ಮಂಗಳವಾರ, ನವೆಂಬರ್ 12, 2019
28 °C

ವಂದಿಪೆ ಅಂಬೇಡ್ಕರ್ ಸಿರಿಚರಣಕೆ...

Published:
Updated:

1993ರ ಫೆಬ್ರುವರಿ ತಿಂಗಳ ಒಂದು ದಿನ. ಬೆಂಗಳೂರಿನ `ಯವನಿಕಾ' ಸಭಾಂಗಣದಲ್ಲಿ ಕಿಕ್ಕಿರಿದ ಜನ. ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರ ಸಂಪುಟ ಸಹೋದ್ಯೋಗಿ ಬಿ. ಬಸವಲಿಂಗಪ್ಪನವರು ಅತಿಥಿಗಳ ಸಾಲಿನಲ್ಲಿದ್ದರು.

ಗಂಟಲು ಸರಿ ಮಾಡಿಕೊಂಡು ಕಾರ್ಯಕ್ರಮ ಆರಂಭಿಸಿದೆ. ಸಂಪ್ರದಾಯದಂತೆ ಆರಂಭದಲ್ಲಿ ಗಣಪತಿ ಸ್ತುತಿ- `ಶುಕ್ಲಾಂಬರಧರಂ...'`ಎಲ್ರೀ ಅವನು ಜಾಯಿಂಟ್ ಡೈರೆಕ್ಟರ್... ಕರೀರಿ...'- ನನ್ನ ಗಣಪತಿ ಸ್ತುತಿಗೆ ವಿಘ್ನದಂತೆ ಬಸವಲಿಂಗಪ್ಪನವರ ಮಾತು ಸ್ಪಷ್ಟವಾಗಿಯೇ ಕೇಳಿಸಿತು. ಪರಿಸ್ಥಿತಿಯ ಸೂಕ್ಷ್ಮ ನನಗೆ ಚೆನ್ನಾಗಿ ಅರ್ಥವಾಯಿತು. `ಓಹೋ.. ಇದು ವಿರುದ್ಧವಾಗ್ತಾ ಇದೆ' ಅನ್ನಿಸಿತು. ತಕ್ಷಣವೇ `ಶುಕ್ಲಾಂಬರಧರಂ' ಶ್ಲೋಕದಿಂದ ನನ್ನ ಸ್ತುತಿಗೀತೆಯ ದಿಕ್ಕೇ ಬದಲಾಯಿತು. `ಬುದ್ಧಂ ಶರಣಂ ಗಚ್ಛಾಮಿ... ಸಂಘಂ ಶರಣಂ ಗಚ್ಛಾಮಿ... ಧರ್ಮಂ ಶರಣಂ ಗಚ್ಛಾಮಿ...' ಎಂದು ಶುರು ಮಾಡಿಕೊಂಡೆ. ಇಡೀ ಸಭಾಂಗಣದಲ್ಲಿ ಸೂಜಿ ಬಿದ್ದರೂ ಕೇಳಿಸುವ ಸ್ಥಿತಿ. ಮುಂದಿನದು ಕಲ್ಯಾಣಿ ರಾಗ.ಅಂಬೇಡ್ಕರ ಶುಭಚರಿತನ ಸಿರಿಚರಣಕೆ ವಂದಿಪೆ

ನಿರುತ ಮುದದಿ ಹರಸೊ ಎನುತ ಮನದಿ ಸ್ಮರಿಸುವ ಪಾಡುವೆ...
ಗಣಪತಿ ಶ್ಲೋಕ ಕೇಳುತ್ತಲೇ ಸಿಡುಕಿದ್ದ ಬಸವಲಿಂಗಪ್ಪನವರು ಅಂಬೇಡ್ಕರ್ ಕಥನ ಶುರುವಾಗುತ್ತಲೇ ಶಾಂತಮೂರ್ತಿಯಾಗಿ ಬದಲಾದರು. `ಚೆನ್ನಾಗಿ ಹಾಡ್ತಾನೆ ರೀ... ಮುಂದುವರೆಸೋಕೆ ಹೇಳಿ' ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕಥೆ ಮುಗಿಯಿತು. ನನ್ನನ್ನು ಹತ್ತಿರಕ್ಕೆ ಕರೆದ ಅವರು- `ನೀನು ಮನೆಗೆ ಬಂದು ನನ್ನನ್ನು ನೋಡು' ಎಂದರು. ನಾನು ಮತ್ತೊಮ್ಮೆ ಅವರನ್ನು ಭೇಟಿಯಾಗುವ ಅವಕಾಶ ಕೂಡಿಬರಲೇ ಇಲ್ಲ. ಸ್ವಲ್ಪ ದಿನಗಳಲ್ಲೇ ಅವರು `ಇಲ್ಲಿ ಬಂದೆ ಸುಮ್ಮನೆ' ಎನ್ನುವಂತೆ ವಿಧಿವಶರಾಗಿದ್ದರು.ಅಂಬೇಡ್ಕರ್ ಕಥನದ ಹಿಂದೆ ಒಂದು ಕಥನವಿದೆ.

