ಸೋಮವಾರ, ನವೆಂಬರ್ 18, 2019
29 °C

ವಂಚನೆ ಆರೋಪ: ಇಬ್ಬರ ಬಂಧನ

Published:
Updated:

ಬೆಂಗಳೂರು: ಆಸ್ಪತ್ರೆ ಕಟ್ಟಿಸಲು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡಲು ಹಣ ಹೂಡಿದರೆ ಹೆಚ್ಚು ಲಾಭ ಗಳಿಸಿಕೊಡುವುದಾಗಿ ನಂಬಿಸಿ ಹಲವರಿಂದ ಹಣ ಪಡೆದು ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಬಳಿಯ ಮುಡೇನಹಳ್ಳಿಯ ಲೋಕೇಶ್ (36) ಮತ್ತು ವಿನಯಾ (30) ಬಂಧಿತರು. ಬಂಧಿತರಿಂದ 1.5 ಕೆ.ಜಿ ಚಿನ್ನ, ರೂ 25 ಲಕ್ಷ ಮೌಲ್ಯದ ಎರಡು ಐಷಾರಾಮಿ ಕಾರುಗಳು, ರೂ 5 ಲಕ್ಷ ಮೌಲ್ಯದ ಬೆಲೆ ಪೀಠೋಪಕರಣಗಳು, ರೂ 10 ಲಕ್ಷ ನಗದು ಸೇರಿದಂತೆ ಒಟ್ಟು ರೂ 75 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಗಳು ಹಾರೋಹಳ್ಳಿಯಲ್ಲಿ ಆಸ್ಪತ್ರೆ ಕಟ್ಟಿಸುವುದಾಗಿ ಹಾಗೂ ಜಮೀನುಗಳನ್ನು ನಿವೇಶನಗಳನ್ನಾಗಿ ಅಭಿವೃದ್ಧಿಪಡಿಸಿ ಹೂಡಿದ ಹಣಕ್ಕೆ ಹೆಚ್ಚು ಲಾಭ ಗಳಿಸಿಕೊಡುವುದಾಗಿ ನಂಬಿಸಿ ಪರಿಚಿತರಿಂದ ಸುಮಾರು ರೂ 5 ಕೋಟಿ ಹಣ ಪಡೆದಿದ್ದರು. ಅಲ್ಲದೇ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಹೂಡಿಕೆದಾರರಿಗೆ ನೀಡುವುದಾಗಿ ತಿಳಿಸಿದ್ದರು. ಒಂದು ವರ್ಷದ ಹಿಂದೆ ಹಣ ಪಡೆದುಕೊಂಡಿದ್ದ ಆರೋಪಿಗಳು ಆರು ತಿಂಗಳಿನಿಂದ ತಲೆಮರೆಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಗಳು ಸುಮಾರು 33 ಮಂದಿಯಿಂದ ಹಣ ಪಡೆದು, ಹಣಕ್ಕೆ ಬದಲಾಗಿ ಖಾಲಿ ಚೆಕ್‌ಗಳನ್ನು ನೀಡಿದ್ದರು. ಆರೋಪಿಗಳು ನಗರದಲ್ಲಿ ತಲೆಮರೆಸಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಮಾರ್ಚ್ 28ರಂದು ಆರೋಪಿಗಳನ್ನು ಬಂಧಿಸಲಾಯಿತು. ಲೋಕೇಶ್ ಮತ್ತು ವಿನಯಾ ಪತಿ ಚಂದ್ರ ಒಂದೇ ಗ್ರಾಮದವರಾಗಿದ್ದು, ಈ ಹಿಂದೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)