ಮಂಗಳವಾರ, ನವೆಂಬರ್ 12, 2019
28 °C

ವಕೀಲರಿಗೂ ಮುಷರಫ್ ಭೇಟಿ ಇಲ್ಲ

Published:
Updated:

ಇಸ್ಲಾಮಾಬಾದ್ (ಪಿಟಿಐ): ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರನ್ನು ಭೇಟಿಯಾಗಲು ಅವರ  ವಕೀಲರಿಗೆ ಸೋಮವಾರ ಅವಕಾಶ ನಿರಾಕರಿಸಲಾಯಿತು.ಇಸ್ಲಾಮಾಬಾದ್ ಹೊರವಲಯದ ತೋಟದ ಮನೆಯಲ್ಲಿ ಬಂಧನದಲ್ಲಿರುವ ಮುಷರಫ್ ಅವರನ್ನು ಭೇಟಿ ಮಾಡಲು ಆಗಮಿಸಿದ್ದ ವಕೀಲರಿಗೆ,  ಪಂಜಾಬ್ ಸರ್ಕಾರದ `ನಿರಾಕ್ಷೇಪಣಾ ಪ್ರಮಾಣಪತ್ರ' ಪ್ರದರ್ಶಿಸಿದಲ್ಲಿ ಮಾತ್ರ ಭೇಟಿಗೆ ಅವಕಾಶ ಕಲ್ಪಿಸುವುದಾಗಿ ಸೆರೆಮನೆ ಅಧಿಕಾರಿಗಳು ತಿಳಿಸಿದ್ದಾರೆ.ಪಂಜಾಬ್ ಸರ್ಕಾರದ ಅಧೀನದಲ್ಲಿನ ರಾವಲ್ಪಿಂಡಿ ಅದಿಲಾ ಜೈಲಿನ ಅಧಿಕಾರಿಗಳು, ಮುಷರಫ್ ಅವರ ಭದ್ರತೆ  ಮತ್ತು ಮೇಲ್ವಿಚಾರಣೆಯ ಜವಾಬ್ದಾರಿ ಯನ್ನು ಹೊತ್ತಿದ್ದಾರೆ.ಮುಷರಫ್ ಅವರನ್ನು ಭೇಟಿ ಮಾಡಲು ವಕೀಲರಿಗೆ ಅವಕಾಶ ಕಲ್ಪಿಸಬೇಕೆಂದು ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಜೈಲಿನ ಅಧಿಕಾರಿಗಳಿಗೆ ಸೂಚಿಸಿದ್ದರೂ ಸಹ ಭೇಟಿ ಸಾಧ್ಯವಾಗಲಿಲ್ಲ.

`ನಮ್ಮ ಕಕ್ಷಿದಾರನ ಜೊತೆ ಭೇಟಿಗೆ ನಡೆಸಲು ಸಾಧ್ಯವಾಗದಿದ್ದರೆ, ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ವಾದಿಸುವುದು ಹೇಗೆ? ಅದು ಶಸ್ತ್ರಾಸ್ತ್ರವಿಲ್ಲದೆ ಯುದ್ಧಭೂಮಿಗೆ ತೆರಳುವುದಕ್ಕೆ ಸಮಾನ' ಎಂದು ಮುಷರಫ್  ಪರ ವಾದಿಸುತ್ತಿರುವ ವಕೀಲರ    ತಂಡದ ಮುಖ್ಯಸ್ಥರಾದ  ಅಹಮ್ಮದ್ ರಜಾ ಕಸೂರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

`ವಿಚಾರಣೆ ಅಗತ್ಯವಿಲ್ಲ'

ಇಸ್ಲಾಮಾಬಾದ್ (ಪಿಟಿಐ): ಮಾಜಿ ಸೇನಾ ಅಧ್ಯಕ್ಷ ಪರ್ವೇಜ್ ಮುಷರಫ್ ವಿರುದ್ಧ ರಾಷ್ಟ್ರದ್ರೋಹಕ್ಕೆ ಸಂಬಂಧಿಸಿದಂತೆ ವಿಚಾರಣೆಯ ಅಗತ್ಯವಿಲ್ಲ ಎಂದು ಪಾಕಿಸ್ತಾನದ ಉಸ್ತುವಾರಿ ಸರ್ಕಾರ ಸುಪ್ರೀಂಕೋರ್ಟ್‌ಗೆ ಸೋಮವಾರ ತಿಳಿಸಿದೆ. ಇದರಿಂದಾಗಿ ಮುಷರಫ್ ನಿಟ್ಟುಸಿರು ಬಿಟ್ಟಿದ್ದಾರೆ.ಮುಷರಫ್ ಮೇಲಿನ ರಾಷ್ಟ್ರದ್ರೋಹ ಪ್ರಕರಣದ ವಿಚಾರಣೆ ಸಂಬಂಧ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿತ್ತು. ಕಳೆದ ತಿಂಗಳು ಅಸ್ತಿತ್ವಕ್ಕೆ ಬಂದ ಉಸ್ತುವಾರಿ ಸರ್ಕಾರ ಪಾಕಿಸ್ತಾನದಲ್ಲಿ ಮೇ 11ರಂದು ಸಾರ್ವತ್ರಿಕ ಚುನಾವಣೆ ನಡೆಸುತ್ತಿದೆ.

 

ಪ್ರತಿಕ್ರಿಯಿಸಿ (+)