ಲ್ಯಾಂಗ್‌ಸ್ನಿಂಗ್ ಕ್ಲಬ್‌ಗೆ ಜಯ

7
ಫುಟ್‌ಬಾಲ್: ಐ ಲೀಗ್ ಎರಡನೇ ಡಿವಿಷನ್ ಟೂರ್ನಿ

ಲ್ಯಾಂಗ್‌ಸ್ನಿಂಗ್ ಕ್ಲಬ್‌ಗೆ ಜಯ

Published:
Updated:

ಬೆಂಗಳೂರು: ಹೊಂದಾಣಿಕೆಯ ಪ್ರದರ್ಶನ ನೀಡಿದ ಲ್ಯಾಂಗ್‌ಸ್ನಿಂಗ್ ಫುಟ್‌ಬಾಲ್ ಕ್ಲಬ್ ತಂಡದವರು ಐ-ಲೀಗ್ ಫುಟ್‌ಬಾಲ್ ಟೂರ್ನಿಯ ಎರಡನೇ ಡಿವಿಷನ್‌ನ ಅಂತಿಮ ಹಂತದ ಪಂದ್ಯದಲ್ಲಿ ಜಯ ಪಡೆದರು.ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಶಿಲ್ಲಾಂಗ್‌ನ ಲ್ಯಾಂಗ್‌ಸ್ನಿಂಗ್ ತಂಡ 2-0 ಗೋಲುಗಳಿಂದ ಕೋಲ್ಕತ್ತದ ಸದರ್ನ್ ಸಮಿತಿ ವಿರುದ್ಧ ಜಯ ಸಾಧಿಸಿತು.ಸ್ಯಾಮ್ಸನ್ ನೊಂಗ್ರಮ್ 69ನೇ ನಿಮಿಷದಲ್ಲಿ ಗೋಲು ಗಳಿಸಿ ಲ್ಯಾಂಗ್‌ಸ್ನಿಂಗ್‌ಗೆ ಮುನ್ನಡೆ ತಂದಿತ್ತರು. 78ನೇ ನಿಮಿಷದಲ್ಲಿ ಸದರ್ನ್ ಸಮಿತಿ ತಂಡದ ಅವಿಜಿತ್ ದಾಸ್ `ಉಡುಗೊರೆ' ಗೋಲಿನ ಮೂಲಕ ಎದುರಾಳಿ ತಂಡದ ಗೆಲುವಿನ ಅಂತರ ಹೆಚ್ಚಿಸಿದರು.ಈ ಗೆಲುವಿನ ಮೂಲಕ ಲ್ಯಾಂಗ್‌ಸ್ನಿಂಗ್ ತನ್ನ ಪಾಯಿಂಟ್‌ಗಳನ್ನು ನಾಲ್ಕಕ್ಕೆ ಹೆಚ್ಚಿಸಿಕೊಂಡಿತು. ಸದರ್ನ್ ಸಮಿತಿ ಇಷ್ಟೇ ಪಂದ್ಯಗಳಿಂದ ಕೇವಲ ಒಂದು ಪಾಯಿಂಟ್ ಕಲೆ ಹಾಕಿದ್ದು, ಕೊನೆಯ ಸ್ಥಾನದಲ್ಲಿದೆ.ಪಂದ್ಯದ ಮೊದಲ ಅವಧಿ ಗೋಲುರಹಿತವಾಗಿತ್ತು. ಆದರೂ ಶಿಲ್ಲಾಂಗ್‌ನ ತಂಡ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿತ್ತು. ಸದರ್ನ್ ಸಮಿತಿಯ ಮುನ್ನಾ ಮಲಿಕ್ ಮತ್ತು ಲ್ಯಾಂಗ್‌ಸ್ನಿಂಗ್‌ನ ನೊಂಗ್ರಮ್‌ಗೆ ಗೋಲು ಗಳಿಸುವ ಉತ್ತಮ ಅವಕಾಶ ಲಭಿಸಿದ್ದರೂ, ಯಶ ಪಡೆಯಲಿಲ್ಲ.ಎರಡನೇ ಅವಧಿಯಲ್ಲಿ ಲ್ಯಾಂಗ್‌ಸ್ನಿಂಗ್ ತನ್ನ ಆಟದ ವೇಗ ಹೆಚ್ಚಿಸಿತು. 69ನೇ ನಿಮಿಷದಲ್ಲಿ ಜೊಯೆಲ್ ನೀಡಿದ ಪಾಸ್‌ನಲ್ಲಿ ನೊಂಗ್ರಮ್ ಹೆಡ್ ಮಾಡಿದ ಚೆಂಡು ಎದುರಾಳಿ ಗೋಲ್‌ಕೀಪರ್ ನಸೀಮ್ ಅಖ್ತರ್ ಅವರನ್ನು ತಪ್ಪಿಸಿಕೊಂಡು ಗುರಿ ಸೇರಿತು.ಹಿನ್ನಡೆ ಅನುಭವಿಸಿದ ಸದರ್ನ್ ಸಮಿತಿ ಒತ್ತಡಕ್ಕೆ ಒಳಗಾಯಿತು. ಇದೇ ವೇಳೆ ಲ್ಯಾಂಗ್‌ಸ್ನಿಂಗ್ ಮೇಲಿಂದ ಮೇಲೆ ಆಕ್ರಮಣ ನಡೆಸಿತು. 78ನೇ ನಿಮಿಷದಲ್ಲಿ ಲ್ಯಾಂಗ್‌ಸ್ನಿಂಗ್‌ನ ಅಶೋಕ್ ಸಿಂಗ್ ಗುರಿಯತ್ತ ಒದ್ದ ಚೆಂಡನ್ನು ಸಮಿತಿಯ ಅವಿಜಿತ್ ಹೆಡರ್ ಮೂಲಕ ತಡೆಯಲು ಪ್ರಯತ್ನಿಸಿದರು. ಆದರೆ ಚೆಂಡು ಗುರಿ ಸೇರಿದ ಕಾರಣ ಶಿಲ್ಲಾಂಗ್‌ನ ತಂಡಕ್ಕೆ `ಉಡುಗೊರೆ' ಗೋಲು ಲಭಿಸಿತು.ಬುಧವಾರ ವಿರಾಮದ ದಿನವಾಗಿದ್ದು, ಗುರುವಾರ ನಡೆಯುವ ಪಂದ್ಯಗಳಲ್ಲಿ ಮುಂಬೈ ಟೈಗರ್ಸ್- ಮಹಮ್ಮಡನ್ ಸ್ಪೋರ್ಟಿಂಗ್ ಮತ್ತು ಸದರ್ನ್ ಸಮಿತಿ- ಭಾವನಿಪುರೆ ತಂಡಗಳು ಎದುರಾಗಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry