ಬುಧವಾರ, ಜೂನ್ 16, 2021
23 °C

ವಕೀಲರ ಹಲ್ಲೆ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಧ್ಯಮ ಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಪೊಲೀಸರ ಮೇಲೆ ನಗರ ಸಿವಿಲ್ ನ್ಯಾಯಾಲಯಗಳ ಸಂಕೀರ್ಣದ ಆವರಣದಲ್ಲಿ ಕೆಲವು ವಕೀಲರು ನಡೆಸಿದ ಹಲ್ಲೆ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳದಂತಹ (ಸಿಬಿಐ) ಸ್ವತಂತ್ರ ಸಂಸ್ಥೆಗೆ ವಹಿಸಬೇಕು ಎಂದು ಅಂತರರಾಷ್ಟ್ರೀಯ ವಕೀಲರ ಆಯೋಗದ ರಾಜ್ಯ ಘಟಕ ಸರ್ಕಾರವನ್ನು ಒತ್ತಾಯಿಸಿದೆ.`ಘಟನೆ ಕುರಿತು ನ್ಯಾಯಾಂಗ ತನಿಖೆ ನಡೆಸುವುದರಿಂದ ಸತ್ಯ ಹೊರಬರುತ್ತದೆ ಎಂಬ ನಂಬಿಕೆ ನಮಗಿಲ್ಲ. ಸಿಬಿಐನಿಂದ ಸ್ವತಂತ್ರ ತನಿಖೆ ನಡೆಸಬೇಕು. ತಪ್ಪಿತಸ್ಥರನ್ನು ಕಟಕಟೆಗೆ ಎಳೆಯಬೇಕು. ಅಮಾಯಕ ವಕೀಲರ ಮೇಲೆ ಹಲ್ಲೆ ನಡೆಸಿರುವ ಪೊಲೀಸರ ಮೇಲೂ ಕ್ರಮ ಜರುಗಿಸಬೇಕು~ ಎಂದು ಆಯೋಗದ ರಾಜ್ಯ ಘಟಕದ ಅಧ್ಯಕ್ಷ, ವಕೀಲ ಎಸ್.ಎಸ್. ನಾಗಾನಂದ ಅವರು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.`ಇದೊಂದು ಗಂಭೀರ ಪ್ರಕರಣ. ಇದರಲ್ಲಿ ಮಾಧ್ಯಮ ಪ್ರತಿನಿಧಿಗಳು ಮಾತ್ರ ಹಲ್ಲೆಗೆ ಒಳಗಾಗಿಲ್ಲ. ಈ ಪ್ರಕರಣದಲ್ಲಿ ಪೊಲೀಸರು ವಕೀಲರ ಮೇಲೂ ಲಾಠಿ ಚಾರ್ಜ್ ನಡೆಸಿದ್ದಾರೆ. ಹಿರಿಯ ನ್ಯಾಯಾಧೀಶರ ಮೇಲೆ ಕೂಡ ಪೊಲೀಸರಿಂದ ಹಲ್ಲೆ ನಡೆದಿದೆ. ಇದು ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿರುವುದಕ್ಕೆ ನಿದರ್ಶನ~ ಎಂದು ವಿವರಿಸಿದರು.ನ್ಯಾಯಾಂಗದ ಮುಖ್ಯಸ್ಥರ ಅನುಮತಿ ಇಲ್ಲದೆ, ಪೊಲೀಸರು ನ್ಯಾಯಾಲಯದ ಆವರಣ ಪ್ರವೇಶಿಸುವಂತಿಲ್ಲ. ಆದರೆ ಪೊಲೀಸರು ನಗರ ಸಿವಿಲ್ ನ್ಯಾಯಾಲಯಗಳ ಸಂಕೀರ್ಣದ ಮುಖ್ಯಸ್ಥರಾದ ಪ್ರಧಾನ ಸೆಷನ್ಸ್ ನ್ಯಾಯಾಧೀಶ ಆರ್.