ವಂಚನೆ ಆರೋಪ: ನಾಲ್ವರ ಬಂಧನ

ಶುಕ್ರವಾರ, ಜೂಲೈ 19, 2019
24 °C

ವಂಚನೆ ಆರೋಪ: ನಾಲ್ವರ ಬಂಧನ

Published:
Updated:

ಜಮಖಂಡಿ:  ಜೀವಂತವಾಗಿರುವ ವ್ಯಕ್ತಿಯ ಮರಣ ದಾಖಲೆ ಸೃಷ್ಟಿಸಿ ಅವರ ಹೆಸರಿನಲ್ಲಿದ್ದ ಜಮೀನನ್ನು ತಮ್ಮ ಹೆಸರಿಗೆ ಬರೆಯಿಸಿಕೊಳ್ಳುವ ಯತ್ನದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ತಾಲ್ಲೂಕಿನ ತೇರದಾಳ ಪೊಲೀಸರು ಬಂಧಿಸಿ ನ್ಯಾಯಾಂಗದ ವಶಕ್ಕೆ ನೀಡಿದ ಘಟನೆ ಗುರುವಾರ ಸಂಜೆ ನಡೆದಿದೆ.ಶ್ರೇಣಿಕ ಚವಜ, ಶೀತಲ ಚವಜ (ಇಬ್ಬರೂ ತೇರದಾಳ), ಶಾಂತಿನಾಥ ಪಾಟೀಲ (ಅಥಣಿ ತಾಲ್ಲೂಕಿನ ಶೇಡಬಾಳ) ಹಾಗೂ ಎಂ.ಬಿ.ದೇಸಾಯಿ (ತಾಲ್ಲೂಕಿನ ಹಳಿಂಗಳಿ) ಬಂಧಿತ ಆರೋಪಿಗಳು. ಇವರನ್ನು  ನ್ಯಾಯಾಂಗ ವಶಕ್ಕೆ ನೀಡಲಾಗಿದೆ.ಕಳೆದ 35 ವರ್ಷಗಳಿಂದ ಶಿವರಾಯ ದಾನಪ್ಪ ಜತ್ತಿ ಎಂಬುವವರಿಗೆ ಸೇರಿದ ತೇರದಾಳ ಪಟ್ಟಣದ ಜಮೀನಿನ ರಿ.ಸ.ನಂ. 574/1ಡಿ ಕ್ಷೇತ್ರ 5 ಎಕರೆ 16 ಗುಂಟೆ ಜಮೀನನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.ಘಟನೆಯ ವಿವರ:  ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿ 1974 ರಲ್ಲಿ ನಿವೃತ್ತಿಯಾದ ಬಳಿಕ ಶಿವರಾಯ ಜತ್ತಿ ಅವರು ಸರಕಾರಕ್ಕೆ ಪತ್ರ ಬರೆದು ಜಮೀನು ನೀಡುವಂತೆ ಮನವಿ ಮಾಡಿದ್ದರು. ಸರಕಾರ ಅವರಿಗೆ 1976ರಲ್ಲಿ ಮೇಲ್ಕಾಣಿಸಿದ ಜಮೀನನ್ನು ಮಂಜೂರು ಮಾಡಿ ಹಕ್ಕುಪತ್ರ ನೀಡಿತ್ತು.ಆದರೆ ಮಂಜೂರಾದ ಜಮೀನು ಕಲ್ಲು ಮತ್ತು ಗುಡ್ಡದಿಂದ ಕೂಡಿದೆ ಎಂಬ ಕಾರಣ ನೀಡಿ ಬೇರೊಂದು ಜಮೀನನ್ನು ಮಂಜೂರು ಮಾಡಲು ಸರಕಾರಕ್ಕೆ ಮನವಿ ಮಾಡಿದ್ದರು. ಆ ವೇಳೆಗೆ ಅವರಿಗೆ ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಉದ್ಯೋಗ ದೊರೆತಿದ್ದರಿಂದ ಅವರು ಬೆಂಗಳೂರಿನಲ್ಲಿಯೇ ನೆಲೆಸಿದ್ದರು.ಈ ವಿಷಯ ಅರಿತ ಮೇಲ್ಕಾಣಿಸಿದ ನಾಲ್ವರು ಆರೋಪಿಗಳು ಶಿವರಾಯ ಜತ್ತಿ ಮರಣ ಹೊಂದಿದ್ದಾರೆ ಎಂದು ದಾಖಲೆ ಸೃಷ್ಟಿಸಿ ಜಮೀನನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳುವ ಯತ್ನ ನಡೆಸಿದ್ದರು. ಈ ಸಂಗತಿಯನ್ನು ಅರಿತ ಕೆಲವು ಯುವಕರು ಪೊಲೀಸರಿಗೆ ದೂರು ನೀಡಿದ್ದರು.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸತ್ಯವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿವರಾಯ ಜತ್ತಿ ಪೊಲೀಸರ ಮುಂದೆ ಪ್ರತ್ಯಕ್ಷವಾದ ಮೇಲಂತೂ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ತೇರದಾಳ ಪೊಲೀಸ್ ಠಾಣೆಯ ಪಿಎಸ್‌ಐ ಆರ್.ಆರ್.ಪಾಟೀಲ ಈ ಪ್ರಕರಣ ಕುರಿತು ಮಾಹಿತಿ ನೀಡಿದ್ದಾರೆ. ಪೊಲೀಸರ ಚಾಣಾಕ್ಷತನವನ್ನು ಎಸ್ಪಿ ಅಭಿಷೇಕ ಗೋಯಲ್, ಡಿವೈಎಸ್ಪಿ ರವಿ ನಾರಾಯಣ, ಸಿಪಿಐ ಗೋಪಾಲ ಜೋಗಿನ ಪ್ರಶಂಸಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry