ಶನಿವಾರ, ಮೇ 8, 2021
20 °C

ವಕೀಲ ಬಟ್ಟೂರ ಸೇರಿ ಮೂವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕಾರು ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಖ್ಯಾತ ವಕೀಲರಾಗಿದ್ದ ಬಸವರಾಜ ಬಟ್ಟೂರ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಗದಗ ರಸ್ತೆಯ ನಳಂದ ಪಾಲಿಟೆಕ್ನಿಕ್ ಕಾಲೇಜು ಬಳಿ ಶುಕ್ರವಾರ ರಾತ್ರಿ ನಡೆದಿದೆ.ತಾಲ್ಲೂಕಿನ ಇಂಗಳಹಳ್ಳಿಯ ವಕೀಲರಾದ ಬಸವರಾಜ ಬಟ್ಟೂರ (59), ಇವರ ಸೋದರ ಶಿವಪ್ಪ ಬಟ್ಟೂರ (62) ಹಾಗೂ ಚಾಲಕ ರುದ್ರಪ್ಪ ಬಂದನ್ನವರ (62) ಮೃತಪಟ್ಟವರು. ಬಸವರಾಜ ಅವರ ಪುತ್ರಿ, ಗದುಗಿನ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ರಂಜನಾ ಹಾಗೂ ಬಸವರಾಜರ ಸೋದರ ವೀರಭದ್ರಪ್ಪ ತೀವ್ರವಾಗಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ನಗರದಿಂದ ಇಂಗಳಹಳ್ಳಿಗೆ ಹೊರಟಿದ್ದ ಕಾರಿಗೆ ಗದುಗಿನ ಕಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.10 ವರ್ಷ ಏನೂ ಆಗೂದಿಲ್ಲ: ಮೋಟಾರು ಅಪಘಾತ ಪ್ರಕರಣಗಳಿಗೆ ಸಂಬಂಧಿಸಿ ಖ್ಯಾತ ವಕೀಲರಾಗಿದ್ದ ಬಸವರಾಜ ಬಟ್ಟೂರ ಅವರು ಶುಕ್ರವಾರ ಬೆಳಿಗ್ಗೆ ನಗರದ ಕೆಎಲ್‌ಇ ಆಸ್ಪತ್ರೆಯಲ್ಲಿ ಆ್ಯಂಜಿಯೋಗ್ರಫಿ ಮಾಡಿಸಿಕೊಂಡಿದ್ದರು. ಸಂಜೆ ಹೊತ್ತು ಬಟ್ಟೂರ ಅವರನ್ನು ಭೇಟಿಯಾದ ಅವರ ಸಹಪಾಠಿ ಎಸ್.ಜಿ. ಜೈನರ ಹಾಗೂ ಕೈಮಗ್ಗ ನೇಕಾರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎನ್.ಜೆ. ಮಾಳವದೆ ಅವರಿಗೆ `ಆ್ಯಂಜಿಯೋಗ್ರಫಿ ಮಾಡಿಸಿಕೊಂಡಿದ್ದರಿಂದ ಇನ್ನು 10 ವರ್ಷ ಏನೂ ಆಗೂದಿಲ್ಲ~ ಎಂದು ಧೈರ್ಯದಿಂದ ಹೇಳಿದ್ದರು.`ಸಂಜೆ ಏಳು ಗಂಟೆಯವರೆಗೆ ಒಟ್ಟಿಗೇ ಇದ್ದೆವು. ಹೋಗೆಂದ ಮೇಲೆ ಹೊರಟೆವು. ಆದರೆ ಏಳು ಗಂಟೆಗೆ ಭೇಟಿಯಾದುದೇ ಕಡೆಯದು ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ~ ಎಂದು ದುಃಖದಿಂದ ಹೇಳಿದರು ಅವರ ಸಹಪಾಠಿ . ಜೈನರ.