ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್ ಸೂತ್ರಧಾರ

7

ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್ ಸೂತ್ರಧಾರ

Published:
Updated:

ನ್ಯೂಯಾರ್ಕ್: ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್ ಹಾಗೂ ಯುಎಸ್ ಪೋಸ್ಟಲ್ ಸರ್ವಿಸ್ ಸೈಕ್ಲಿಂಗ್ ತಂಡದ ಇಬ್ಬರು ಸದಸ್ಯರು 2000ದ ಜೂನ್ ತಿಂಗಳಲ್ಲಿ ಖಾಸಗಿ ಜೆಟ್‌ನಲ್ಲಿ ಸ್ಪೇನ್‌ನ ವಲೆನ್ಸಿಯಾಕ್ಕೆ ಪ್ರಯಾಣಿಸುವರು. ಅಲ್ಲಿನ ಹೋಟೆಲ್‌ನ ಕೊಠಡಿಯೊಂದರಲ್ಲಿ ಮೂವರ ರಕ್ತವನ್ನೂ ಸಂಗ್ರಹಿಸಲಾಗುತ್ತದೆ.

ತಮ್ಮ ತಂಡದ ಮೂವರು ಶ್ರೇಷ್ಠ ಸ್ಪರ್ಧಿಗಳ ರಕ್ತ ನಿಧಾನವಾಗಿ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಸಂಗ್ರಹವಾಗುತ್ತಿರುವ ದೃಶ್ಯವನ್ನು ಯುಎಸ್ ಪೋಸ್ಟಲ್ ತಂಡದ ಮ್ಯಾನೇಜರ್ ಹಾಗೂ ಇಬ್ಬರು ವೈದ್ಯರು ನೋಡುತ್ತಿದ್ದರು.

ಮುಂದಿನ ತಿಂಗಳು, ಅಂದರೆ ಟೂರ್ ಡಿ ಫ್ರಾನ್ಸ್ ಸೈಕ್ಲಿಂಗ್ ಸ್ಪರ್ಧೆಯ ವೇಳೆ ಇದೇ ರಕ್ತವನ್ನು ಆರ್ಮ್‌ಸ್ಟ್ರಾಂಗ್ ಹಾಗೂ ಇತರ ಮೂವರ ದೇಹಕ್ಕೆ ಮತ್ತೆ ಸೇರಿಸಲಾಗುತ್ತದೆ.

ಹೀಗೆ ದೇಹಕ್ಕೆ ಸೇರಿದ ರಕ್ತ ಸೈಕ್ಲಿಸ್ಟ್‌ಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರ ಮರುದಿನ ಆರ್ಮ್‌ಸ್ಟ್ರಾಂಗ್ ಇತರ ಸ್ಪರ್ಧಿಗಳನ್ನು ಹಿಂದಿಕ್ಕಿ ಸ್ಪಷ್ಟ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾದರು.  ಟೂರ್ ಡಿ ಫ್ರಾನ್ಸ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಏಳು ಸಲ ಚಾಂಪಿಯನ್ ಆಗಿದ್ದ  ಆರ್ಮ್‌ಸ್ಟ್ರಾಂಗ್ 2000 ದಲ್ಲಿ ತಮ್ಮ ಎರಡನೇ ಪ್ರಶಸ್ತಿ ಜಯಿಸಿದ್ದು ಹೇಗೆ ಎಂಬುದನ್ನು ಇದರಿಂದ ತಿಳಿಯಬಹುದು.ಅದೇ ವರ್ಷ ಸ್ಪೇನ್‌ನಲ್ಲಿ ನಡೆದ ಸ್ಪರ್ಧೆಯೊಂದರ ವೇಳೆ `ನಾನು ನಿಷೇಧಿತ ಮದ್ದು ಟೆಸ್ಟೊಸ್ಟೆರೋನ್ ಸೇವಿಸಿದ್ದೇನೆ~ ಎಂದು ಆರ್ಮ್‌ಸ್ಟ್ರಾಂಗ್ ತಂಡದ ಸಹ ಸದಸ್ಯನಿಗೆ ಹೇಳುವರು. ಉದ್ದೀಪನ ಮದ್ದು ಪರೀಕ್ಷೆ ನಡೆಸುವ ಅಧಿಕಾರಿಗಳು ಸ್ಥಳದಲ್ಲಿದ್ದಾರೆ ಎಂಬ ಎಚ್ಚರಿಕೆಯನ್ನು ಆತ ಆರ್ಮ್‌ಸ್ಟ್ರಾಂಗ್‌ಗೆ ನೀಡುವನು.

ಮದ್ದು ಪರೀಕ್ಷೆ ನಡೆಸಿದರೆ ಸಿಕ್ಕಿಬೀಳುತ್ತೇನೆ ಎಂಬ ಭಯದಿಂದ ಆರ್ಮ್‌ಸ್ಟ್ರಾಂಗ್ ಆ ಸ್ಪರ್ಧೆಯಿಂದ ಹಿಂದೆ ಸರಿಯುವರು. 2002 ರಲ್ಲಿ ಆರ್ಮ್‌ಸ್ಟ್ರಾಂಗ್ ತಂಡದ ಸಹ ಸದಸ್ಯನೊಬ್ಬನನ್ನು ಸ್ಪೇನ್‌ನ ಗಿರೋನಾದಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ಗೆ ಕರೆಸುವರು.

