ಗುರುವಾರ , ಜೂನ್ 24, 2021
30 °C

ವಕೀಲರ ವಿರುದ್ಧ ದೂರು ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಕೀಲರ ದುಂಡಾವರ್ತನೆ ಸಂಬಂಧ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ಉಪ ವಿಭಾಗದ ಎಸಿಪಿ ಗಚ್ಚಿನಕಟ್ಟಿ ಅವರು ನಗರದ ಹಲಸೂರುಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಹಲ್ಲೆ, ಸಾರ್ವಜನಿಕರ ಆಸ್ತಿಗೆ ನಷ್ಟ, ಗಲಭೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, ಸಂಚು ಮತ್ತಿತರ ಆರೋಪಗಳಡಿ ವಕೀಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಹತ್ತು ನಿಮಿಷದಲ್ಲೇ ಕಾಲ್ಕಿತ್ತ ಮಿರ್ಜಿ: ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರು ಘಟನೆಯ ವಿಷಯ ತಿಳಿದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದರು. ಆ ನಂತರ ವಕೀಲರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡುತ್ತಿದ್ದಂತೆ ಬೆದರಿದ ಮಿರ್ಜಿ ಅವರು ಸ್ವಲ್ಪ ಸಮಯದಲ್ಲೇ ಸ್ಥಳದಿಂದ ಹೊರಡಲು ಮುಂದಾದರು. ಈ ಸಂದರ್ಭದಲ್ಲಿ ವಕೀಲರು ಅವರ ವಾಹನವನ್ನು ಅಡ್ಡಗಟ್ಟಿ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು. ಪೊಲೀಸರು, ವಕೀಲರ ಗುಂಪನ್ನು ಚದುರಿಸಿ ಮಿರ್ಜಿ ಅವರ ವಾಹನ ಮುಂದೆ ಸಾಗಲು ಅವಕಾಶ ಮಾಡಿಕೊಟ್ಟರು.ಪೂರ್ವ ಯೋಜಿತ ಕೃತ್ಯ..?ಮಾಧ್ಯಮ ಪ್ರತಿನಿಧಿಗಳ ಮೇಲೆ ವಕೀಲರು ಹಲ್ಲೆ ನಡೆಸಿರುವುದು ಪೂರ್ವ ನಿಯೋಜಿತ ಕೃತ್ಯ ಎಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ.ಪೊಲೀಸರು, ವಕೀಲರೊಬ್ಬರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ವಕೀಲರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಜನವರಿ 17ರಂದು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ್ದರು. ಇದರಿಂದ 11 ತಾಸಿಗೂ ಹೆಚ್ಚು ವಾಹನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿತ್ತು. ಅಲ್ಲದೇ ವಕೀಲರ ಗೈರು ಹಾಜರಿಯಿಂದ ಕಕ್ಷಿದಾರರು ಪರದಾಡಿದ್ದರು.ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಸಾರ್ವಜನಿಕರು ಅನುಭವಿಸಿದ ನೋವುಗಳ ಕುರಿತು ಮಾಹಿತಿ ನೀಡಿದ್ದವು. ಈ ಘಟನೆ ನಂತರ ವಕೀಲ ಸಮುದಾಯ ಮಾಧ್ಯಮಗಳ ಮೇಲೆ ಕಿಡಿ ಕಾರುತ್ತಲೇ ಇತ್ತು. ಸಿಟಿ ಸಿವಿಲ್ ಕೋರ್ಟ್ ಆವರಣದೊಳಕ್ಕೆ ಕಾಲು ಇಡದಂತೆ ಬೆದರಿಕೆ ಸಹ ಹಾಕಲಾಗಿತ್ತು. ಎರಡು ವಾರಗಳ ಹಿಂದಷ್ಟೇ ವಿದ್ಯುನ್ಮಾನ ಮಾಧ್ಯಮವೊಂದರ ಕ್ಯಾಮೆರಾಮೆನ್ ಮೇಲೆಯೂ ಹಲ್ಲೆ ನಡೆಸಲಾಗಿತ್ತು.ಸೂಕ್ತ ಸಮಯಕ್ಕೆ ಕಾಯುತ್ತಿದ್ದ ವಕೀಲರು ಮಾಧ್ಯಮಗಳ ಮೇಲೆ ಸಾಮೂಹಿಕ ಹಲ್ಲೆ ನಡೆಸಲು ಶುಕ್ರವಾರ `ಮುಹೂರ್ತ~ ನಿಗದಿ ಮಾಡಿದ್ದರು ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.