ಬುಧವಾರ, ಜೂನ್ 23, 2021
30 °C

ವಕೀಲರ ಪುಂಡಾಟಿಕೆ- ರಾಜ್ಯಪಾಲರ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಧ್ಯಮ ಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿ ಮೇಲೆ ಇಲ್ಲಿನ ನಗರ ನ್ಯಾಯಾಲಯಗಳ ಸಂಕೀರ್ಣದಲ್ಲಿ ಕೆಲವು ವಕೀಲರು ಶುಕ್ರವಾರ ನಡೆಸಿದ ಹಲ್ಲೆ ಕುರಿತು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಂದ ವರದಿ ತರಿಸಿಕೊಳ್ಳುವುದಾಗಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಪ್ರಕಟಿಸಿದರು.`ಈ ಘಟನೆಯ ಹಿಂದೆ ಕಾಣದ ಕೈಗಳು ಕೆಲಸ ಮಾಡಿರುವ ಅನುಮಾನ ಇದೆ~ ಎಂದು ಹೇಳಿದ ಅವರು, `ವಕೀಲರೇ ಅಮಾನುಷವಾಗಿ ವರ್ತಿಸಿದ ಘಟನೆ ನನ್ನ ಮನಸ್ಸಿಗೆ ನೋವು ತಂದಿದೆ~ ಎಂದರು.ಇಲ್ಲಿನ ಸೇಂಟ್ ಜಾನ್ಸ್ ವೈದ್ಯಕೀಯ ಮಹಾವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಶನಿವಾರ ಪಾಲ್ಗೊಂಡ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, `ಕಾನೂನು ರಕ್ಷಿಸಬೇಕಿದ್ದ ವಕೀಲರೇ ಮಾಧ್ಯಮ ಪ್ರತಿನಿಧಿಗಳು, ಪೊಲೀಸರು ಮತ್ತು ಸಾರ್ವಜನಿಕರ ಮೇಲೆ ನಡೆಸಿದ ಹಲ್ಲೆ ಅಮಾನವೀಯ. ಘಟನೆ ಕುರಿತು ಬೇರೆ ರಾಜ್ಯಗಳಲ್ಲಿರುವ ಸ್ನೇಹಿತರು ನನಗೆ ದೂರವಾಣಿ ಕರೆ ಮಾಡಿ ವಿಚಾರಿಸುತ್ತಿದ್ದಾರೆ~ ಎಂದರು.ಪತ್ರಕರ್ತರ ಮನವಿ: ವಕೀಲರು ನಡೆಸಿದ ದೌರ್ಜನ್ಯದ ಬಗ್ಗೆ ನ್ಯಾಯಾಂಗ ತನಿಖೆ ಅಗತ್ಯವಿಲ್ಲ ಎಂದು ಹೇಳಿರುವ ಪತ್ರಕರ್ತರ ವಿವಿಧ ಸಂಘಟನೆಗಳು, ರಾಜ್ಯಪಾಲರು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿವೆ.ರಾಜ್ಯಪಾಲರನ್ನು ರಾಜಭವನದಲ್ಲಿ ಶನಿವಾರ ಭೇಟಿ ಮಾಡಿದ ಬೆಂಗಳೂರು ವರದಿಗಾರರ ಕೂಟ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ಪ್ರೆಸ್ ಕ್ಲಬ್, ಬೆಂಗಳೂರು ವಿದ್ಯನ್ಮಾನ ಮಾಧ್ಯಮ ವರದಿಗಾರ ಸಂಘ ಹಾಗೂ ಇನ್ನಿತರ ಪತ್ರಕರ್ತರ ಸಂಘಟನೆಗಳ ಪ್ರತಿನಿಧಿಗಳು, `ಪ್ರಕರಣದ ಕುರಿತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಮೇಲುಸ್ತುವಾರಿಯ ತನಿಖೆ, ಸಿಬಿಐ ತನಿಖೆ, ಸಿಐಡಿ ಅಥವಾ ಲೋಕಾಯುಕ್ತ ಸಂಸ್ಥೆಯಿಂದ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು~ ಎಂದು ಮನವಿ ಮಾಡಿದರು

.

