗಳ ನ್ಯಾಯಾಲಯ­ಗಳಿಂದ ಖಾಸಗಿ ಕಂಪೆನಿಗಳು ತಡೆಯಾಜ್ಞೆ  ತಂದ ಕಾರಣ ಈ ಸೆಕ್ಷನ್‌ ವಾಪಸ್‌ ಪಡೆಯಲಾಗಿದೆ ಎಂದರು.ಈ ಹಿಂದಿನ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಗಾಳಿ ಮತ್ತು ಸೌರಶಕ್ತಿ ಮೂಲಕ 15,944 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಲು ಖಾಸಗಿ ಕಂಪೆನಿಗಳಿಗೆ ಅನುಮತಿ ನೀಡಲಾಗಿತ್ತು. ಆದರೆ, ಕೆಲವು ಕಂಪೆನಿಗಳು ಮಾತ್ರ ಘಟಕಗಳನ್ನು ಸ್ಥಾಪಿಸಿ 4,460 ಮೆಗಾವಾಟ್‌ ಉತ್ಪಾದನೆ ಮಾಡುತ್ತಿವೆ. ಹಲವು ಕಂಪೆನಿಗಳು ಇನ್ನೂ ಘಟಕಗಳನ್ನೇ ಆರಂಭಿಸಿಲ್ಲ. ಕಾರ್ಯಾರಂಭ ಮಾಡದ ಕಂಪೆನಿಗಳ ಒಪ್ಪಂದ ರದ್ದು ಮಾಡಲಾಗುವುದು ಎಂದು ತಿಳಿಸಿದರು.ಮುಂದಿನ ತಿಂಗಳು ಸೌರ ವಿದ್ಯುತ್‌ ನೀತಿಯನ್ನು ಜಾರಿಗೊಳಿಸಲು ಸಿದ್ಧತೆಗಳು ನಡೆದಿವೆ.  ಈ ನೀತಿಯ ರೂಪುರೇಷೆ ಸಿದ್ಧಪಡಿಸುವ ನಿಟ್ಟಿನಲ್ಲಿ ಮೂರು ದಿನಗಳ ಕಾಲ ಮಧ್ಯಪ್ರದೇಶದ ನೀಮುಚ್‌ಗೆ ಅಧಿಕಾರಿಗಳ ಜತೆ ಭೇಟಿ ನೀಡಿ ಸೌರ ವಿದ್ಯುತ್‌ ಉತ್ಪಾದನೆ ಘಟಕಗಳ ಕಾರ್ಯವೈಖರಿ ಗಮನಿಸಲಾಗುವುದು ಎಂದರು.ಬೆಂಗಳೂರು ನಗರದಲ್ಲಿ ಪ್ರತಿದಿನ ಕನಿಷ್ಠ 22 ಗಂಟೆಗಳ ಕಾಲ ವಿದ್ಯುತ್‌ ಪೂರೈಕೆಗೆ ಸೂಚನೆ ನೀಡಲಾಗಿದೆ. ನಗರ ಪ್ರದೇಶದ ಕೆಲವು ಕಡೆ ವಿದ್ಯುತ್‌ ಪರಿವರ್ತಕಗಳ ಕಡಿಮೆ ಸಾಮರ್ಥ್ಯದಿಂದ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ. ಹೀಗಾಗಿ ಪ್ರಮುಖವಾಗಿ ಬೆಂಗಳೂರಿನ ಉತ್ತರದ ಯಲಹಂಕ ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚು ವಿದ್ಯುತ್‌ ವ್ಯತ್ಯಯವಾಗಲಿದೆ.ಸ್ಥಳೀಯ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಕಡಿತಗೊಳಿಸಲಾಗುವುದು.  ವಿದ್ಯುತ್‌ ಕಡಿತದ ನಿರ್ದಿಷ್ಟ ಅವಧಿಯ ಬಗ್ಗೆ ಎಸ್ಕಾಂಗಳು ಮುಂಚಿತವಾಗಿಯೇ ಗ್ರಾಹಕರಿಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ ಎಂದು ವಿವರಿಸಿದರು.ರಾಜ್ಯ ಸರ್ಕಾರ, ವಿದ್ಯುತ್‌ಗೆ ಸಬ್ಸಿಡಿ ರೂಪದಲ್ಲಿ ರೂ. 6,200 ಕೋಟಿ ನೀಡುತ್ತಿದೆ. ಸ್ಥಳೀಯ ಸಂಸ್ಥೆಗಳು ರೂ.4,000 ಕೋಟಿ ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿವೆ ಎಂದು ಮಾಹಿತಿ ನೀಡಿದರು.ಬ್ಲ್ಯಾಕ್‌ಮೇಲ್‌ ತಂತ್ರ!

ವಿದ್ಯುತ್‌ ದರ ನಿಗದಿ ಸಂಬಂಧ ಉಡುಪಿ ಪವರ್‌ ಕಾರ್ಪೋರೇಷನ್‌ (ಯುಪಿಸಿಎಲ್‌) ಜತೆ ವಿವಾದ ಉಂಟಾಗಿದೆ. ಯುಪಿಸಿಲ್‌  ಬ್ಲ್ಯಾಕ್‌­ಮೇಲ್ ಮಾಡುವ ತಂತ್ರ ಅನುಸರಿಸುತ್ತಿದೆ ಎಂಬುದು  ಅಧಿಕಾರಿಗಳಿಂದ ಗೊತ್ತಾಗಿದೆ. ಕಲ್ಲಿದ್ದಲು ಕೊರತೆ ನೆಪ ಹೇಳಿ ಉತ್ಪಾದನೆ ಸ್ಥಗಿತಗೊಳಿಸುತ್ತಿರುವ ಆರೋಪ ಇದೆ  ಎಂದು ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಯುಪಿಸಿಎಲ್‌ ಪೂರೈಸುವ ವಿದ್ಯುತ್‌ಗೆ ಪ್ರತಿ ಯೂನಿಟ್‌ಗೆ ರೂ.3.75 ನೀಡಲಾಗುತ್ತಿದೆ. ಆದರೆ, ಯುಪಿಸಿಎಲ್‌ ಕನಿಷ್ಠ ರೂ.4.50ಕ್ಕೆ ನೀಡಬೇಕು ಎಂದು ಹೇಳುತ್ತಿದೆ. ಇದೇ ರೀತಿ ಮುಂದುವರಿದರೆ ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಳ್ಳು­ವುದು ಅನಿವಾರ್ಯ ಎಂದು ಎಚ್ಚರಿಸಿದರು.ಇಂದು ವಿವರ

ದಿನಕ್ಕೆ ಎಷ್ಟು ಗಂಟೆ ಹಾಗೂ ಯಾವ ಸಮಯ­ದಲ್ಲಿ ಲೋಡ್‌ ಶೆಡ್ಡಿಂಗ್‌ ಮಾಡಲಾ­ಗುತ್ತದೆ ಎಂಬ ವಿವರಗಳನ್ನು ಮಂಗಳವಾರ ಪ್ರಕಟಿಸಲಾಗುವುದು ಎಂದು ಬೆಸ್ಕಾಂ ವ್ಯವ­ಸ್ಥಾಪಕ ನಿರ್ದೇಶಕ ಪಂಕಜ್‌ಕುಮಾರ್‌ ಪಾಂಡೆ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.