ಬಿ. ಬೂದಿಹಾಳ್ ಅವರ ಮೇಲೆಯೂ ಹಲ್ಲೆ ಮಾಡಿದ್ದಾರೆ. ಮುಂದೊಂದು ದಿನ ಇದೇ ಪೊಲೀಸರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕೊಠಡಿಗೂ ನುಗ್ಗಬಹುದು, ವಿಧಾನಸಭೆಗೆ ನುಗ್ಗಿ ಶಾಸಕರ ಮೇಲೂ ಹಲ್ಲೆ ನಡೆಸಬಹುದು. ಈ ಸಂದರ್ಭದಲ್ಲಿ ಸರ್ಕಾರ ಸುಮ್ಮನೆ ಕುಳಿತಿರಬಾರದು, ಕಾನೂನು ಮೀರಿ ವರ್ತಿಸಿರುವ ಪೊಲೀಸರ ವಿರುದ್ಧ ಕೂಡ ಕ್ರಮ ಜರುಗಿಸಬೇಕು ಎಂದು ನಾಗಾನಂದ ಅವರು ಒತ್ತಾಯಿಸಿದರು.ಕೆಲವು ಮಾಧ್ಯಮಗಳು ಇಡೀ ವಕೀಲ ಸಮುದಾಯವನ್ನು `ಗೂಂಡಾ~ ಎಂದು ಬಿಂಬಿಸಲು ಯತ್ನಿಸಿದ್ದು ನೋವು ತಂದಿದೆ. ಅಲ್ಲದೆ, ಪೊಲೀಸರು ವಕೀಲರ ಮೇಲೆ ನಡೆಸಿದ ದೌರ್ಜನ್ಯವನ್ನು ಮಾಧ್ಯಮಗಳು ಪ್ರಸಾರ ಮಾಡಿಲ್ಲ. ಮಾಧ್ಯಮಗಳು ಸ್ವತಂತ್ರವಾಗಿ ಸುದ್ದಿ ಪ್ರಸಾರ ಮಾಡಿದ್ದರೆ, ವಕೀಲರು ಎದುರಿಸಿದ ದೌರ್ಜನ್ಯ, ಅವರು ಅನುಭವಿಸಿದ ಆರ್ಥಿಕ ನಷ್ಟ ಕೂಡ ಸಾರ್ವಜನಿಕರಿಗೆ ತಿಳಿಯುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟರು.`ವಕೀಲರ ವೇಷದಲ್ಲಿದ್ದ ಕೆಲವು ಕಿಡಿಗೇಡಿಗಳು ಹಲ್ಲೆಗೆ ಕಾರಣವಾಗಿರಬಹುದು~ ಎಂಬ ಅನುಮಾನ ವ್ಯಕ್ತಪಡಿಸಿದ ಅವರು, `ಘಟನೆ ನಡೆಯುವ ಕೆಲವು ದಿನಗಳ ಹಿಂದೆ ಸಿವಿಲ್ ನ್ಯಾಯಾಲಯದ ಆವರಣದಲ್ಲಿರುವ ಅಂಗಡಿಯಿಂದ 200ಕ್ಕೂ ಹೆಚ್ಚು ಕಪ್ಪು ಕೋಟುಗಳು ಮಾರಾಟವಾಗಿವೆ. ಇದು ತೀರಾ ಅಸಹಜ. ಇದಕ್ಕೂ ಹಲ್ಲೆಗೂ ಸಂಬಂಧವಿದೆಯೇ ಎಂಬ ಕುರಿತು ತನಿಖೆಯಾಗಲಿ~ ಎಂದು ಆಗ್ರಹಿಸಿದರು.ಆಯೋಗದ ರಾಜ್ಯ ಘಟಕದ ಗೌರವ ಕಾರ್ಯದರ್ಶಿ ಸಜ್ಜನ್ ಪೂವಯ್ಯ ಮಾತನಾಡಿ, `ಈಗಿರುವ ಸಂಘರ್ಷ ಮಾಧ್ಯಮ ಮತ್ತು ವಕೀಲರ ನಡುವಿನದಲ್ಲ. ಇದು ವಕೀಲರು ಮತ್ತು ಕಾರ್ಯಾಂಗದ (ಪೊಲೀಸ್ ಇಲಾಖೆ) ನಡುವಿನ ಸಂಘರ್ಷ. ಕಾರ್ಯಾಂಗವು ನ್ಯಾಯಾಂಗದ ಕಾರ್ಯದಲ್ಲಿ ಮೂಗು ತೂರಿಸುತ್ತಿದೆ~ ಎಂದರು.ಮಾಧ್ಯಮ ಪ್ರತಿನಿಧಿಗಳ ಪರವಾಗಿ ವಕೀಲರು ವಾದ ಮಂಡಿಸಬಾರದು ಎಂದು ವಕೀಲರ ಸಂಘ ತೆಗೆದುಕೊಂಡಿರುವ ನಿರ್ಧಾರ ಮೂರ್ಖತನದ್ದು. ಸಂಘಕ್ಕೆ ಅಂಥ ನಿರ್ಣಯ ಕೈಗೊಳ್ಳುವ ಅಧಿಕಾರ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.