ಮಂಗಳವಾರ, ಜೂನ್ 15, 2021
21 °C

ವಕೀಲರ ವಿರುದ್ಧ ವಿವಿಧೆಡೆ ಪತ್ರಕರ್ತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬೆಂಗಳೂರಿನ ಕೋರ್ಟ್ ಆವರಣದಲ್ಲಿ ಸುದ್ದಿಯೊಂದರ ವರದಿಗಾಗಿ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ವಕೀಲರು ನಡೆಸಿದ ಮಾರಣಾಂತಿಕ ಹಲ್ಲೆ ಖಂಡಿಸಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಸಂಘದ ಕಚೇರಿಯಿಂದ ತಹಶೀಲ್ದಾರರ ಕಚೇರಿವರೆಗೆ ಮೆರವಣಿಗೆ ನಡೆಸಿದ ಪತ್ರಕರ್ತರು, ಹಲ್ಲೆ ನಡೆಸಿದ ವಕೀಲರು ಮತ್ತು ಮೂಕ ಪ್ರೇಕ್ಷಕರಾಗಿದ್ದ ಪೊಲೀಸರ ವಿರುದ್ಧ ಘೋಷಣೆ ಕೂಗಿದರು.ಕಾನೂನು ಪಾಠ ಹೇಳುವವರೇ ಕಾನೂನು ಕೈಗೆತ್ತಿಕೊಂಡು ಗೂಂಡಾಗಳಂತೆ ವರ್ತಿಸಿ ಮಾಧ್ಯಮ ಪ್ರತಿನಿಧಿಗಳ ಮೇಲೆ ವಿನಾಕಾರಣ ಹಲ್ಲೆ ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಹಲ್ಲೆ ನಡೆಯುತ್ತಿರುವಾಗ ಜವಾಬ್ದಾರಿ ಮರೆತು ನಿಂತ ಪೊಲೀಸರ ವರ್ತನೆಯೂ ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಹಲ್ಲೆ ಕೃತ್ಯ ನಡೆಸಿದ ಅಪರಾಧಿಗಳನ್ನು ಕೂಡಲೇ ಬಂಧಿಸಿ, ಅವರ ಸನದನ್ನು ಮರಳಿ ಪಡೆದು ಕಾನೂನು ಪ್ರಕಾಶ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ನೀಡಲಾಯಿತು.ಸಂಘದ ಅಧ್ಯಕ್ಷ ಮಂಜುನಾಥ್ ಭಟ್, ಪ್ರಧಾನ ಕಾರ್ಯದರ್ಶಿ ಅಬ್ಬಾಸ ಮುಲ್ಲಾ, ಕಾರ್ಯದರ್ಶಿ ನಾರಾಯಣ ವೈದ್ಯ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಖಂಡನೆ: ಮಾಧ್ಯಮ ಪ್ರತಿನಿಧಿಗಳ ಮೇಲೆ ವಕೀಲರು ನಡೆಸಿದ ಹಲ್ಲೆಯನ್ನು ಧಾರವಾಡ ಜಿಲ್ಲಾ ಬೀಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎ.ಮುಧೋಳ, ಪ್ರಧಾನ ಕಾರ್ಯದರ್ಶಿ ದೇವಾನಂದ ಜಗಾಪುರ, ಮುಖಂಡ ಬಾಬಾಜಾನ ಮುಧೋಳ, ಸಮತಾ ಸೈನಿಕ ದಳದ ವಿಭಾಗೀಯ ಘಟಕದ ಅಧ್ಯಕ್ಷ ಪಿತಾಂಬ್ರಪ್ಪ ಬಿಳಾರ ಖಂಡಿಸಿದ್ದಾರೆ.ಧಾರವಾಡ ವರದಿವರದಿಗಾಗಿ ಹೋಗಿದ್ದ ಮಾಧ್ಯಮದ ಪ್ರತಿನಿಧಿಗಳ ಮೇಳೆ ಬೆಂಗಳೂರಿನಲ್ಲಿ ವಕೀಲರು ಹಲ್ಲೆ ನಡೆಸಿದ್ದನ್ನು ಖಂಡಿಸಿ ಧಾರವಾಡ ಮೀಡಿಯಾ ಕ್ಲಬ್ ಸದಸ್ಯರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ತಪ್ಪಿತಸ್ಥ ವಕೀಲರನ್ನು ಕೂಡಲೇ ಬಂಧಿಸ ಬೇಕು. ಪತ್ರಕರ್ತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಬೆಂಗಳೂರಿನಲ್ಲಿ ವಕೀಲರು ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದ್ದನ್ನು ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ, ಜಯಕರ್ನಾಟಕ ಸಂಘಟನೆ, ಕರ್ನಾಟಕ ರಾಜ್ಯ ಆದಿಜಾಂಬವ (ಮಾದಿಗ) ಸಂಘ ತೀವ್ರವಾಗಿ ಖಂಡಿಸಿವೆ.ಗೂಂಡಾ ವರ್ತನೆ ಮಾಡಿದ ವಕೀಲರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಈ ಸಂಘಟನೆಗಳು ಆಗ್ರಹಿಸಿವೆ.ನವಲಗುಂದ ವರದಿ

ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ವರದಿಗಾಗಿ ತೆರಳಿತ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ ವಕೀಲರ ಕೃತ್ಯವನ್ನು ನವಲಗುಂದ ತಾಲ್ಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ.ಹಲ್ಲೆ ಮಾಡಿದ ವಕೀಲರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಹುಚ್ಚಪ್ಪ ಭೋವಿ, ಪ್ರಧಾನ ಕಾರ್ಯದರ್ಶಿ ಚರಂತಯ್ಯಾ ಹಿರೇಮಠ, ವರದಿಗಾರರಾದ ಪುಂಡಲಿಕ ಮುಧೋಳೆ, ಶ್ರೀಕಾಂತ ಮನುವಾಚಾರ್ಯ, ಶಿವಮೂರ್ತಿ ಧಾರವಾಡ, ಇಸ್ಮಾಯಿಲ್ ನದಾಫ್, ಪರಶುರಾಮ ಹಕ್ಕರಕಿ, ವೀರೇಶ ಶಾನುಭೋಗರ, ನಿಂಗಪ್ಪ ಯಳವತ್ತಿ, ಹೂಗಾರ ಮೊದಲಾದವರು ಆಗ್ರಹಿಸಿದ್ದಾರೆ.ಹಲ್ಲೆಯನ್ನು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಸಿ.ರೇಣುಕಮಠ ಅವರೂ ಖಂಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.