ಸೋಮವಾರ, ಜೂನ್ 21, 2021
27 °C

ವಕೀಲರ ಮುಷ್ಕರ: ಎಲ್ಲಿಯದೋ ಜ್ವರ, ನೋವು ತಿನ್ನುತ್ತಿರುವ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇದೇ ತಿಂಗಳು ದಿನಾಂಕ ಎರಡರಿಂದ ಹೈಕೋರ್ಟ್‌ಅನ್ನು ಒಳಗೊಂಡು ಬೆಂಗಳೂರಿನ ಸಿವಿಲ್, ಕ್ರಿಮಿನಲ್ ನ್ಯಾಯಾಲಯಗಳು ಕಿಂಚಿತ್ತೂ ಕೆಲಸ ಮಾಡಲಾಗುತ್ತಿಲ್ಲ. ವಕೀಲರು ಕಲಾಪಗಳಿಗೆ ಹಾಜರಾಗುತ್ತಿಲ್ಲ. ನ್ಯಾಯಾಲಯಗಳಲ್ಲಿ ಸುಮ್ಮನೆ ಕಾಲಹರಣ ಆಗುತ್ತಿದೆ. ಇದು, ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಒಂದು ಕಳಂಕ ಕಾಲ ಎಂದೇ ಹೇಳಬೇಕು.ನ್ಯಾಯಾಲಯಗಳನ್ನು ವಕೀಲರು ಹೀಗೆ ಬಹಿಷ್ಕರಿಸಲು ನ್ಯಾಯಾಧೀಶರಾಗಲಿ, ನ್ಯಾಯಮೂರ್ತಿಗಳಾಗಲಿ, ಅವರಿಗೆ ಏನು ಅನ್ಯಾಯ- ಅಪಮಾನ ಮಾಡಿದ್ದಾರೆ ಎಂಬುದು ತಿಳಿಯದು. ಮುಷ್ಕರ ನಡೆಸುವುದು, ಬಹಿಷ್ಕಾರ ಹಾಕುವುದು ಮುಂತಾದ ಪ್ರತಿಭಟನೆಗಳನ್ನು ಕೈಗೊಳ್ಳುವುದು ಅನ್ಯಾಯಕ್ಕೆ, ಶೋಷಣೆಗೆ, ಇನ್ಯಾವುದೋ ತೊಂದರೆಗೆ ಗುರಿಯಾದವರು.

 

ಹೀಗೆ  ನೊಂದವರಿಗೆ, ಕಷ್ಟದಲ್ಲಿ ಇರುವವರಿಗೆ ಸರಿಯಾದ ಪರಿಹಾರವನ್ನು ದೊರಕಿಸಲು ಮಾಡಬೇಕಾದ ಕರ್ತವ್ಯ ವಕೀಲರದು. ಅದು ಅವರ ವೃತ್ತಿ ಧರ್ಮ ಮತ್ತು ಕರ್ತವ್ಯ ಕೂಡ. ಆದರೆ, ಈಗ ಅವರು ಕೈಗೊಂಡ ನ್ಯಾಯಾಲಯ ಬಹಿಷ್ಕಾರ ಮತ್ತು ಹಠಮಾರಿತನ ನ್ಯಾಯ ದೊರಕಿಸುವು ಪ್ರಕ್ರಿಯೆಗೆ ಅಡ್ಡಿಯಾಗಿದೆ. ಈಗ ವಿವಿಧ ಮಾಧ್ಯಮಗಳಲ್ಲಿ ಬಹಿರಂಗವಾಗಿರುವ ಯಾವ ವರದಿಗಳಲ್ಲೂ ವಕೀಲರು, ನ್ಯಾಯಾಧೀಶರಿಂದ ತಮಗೆ ಅಪಮಾನ ಆಗಿದೆ ಎಂದಾಗಲಿ, ಅನ್ಯಾಯವಾಗಿದೆ ಎಂದಾಗಲಿ ಹೇಳಿದ್ದು ತಿಳಿದುಬಂದಿಲ್ಲ. ಅಂದಮೇಲೆ, ವಕೀಲರು ನ್ಯಾಯಾಲಯಗಳನ್ನು ಬಹಿಷ್ಕರಿಸುವುದಕ್ಕೆ ಕಾರಣ ಏನೂ ಕಂಡು ಬರುವುದಿಲ್ಲ. ಅಂದರೆ ನ್ಯಾಯಾಲಯ, ಅಧೀನ ನ್ಯಾಯಾಧೀಶರು ಮಾಡದಿರುವ ಕೃತ್ಯಕ್ಕಾಗಿ, ವಕೀಲ ಸಮುದಾಯದ ಆಕ್ರೋಶಕ್ಕೆ ಗುರಿಯಾಗಬೇಕಾಗಿದೆ. ಸಹಜವಾಗಿಯೇ ನ್ಯಾಯದ ಆಕಾಂಕ್ಷಿಗಳಾದ ಜನರು ಇದರ ಬಲಿಪಶುಗಳಾಗಿದ್ದಾರೆ.ಆದರೆ, ವಾಸ್ತವವಾಗಿ ನ್ಯಾಯಾಲಯಗಳಿಗಾಗಲಿ, ನ್ಯಾಯಾಧೀಶರಿಗಾಗಲಿ ವಕೀಲರ ಮುಷ್ಕರದಿಂದ ಕಿಂಚಿತ್ತೂ ನಷ್ಟ ಆಗುವುದಿಲ್ಲ. ನ್ಯಾಯಾಧೀಶರು, ನ್ಯಾಯಮೂರ್ತಿಗಳು ವಿಚಾರಣೆ ಮಾಡಲಿ, ಮಾಡದಿರಲಿ ಅವರಿಗೆ ಸಲ್ಲಬೇಕಾದ ಪಗಾರ ಇತ್ಯಾದಿ ಕ್ಲುಪ್ತವಾಗಿ ತಿಂಗಳ ಮೊದಲ ದಿನವೇ ನಿರ್ದಿಷ್ಟವಾಗಿ ಪ್ರಾಪ್ತವಾಗುತ್ತದೆ. ಉದಾಹರಣೆಗೆ: ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ತಿಂಗಳಿಗೆ ಕನಿಷ್ಠ ರೂ. 80 ಸಾವಿರ ಸಂಬಳ, ಉಚಿತ ವಸತಿ, ಅವರ ಕಾರಿಗೆ ಪೆಟ್ರೋಲ್ ಇತ್ಯಾದಿ ಬಾಬುಗಳಿಗಾಗಿ ಒಟ್ಟೂ ಅಂದಾಜು ತಿಂಗಳಿಗೆ ರೂ 1.30 ಲಕ್ಷ ಖರ್ಚಾಗುತ್ತದೆ.ಹಾಗೆಯೇ ಅಧೀನ ನ್ಯಾಯಾಧೀಶರ ಸಂಬಳ, ಸೌಲಭ್ಯ ಇತ್ಯಾದಿ ಬಾಬುಗಳಿಗಾಗಿ ತಿಂಗಳಿಗೆ ರಾಜ್ಯದಾದ್ಯಂತ ಕೋಟ್ಯಂತರ ರೂಪಾಯಿ ಖರ್ಚಾಗಬಹುದು. ಆದರೆ, ನ್ಯಾಯಾಲಯಗಳಿಂದ ಪ್ರಜೆಗಳಿಗೆ ದೊರೆಯಬೇಕಾದ ನ್ಯಾಯ ಪರಿಹಾರ ಮಾತ್ರ ಸೊನ್ನೆ. ಈ ವಿಷಯದಲ್ಲಿ ಬಡವಾಗಿರುವವರು ರಾಜ್ಯದ ಜನತೆ.ಈ ಅನಗತ್ಯ ಬಹಿಷ್ಕಾರ, ಮುಷ್ಕರದಿಂದಾಗಿ ನಿಜವಾಗಿ ಸಂತ್ರಸ್ತರಾಗುವವರು, ನ್ಯಾಯಾಲಯಗಳಿಗೆ ತಮ್ಮ ಅಹವಾಲು, ಸಂಕಟ ದುಃಖಗಳನ್ನು ಪರಿಹರಿಸಿಕೊಳ್ಳಲು ಬರುವ ಸಾಮಾನ್ಯ ಪ್ರಜೆಗಳು. ಬೆಂಗಳೂರಿನಲ್ಲಿ ಉಚ್ಚ ನ್ಯಾಯಾಲಯ ಇರುವುದರಿಂದ ರಾಜ್ಯದ ಮೂಲೆಗಳಿಂದಲೂ ಇಲ್ಲಿ ನ್ಯಾಯ ಪಡೆಯಲು ಜನ ಬರುತ್ತಾರೆ. ನ್ಯಾಯಾಲಯಗಳಿರುವುದೇ ಪ್ರಜೆಗಳ ಸಂಕಟ ಪರಿಹಾರಕ್ಕಾಗಿ.