ಮಾಧ್ಯಮ ಪ್ರತಿನಿಧಿಗಳ ಮೇಲೆ ಕೆಲವು ವಕೀಲರು ಹಲ್ಲೆ ನಡೆಸಿರುವುದು ಇದೇ ಮೊದಲಲ್ಲ. ವಕೀಲರು ಜನವರಿ 17ರಂದು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ರಸ್ತೆ ತಡೆ ನಡೆಸಿದ್ದಾಗಲೂ ಮಾಧ್ಯಮ ಪ್ರತಿನಿಧಿಗಳು ಮತ್ತು ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ್ದರು. ಚಿತ್ರನಟ ದರ್ಶನ್ ತೂಗುದೀಪ ಅವರನ್ನು ಹಿಂದೆ ಕೋರ್ಟ್‌ಗೆ ಹಾಜರುಪಡಿಸುವ ಸಂದರ್ಭದಲ್ಲೂ ವಕೀಲರು ಹಲ್ಲೆ ನಡೆಸಿದ್ದರು.ಈ ಎಲ್ಲ ಪ್ರಕರಣಗಳಲ್ಲಿ ಪೊಲೀಸರು ದುಂಡಾವರ್ತನೆ ತೋರಿದ ವಕೀಲರ ವಿರುದ್ಧ ಕ್ರಮ ಕೈಗೊಂಡ ಉದಾಹರಣೆ ಇಲ್ಲ. ಬಾರ್ ಕೌನ್ಸಿಲ್ ಅಥವಾ ಬೆಂಗಳೂರು ವಕೀಲರ ಸಂಘ ಕೂಡ ತಮ್ಮ ಸದಸ್ಯರಿಗೆ ಬುದ್ಧಿ ಹೇಳಿ, ಅವರ ವರ್ತನೆಯಲ್ಲಿ ಶಿಸ್ತು ತರುವ ಪ್ರಯತ್ನ ನಡೆಸಿಲ್ಲ ಎಂದು ರಾಜ್ಯಪಾಲರಿಗೆ ನೀಡಿರುವ ಮನವಿಯಲ್ಲಿ ದೂರಲಾಗಿದೆ.ಸರ್ಕಾರದ ನಿಲುವು ಬದಲು: ಶುಕ್ರವಾರ ನಡೆದ ಘಟನೆಯನ್ನು ಮುಖ್ಯಮಂತ್ರಿ ಮತ್ತು ಗೃಹ ಸಚಿವ ಆರ್. ಅಶೋಕ ಅವರ ಗಮನಕ್ಕೆ ತರಲಾಗಿತ್ತು. ದುಷ್ಕೃತ್ಯದಲ್ಲಿ ಪಾಲ್ಗೊಂಡವರ ವಿರುದ್ಧ ಶುಕ್ರವಾರ ಸಂಜೆಯೊಳಗೆ ಕಠಿಣ ಕ್ರಮ ಜರುಗಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸೂಚನೆ ಮೇರೆಗೆ ನಿರ್ಧಾರ ಬದಲಿಸಿದ ಸರ್ಕಾರ ಘಟನೆಯ ಕುರಿತು ನ್ಯಾಯಾಂಗ ತನಿಖೆ ನಡೆಸುವುದಾಗಿ ಪ್ರಕಟಿಸಿತು.`ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದವರು ನ್ಯಾಯಾಂಗದ ಭಾಗವೇ ಆದ ಕೆಲವು ವಕೀಲರು. ಹಲ್ಲೆ ಕುರಿತು ಈಗ ಅದೇ ನ್ಯಾಯಾಂಗ ತನಿಖೆ ನಡೆಸಲಿದೆ. ಇಂಥದರಲ್ಲಿ ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ಧ್ವನಿ ಎತ್ತುವವರು ಯಾರು?~ ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದೆ.`ಗುಪ್ತಚರ ವೈಫಲ್ಯ~:ಪತ್ರಕರ್ತರ ಸಂಘಟನೆಗಳ ಮನವಿ ಸ್ವೀಕರಿಸಿ ಮಾತನಾಡಿದ ರಾಜ್ಯಪಾಲರು, `ನ್ಯಾಯಾಂಗ ತನಿಖೆಗೆ ತಡೆ ನೀಡುವುದು ನನ್ನಿಂದ ಸಾಧ್ಯವಿಲ್ಲ. ಸಿಬಿಐ ತನಿಖೆ ನಡೆಸುವಂತೆ ಸೂಚಿಸಲೂ ನನ್ನಿಂದಾಗದು. ಆದರೆ ನನ್ನ ಮಿತಿಯಲ್ಲಿ ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳುತ್ತೇನೆ. ಪತ್ರಕರ್ತರ ಜೊತೆ ನಾನಿದ್ದೇನೆ~ ಎಂದು ಸ್ಪಷ್ಟಪಡಿಸಿದರು.ಘಟನೆಯ ತನಿಖೆ ಸಂಬಂಧ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿ ಮಾಡಿ ಎಂದು ಅವರು ಪತ್ರಕರ್ತರಿಗೆ ಸಲಹೆ ನೀಡಿದರು. `ಇಡೀ ಘಟನೆಯಲ್ಲಿ ಗುಪ್ತಚರ ವೈಫಲ್ಯ ಎದ್ದು ಕಾಣುತ್ತಿದೆ. ಇಂಥ ಘಟನೆ ನಡೆಯದಂತೆ ಪೊಲೀಸರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಿತ್ತು~ ಎಂದು ಅಸಮಾಧಾನ ವ್ಯಕ್ತಪಡಿಸಿದರು. `ಘಟನೆಯ ಕುರಿತು ಮುಖ್ಯಮಂತ್ರಿಗಳಿಂದ ವರದಿ ಕೇಳಿದ್ದೇನೆ. ಅಗತ್ಯ ಕಂಡುಬಂದರೆ ಅವರನ್ನು ಇಲ್ಲಿಗೆ ಕರೆಸಿ ಮಾತನಾಡುತ್ತೇನೆ~ ಎಂದು ಭರವಸೆ ನೀಡಿದರು.ನ್ಯಾಯಾಲಯದ ಆವರಣದಲ್ಲಿ ನಡೆದ ಘಟನೆಗೆ ಮುನ್ನವೇ ಕಲ್ಲುಗಳನ್ನು ಸಂಗ್ರಹಿಸಿಡಲಾಗಿತ್ತು. ಹಲ್ಲೆ ಪೂರ್ವಯೋಜಿತ ಎಂಬುದಕ್ಕೆ ಇದು ಸಾಕ್ಷಿ ಎಂದು ಮಾಧ್ಯಮ ಪ್ರತಿನಿಧಿಗಳು ರಾಜ್ಯಪಾಲರ ಬಳಿ ದೂರಿದರು.

ರಾಜ್ಯಪಾಲರ ಭೇಟಿಗೂ ಮೊದಲು ಇಲ್ಲಿನ ಎಂ.ಜಿ. ರಸ್ತೆಯಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯ ಎದುರು ಪತ್ರಕರ್ತರ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು.ಮುಖ್ಯಮಂತ್ರಿ ಭರವಸೆ: ಘಟನೆಯಲ್ಲಿ ತಪ್ಪೆಸಗಿರುವವರನ್ನು ರಕ್ಷಿಸುವ ಪ್ರಶ್ನೆ ಇಲ್ಲ. ತನಿಖಾ ಆಯೋಗದ ಮುಖ್ಯಸ್ಥರು ಯಾರು ಎಂಬುದನ್ನು ಒಂದೆರಡು ದಿನಗಳಲ್ಲಿ ನಿರ್ಧರಿಸಲಾಗುವುದು. ಪ್ರಕರಣ ಮುಚ್ಚಿಹಾಕಲು ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಪತ್ರಕರ್ತರು ರಾಜ್ಯಪಾಲರಲ್ಲಿ ಕೋರಿದ್ದು...

-ಶುಕ್ರವಾರದ ಘಟನೆಯನ್ನು ನ್ಯಾಯಾಂಗದ ವ್ಯಾಪ್ತಿಯಲ್ಲೇ ಇತ್ಯರ್ಥ ಮಾಡಬೇಕು ಎಂದಾದರೆ, ತನಿಖೆಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ನಡೆಸಬಹುದೇ ಎಂದು ರಾಜ್ಯಪಾಲರು ಪರಿಶೀಲಿಸಬೇಕು. ಇಡೀ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರಬೇಕು.-ನ್ಯಾಯಾಂಗದ ಹೊರಗೆ ಈ ಪ್ರಕರಣದ ತನಿಖೆ ಆಗಬಹುದಾದರೆ, ಸಿಬಿಐ ತನಿಖೆ ಸೂಕ್ತ.-ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲೇ ತನಿಖೆ ನಡೆಯಬೇಕೆಂದರೆ, ಲೋಕಾಯುಕ್ತ ಅಥವಾ ಸಿಐಡಿ ತನಿಖೆ ನಡೆಸಲಿ.-ನ್ಯಾಯಾಂಗ ತನಿಖೆ ಅನಿವಾರ್ಯ ಎಂದಾದರೆ, ಕರ್ನಾಟಕದ ಯಾವುದೇ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿರದ ನ್ಯಾಯಾಧೀಶರಿಂದ ತನಿಖೆ ನಡೆಯಲಿ.

ವಕೀಲರ ವಿರುದ್ಧ ಎಸ್ಸೆಚ್ಚಾರ‌್ಸಿ ದೂರು

ವಕೀಲರು ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆಸಿರುವ ಹಲ್ಲೆಯನ್ನು ಮಾನವ ಹಕ್ಕುಗಳ ಆಯೋಗವು ಗಂಭೀರವಾಗಿ ಪರಿಗಣಿಸಿದೆ.ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಆಧಾರದ ಮೇಲೆ ಮಾನವ ಹಕ್ಕುಗಳ ರಕ್ಷಣಾ ಕಾಯ್ದೆಯ 12(ಎ) ಕಲಮಿನ ಅನ್ವಯ  ಆಯೋಗವು ಸ್ವಯಂಪ್ರೇರಣೆಯಿಂದ ತನಿಖೆ ಕೈಗೆತ್ತಿಕೊಂಡಿದೆ.ಈ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ 4 ವಾರದಲ್ಲಿ ವರದಿ ಸಲ್ಲಿಸುವಂತೆ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಆರ್.ನಾಯಕ್ ಐಜಿಪಿಯವರಿಗೆ ಆದೇಶಿಸಿದ್ದಾರೆ. ಏಪ್ರಿಲ್ 18ರ ಒಳಗೆ ವರದಿ ನೀಡುವಂತೆ ಸೂಚಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.