ಸೋಮವಾರ, ಜೂನ್ 14, 2021
27 °C

ವಕೀಲರಿಂದ ಹಲ್ಲೆ: ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಕೀಲರು ವರದಿಗಾರರ ಮೇಲೆ ಕಲ್ಲು ತೂರಿ, ಮನಬಂದಂತೆ ಥಳಿಸುತ್ತಿದ್ದ ದೃಶ್ಯಗಳು ಖಾಸಗಿ ವಾಹಿನಿಯಲ್ಲಿ ಬಿತ್ತರವಾಗುತ್ತಿದ್ದಂತೆಯೇ ಇವರೇನು ವಕೀಲರಾ? ಕಪ್ಪು ಕೋಟಿನ ಗೂಂಡಾಗಳಾ? ಎಂದು ಪ್ರಶ್ನಿಸಿಕೊಳ್ಳುವಂತಾಯಿತು. ಈ ಪ್ರಕರಣಕ್ಕೆ ಗೃಹ ಸಚಿವ ಆರ್.ಅಶೋಕ ನೀಡಿದ ಹೇಳಿಕೆಗಳು ತೀರಾ ಬಾಲಿಶವಾಗಿದ್ದವು. ಸರ್ಕಾರ ಕೇವಲ ವಕೀಲರ ವಿಚಾರದಲ್ಲಿ ವಿಚಾರಣೆಯ ಭರವಸೆಯನ್ನು ನೀಡುತ್ತಾ ಬಂದಿರುವುದು ಸರ್ಕಾರದ ಮೇಲಿನ ವಿಶ್ವಾಸವನ್ನೇ ಜನ ಕಳೆದುಕೊಳ್ಳುವಂತಾಗಿದೆ.

- ನಾರಾಯಣ

ಕಾನೂನಿನ ಅರಿವಿರುವವರು ನ್ಯಾಯಾಲಯದ ಆವರಣದಲ್ಲೇ ಭಯೋತ್ಪಾದಕರಂತೆ ವರ್ತಿಸಿದ್ದಾರೆ. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗೆ ಶ್ರೇಷ್ಠ ನ್ಯಾಯಮೂರ್ತಿಗಳನ್ನು ಕೊಟ್ಟಂತಹ ನಾಡಿನಲ್ಲಿ ವಕೀಲರ ಗೂಂಡಾಗಿರಿ ನಿಜಕ್ಕೂ ಆತಂಕ ಹುಟ್ಟಿಸುವಂಥದ್ದು. ವಕೀಲರ ಈ ವರ್ತನೆಯಿಂದ ಶ್ರೇಷ್ಠ ವೃತ್ತಿಯೆಂದು ಭಾವಿಸಿರುವ ಕಾನೂನು ವೃತ್ತಿಗೆ ಒಂದು ಕಪ್ಪು ಚುಕ್ಕೆ.

-ವಿ. ಸುಧೀಂದ್ರ ಬುಧ್ಯ , ಸಾಫ್ಟ್‌ವೇರ್ ಎಂಜಿನಿಯರ್

ಕೋರ್ಟ್ ಆವರಣದೊಳಗೆ ವರದಿಗಾಗಿ ಪ್ರವೇಶಿಸುವ ವರದಿಗಾರರ ಮೇಲೆ ವಕೀಲರು ಅನೇಕ ಬಾರಿ ಹಲ್ಲೆ ನಡೆಸಿರುವುದು ವರದಿಯಾಗಿದೆ. ಆದರೆ, ಈ ಬಾರಿ ವರದಿಗಾರರನ್ನು ಥಳಿಸಿದ ದೃಶ್ಯ ಮಾತ್ರ ನಿಜಕ್ಕೂ ಕ್ರೌರ್ಯತನದ ಪರಮಾವಧಿ. ಹಾವೇರಿಯಲ್ಲಿ ರಸಗೊಬ್ಬರಕ್ಕಾಗಿ ಗಲಾಟೆ ಮಾಡಿದ ರೈತರ ಮೇಲೆ ಗೋಲಿಬಾರ್ ನಡೆಯಿತು. ಆದರೆ, ವಕೀಲರ ಗೂಂಡಾವರ್ತನೆ ಹೆಚ್ಚುತ್ತಲೇ ಇದ್ದರೂ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಕೈಕಟ್ಟಿ ಕುಳಿತಿರುವುದು ಪ್ರಜಾಪ್ರಭುತ್ವದ ಅಣಕ.

- ಡಾ. ಮೋಹನ್ ವೈದ್ಯ 

 

ನ್ಯಾಯ ಕಾಪಾಡಬೇಕಿರುವ ವಕೀಲರೇ ಪ್ರಜಾಪ್ರಭುತ್ಚದ ತತ್ವಗಳನ್ನು ಗಾಳಿಗೆ ತೂರಿ ಗೂಂಡಾಗಿರಿ ಪ್ರದರ್ಶಿಸಿರುವುದು ನಿಜಕ್ಕೂ ಹೇಸಿಗೆಯ ವಿಚಾರ. ಇಂತಹ ದುಷ್ಕೃತ್ಯ ಎರಡು ತಿಂಗಳ ಹಿಂದೆಯೂ ನಡೆದಿತ್ತು. ಆಗಲೂ ಸರ್ಕಾರ ಎಚ್ಚೆತ್ತಕೊಳ್ಳಲಿಲ್ಲ. ಈಗ ಮತ್ತೆ ಪುನರಾವರ್ತನೆಯಾಗಿದೆ. ವಕೀಲರನ್ನೇ ನಿಯಂತ್ರಿಸಲು ಸಾಧ್ಯವಾಗದಿರುವುದು ಸರ್ಕಾರದ ಅಸಹಾಯಕತೆಯನ್ನು ತೋರಿಸುತ್ತದೆ.

- ನಾಗರಾಜು, ಪ್ರಾಧ್ಯಾಪಕ

ನ್ಯಾಯ ಮತ್ತು ನೀತಿಯನ್ನು ಬೋಧಿಸುವ ವಕೀಲರೇ ರೌಡಿಗಳಂತೆ ಪೊಲೀಸ್ ಪೇದೆ ಮತ್ತು ವರದಿಗಾರರನ್ನು ಹೊಡೆದಿರುವುದು ಅಕ್ಷಮ್ಯ ಅಪರಾಧ. ಕೋರ್ಟ್‌ನಂತಹ ಪವಿತ್ರ ಸ್ಥಳದಲ್ಲಿ ಹೊಡಿ- ಬಡಿ ಸಂಸ್ಕೃತಿಯನ್ನು ಪ್ರದರ್ಶಿಸುವ ಮೂಲಕ ವಕೀಲರು ಯಾವ ಮಟ್ಟಿಗೆ ನ್ಯಾಯದ ಪರವಾಗಿದ್ದಾರೆ ಎಂಬುದನ್ನು ಜನತೆ ಅರ್ಥಮಾಡಿಕೊಳ್ಳಬೇಕಿದೆ

- ಅನ್ನಪೂರ್ಣ, ಶಿಕ್ಷಕಿ

ಕಳೆದ ಎರಡು ತಿಂಗಳಿನಿಂದ ವಕೀಲರ ಗೂಂಡಾವರ್ತನೆ ಪುನರಾವರ್ತನೆಯಾಗಿದೆ. ಕರಿ ಕೋಟು ನೋಡಿದರೆ ಭಯ ಹುಟ್ಟುವಂತೆ ವಕೀಲರು ವರ್ತಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳು ಮತ್ತು ಪೊಲೀಸರಿಗೆ ಭದ್ರತೆಯಿಲ್ಲವೆಂದ ಮೇಲೆ ಸಾಮಾನ್ಯ ಜನರಿಗೆ ಇನ್ನೆಲ್ಲಿನ ಭದ್ರತೆ ದೊರೆಯಬೇಕು?

- ಶಿವ, ವಿದ್ಯಾರ್ಥಿ

 

ವರದಿಗಾರರು ಮತ್ತು ಅವರ ವಾಹನಗಳ ಮೇಲೆ ಮನಸೋ ಇಚ್ಛೆಯಂತೆ ಕಲ್ಲು ಮತ್ತು ಹೆಲ್ಮೆಟ್ ತೂರುವ ಮೂಲಕ ವಕೀಲರು ಮಾನಸಿಕ ಅಸ್ವಸ್ಥರಂತೆ ವರ್ತಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕಾಗಿ ತಾಳ್ಮೆ ಕಳೆದುಕೊಳ್ಳುವ ಇವರಿಂದ ನ್ಯಾಯ ನಿರೀಕ್ಷಿಸಲು ಸಾಧ್ಯವೇ? ಇವರ ಪರವಾಗಿ ನಿಲ್ಲುವವರಿಗೆ ಏನನ್ನಬೇಕು ತಿಳಿಯುತ್ತಿಲ್ಲ

- ಕವಿತಾ, ವಿದ್ಯಾರ್ಥಿ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.