ಶುಕ್ರವಾರ, ಏಪ್ರಿಲ್ 16, 2021
31 °C

ವಕೀಲೆಗೆ ನ್ಯಾಯಾಂಗ ನಿಂದನೆ ನೋಟಿಸ್: ಒಂದೇ ವಿಷಯ: 30 ಬಾರಿ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಬೆಂಗಳೂರು: ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಬೇಡಿಕೆ ಇಟ್ಟು ಸುಮಾರು 30ಬಾರಿ ಅರ್ಜಿ ಸಲ್ಲಿಸಿರುವ ಆರೋಪದ ಮೇರೆಗೆ ವಕೀಲೆಯೊಬ್ಬರಿಗೆ ಹೈಕೋರ್ಟ್ ಮಂಗಳವಾರ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೆ ಆದೇಶಿಸಿದೆ.ನಗರ ಮೂಲದ ವಕೀಲೆ ಜೆ.ಪಿ. ಸುಜಾತಾ ಅವರ ವಿರುದ್ಧ ಜೆ.ವೆಂಕಟೇಶ್ ಎನ್ನುವವರು ಸಲ್ಲಿಸಿರುವ ಅರ್ಜಿ ಇದಾಗಿದ್ದು, ನ್ಯಾಯಮೂರ್ತಿ ಕೆ. ಶ್ರೀಧರ ರಾವ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದೆ. ಅರ್ಜಿಯಲ್ಲಿ ತಿಳಿಸಿರುವ ಪ್ರಕಾರ; ಸುಜಾತಾ ಅವರು ಬ್ಯಾಂಕ್ ಒಂದರಿಂದ 1985ರಲ್ಲಿ ಎರಡು ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಅದನ್ನು ಅವರು ತೀರಿಸದಿದ್ದಾಗ ಸಾಲ ವಸೂಲಾತಿ ನ್ಯಾಯಮಂಡಳಿಯು ಅವರ ಮನೆಯ ಮುಟ್ಟುಗೋಲಿಗೆ ಆದೇಶಿಸಿತು. ಇದನ್ನು ಸಾಲ ವಸೂಲಾತಿ ಮೇಲ್ಮನವಿ ನ್ಯಾಯಮಂಡಳಿ ಕೂಡ ಎತ್ತಿಹಿಡಿಯಿತು.ನ್ಯಾಯಮಂಡಳಿಯ ಆದೇಶದಂತೆ ಮನೆಯನ್ನು ಹರಾಜು ಹಾಕಿದಾಗ ಅದನ್ನು ವೆಂಕಟೇಶ್ ಎಂಬುವರು 85 ಲಕ್ಷ ರೂಪಾಯಿ ಕೊಟ್ಟು 2008ರಲ್ಲಿ ಪಡೆದುಕೊಂಡರು. ಆದರೆ ಹಲವು ವರ್ಷ ಕಳೆದರೂ ಆ ಮನೆಯನ್ನು ಅವರ ಸುಪರ್ದಿಗೆ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಮಧ್ಯೆ, ಸುಜಾತಾ ಅವರು ನ್ಯಾಯಮಂಡಳಿ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮುಖ್ಯ ಅರ್ಜಿ ಇತ್ಯರ್ಥಕ್ಕೆ ಬಾಕಿ ಇರುವಾಗಲೇ ತಮ್ಮ ವಿರುದ್ಧ ಆದೇಶ ಹೊರಡಿಸಿದ್ದ ನ್ಯಾಯಮಂಡಳಿ, ಅಲ್ಲಿಯ ಅಧಿಕಾರಿಗಳು, ವೆಂಕಟೇಶ್ ಅವರ ಪರ ವಕೀಲ ಪುತ್ತಿಗೆ ರಮೇಶ್ ಹೀಗೆ ಎಲ್ಲರ ವಿರುದ್ಧ ಸುಮಾರು 30 ಅರ್ಜಿಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾಯಾಂಗ ನಿಂದನೆಯ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲು ಅಡ್ವೊಕೇಟ್ ಜನರಲ್ (ಎಜಿ)  ವೆಂಕಟೇಶ್ ಅವರಿಗೆ ಅನುಮತಿ ನೀಡಿದರು (ನಿಯಮದ ಪ್ರಕಾರ ನ್ಯಾಯಾಂಗ ನಿಂದನೆಯ ಕ್ರಿಮಿನಲ್ ಮೊಕದ್ದಮೆ ಹೂಡುವ ಮುನ್ನ ಎಜಿ ಅನುಮತಿ ಅಗತ್ಯ). ಇದರಿಂದಾಗಿಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.