ಅವರು ಎಂಥ ಕಷ್ಟಕ್ಕೆ ಸಿಲುಕಿದ್ದಾರೋ, ಏನು ಆಪತ್ತೋ ಎದುರಿಸುತ್ತಿದ್ದಾರೊ. ಅದನ್ನು ನಿವೇದಿಸಿಕೊಂಡು ಪರಿಹಾರ ಪಡೆದುಕೊಳ್ಳಲು ನ್ಯಾಯಾಲಯಕ್ಕೆ ಬರುತ್ತಾರೆ.ಅದಕ್ಕಾಗಿ ಕಷ್ಟಪಟ್ಟು ಗಳಿಸಿದ ಹಣ ವೆಚ್ಚ ಮಾಡುತ್ತಾರೆ. ಆದರೆ, ಇಲ್ಲಿ, ಬೆಂಗಳೂರಿಗೆ ಬಂದಾಗ ನ್ಯಾಯಾಲಯಗಳೇ ಕೆಲಸ ಮಾಡದೆ ಕೈಕಟ್ಟಿ ಕುಳಿತರೆ ಅವರು ತಮ್ಮ ಸಂಕಟವನ್ನು ಯಾರ ಮುಂದೆ ಹೇಳಿಕೊಳ್ಳಬೇಕು? ಅವರ ಮೊರೆಯನ್ನು ಕೇಳುವವರು ಯಾರು? ಅವರಿಗೆ ಪರಿಹಾರ ಎಲ್ಲಿ?ಹೀಗೆ ನ್ಯಾಯಾಲಯಗಳನ್ನು ನಿಸ್ತೇಜನಗೊಳಿಸಿ, ನಿಷ್ಕ್ರಿಯಗೊಳಿಸಿದರೆ, ಇಲ್ಲಿ ರಾಜ್ಯಾಡಳಿತ ಇದೆ ಎಂದು ಜನ ನಂಬುವುದಾಗುತ್ತದೆಯೇ? ಇದರ ಪರಿಣಾಮ: ನ್ಯಾಯಾಂಗದಲ್ಲಿ ವಿಶ್ವಾಸ ಕುಸಿಯುತ್ತದೆ. ಒಂದು ವ್ಯವಸ್ಥೆಯಲ್ಲಿ ಜನರ ವಿಶ್ವಾಸ ನಷ್ಟವಾದರೆ ಬೇರೆ ಬೇರೆ ಪರಿಣಾಮಗಳೇ ಆಗುತ್ತವೆ. ಸಮಾಜಘಾತುಕರಿಗೆ, ಪುಂಡುಪೋಕರಿಗಳಿಗೆ ಮುಕ್ತ ಅವಕಾಶವನ್ನು ಕೊಟ್ಟಂತೆ ಆಗುತ್ತದೆ. ಯಾರ ತಲೆ ಯಾರ ಕೈಯಲ್ಲೋ ಇರಬಹುದು. ಯಾರ ಹೆಂಡಿರನ್ನು ಯಾರಾದರೂ ಹೊತ್ತುಕೊಂಡು ಹೋಗಬಹುದು, ಯಾರ ಆಸ್ತಿಯನ್ನು ಯಾರಾದರೂ ಅಪಹರಿಸಬಹುದು. ಅವರನ್ನು ಯಾರೂ ಕೇಳುವಂತಿಲ್ಲ. ಕೇಳುವವರು ಯಾರೂ ಇಲ್ಲ.ಇಂಥ ಪರಿಸ್ಥಿತಿಯನ್ನು ಈಗಿನ ಸರ್ಕಾರವೇ ಪರೋಕ್ಷವಾಗಿ ಕಲ್ಪಿಸಿದಂತಾಗಿದೆ. ಹೀಗೆ ನ್ಯಾಯಾಂಗದಲ್ಲಿ ನಿಷ್ಕ್ರಿಯ ಸ್ಥಿತಿ ಸೃಷ್ಟಿಯಾಗಬೇಕು ಎಂಬುದು ರಾಜ್ಯಾಡಳಿತದ ಉದ್ದೇಶವೆ? ಸರ್ಕಾರ ನಡೆಸುವವರ ಉದ್ದೇಶವೇ? ಇದಕ್ಕೆ ಪರಿಹಾರವೇನು? ಈ ಪರಿಸ್ಥಿತಿಯನ್ನು ಉಂಟುಮಾಡಲು ಯಾರು ಕಾರಣರೋ ಅಂಥವರನ್ನು ತಹಬಂದಿಗೆ ತರಬೇಕಾದುದು ರಾಜ್ಯದ ಕರ್ತವ್ಯ. ಹಾಗಾದರೆ ಈ ಪರಿಸ್ಥಿತಿಗೆ ನ್ಯಾಯಾಂಗವನ್ನು ನಿಸ್ತೇಜನಗೊಳಿಸಿರುವುದಕ್ಕೆ ಯಾರು ಕಾರಣ? ನ್ಯಾಯಾಲಯಗಳ ನ್ಯಾಯನಿಷ್ಠುರ ನಡವಳಿಕೆಗಳಿಂದ ಕಾನೂನು ಕ್ರಮಗಳಿಗೆ ಒಳಗಾಗುತ್ತಿರುವವರೇ? ಉತ್ತರ ಸ್ಪಷ್ಟವೇ ಇದೆ. ಆದರೆ, ವಕೀಲರು ಮಾರ್ಚ್ 2ರ ಘಟನೆಯಷ್ಟನ್ನೇ ಆಧರಿಸಿಕೊಂಡು ಹೇಳುತ್ತಾರೆ: `ಪೊಲೀಸ್ ಮಹಾನಿರ್ದೇಶಕರನ್ನು ಅಮಾನತ್ತಿನಲ್ಲಿಡಬೇಕು, ಆಯುಕ್ತರನ್ನು ವಜಾಗೊಳಿಸಬೇಕು, ಸುದ್ದಿ ಮಾಧ್ಯಮಗಳನ್ನು ನ್ಯಾಯಾಲಯದೊಳಗೆ ಬಿಟ್ಟುಕೊಳ್ಳಬಾರದು.~ ಇದು ಅವರ ಬೇಡಿಕೆ.ನ್ಯಾಯಾಲಯಗಳು ಸ್ಥಗಿತವಾಗಿರುವುದಕ್ಕೆ, ನಿಷ್ಕ್ರಿಯವಾಗಿರುವುದಕ್ಕೆ ಪೊಲೀಸ್ ಇಲಾಖೆ ಕಾರಣವೆ? ಸುದ್ದಿ ಮಾಧ್ಯಮಗಳು ಕಾರಣವೆ? ಅವರು ಮಾಡಿದ ಅಪರಾಧ ಏನು? ಒಂದು ವೇಳೆ ಮಾಧ್ಯಮದವರು `ವಕೀಲರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದರು~ ಎಂದರೆ ಅವರ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು.ಮೊಕದ್ದಮೆ ದಾಖಲಿಸಿ ತನಿಖೆಗೆ ಆಗ್ರಹಿಸಬೇಕು. ಅದನ್ನು ಬಿಟ್ಟು ನ್ಯಾಯಾಲಯಗಳನ್ನೇಕೆ ಬಹಿಷ್ಕರಿಸಬೇಕು? ಸುದ್ದಿ ಮಾಧ್ಯಮದವರನ್ನು ನ್ಯಾಯಾಲಯಗಳ ಪ್ರವೇಶಕ್ಕೆ ನಿಷೇಧಿಸಬೇಕು ಎಂಬ ಬೇಡಿಕೆ ಏಕೆ? ಆದರೂ, ವಕೀಲರ ಬಳಗ `ಮುಖ್ಯ ನ್ಯಾಯಮೂರ್ತಿಗಳು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ, ನಮಗೆ ನ್ಯಾಯ ದೊರಕಿಸಿಕೊಡಬೇಕು~ ಎಂದು ಹಟ ಹಿಡಿದಿದ್ದಾರೆ.

 

ಮುಖ್ಯ ನ್ಯಾಯಮೂರ್ತಿಗಳು ಪೊಲೀಸ್ ಇಲಾಖೆಯ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದು ಸಾಧ್ಯವೆ? ಕ್ರಮ ಕೈಗೊಳ್ಳಬೇಕಾದುದು ಸರ್ಕಾರ. ಪೊಲೀಸರ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಆಧಾರಗಳೇನಿವೆ?ಸರ್ಕಾರ ತನ್ನ ಕರ್ತವ್ಯವನ್ನು ನೆರವೇರಿಸಲು ಅಸಮರ್ಥವಾಗಿದೆಯೇ? ಈ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಯವರು ಏನು ಮಾಡಲು ಸಾಧ್ಯ?ಮಾಡಬೇಕಾದ ಕರ್ತವ್ಯವನ್ನು ಮಾಡದಿದ್ದರೆ, ವಕೀಲರ ಸಂಘ, ಒಂದು ರಿಟ್ ಅರ್ಜಿಯನ್ನು ದಾಖಲು ಮಾಡಿ, ಸರ್ಕಾರ ತನ್ನ ಮಾಡಲೇ ಬೇಕಾದ ಕರ್ತವ್ಯ ಮಾಡುವಂತೆ ನ್ಯಾಯಾಲಯದ ಮೂಲಕ ನಿರ್ದೇಶನ ನೀಡುವಂತೆ ಮಾಡಬಹುದು. ವಕೀಲರ ಸಂಘ ಈ ಕ್ರಮವನ್ನು ಏಕೆ ಕೈಗೊಳ್ಳಬಾರದು? ಇದು ಕಾನೂನು ಬಲ್ಲ ತಜ್ಞರಿಂದ ಆಗದಿರುವ ಕಾರ್ಯವೇ?ಆದರೆ ವಕೀಲರ ಸಂಘದ ಅಧ್ಯಕ್ಷರು, `ವಕೀಲರು ನ್ಯಾಯಾಲಯವನ್ನು ಬಹಿಷ್ಕರಿಸುವುದು, ಮುಷ್ಕರ ಹೂಡುವುದು ಸರಿ ಅಲ್ಲ~ ಎಂದು ಒಪ್ಪುತ್ತಾರೆ. ಆದರೆ ತಮ್ಮ ಸಂಘದ ಸದಸ್ಯರು ತಮ್ಮ ಮಾತನ್ನು ಕೇಳುತ್ತಿಲ್ಲ ಎಂದು ತಮ್ಮ ಅಸಹಾಯಕತೆಯನ್ನೂ ಮುಂದಿಡುತ್ತಾರೆ.ಸರ್ಕಾರ, ನ್ಯಾಯಾಲಯಗಳು ಕಾರ್ಯ ನಿರ್ವಹಿಸದ ಸ್ಥಿತಿ ಏರ್ಪಟ್ಟಿರುವ ಇಂಥ ಪರಿಸ್ಥಿತಿಯನ್ನು ನಿವಾರಿಸಲು ಏನನ್ನೂ ಮಾಡಿದಂತೆ ತೋರುತ್ತಿಲ್ಲ. ಸರ್ಕಾರಕ್ಕೂ ನ್ಯಾಯಾಲಯಗಳು ನಿಷ್ಕ್ರಿಯ ಸ್ಥಿತಿಯಲ್ಲಿ ಕೆಲವು ಕಾಲ ಇರುವುದು ಬೇಕಾಗಿರುವಂತೆ ತೋರುತ್ತದೆ. ಇಂಥ ಪರಿಸ್ಥಿತಿಯಲ್ಲಿ ಜನರ ಸಂಕಷ್ಟವನ್ನು ನಿವಾರಿಸುವ ನಿಟ್ಟಿನಲ್ಲಿ ವಿರೋಧ ಪಕ್ಷಗಳಾದರೂ ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಪರಿಸ್ಥಿತಿಯನ್ನು ತಿಳಿಗೊಳಿಸಲು ಮನವೊಲಿಸಬಹುದಾಗಿತ್ತು. ಅದು ಅವರ ಕರ್ತವ್ಯ ಕೂಡ.

 

ಅದು ಅವರಿಗೂ ಬೇಕಿಲ್ಲ. ರಾಜಕೀಯವಾಗಿ ಅವರಿಗೆ ಅದರಿಂದ, ಅದರ ಬೆಳವಣಿಗೆಯಿಂದ ಲಾಭವೇ ಹೆಚ್ಚು. ಸರ್ಕಾರಕ್ಕೆ ಕೆಟ್ಟ ಹೆಸರು ಬಂದರೆ ಅವರು ತಾನೆ ಯಾಕೆ ಬೇಡ ಎನ್ನುತ್ತಾರೆ? ಅವರಿಗೆ ಈ ಸರ್ಕಾರದ ಮೇಲೆ ಪ್ರಜೆಗಳ ವಿಶ್ವಾಸ ನಷ್ಟವಾಗುವುದೇ ಬೇಕಿದೆ.ಅಂದಮೇಲೆ, ಪ್ರಜೆಗಳಿಗೆ ಪರಿಹಾರ ನೀಡುವವರು ಯಾರು? ಇದರ ಫಲಿತಾಂಶ ಏನೆಂದರೆ, ಜನತೆಗೆ ಅರಾಜಕತೆಯೇ ಗತಿ. ಇದರಲ್ಲಿ ಹೆಚ್ಚು ತೊಂದರೆಯಾಗಿದ್ದು, ನಷ್ಟ ಉಂಟಾಗಿರುವುದು ಅವರಿಗೇ. ಎತ್ತಿಗೆ ಜ್ವರ ಬಂದಿದೆ ಎಂದಾಗ ಎಮ್ಮೆಗೆ ಬರೆ ಹಾಕಿದಂತಾಗಿದೆ ಅವರ ಸ್ಥಿತಿ. ಎಲ್ಲೋ ಬಂದ ಸುಡುಜ್ವರಕ್ಕೆ ಇಲ್ಲಿ ಅನಗತ್ಯ ನೋವನ್ನು ಅನುಭವಿಸುತ್ತಿರುವವರು ಅವರು. ಇದು ಜನಪರವಲ್ಲದ ಸರ್ಕಾರದ ಕಾರ್ಯವೈಖರಿಯಂತೆಯೇ ತೋರುತ್ತದೆ.ನ್ಯಾಯಾಲಯಗಳು ಕಾರ್ಯ ನಿರ್ವಹಿಸುವುದು ಈಗ ರಾಜಕಾರಣಿಗಳಿಗೇ ಬೇಕಾಗಿಲ್ಲ. ಏಕೆಂದರೆ ರಾಜಕಾರಣಿಗಳಿಗೆ ಅಂಕುಶಪ್ರಾಯವಾಗಿರುವುದು ನ್ಯಾಯಾಂಗ.ಅಧಿಕಾರದಲ್ಲಿದ್ದವರನ್ನು ಪದಚ್ಯುತಗೊಳಿಸಲು ಇದು ಏಕಮಾತ್ರ ಅಸ್ತ್ರ. ಆದ್ದರಿಂದ ನ್ಯಾಯಾಲಯದ ತೀರ್ಪೇ ಬರದಂತೆ ಮಾಡುವುದು ಎಲ್ಲ ರಾಜಕಾರಣಿಗಳ ಉದ್ದೇಶ. ಆದ್ದರಿಂದಲೇ ನ್ಯಾಯಾಲಯಗಳು ಕೆಲಸ ಮಾಡದಂತೆ ಆಗುವುದು ರಾಜಕಾರಣಿಗಳಿಗೆ ಬೇಕಾಗಿದೆ.ಹಿಂದೆ ಬ್ರಿಟಿಷರ ಕಾಲದಲ್ಲಿ ಇಂಥ ಅರಾಜಕ ಪರಿಸ್ಥಿತಿ ತಲೆದೋರಿದಾಗ ಗವರ್ನರ್ ಜನರಲ್ ಆಗ್ದ್ದಿದ ಲಾರ್ಡ್ ಬೆಂಟಿಂಕ್ ಅದನ್ನು ತುಂಬ ಎಚ್ಚರಿಕೆಯಿಂದ ತಹಬದಿಗೆ ತಂದಿದ್ದ. `ಪಂಜುಗಳ್ಳರನ್ನು~ (ಪಂಜು ಹಚ್ಚಿಕೊಂಡು ಕಳ್ಳತನ, ದರೋಡೆ ಮಾಡುವವರು) ಪುಂಡು ಪೋಕರಿಗಳನ್ನು, ಹಾದಿಬದಿಯ ದರೋಡೆಕೋರರನ್ನು ಕಠಿಣ ಕ್ರಮ ಕೈಗೊಂಡು ಬಗ್ಗು ಬಡಿದಿದ್ದ. ಅದಕ್ಕಾಗಿಯೇ ಇಂಥ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಲು ಬೇಕು ಸುಭದ್ರ ಸರ್ಕಾರ. ನಿಷ್ಠಾವಂತ ಪೊಲೀಸ್ ಸಿಬ್ಬಂದಿ, ಸುಭದ್ರ ಸರ್ಕಾರ ಇರುವ ಆಡಳಿತ ಬಂದಾಗ ಇದಕ್ಕೆಲ್ಲ ಪರಿಹಾರ ದೊರಕಿತೇನೊ. ಅಲ್ಲಿಯವರೆಗೆ ಸಾಮಾನ್ಯ ಜನ ನೋವನ್ನು ಅನುಭವಿಸುತ್ತಲೇ ಇರಬೇಕೇನೋ..

 (ಲೇಖಕರು ನಿವೃತ್ತ ನ್ಯಾಯಾಧೀಶರು)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.