`ಕಥಾಕೀರ್ತನ' ಸರ್ವಧರ್ಮಗಳ ಏಕತೆಯ ರಸಾನುಭವವಷ್ಟೇ. ಪುರಾಣ ಪ್ರಾತಿನಿಧಿಕ ಪರಂಪರೆಯೊಂದಿಗೆ ಮಾತ್ರ ಬೆಸೆದುಕೊಂಡಿದ್ದ ಈ ಪ್ರಕಾರವನ್ನು ಭಾರತದ ಮಹಾನ್ ಪುರುಷರ, ಶರಣರ, ದಾರ್ಶನಿಕರ ಜೀವನ ದರ್ಶನಕ್ಕೆ ಏಕೆ ಅಳವಡಿಸಿಕೊಳ್ಳಬಾರದು ಎನ್ನುವ  ಆಲೋಚನೆ ನನಗೆ ಹೊಳೆದದ್ದು 90ರ ದಶಕದಲ್ಲಿ. ಆ ವೇಳೆಗಾಗಲೇ ನಾನು ಕರ್ನಾಟಕದಲ್ಲಿ ಒಬ್ಬ ಸಮರ್ಥ ಕೀರ್ತನಕಾರನಾಗಿ ಗುರುತಿಸಿಕೊಂಡಿದ್ದೆ.ನನ್ನ ಈ ಆಲೋಚನೆ ಜನಕಥಾ ಕೀರ್ತನವಾಗಿ ರೂಪುಗೊಳ್ಳಲು ಕಾರಣರಾದವರು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ರೂವಾರಿಗಳಾದ, `ಶಿಕ್ಷಣ ಭೀಷ್ಮ' ಎಂದು ಹೆಸರು ಗಳಿಸಿದ್ದ ದಿವಂಗತ ಎಚ್.ಎಂ. ಗಂಗಾಧರಯ್ಯನವರು. ಅವರ ಮಾರ್ಗದರ್ಶನದಿಂದ ಭಗವಾನ್ ಬುದ್ಧನ ಕಥೆ ಮೊಟ್ಟಮೊದಲ ಬಾರಿಗೆ ಕಥಾಕೀರ್ತನವಾಗಿ ರೂಪುಗೊಂಡಿತು. ಅದು ನನ್ನ ಪ್ರಯೋಗಶೀಲತೆಗೆ ಸಾಕ್ಷಿಯಾಯಿತು.ಹೀಗಿರುವಾಗಲೇ ನಾಡಿನ ಪ್ರಖ್ಯಾತ ಕವಿಗಳಾದ ಡಾ. ಸಿದ್ಧಲಿಂಗಯ್ಯನವರು ವಿಧಾನಪರಿಷತ್ ಸದಸ್ಯರಾಗಿದ್ದ ಅವಧಿಯಲ್ಲಿ ನನ್ನನ್ನು ಕರೆಯಿಸಿದರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ದರ್ಶನವನ್ನು ಕಥಾಕೀರ್ತನದ ರೂಪದಲ್ಲಿ ಪ್ರಸ್ತುತಪಡಿಸುವಂತೆ ಪ್ರೇರೇಪಿಸಿದರು. ಅಷ್ಟು ಮಾತ್ರವಲ್ಲದೆ, ಬಾಬಾ ಸಾಹೇಬರ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ನೀಡಿ ಉಪಕರಿಸಿದರು.ಕಥಾಕೀರ್ತನಕ್ಕೆ ಬೇಕಾದ ಹಾಡುಗಳನ್ನು ಸಂದರ್ಭಕ್ಕೆ ತಕ್ಕಂತೆ ನಾನೇ ಬರೆದು ಕಂದಪದ್ಯಗಳನ್ನು ಸೇರಿಸಿದೆ. ನಾಡಿನ ಪ್ರಸಿದ್ಧ ಕವಿಗಳು ಬಾಬಾ ಸಾಹೇಬರನ್ನು ಕುರಿತು ರಚಿಸಿರುವ ಕೆಲವು ಆಯ್ದ ಕವಿತೆಗಳನ್ನು ಆರಿಸಿಕೊಂಡು ಒಂದು ಸಿದ್ಧರೂಪಕ್ಕೆ ತಂದು ನಿಲ್ಲಿಸಿದೆ. ಇದೆಲ್ಲವನ್ನೂ ಸಿದ್ಧಲಿಂಗಯ್ಯನವರಿಗೆ ತೋರಿಸಿದೆ. ಅವರು ಸಂತೋಷದಿಂದ ಒಪ್ಪಿದರು. ಹೀಗೆ, ಸಿದ್ಧಗೊಂಡ ಅಂಬೇಡ್ಕರ್ ಕಥನ ಕೀರ್ತನೆಯನ್ನು 1993ರಲ್ಲಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಪ್ರಸ್ತುತಪಡಿಸಿದೆ. ಆಗಲೇ ಬಸವಲಿಂಗಪ್ಪನವರು ಹೂಂಕರಿಸಿದ್ದು, ಆಮೇಲೆ ಮೆಚ್ಚಿಕೊಂಡು ತಲೆದೂಗಿದ್ದು.ಅಲ್ಲಿಂದ ಇಲ್ಲಿಯವರೆಗೆ ಅನೇಕ ಸಲ `ಅಂಬೇಡ್ಕರ್ ಕೀರ್ತನೆ'ಯನ್ನು ವಿವಿಧ ಸ್ಥಳಗಳಲ್ಲಿ ಹೇಳಿದ್ದೇನೆ. ಕನ್ನಡ ಸಂಸ್ಕೃತಿ ಇಲಾಖೆ ಆಯೋಜಿಸುವ ಸಮತಾ ಸಂಭ್ರಮ, ಅಂಬೇಡ್ಕರ್ ಜಯಂತಿ, ಅಂಬೇಡ್ಕರ್ ಪರಿನಿರ್ವಾಣ ಹಾಗೂ ದಲಿತ ಸಂಘಟನೆಗಳು ಅಲ್ಲಲ್ಲಿ ನಡೆಸುವ ಸಮಾರಂಭಗಳಲ್ಲಿ ನನ್ನ ಈ ಕಥಾಕೀರ್ತನಕ್ಕೆ ವಿಶೇಷ ಆಹ್ವಾನ. ಅಲ್ಲಿ ಈ ಕಥೆಯನ್ನು ಬಹಳ ಪ್ರೀತಿಯಿಂದ ಶ್ರೋತೃಗಳು ಕೇಳುತ್ತಾರೆ. ಮನದುಂಬಿ ಸಂಭ್ರಮಿಸುತ್ತಾರೆ.ಅಂಬೇಡ್ಕರ್ ಅವರ ಬಾಲ್ಯದ ದಿನಗಳು, ಅನುಭವಿಸಿದ ಅಪಮಾನಗಳು, ಅವರ ಶಿಕ್ಷಣ, ಅನುಭವ, ಸಂಶೋಧನೆ, ಸಂವಿಧಾನ ರಚನೆ, ಬೌದ್ಧ ಮತಾವಲಂಬನೆ ಹಾಗೂ ಅವರ ಅಂತ್ಯದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಕೀರ್ತನ ಧಾಟಿಯಲ್ಲಿ ವಿವರಿಸುವಾಗ ಶ್ರೋತೃಗಳು ಭಾವ ಪರವಶ ಆಗುತ್ತಾರೆ. ಕೇಳುತ್ತಾ ಕೇಳುತ್ತಾ ಕಂಬನಿ ಮಿಡಿದಿದ್ದನ್ನು ನಾನು ಕಣ್ಣಾರೆ ಕಂಡು ವಿಸ್ಮಿತನಾಗಿದ್ದೇನೆ. ಇದಕ್ಕಿಂತ ಇನ್ನೇನು ಬೇಕು? ಅಂಬೇಡ್ಕರ್ ಕುರಿತಾದ ಗೀತಗಾಯನ, ನಾಟಕಗಳು ನಡೆಯುತ್ತಿವೆ ಎನ್ನುವುದು ನನ್ನ ಗಮನದಲ್ಲಿದೆ.ಆದರೆ, ಅವೆಲ್ಲಕ್ಕಿಂತ ವಿಭಿನ್ನವಾಗಿ ನನ್ನ ಕಥಾಕೀರ್ತನವೇ ಹೆಚ್ಚು ಪರಿಣಾಮಕಾರಿ, ನೇರವಾಗಿ ಪ್ರಭಾವಶಾಲಿ ಎನ್ನುವುದು ನನ್ನ ಅನುಭವದ ಮಾತು. ವಿಚಾರಗಳ ಮೂಲಕ ಅಂಬೇಡ್ಕರ್ ಅವರನ್ನು ಸಾಕ್ಷಾತ್ಕರಿಸಿಕೊಳ್ಳುವ ಮಾರ್ಗ ವಿದ್ಯಾವಂತರಿಗೆ ಸಾಧ್ಯವಷ್ಟೇ. ಆದರೆ, ಜನಸಾಮಾನ್ಯರಿಗೆ ಬಾಬಾ ಸಾಹೇಬರನ್ನು ತಲುಪಿಸಲು ಈ ಜನಕಥಾ ಕೀರ್ತನೆ ಉಪಯುಕ್ತ ಎನ್ನುವುದು ನನ್ನ ಅನಿಸಿಕೆ.ಈಗಲೂ ಅನೇಕರ ಪಾಲಿಗೆ ಅಂಬೇಡ್ಕರ್ ದೇವರು ಮಾತ್ರ. ದೇವರು ರೂಪುಗೊಂಡ ಕಥನ ಅನೇಕರಿಗೆ ಗೊತ್ತಿಲ್ಲ. ಒಂದು ಕಾಲಘಟ್ಟದ ಸಾಮಾಜಿಕ ಸ್ಥಿತಿಯ ಸಂಕ್ರಮಣವನ್ನು, ಹೋರಾಟದ ಕಥನವೇ ಅಂಬೇಡ್ಕರ್ ಬದುಕಾಗಿರುವುದನ್ನು ನನ್ನ ಕೀರ್ತನೆಯ ಮೂಲಕ ಹೇಳಲು ಪ್ರಯತ್ನಿಸುತ್ತೇನೆ. ಇಂಥ ಪ್ರಯತ್ನಗಳಿಂದ ಅಂಬೇಡ್ಕರ್ ನಮಗೆ ಇನ್ನೂ ಚೆನ್ನಾಗಿ ಅರ್ಥವಾಗುತ್ತಾರೆ, ಹತ್ತಿರವಾಗುತ್ತಾರೆ.

ತಮಿಳುನಾಡಿನ ಊಟಿಯಲ್ಲಿ ನಡೆದ ಸಾಂಸ್ಕೃತಿಕ ಉತ್ಸವದಲ್ಲಿ ಈ ಕಥೆಯನ್ನು ಪ್ರಸ್ತುತಪಡಿಸಿದ್ದೇನೆ. ಅಲ್ಲಿನ ಕೆಳವರ್ಗದ ಬಡವರು, ಕಾರ್ಮಿಕರು ಸಂತೋಷಪಟ್ಟಿದ್ದಾರೆ. ಹಳೆ ಮೈಸೂರು ಪ್ರಾಂತ್ಯದ ಮಂಡ್ಯ, ಹಾಸನ, ಮೈಸೂರು, ಚಿಕ್ಕಮಗಳೂರು, ಚಾಮರಾಜನಗರ- ಈ ಭಾಗಗಳಲ್ಲಿ ಈ ಕಥಾಕೀರ್ತನಕ್ಕೆ ಮಹತ್ವದ ಸ್ಥಾನವಿದೆ.ನಾನು ಮೂಲತಃ ರಂಗಭೂಮಿಯಿಂದ ಬಂದವನು. ಆ ಕಾರಣದಿಂದಾಗಿ ಅಂಬೇಡ್ಕರ್ ಅವರ ಇಂಗ್ಲಿಷ್ ಭಾಷಣದ ಸಾಲುಗಳನ್ನು ಯಥಾವತ್ತಾಗಿ ಹಾಗೂ ಕಥಾಕೀರ್ತನದ ಹಾಡುಗಳನ್ನು ಮಧ್ಯೆ ಮಧ್ಯೆ ಹಾಡುತ್ತೇನೆ. ಚಾರಿತ್ರಿಕ ಸತ್ಯಗಳನ್ನು ನಿರೂಪಿಸುವಾಗ ಏನೋ ಒಂದು ವಿಧವಾದ ಅವರ್ಣನೀಯ ಆನಂದ ಉಂಟಾಗುತ್ತದೆ. ಶ್ರೋತೃಗಳು ನನ್ನೊಂದಿಗೆ ಸ್ಪಂದಿಸುತ್ತಾರೆ. ಈ ನನ್ನ ಕಥಾಕೀರ್ತನಕ್ಕೆ `ಜನಕಥಾ ಕೀರ್ತನ' ಎಂಬ ಹೊಸ ಶೀರ್ಷಿಕೆಯನ್ನು ನೀಡಿ ಉಪಕರಿಸಿದವರು ಪ್ರೊ. ಕೆ.ಎಸ್.ಭಗವಾನ್.ನಾನೂ ಸಹ ಹಿಂದುಳಿದ ಸಮುದಾಯದಲ್ಲೇ ಹುಟ್ಟಿದವನು. ಶ್ರದ್ಧಾ ಭಕ್ತಿಯಿಂದ ಸಾಧನೆಯ ಹಾದಿ ಹಿಡಿದು, ರಂಗಭೂಮಿಯಿಂದ ಕೀರ್ತನ ಕ್ಷೇತ್ರಕ್ಕೆ ಬಂದವನು. ಹಿಂದುಳಿದ ವರ್ಗದವರೇ ಆದ ನನ್ನ ಗುರು ಕೀರ್ತನ ಕಲಾ ವಿಚಕ್ಷಣ ಆರ್. ಗುರುರಾಜುಲುನಾಯ್ಡು ಅವರಲ್ಲಿ ವಿದ್ಯೆ ಕಲಿತವನು. ಪುರಾಣ ಕಥನದಿಂದ ಪ್ರಯೋಗಶೀಲ ಚಲನೆಯ ಕಡೆಗೆ ಹೊರಟವನು. ಬುದ್ಧ, ಬಸವ, ಕನಕ, ಅಂಬೇಡ್ಕರ್, ಪಂಪ, ಗುಬ್ಬಿವೀರಣ್ಣ ಅವರಂಥ ಮಹಾನ್ ಚೇತನಗಳ ಜೀವನ ದರ್ಶನವನ್ನು ಜನಕಥಾ ಕೀರ್ತನಕ್ಕೆ ತಂದಿರುವೆನೆಂಬ ಹೆಮ್ಮೆ ಅಭಿಮಾನ ವಿನೀತಭಾವ ನನಗಿದೆ.ನನ್ನ ಬಯಕೆ ಇಷ್ಟೆ! ಮಹಾನ್ ಚೇತನಗಳನ್ನು ಕುರಿತಾದ ಕೀರ್ತನೆಗಳು ಜನಸಮುದಾಯದ ಮಧ್ಯೆ ಹೆಚ್ಚು ಹೆಚ್ಚು ನಡೆಯಬೇಕು. ಇದಕ್ಕೆ ಸಾಹಿತಿ ಕಲಾವಿದರುಗಳ ನೆರವು ಬೇಕು. ಸಾಂಸ್ಕೃತಿಕ ಮನಸ್ಸುಗಳ ಪ್ರೀತಿ ಬೇಕು.

ಲೇಖಕರು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು

ಪ್ರತಿಕ್ರಿಯಿಸಿ (+)