`ಏಳನೇ ಇಯತ್ತೆಯಿಂದ ಎಸ್‌ಎಸ್‌ಎಲ್‌ಸಿಯವರೆಗೆ ಅಣ್ಣಿಗೇರಿಯಲ್ಲಿ ಒಟ್ಟಿಗೇ ಓದಿದೆವು. ಆಮೇಲೆ ಪಿಯುಸಿ ಹಾಗೂ ಬಿ.ಎ ಪದವಿಯನ್ನು ನಗರದ ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ಪಡೆದೆವು. ನಂತರ ಜೆಎಸ್‌ಎಸ್ ಸಕ್ರಿ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿ ಓದಿದೆವು. ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಬಳಿ ಇಬ್ಬರೂ ಜೂನಿಯರ್ ವಕೀಲರಾಗಿ ದುಡಿದೆವು. ಮೋಟಾರು ಅಪಘಾತ ಪ್ರಕರಣಗಳಿಗೆ ಸಂಬಂಧಿಸಿ ಉತ್ತರ ಕರ್ನಾಟಕದಲ್ಲೇ ಅವನು ಪ್ರಸಿದ್ಧ ವಕೀಲನಾದ~ ಎಂದು ಸ್ಮರಿಸಿಕೊಂಡರು.`ಮೃತಪಟ್ಟ ರುದ್ರಪ್ಪ ಬಂದನ್ನವರ, 35 ವರ್ಷಗಳಿಂದ ಬಟ್ಟೂರ ವಕೀಲರ ಬಳಿ ಚಾಲಕರಾಗಿ ದುಡಿಯುತ್ತಿದ್ದರು. ಸಾರಿಗೆ ಸಂಸ್ಥೆಯಲ್ಲಿ ಚಾಲಕನಾಗಿ ನೇಮಕಗೊಂಡರೂ ಹೋಗದೆ ಬಟ್ಟೂರ ವಕೀಲರ ಬಳಿಯೇ ಇದ್ದರು~ ಎಂದು ದುಃಖಿತರಾಗಿ ಹೇಳಿದರು ಬಟ್ಟೂರ ಅವರ ಬಳಿ ಜೂನಿಯರ್ ವಕೀಲರಾಗಿ ದುಡಿಯುವ ಗಂಗಾಧರ ಲಿಗಾಡೆ.ಶನಿವಾರ ಶ್ರದ್ಧಾಂಜಲಿ:
`ಬಸವರಾಜ ಬಟ್ಟೂರ ಅವರಿಗೆ ಹುಬ್ಬಳ್ಳಿ ವಕೀಲರ ಸಂಘದಿಂದ ಶನಿವಾರ ಬೆಳಿಗ್ಗೆ 10.30 ಗಂಟೆಗೆ ನಗರದ ಕೋರ್ಟ್‌ನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ನಂತರ ಇಂಗಳಹಳ್ಳಿಯಲ್ಲಿ ನಡೆಯುವ ಅಂತ್ಯಕ್ರಿಯೆಯಲ್ಲಿ ಅನೇಕ ವಕೀಲರು ಭಾಗವಹಿಸಲಿದ್ದೇವೆ~ ಎಂದು ವಕೀಲರ ಸಂಘದ ಕಾರ್ಯದರ್ಶಿ ಅಶೋಕ ಅಣ್ವೇಕರ `ಪ್ರಜಾವಾಣಿ~ಗೆ ತಿಳಿಸಿದರು.`ಯಾರೊಂದಿಗೂ ಅವರು ಜಗಳವಾಡಿದ್ದನ್ನು ನೋಡಿರಲಿಲ್ಲ. ಸಿಟ್ಟಿನಿಂದ ಮಾತನಾಡಿದ್ದನ್ನು ಕಂಡಿರಲಿಲ್ಲ. ಅವರು ಮೃತಪಟ್ಟಿದ್ದು ಕೇಳಿ ಆಘಾತವಾಯಿತು. ಅಪಘಾತ ಪ್ರಕರಣಗಳಿಗೆ ಸಂಬಂಧಿಸಿ ಉತ್ತರ ಕರ್ನಾಟಕದಲ್ಲೇ ಪ್ರಸಿದ್ಧರಾಗಿದ್ದರು~ ಎಂದು ಅಣ್ವೇಕರ ನೆನಪಿಸಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.