ಭಾನುವಾರ, ಜೂನ್ 20, 2021
20 °C

ವಕೀಲರಿಂದ ಕಲಾಪಕ್ಕೆ ಅನಿರ್ದಿಷ್ಟ ಬಹಿಷ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಧ್ಯಮ ಪ್ರತಿನಿಧಿಗಳ ಮೇಲಿನ ಹಲ್ಲೆಯ ಘಟನೆಗೆ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ಹಾಗೂ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಅವರೇ ನೇರ ಕಾರಣ ಎಂದು ಆರೋಪಿಸಿರುವ ಬೆಂಗಳೂರು ವಕೀಲರ ಸಂಘ, ಈ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆಗೊಳಿಸುವವರೆಗೆ ನ್ಯಾಯಾಲಯ ಕಲಾಪವನ್ನು ಅನಿರ್ದಿಷ್ಟ ಅವಧಿಗೆ ಬಹಿಷ್ಕರಿಸಲು ನಿರ್ಧರಿಸಿದೆ.ನ್ಯಾಯಾಲಯ ಕಲಾಪಗಳನ್ನು ಬಹಿಷ್ಕರಿಸಿ ನಗರದ ಸಿವಿಲ್ ಕೋರ್ಟ್ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ವಕೀಲರು, ವಕೀಲರ ಸಂಘದ ಆವರಣದಲ್ಲಿ ಸಭೆ ನಡೆಸಿ ಈ ಇಬ್ಬರೂ ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಪಟ್ಟು ಹಿಡಿದರು.ವಕೀಲರ ಪ್ರತಿಭಟನೆಯಿಂದ ನ್ಯಾಯಾಲಯ ಕಲಾಪಗಳು ನಡೆಯದೇ ಸೋಮವಾರ ತಮ್ಮ ದಾವೆಗಳಿದ್ದ ಕಕ್ಷಿದಾರರು ಪರದಾಡುವ ಪರಿಸ್ಥಿತಿ ಉಂಟಾಯಿತು. ಪ್ರತಿಭಟನೆಯಿಂದಾಗಿ ಹೈಕೋರ್ಟ್ ಸೇರಿದಂತೆ ಎಲ್ಲ ನ್ಯಾಯಾಲಯಗಳೂ ಜನರಿಲ್ಲದೇ ಖಾಲಿಯಾಗಿದ್ದವು. ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಹೈಕೋರ್ಟ್, ಸಿವಿಲ್ ಕೋರ್ಟ್, ಮೆಯೋಹಾಲ್, ಕ್ರಿಮಿನಲ್ ಕೋರ್ಟ್‌ಗಳ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ಸಭೆಯ ನಂತರ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, `ಘಟನೆ ನಿಯಂತ್ರಿಸುವಲ್ಲಿ ಸೋತಿರುವ ಸರ್ಕಾರವು ವಕೀಲರ ಮೇಲೂ ದೌರ್ಜನ್ಯ ಎಸಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇಬ್ಬರೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ಹಾಗೂ ಪೊಲೀಸ್ ಇಲಾಖೆ ಬಹಿರಂಗವಾಗಿ ವಕೀಲರ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಮಂಗಳವಾರದಿಂದ ರಾಜ್ಯದಾದ್ಯಂತ ನ್ಯಾಯಾಲಯ ಕಲಾಪಗಳನ್ನು ಬಹಿಷ್ಕರಿಸಲಾಗುವುದು~ ಎಂದರು.`ಕರಿ ಕೋಟುಗಳನ್ನು ಹಾಕಿಕೊಂಡು ವಕೀಲರಂತೆ ನ್ಯಾಯಾಲಯದ ಆವರಣಕ್ಕೆ ಬಂದಿರುವ ಕೆಲವು ಕಿಡಿಗೇಡಿಗಳು ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಇವರನ್ನು ನಿಯಂತ್ರಿಸಬೇಕಿದ್ದ ಪೊಲೀಸರು ನ್ಯಾಯಾಧೀಶರೂ ಸೇರಿದಂತೆ ವಕೀಲರ ಮೇಲೂ ದೌರ್ಜನ್ಯ ನಡೆಸಿದ್ದಾರೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಘಟನೆ ನಡೆಯದಂತೆ ನಿಯಂತ್ರಿಸುವಲ್ಲಿ ಸೋತಿದ್ದಾರೆ~ ಎಂದು ಕಿಡಿ ಕಾರಿದರು.`ಪತ್ರಕರ್ತರ ವಿರುದ್ಧ ವಕೀಲರಿಗೆ ಯಾವುದೇ ಕೋಪವಿಲ್ಲ. ಘಟನೆಯ ಹಿಂದೆ ಕಾಣದ ಕೈಗಳ ಕೈವಾಡವಿದೆ. ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರ ಕಡೆಯ ವ್ಯಕ್ತಿಗಳು ಈ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂಬ ಅನುಮಾನವೂ ಇದೆ.ಘಟನೆಯು ಪೂರ್ವ ನಿಯೋಜಿತ ಕೃತ್ಯ. ಘಟನೆಯ ಬಗ್ಗೆ ಎಲ್ಲ ಜಿಲ್ಲೆಗಳ ವಕೀಲರ ಸಂಘಗಳ ಸಭೆ ಕರೆದು ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಗುವುದು. ಘಟನೆ ನಿಯಂತ್ರಿಸುವಲ್ಲಿ ಸೋತಿರುವ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ನಿವಾಸಗಳ ಮುಂದೆ ಪ್ರತಿಭಟನೆ ನಡೆಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ~ ಎಂದು  ತಿಳಿಸಿದರು.ಪೊಲೀಸರ ಅಮಾನುಷ ವರ್ತನೆಯಿಂದ ಸಾರ್ವಜನಿಕರ ವಾಹನಗಳೂ ಸೇರಿದಂತೆ ನ್ಯಾಯಾಲಯದ ಆಸ್ತಿಗೂ ಹಾನಿಯಾಗಿದೆ. ಸರ್ಕಾರ ಈ ಹಾನಿಯನ್ನು ತುಂಬಿಕೊಡಬೇಕು. ಘಟನೆ ಬಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.ಇಂದು ವಕೀಲರ ಸಂಘದ ಸಭೆ

ಬೆಂಗಳೂರು:
ನಗರ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಇತ್ತೀಚೆಗೆ ನಡೆದ ಘರ್ಷಣೆ ಮತ್ತು ನಂತರದ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಮೂರ್ತಿ ಕೆ.ಶ್ರೀಧರ ರಾವ್ ಅವರು ಸಿದ್ಧಪಡಿಸಿರುವ ಪರಿಹಾರ ಸೂತ್ರ ಕುರಿತು ಚರ್ಚಿಸಲು ಮಂಗಳವಾರ ಬೆಂಗಳೂರು ವಕೀಲರ ಸಂಘದ ವಿಶೇಷ ಸಭೆ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.