`ನನ್ನ ವೈದ್ಯರು ಸೂಚಿಸುವ ರೀತಿಯಲ್ಲಿ ನಿಷೇಧಿತ ಮದ್ದು ಸೇವಿಸಿದರೆ ಮಾತ್ರ ತಂಡದಲ್ಲಿ ಮುಂದುವರಿಯಬಹುದು~ ಎಂದು ಆರ್ಮ್‌ಸ್ಟ್ರಾಂಗ್ ಆತನಿಗೆ ತಿಳಿಸುತ್ತಾರೆ. ಮಾತ್ರವಲ್ಲ, ನಿಷೇಧಿತ ಮದ್ದು ಸೇವಿಸುವಂತೆ ಒತ್ತಾಯಿಸುವರು.ಅಮೆರಿಕದ ಉದ್ದೀಪನ ಮದ್ದು ತಡೆ ಘಟಕ (ಯುಎಸ್‌ಎಡಿಎ) ಬಿಡುಗಡೆ ಮಾಡಿದ ವರದಿಯಲ್ಲಿ ಈ ಮೇಲಿನ ಅಂಶಗಳಿವೆ. ಆರ್ಮ್‌ಸ್ಟ್ರಾಂಗ್ ಉದ್ದೀಪನ ಮದ್ದು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಯುಎಸ್‌ಎಡಿಎ ಬುಧವಾರ ತನ್ನ ವರದಿಯನ್ನು ಬಹಿರಂಗಪಡಿಸಿದೆ.`ಚಾಂಪಿಯನ್ ಸೈಕ್ಲಿಸ್ಟ್~ ಸ್ವತಃ ನಿಷೇಧಿತ ಮದ್ದು ಸೇವಿಸುತ್ತಿದ್ದರಲ್ಲದೆ, ತಂಡದ ಇತರ ಸದಸ್ಯರ ಮೇಲೂ ಒತ್ತಡ ಹೇರಿದ್ದರು. ಯುಎಸ್ ಪೋಸ್ಟಲ್ ತಂಡ ನಡೆಸಿರುವ ವಂಚನೆಯ `ಸೂತ್ರಧಾರ~ ಆರ್ಮ್‌ಸ್ಟ್ರಾಂಗ್ ಎಂದು ವರದಿಯಲ್ಲಿ ವಿವರಿಸಲಾಗಿದೆ.ಆರ್ಮ್‌ಸ್ಟ್ರಾಂಗ್ ಹಾಗೂ ಯುಎಸ್ ಪೋಸ್ಟಲ್ ತಂಡದ ಸದಸ್ಯರು ಒಮ್ಮೆಯೂ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿಲ್ಲ. ಪರೀಕ್ಷೆಯಲ್ಲಿನ ಕೆಲವು ಲೋಪಗಳನ್ನು ಇವರು ಸಮರ್ಥವಾಗಿ ಬಳಸಿಕೊಂಡಿದ್ದರು. ಮಾತ್ರವಲ್ಲ ಅತ್ಯಂತ ಯೋಜನಾಬದ್ಧ ರೀತಿಯಲ್ಲಿ `ಉದ್ದೀಪನ ಮದ್ದು ಸೇವನೆ ಕಾರ್ಯಕ್ರಮ~ ಜಾರಿಗೊಳಿಸಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.ಅವರು ಜಯಿಸಿರುವ ಏಳು ಟೂರ್ ಡಿ ಫ್ರೃನ್ಸ್ ಪ್ರಶಸ್ತಿಗಳನ್ನು ಇದೇ ಕಾರಣದಿಂದ ಹಿಂದೆ ಪಡೆಯಲಾಗಿದ್ದು, ಆಜೀವ ನಿಷೇಧ ಹೇರಲಾಗಿದೆ ಎಂಬುದು ವರದಿಯಲ್ಲಿದೆ. ಕ್ಯಾನ್ಸರ್‌ನಿಂದ ಚೇತರಿಸಿಕೊಂಡು ಏಳು ಸಲ ಟೂರ್ ಡಿ ಫ್ರಾನ್ಸ್ ಜಯಿಸಿದ್ದ   ಆರ್ಮ್‌ಸ್ಟ್ರಾಂಗ್ ಒಬ್ಬ ಹೀರೊ ಎನಿಸಿಕೊಂಡಿದ್ದರು. ಆದರೆ ಇದೀಗ ವಂಚಕ, ಸುಳ್ಳುಗಾರ ಹಾಗೂ ಇತರರನ್ನು ತಪ್ಪು ಹಾದಿಗೆ ಎಳೆದ ಮೋಸಗಾರ ಎಂಬ ಕಳಂಕ ಅವರ ಹೆಸರಿಗೆ ಅಂಟಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry