ಶನಿವಾರ, ಮಾರ್ಚ್ 6, 2021
24 °C
ವ್ಯಕ್ತಿ ಸ್ಮರಣೆ

ವಕ್ರತೆಗಳಿಗೆ ಕನ್ನಡಿ ಹಿಡಿದ ಖುಷ್ವಂತ್ ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಕ್ರತೆಗಳಿಗೆ ಕನ್ನಡಿ ಹಿಡಿದ ಖುಷ್ವಂತ್ ಸಿಂಗ್

ನಮ್ಮಲ್ಲಿ ಎರಡು ದೋಣಿಗಳ ಏಕಕಾಲದ ಪ್ರಯಾಣಿಕರು ಅಪರೂಪ. ಅದರಲ್ಲೂ ಪತ್ರಿಕೋದ್ಯಮ ಮತ್ತು ಸಾಹಿತ್ಯ ಈ ಎರಡೂ ಕ್ಷೇತ್ರಗಳಲ್ಲೂ ಈಜಿ ಜಯಿಸಿದವರು ಬಹಳ ಅಪರೂಪ. ಖುಷ್ವಂತ್ ಸಿಂಗ್ ಎರಡೂ ಕ್ಷೇತ್ರಗಳಲ್ಲಿ ಜನಪ್ರಿಯತೆ ಗಳಿಸಿದ ಬುದ್ಧಿವಂತ. ‘ಪತ್ರಿಕಾವೃತ್ತಿ ಒಬ್ಬನ ಪ್ರಾಣವನ್ನೇ ಹೀರಿಬಿಡಬಹುದು. ಆದರೆ ಬದುಕಿರುವವರೆಗೂ ಅವನನ್ನು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ’ ಎಂದು ಬುದ್ಧಿಜೀವಿ ಮಾರ್ಲೆ ಹೇಳಿದ್ದರು. ಇದು ಅವರ ಮಟ್ಟಿಗೆ

ನೂರಕ್ಕೆ ನೂರು ಸತ್ಯ.ಕಳೆದ ಗುರುವಾರ ಕೊನೆಯುಸಿರೆಳೆದಾಗ ಅವರಿಗೆ ಭರ್ತಿ 99 ವರ್ಷ ವಯಸ್ಸು. ಅವರ ನಿಧನದ ಸುದ್ದಿ ಕೇಳಿದಾಗ ಎಲ್ಲರ ಬಾಯಿಯಿಂದ ಹೊರಟ ಉದ್ಗಾರ  ‘ಖುಷ್ವಂತ್‌ ಹೋಗಿಬಿಟ್ರಾ.’ ಕುಶಾಗ್ರಮತಿಯ, ಹೆದರಿಕೆ ಎಂದರೆ ಏನು ಎನ್ನುವುದು ಗೊತ್ತಿಲ್ಲದ, ಮುಲಾಜಿಲ್ಲದೆ ಪೆನ್ನು ಝಳಪಿಸಿದ, ಬದುಕಿನ ಸಂಧ್ಯಾಕಾಲದಲ್ಲಿಯೂ ಚುಟುವಟಿಕೆಯಿಂದ ಇದ್ದ ವ್ಯಕ್ತಿ 99ರ ವಯಸ್ಸಿನಲ್ಲಿ ಸತ್ತಾಗ ಇನ್ನಷ್ಟು ವರ್ಷ ಬದುಕಬೇಕಾಗಿತ್ತು ಎಂದು ಅನಿಸುವುದು ಸಹಜ. ‘ಹೋಗಿಬಿಟ್ರಾ’ ಎಂಬ ಉದ್ಗಾರದ ಹಿಂದೆ ಇದೆಲ್ಲ ಇದೆ. ಅವರು ‘ಯೋಜನಾ’ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿದ್ದರು. ‘ಇಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ದ ಸಂಪಾದಕರಾಗಿದ್ದಾಗ ಅಪಾರ ಜನಪ್ರಿಯತೆ ಪಡೆದರು. ಬಳಿಕ ‘ನ್ಯಾಷನಲ್ ಹೆರಾಲ್ಡ್’ ಮತ್ತು ‘ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ‘ಟ್ರೈನ್ ಟು ಪಾಕಿಸ್ತಾನ್’, ‘ಐ ಶಲ್ ನಾಟ್ ಹಿಯರ್ ದಿ ನೈಂಟಿಗೇಲ್’, ‘ದೆಹಲಿ’, ‘ದಿ ಕಂಪೆನಿ ಆಫ್ ವಿಮೆನ್’ ಮತ್ತು ‘ಬರಿಯಲ್ ಅಟ್ ಸೀ’ ಅವರ ಕಾದಂಬರಿಗಳು. ‘ಎ ಹಿಸ್ಟರಿ ಆಫ್ ದಿ ಸಿಖ್ಸ್’ ಸಿಖ್ ಧರ್ಮದ ಚರಿತ್ರೆಯ ಕುರಿತಾಗಿ ಬರೆದ ಗ್ರಂಥ. ‘ಟ್ರುತ್, ಲವ್ ಆ್ಯಂಡ್ ಎ ಲಿಟ್ಲ್ ಮಲೆಯ್ಸ’ ಅವರ ಆತ್ಮಕತೆ.ಖುಷ್ವಂತ್ ಹುಟ್ಟಿದ್ದು ಈಗ ಪಾಕಿಸ್ತಾನದಲ್ಲಿರುವ ಪಂಜಾಬ್ ಪ್ರಾಂತ್ಯದ ಹಡಲಿ ಎಂಬ ಪುಟ್ಟ ಗ್ರಾಮದಲ್ಲಿ. ಹುಟ್ಟಿದ ದಿನ ಯಾರಿಗೂ ನೆನಪಿಲ್ಲದ ಕಾರಣ ಶಾಲೆಗೆ ಸೇರಿಸುವಾಗ 1915ರ ಫೆಬ್ರುವರಿ 2 ಹುಟ್ಟಿದ ದಿನ ಎಂದು ಅವರ ತಂದೆ ಊಹಿಸಿ ತಿಳಿಸಿದ್ದರು. ಆದರೆ ಅವರ ಅಜ್ಜಿ, ಖುಷ್ವಂತ್ ಹುಟ್ಟಿದ್ದು ಆಗಸ್ಟ್ ತಿಂಗಳಿನಲ್ಲಿ ಎಂದು ಹೇಳಿದ ಬಳಿಕ ಆಗಸ್ಟ್ 15ನೇ ತಾರೀಖು ತಮ್ಮ ಹುಟ್ಟಿದ ದಿನ ಎಂದು ಖುಷ್ವಂತ್ ಹೇಳಿಕೊಳ್ಳಲಾರಂಭಿಸಿದರು. ಅವರ ತಂದೆ ಶೋಭಾ ಸಿಂಗ್ ಒಬ್ಬ ಕಟ್ಟಡ ಗುತ್ತಿಗೆದಾರರಾಗಿದ್ದರು. ಖುಷ್ವಂತ್ ತಮ್ಮ ಆತ್ಮಕಥೆಯಲ್ಲಿ ಸಂಸತ್‌ನ ಸೌತ್ ಬ್ಲಾಕ್ ನಿರ್ಮಿಸಿದ್ದು ತಮ್ಮ ತಂದೆ ಎಂದು ತಿಳಿಸಿದ್ದಾರೆ. 

  

ಕಲೆಯಲ್ಲಿರುವ ಆಸಕ್ತಿ ಅವರನ್ನು ರವೀಂದ್ರನಾಥ ಟ್ಯಾಗೋರರ ಶಾಂತಿನಿಕೇತನಕ್ಕೆ ಹೋಗುವಂತೆ ಮಾಡಿತ್ತು. ಅಲ್ಲಿ ಚಿತ್ರಕಲೆಯಲ್ಲಿ ಶಿಕ್ಷಣ ಪಡೆಯಲಾರಂಭಿಸಿದ ಅವರು ಅದನ್ನು ಅರ್ಧದಲ್ಲಿ ಕೈಬಿಟ್ಟು ಊರಿಗೆ ಮರಳುತ್ತಾರೆ. ಅವರು ಬಿ. ಎ. ಓದಿದ್ದು ಲಾಹೋರಿನ ಸರ್ಕಾರಿ ಕಾಲೇಜಿನಲ್ಲಿ.ಲಂಡನ್‌ನ ಕಿಂಗ್ಸ್ ಕಾಲೇಜ್ ಹಾಗೂ ಇನ್ನರ್ ಟೆಂಪಲ್‌ನಲ್ಲಿಯೂ ಶಿಕ್ಷಣ ಪಡೆಯುತ್ತಾರೆ. ಕೃಷ್ಣ ಮೆನನ್ ಅವರು ಹೈಕಮಿಷನರ್ ಆಗಿದ್ದಾಗ ಲಂಡನ್‌ನಲ್ಲಿ ಮತ್ತು ಅನಂತರ ಕೆನಡಾದಲ್ಲಿ ವಾರ್ತಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಾರೆ. ಆಕಾಶವಾಣಿಯನ್ನು 1951ರಲ್ಲಿ ಸೇರುತ್ತಾರೆ. ಅನಂತರ ‘ಯೋಜನಾ’ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿ ಸರ್ಕಾರಿ ಪತ್ರಿಕೆಯನ್ನು ಜನರು ಆಸಕ್ತಿಯಿಂದ ಓದುವಂತೆ ಮಾಡುತ್ತಾರೆ. ‘ಇಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ ಸೇರಿಕೊಳ್ಳುವಂತೆ ಎರಡನೇ ಬಾರಿ ಆಹ್ವಾನ ಬಂದಾಗ ಸೇರುತ್ತಾರೆ. ತಮಗೆ ಅನಿಸಿದ್ದನ್ನು ಖಚಿತವಾಗಿ ಹೇಳುವ ಅವರ ನಿಲುವು ಹಲವು ಸಂದರ್ಭಗಳಲ್ಲಿ ಅವರ ಅಭಿಮಾನಿಗಳನ್ನು ಸಿಟ್ಟಿಗೆಬ್ಬಿಸಿದ್ದೂ ಇದೆ. ತುರ್ತುಪರಿಸ್ಥಿತಿ­ಯನ್ನು ಸಮರ್ಥಿಸಿದ್ದಕ್ಕೆ, ಇಂದಿರಾ ಗಾಂಧಿ, ಸಂಜಯ್ ಗಾಂಧಿ ಅವರ ಜತೆ ತಮ್ಮನ್ನು ತಾವು ಗುರುತಿಸಿಕೊಂಡದ್ದಕ್ಕೆ ‘ಚಮಚಾ ಪತ್ರಕರ್ತ’ ಎಂದು ಕರೆಯಿಸಿಕೊಂಡದ್ದು ಇದೆ. ಈ ರೀತಿ ಓದುಗರು ತರಾಟೆಗೆ ತೆಗೆದುಕೊಂಡಾಗ ಅದನ್ನು ತಾವು ಸಂಪಾದಕರಾಗಿದ್ದ ಪತ್ರಿಕೆಯ ‘ಸಂಪಾದಕರಿಗೆ ಪತ್ರ’ ವಿಭಾಗದಲ್ಲಿ ಪ್ರಕಟಿಸಿದ್ದೂ ಇದೆ.ತುರ್ತು ಪರಿಸ್ಥಿತಿ ಸಮರ್ಥಿಸಿಕೊಂಡದ್ದಕ್ಕೆ ಅವರು ಅವರದ್ದೇ ಆದ ಕಾರಣ ನೀಡಿದ್ದರು ‘ಇಂದಿರಾ ಗಾಂಧಿ ಅವರ ಸರ್ಕಾರದ ವಿರುದ್ಧ ಜನಾಂದೋಲನ ಉಂಟಾದಾಗ ಹಿಂಸಾಚಾರ ಸ್ಫೋಟಗೊಂಡಿತು. ಜಯಪ್ರಕಾಶ್ ನಾರಾಯಣ್ ಅವರು ಸಂಪೂರ್ಣ ಕ್ರಾಂತಿಗೆ ಕರೆ ನೀಡಿದಾಗ ಶಾಸಕರಿಗೆ ವಿಧಾನಸಭೆ ಪ್ರವೇಶಿಸದಂತೆ ತಡೆ ಒಡ್ಡಲು ಕರೆ ನೀಡಿದ್ದರು. ಅಲ್ಲದೆ, ಸಶಸ್ತ್ರ ಪಡೆಗಳಿಗೆ ಸೇರಿದವರಿಗೆ ಮತ್ತು ಪೊಲೀಸರಿಗೆ ದಂಗೆ ಏಳುವಂತೆ ಕರೆ ನೀಡಿದ್ದರು. ಜೆಪಿ ಅವರು ಹಿಡಿದ ಹಾದಿ ಸರಿಯಾದುದಲ್ಲ, ಅದು ಪ್ರಜಾಸತ್ತೆಗೆ ವಿರುದ್ಧವಾದುದು. ಇದನ್ನು ಅವರಿಗೇ ಬರೆದು ತಿಳಿಸಿದೆ. ಇದಕ್ಕೆ ಅವರು ಮಾರುತ್ತರ ನೀಡಿದರು. ನನ್ನ ಪತ್ರ ಅವರ ಉತ್ತರ ಎರಡನ್ನೂ ನಾನು ಸಂಪಾದಕನಾಗಿದ್ದ ವಾರ ಪತ್ರಿಕೆಯಲ್ಲಿ ಪ್ರಕಟಿಸಿದ್ದೆ’ ಎಂದು ಒಮ್ಮೆ ಬರೆದಿದ್ದರು.ಮಾರುತಿ ಕಾರು ಕಾರ್ಖಾನೆ ಸಂಜಯ್ ಗಾಂಧಿ ನೇತೃತ್ವದಲ್ಲಿ ಇದ್ದಾಗ ಒಂದೇ ಒಂದು ಕಾರನ್ನು ತಯಾರಿಸದೇ ಇದ್ದರೂ ಅದನ್ನು ಹೊಗಳಿ ತೀವ್ರ ಟೀಕೆಗೆ ಒಳಗಾಗಿದ್ದರು. ಸಂಜಯ್ ಸತ್ತ ಬಳಿಕ ‘ಅವರಿಗೆ ತಾಳ್ಮೆ ಎನ್ನುವುದು ಇರಲಿಲ್ಲ. ಅವರು ಭಾರಿ ಅವಸರದಲ್ಲಿ ಇದ್ದ ಯುವಕರಾಗಿದ್ದರು. ತಾನು ಅಂದು ಕೊಂಡದ್ದು ಈಗಲೇ ಆಗಬೇಕು ಎಂದು ಬಯಸುತ್ತಿದ್ದರು’ ಎಂದು ಬರೆದು ‘ಅವರು ಮದ್ಯಪಾನ ಮಾಡುತ್ತಿರಲಿಲ್ಲ. ಕಾಫಿ, ಚಹಾ, ಲಘು ಪಾನೀಯ, ತೀರಾ ತಣ್ಣನೆಯ ನೀರು ಕೂಡಾ ಕುಡಿಯುತ್ತಿರಲಿಲ್ಲ’ ಎಂದು ಅಪರೂಪದ ಚಿತ್ರಣ ನೀಡಿದ್ದರು.ಇಂದಿರಾ ಅವರನ್ನು 1980ರಲ್ಲಿ ರಾಜ್ಯಸಭೆಯ ಸದಸ್ಯರನ್ನಾಗಿ ಮಾಡಿದ್ದರು. ಒಮ್ಮೆ ರಾಜ್ಯಸಭೆಯಲ್ಲಿ ಸಿಪಿಐ ಸದಸ್ಯ, ಹಿರಿಯ ಸಂಸದೀಯಪಟು ಭೂಪೇಶ್ ಗುಪ್ತಾ ಅವರು ಖುಷ್ವಂತ್ ವಿರುದ್ಧ ವಾಗ್ದಾಳಿ ನಡೆಸಿದ ಸಂದರ್ಭದಲ್ಲಿ ಅವರನ್ನು ಇಂದಿರಾ ಗಾಂಧಿಯವರ ಚಮಚಾ ಎಂದು ಹೀಗಳೆದಿದ್ದರು. ಇಂದಿರಾ, ಖುಷ್ವಂತ್ ಅವರನ್ನು ಕರೆದು ‘ನೋಡಿ ನೀವಿಲ್ಲದಿದ್ದಾಗ ಭೂಪೇಶ್ ನಿಮ್ಮನ್ನು ನನ್ನ ಚಮಚಾ ಎಂದು ಹೀಗಳೆದಿದ್ದಾರೆ. ನೀವು ಇದನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಬೇಕು. ನಿಮಗೆ ಮಾತನಾಡಲು ಅವಕಾಶ ಕೋರಿ ಸಭಾಪತಿ ಅವರಿಗೆ ಕೋರಿಕೆ ಸಲ್ಲಿಸಿ’ ಎಂದು ಕಿವಿ ಊದುತ್ತಾರೆ.ಖುಷ್ವಂತ್ ಅವರ ಕೋರಿಕೆ ಮನ್ನಿಸಿ ರಾಜ್ಯಸಭೆಯಲ್ಲಿ ಮಾತನಾಡಲು ಸಭಾಪತಿಯವರು ಅವಕಾಶ ನೀಡುತ್ತಾರೆ. ‘ನಾನು ಸದನದಲ್ಲಿ ಇಲ್ಲದಿದ್ದಾಗ ಭೂಪೇಶ್ ಗುಪ್ತಾ ಅವರು ನನಗೆ ನೋವನ್ನುಂಟು ಮಾಡುವ ಮಾತನ್ನು ಆಡಿದ್ದಾರೆ. ಅದನ್ನು ಹಿಂದಕ್ಕೆ ಪಡೆಯಬೇಕು’ ಎಂದು ಖುಷ್ವಂತ್‌ ಕೋರುತ್ತಾರೆ. ಗುಪ್ತಾ ಅವರು ಕ್ಷಮೆ ಕೇಳಲು ನಿರಾಕರಿಸುತ್ತಾರೆ. ಆಗ ಸಿಟ್ಟಿಗೆದ್ದ ಖುಷ್ವಂತ್ ಅವರು ಗುಪ್ತಾ ಅವರ ವಿರುದ್ಧ ಅಸಂಸದೀಯ ಭಾಷೆ ಬಳಸಿ ನಿಂದಿಸುತ್ತಾರೆ.ಸಭಾಪತಿಯವರು ಅದನ್ನು ದಾಖಲೆಯಿಂದ ತೆಗೆಯುವಂತೆ ಆದೇಶಿಸುತ್ತಾರೆ. ಆದರೆ ಚುರುಕುಮತಿಯ, ನಿಷ್ಕಳಂಕ ವ್ಯಕ್ತಿತ್ವದ ಭೂಪೇಶ್ ಗುಪ್ತಾ ಅವರು ‘ಸಭಾಧ್ಯಕ್ಷರೇ, ದಯವಿಟ್ಟು ದಾಖಲೆಯಿಂದ ತೆಗೆಯಬೇಡಿ ಇಂಥವರನ್ನೂ ರಾಜ್ಯಸಭೆಗೆ ನಾಮಕರಣ ಮಾಡುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಾಗಲಿ’ ಎಂದು ತಿರುಗೇಟು ನೀಡುತ್ತಾರೆ. ಇದಾದ ಬಳಿಕ, ದಶಕಗಳೇ ಉರುಳಿದ ಅನಂತರ ಖುಷ್ವಂತ್ ಅಸಂಸದೀಯ ಭಾಷೆ ಬಳಸಿದ್ದಕ್ಕೆ ಪಶ್ಚಾತ್ತಾಪದಿಂದ ಬರೆಯುತ್ತಾರೆ.ಮೇನಕಾ ಗಾಂಧಿ ‘ಸೂರ್ಯ’ ಪತ್ರಿಕೆ ಹೊರಡಿಸಿದಾಗ ಅದಕ್ಕೆ ನೆರವು ನೀಡುತ್ತಾರೆ. ಆದರೆ ಕ್ರಮೇಣ ಅವರ ಅವಕೃಪೆಗೆ ಪಾತ್ರರಾಗುತ್ತಾರೆ. ಅವರನ್ನು ತೀವ್ರವಾಗಿ ಹಿಂಡಿದ ಘಟನೆಗಳೆಂದರೆ ಸ್ವರ್ಣ ದೇವಾಲಯದ ಒಳಗೆ ಸೇನೆ ನುಗ್ಗಿಸಿದಾಗ ಭಯೋತ್ಪಾದಕರ ಮತ್ತು ಸೇನೆಯ ಗುಂಡಿನ ಕಾಳಗದಲ್ಲಿ ಮುಗ್ಧ ಜನರು ಸತ್ತಿದ್ದು ಮತ್ತು ಇಂದಿರಾ ಹತ್ಯೆಯ ಬಳಿಕ ನಡೆದ ಸಿಖ್ ಜನರ ಹತ್ಯಾಕಾಂಡ.1984 ಅಕ್ಟೋಬರ್ 31ರಂದು ಇಂದಿರಾ ಹತ್ಯೆ ನಡೆದ ದಿನ ಮತ್ತು ಮಾರನೆಯ ದಿನ ದೆಹಲಿ ಹೊತ್ತಿ ಉರಿಯಿತು. ಸಾಯಿಸಿದವರು ಸಿಖ್ ಜನರು ಎಂದು ಗೊತ್ತಾಗುತ್ತಿದ್ದಂತೆ ಹತ್ಯಾಕಾಂಡ ವ್ಯಾಪಕವಾಗಿ ನಡೆಯಿತು. ಖುಷ್ವಂತ್ ಆಗಿನ ರಾಷ್ಟ್ರಪತಿ ಜೇಲ್ ಸಿಂಗ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಯತ್ನಿಸಿದರೆ ಅವರು ದೂರವಾಣಿ ಕರೆ ಸ್ವೀಕರಿಸುವುದಿಲ್ಲ. ಸ್ವೀಡನ್ ದೇಶದ ರಾಜತಾಂತ್ರಿಕರೊಬ್ಬರು ಬಂದು ಖುಷ್ವಂತ್ ಮತ್ತು ಅವರ ಪತ್ನಿಯವರನ್ನು ತಮ್ಮ ಮನೆಗೆ ಕರೆದೊಯ್ಯುತ್ತಾರೆ. ಆಗ ಕೇಂದ್ರ ತಮಗೆ ನೀಡಿದ ಪದ್ಮಭೂಷಣ ಹಿಂತಿರುಗಿ ಸುವುದರ ಮೂಲಕ ಹತ್ಯಾಕಾಂಡಕ್ಕೆ ತಮ್ಮ ಪ್ರತಿಭಟನೆಯನ್ನು ದಾಖಲು ಗೊಳಿಸುತ್ತಾರೆ. ಅವರು ಖಾಲಿಸ್ತಾನ್ ಬೇಡಿಕೆಯನ್ನು ತೀವ್ರವಾಗಿ ವಿರೋಧಿಸಿದ್ದ ಕಾರಣ ಭಯೋತ್ಪಾದಕರ ಆಕ್ರೋಶಕ್ಕೆ ಒಳಗಾಗುತ್ತಾರೆ. ಜೀವ ಅಪಾಯದಲ್ಲಿರುವುದನ್ನು ಗಮನಿಸದೆ ಪ್ರತ್ಯೇಕತಾವಾದಿಗಳ ವಿರುದ್ಧ ತಮ್ಮ ಅಂಕಣಗಳಲ್ಲಿ ನಿರಂತರವಾಗಿ ದಾಳಿ ನಡೆಸುತ್ತಾರೆ. ಕೇಂದ್ರ ಸರ್ಕಾರ ಅವರ ರಕ್ಷಣೆಗೆ ಅಂಗರಕ್ಷಕರನ್ನು ನೇಮಿಸುತ್ತದೆ.ಬದುಕಿನ ಸಂಧ್ಯಾಕಾಲದಲ್ಲಿ: 95ರ ವಯಸ್ಸಿನಲ್ಲಿ ‘ಸನ್ ಸೆಟ್ ಕ್ಲಬ್’ ಎಂಬ ಕಾದಂಬರಿ ಬರೆದ ಉತ್ಸಾಹಿ ಅವರು. ಸೋಜಿಗ ಮೂಡಿಸುವುದರಲ್ಲಿ ಭಾರತದ ಲೇಖಕ/ಪತ್ರಕರ್ತರಲ್ಲಿ ಅವರಿಗೆ ಅಗ್ರಸ್ಥಾನ. ತಮ್ಮ 98ನೇ ವಯಸ್ಸಿನಲ್ಲಿ ಅವರು ‘ಖುಷ್ವಂತ್‌ನಾಮಾ: ದಿ ಲೆಸನ್ಸ್ ಆಫ್ ಮೈ ಲೈಫ್’ ಬರೆದು ಅಚ್ಚರಿ ಮೂಡಿಸಿದ್ದರು.2011ರ ಅಕ್ಟೋಬರ್ ತಿಂಗಳಿನಲ್ಲಿ ತಾನು ಇನ್ನು ಬರೆಯುವುದಿಲ್ಲ, ಸಾವು ಯಾವುದೇ ಕ್ಷಣ ಬರಬಹುದು ಎಂದು ಪತ್ರಕರ್ತೆಯೊಬ್ಬರಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು. ಆದರೆ ಬರೆಯುವುದನ್ನು ಮಾತ್ರ ಹಠಾತ್ ನಿಲ್ಲಿಸಲಿಲ್ಲ. ಎರಡು, ಮೂರು ವಾರಗಳ ವಿರಾಮದ ಬಳಿಕ ಅವರ ಅಂಕಣ ‘ಡೆಕ್ಕನ್‌ ಹೆರಾಲ್ಡ್’ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಮತ್ತೆ ಕಾಣಿಸಿಕೊಳ್ಳಲಾರಂಭಿಸುತ್ತದೆ. ಅದೇ ವರ್ಷದ ನವೆಂಬರ್ ಮೂರನೇ ವಾರ ಬರೆದ ಅಂಕಣದಲ್ಲಿ ತಮ್ಮ ವಿಲಕ್ಷಣತೆಗೆ ಓದುಗರ ಕ್ಷಮೆಯಾಚಿಸುತ್ತಾರೆ. ‘ನನ್ನ ಪೆನ್ನಿಗೆ ಸರಿಹೊಂದುವ ಕಾಂಡೋಮ್ ಸಿಕ್ಕಿತು.ಇನ್ನು ಮುಂದೆ ಬರೆಯುವುದಿಲ್ಲ ಎಂದು ಅಂದುಕೊಂಡಿದ್ದೆ. ಅದು ಪೆನ್ನಿಗೆ ಹೊಂದಿಕೆಯಾಗಲಿಲ್ಲ ಅಥವಾ ಅದು ಸೋರಲು ತೊಡಗಿತು. ಆದುದರಿಂದ ಮತ್ತೆ ಬರೆಯಲಾರಂಭಿಸಿದ್ದೇನೆ. ಸಂಪಾದಕರಿಗೆ ಈ ನನ್ನ ವರ್ತನೆ ಸರಿ ಕಾಣದಿದ್ದರೆ ನನ್ನ ಬರಹಗಳನ್ನು ಪ್ರಕಟಿಸುವುದು ಬೇಡ. ಇದಕ್ಕೆ ಅವರನ್ನು ನಾನು ದೂಷಿಸುವುದಿಲ್ಲ’ ಎಂದು ತಮ್ಮ ಅಂಕಣದಲ್ಲಿ ಹೇಳಿಕೊಳ್ಳುತ್ತಾರೆ.ಮತ್ತೆ ಬರೆಯಲಾರಂಭಿಸಿದ ಬಳಿಕ ಅವರ ಅಭಿಮಾನಿಗಳು ನಿಟ್ಟುಸಿರುಬಿಡುತ್ತಾರೆ. ಆದರೆ ಕೆಲವು ವಾರಗಳ ಬಳಿಕ ತಮ್ಮ ಅಂಕಣ ನಿಲ್ಲಿಸುತ್ತಾರೆ.ಖುಷ್ವಂತ್ ಸಿಂಗ್ ಅವರ ಪೋಲಿತನ ಮತ್ತು ತಮ್ಮ ಆಪ್ತರ ಖಾಸಗಿ ಬದುಕಿನ ಬಗ್ಗೆ ಬರೆದಿರುವುದನ್ನು ಒಲ್ಲದವರು ಇರಬಹುದು. ಆದರೆ ಯಾವುದೇ ಲೇಖನ ಬರೆಯುವ ಮುನ್ನ ಮಾಹಿತಿ ಸಂಗ್ರಹ, ಅವುಗಳನ್ನು ಒರೆಗೆ ಹಚ್ಚುವುದು, ಗಂಭೀರ ವಿಷಯ ಬರೆಯುವಾಗ ಹಾಸ್ಯದ ಲೇಪ ನೀಡಿ ಬೋರು ಹೊಡೆಯದಂತೆ ನೋಡಿ ಕೊಳ್ಳುವುದು, ಜಾತ್ಯತೀತ ಮನೋಭಾವ ಇಂದಿನ ಪತ್ರಕರ್ತರಿಗೆ ಆದರ್ಶಪ್ರಾಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.