ವಕೀಲರ ಸಂಘ: ಅಧ್ಯಕ್ಷನ ಪದಚ್ಯುತಿಗೆ ಯತ್ನ

ಗುರುವಾರ , ಜೂಲೈ 18, 2019
26 °C

ವಕೀಲರ ಸಂಘ: ಅಧ್ಯಕ್ಷನ ಪದಚ್ಯುತಿಗೆ ಯತ್ನ

Published:
Updated:

ಕುಷ್ಟಗಿ: ಇಲ್ಲಿಯ ನ್ಯಾಯಾಲಯ ಆವರಣದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ನ್ಯಾಯಾಲಯ ಸಂಕೀರ್ಣ ಜುಲೈ 20ರಂದು ಉದ್ಘಾಟನೆಗೊಳ್ಳಲಿದೆ. ಆದರೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸುವುದು ಪ್ರತಿಷ್ಠೆಯನ್ನಾಗಿಸಿಕೊಂಡಿರುವ ವಕೀಲರ ಬಣಗಳು ಅವಧಿಗೆ ಮೊದಲೇ ಹಾಲಿ ಅಧ್ಯಕ್ಷರ ಪದಚ್ಯುತಿಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.ಅಧ್ಯಕ್ಷ ನಾಗಪ್ಪ ಸೂಡಿ ಅವರ ಅವಧಿ ಆ.14ಕ್ಕೆ ಪೂರ್ಣಗೊಳ್ಳುತ್ತದೆ. ಆದರೆ ಅದಕ್ಕೂ ಮೊದಲೇ ಹೊಸ ಅಧ್ಯಕ್ಷರ ಆಯ್ಕೆಗೆ ಕ್ರಿಯಾಶೀಲರಾಗಿದ್ದ ವಕೀಲರ ಒಂದು ಗುಂಪು ವಕೀಲ ಆರ್.ಕೆ.ದೇಸಾಯಿ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ನಾಗಪ್ಪ ಸೂಡಿ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಮುಂದಾಗಿತ್ತು ಎಂದು ತಿಳಿದಿದೆ.ಸೋಮವಾರ ವಕೀಲರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಮಾತಿನ ಚಕಮಕಿ ನಡೆಯಿತಲ್ಲದೇ ಹಾಲಿ ಅಧ್ಯಕ್ಷರ ಕಾರ್ಯವೈಖರಿಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ. ಆದರೆ ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗೆ ಹೈಕೋರ್ಟಿನ ನ್ಯಾಯಮೂರ್ತಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗೊಂದಲ ಎಬ್ಬಿಸುವುದು ಬೇಡ ಎಂದು ಕೆಲ ಹಿರಿಯರು ಸಲಹೆ ನೀಡಿದ್ದರಿಂದ ಅವಿಶ್ವಾಸ ಅಥವಾ ಅಧ್ಯಕ್ಷರ ಬದಲಾವಣೆ ವಿಷಯವನ್ನು ಕೈಬಿಡಲಾಯಿತು ಎಂದು ಸಂಘದ ಕೆಲ ಪ್ರಮುಖರು ನಂತರ ವಿವರಿಸಿದರು.ಆದರೆ ಕೋರ್ಟ್ ಆವರಣದಲ್ಲಿ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆರ್.ಕೆ.ದೇಸಾಯಿ, ಉದ್ಘಾಟನೆ ಸಮಾಂಭಕ್ಕೆ ಸಂಬಂಧಿಸಿದಂತೆ ವಿವಿಧ ಸಮಿತಿಗಳ ರಚನೆಗೆ ತಮ್ಮ ವಿರೋಧವಿದೆ, ಸಮಾರಂಭ ಸುಸೂತ್ರವಾಗಿ ನಡೆಯುವುದಕ್ಕೆ ಎಲ್ಲರೀತಿಯ ಸಹಕಾರ ನೀಡುತ್ತೇವೆ ಎಂದರು.ಆದರೆ ತಮಗೆ ಯಾವುದೇ ಸಮಿತಿ ಅಧ್ಯಕ್ಷತೆ ಬೇಡ ಎಂದು ಅಧ್ಯಕ್ಷ ನಾಗಪ್ಪ ಸೂಡಿ ಅವರಿಗೆ ಖಾರವಾಗಿಯೇ ಹೇಳಿದರು.

ಅಧ್ಯಕ್ಷ ನಾಗಪ್ಪ ಸೂಡಿ ಅವರ ಕಾರ್ಯ ವೈಖರಿಯನ್ನು ಟೀಕಿಸಿದ ಕೆಲ ವಕೀಲರು, ಸಂಘದಲ್ಲಿ ಅಧ್ಯಕ್ಷರೊಬ್ಬರೇ ಕಾರ್ಯನಿರ್ವಹಿಸುತ್ತಿದ್ದಾರೆ. ಅವಧಿ ಮುಗಿಯುತ್ತ ಬಂದರೂ ಕಾರ್ಯಕಾರಿ ಸಮಿತಿ ರಚನೆ ಮಾಡಿಲ್ಲ, ಯಾವುದೇ ವಿಷಯಗಳಿದ್ದರೂ ಸಂಘದ ಸದಸ್ಯರೊಂದಿಗೆ ಚರ್ಚಿಸುವುದಿಲ್ಲ ಎಂದು ಆರೋಪಿಸಿದರು.ಈ ಕುರಿತು ವಿವರಿಸಿದ ಅಧ್ಯಕ್ಷ ನಾಗಪ್ಪ ಸೂಡಿ, ತಮ್ಮ ಬದಲಾವಣೆಗೆ ಕೆಲವರು ಯತ್ನಿಸಿದ್ದು ನಿಜ, ಆದರೆ ಸಂಘದಲ್ಲಿನ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲಾಗಿದೆ.ನ್ಯಾಯಾಲಯ ಸಂಕೀರ್ಣ ಉದ್ಘಾಟನೆಯನ್ನು ತಮ್ಮ ಅಧ್ಯಕ್ಷತೆಯಲ್ಲೇ ನಡೆಸುವುದಕ್ಕೆ ಎಲ್ಲ ವಕೀಲರು ಒಪ್ಪಿಗೆ ಸೂಚಿಸಿದ್ದು ಸಮಾರಂಭ ಉತ್ತಮ ರೀತಿಯಲ್ಲಿ ನಡೆಯಲಿದೆ ಎಂದು ಹೇಳಿದರು.ಉದ್ಘಾಟನೆ: ಈ ಮಧ್ಯೆ ರೂ 1.30 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗೆ ಸಜ್ಜುಗೊಂಡಿದ್ದು ಆವರಣದಲ್ಲಿ ಸ್ವಚ್ಛತಾ ಕೆಲಸ ಕೈಗೊಳ್ಳಲಾಗಿದೆ.ಕೊಪ್ಪಳ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಯಾಗಿರುವ ಹೈಕೋರ್ಟಿನ ನ್ಯಾಯಮೂರ್ತಿ ಸಂಕೀರ್ಣವನ್ನು ಸೇವೆಗೆ ಸಮರ್ಪಿಸಲಿದ್ದಾರೆ ಎಂದು ಅಧ್ಯಕ್ಷ ನಾಗಪ್ಪ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry