ವಕ್ಫ್ ಆಸ್ತಿ ಕಬಳಿಕೆ: ತನಿಖೆಗೆ ಆಗ್ರಹ

ಶುಕ್ರವಾರ, ಜೂಲೈ 19, 2019
22 °C

ವಕ್ಫ್ ಆಸ್ತಿ ಕಬಳಿಕೆ: ತನಿಖೆಗೆ ಆಗ್ರಹ

Published:
Updated:

ಬೆಂಗಳೂರು: ರಾಜ್ಯ ವಕ್ಫ್ ಮಂಡಳಿ ಆಸ್ತಿ ಕಬಳಿಕೆಯ ಹಗರಣದ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿ ವಕ್ಫ್ ಆಸ್ತಿ ಬಚಾವೋ ಆಂದೋಲನದ ಸದಸ್ಯರು ಸೋಮವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.

`ವಕ್ಫ್  ಮಂಡಳಿಯೊಳಗಿರುವ ವ್ಯಕ್ತಿಗಳೇ ಮಂಡಳಿಯ ಆಸ್ತಿ ಕಬಳಿಕೆ ಮಾಡಿದ್ದಾರೆ. ಮಂಡಳಿಯ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಹಗರಣದಲ್ಲಿ ಪಾಲುದಾರರಾಗಿದ್ದಾರೆ. ಹಗರಣದಲ್ಲಿ ಭಾಗಿಗಳಾಗಿರುವ ಎಲ್ಲರನ್ನೂ ಬಂಧಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು~ ಎಂದು ಆಗ್ರಹಿಸಿದರು.

`ಹಗರಣದ ಬಗ್ಗೆ ಲೋಕಾಯುಕ್ತ ಸಂಸ್ಥೆಯಿಂದ ಸಂಪೂರ್ಣ ತನಿಖೆಯಾಗಬೇಕು. ತಪ್ಪಿಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು. ಮಂಡಳಿಯ ಆಸ್ತಿ ಎಲ್ಲಾ ಮುಸ್ಲಿಂ ಬಾಂಧವರಿಗೆ ಸೇರಿದ್ದು. ಮಂಡಳಿಯೊಳಗಿದ್ದೇ ಮಂಡಳಿಯ ಆಸ್ತಿಯನ್ನು ದುರುಪಯೋಗ ಪಡಿಸಿಕೊಂಡಿರುವ ಕೆಲಸ ನಾಚಿಕೆಗೇಡಿನದ್ದು. ಹಗರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು~ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾನಿಪ್ಪಾಡಿ ಹೇಳಿದರು.

`ವಕ್ಫ್  ಮಂಡಳಿಯೊಳಗಿದ್ದುಕೊಂಡು ಮಂಡಳಿಯ ಆಸ್ತಿ ಕಬಳಿಕೆ ಮಾಡಿರುವುದು ಇಡೀ ಮುಸ್ಲಿಂ ಸಮುದಾಯಕ್ಕೆ ಮಾಡಿದ ಅನ್ಯಾಯ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಲೋಕಾಯುಕ್ತ ತನಿಖೆಗೆ ಆದೇಶಿಸಬೇಕು. ಮಂಡಳಿಯ ಎಷ್ಟು ಆಸ್ತಿ ಕಬಳಿಕೆಯಾಗಿದೆ ಎಂಬ ಬಗ್ಗೆ ಇನ್ನೂ ಸರಿಯಾದ ಲೆಕ್ಕ ಸಿಕ್ಕಿಲ್ಲ. ಹೀಗಾಗಿ ಮಂಡಳಿಯ ಎಲ್ಲಾ ಲೆಕ್ಕ ಪತ್ರಗಳನ್ನು ತನಿಖೆಗೆ ಒಳಪಡಿಸಬೇಕು. ಮಂಡಳಿಯ ಕೆಲವು ದಾಖಲೆ ಪತ್ರಗಳ ನಾಪತ್ತೆ ಬಗ್ಗೆಯೂ ವಿಚಾರಣೆ ನಡೆಯಬೇಕು~ ಎಂದು ಪವ್ರಜ್ ಬಾಷಾ ಒತ್ತಾಯಿಸಿದರು.

ಮಾಜಿ ಶಾಸಕ ಜುಲ್ಫಿಕರ್ ಹಶ್ಮಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry