ಮಂಗಳವಾರ, ಜೂನ್ 22, 2021
29 °C

ವಚನಗಳನ್ನು ಜಾತಿ ಸ್ವತ್ತಾಗಿ ನೋಡಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ವಚನಗಳನ್ನು ಜಾತಿಯ ಸ್ವತ್ತಾಗಿ ನೋಡದೆ ವಿಭಿನ್ನ ದೃಷ್ಟಿಕೋನದಿಂದ ಅಧ್ಯಯನ ಮಾಡಬೇಕು~ ಎಂದು ವಿಮರ್ಶಕ ಡಾ.ಓ.ಎಲ್. ನಾಗಭೂಷಣಸ್ವಾಮಿ ಹೇಳಿದರು.ಮೈಸೂರು ವಿ.ವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಭಾಂಗಣದಲ್ಲಿ `ದಲಿತ ಪ್ರಗತಿಪಂಥ ರಾಜ್ಯ ಸಮಿತಿ~ ವತಿಯಿಂದ ಬುಧವಾರ ಏರ್ಪಡಿಸಿದ್ದ ಸಂಕ್ರಾಂತಿ, ಮಹಾಚೈತ್ರ, ತಲೆದಂಡ, ಶಿವರಾತ್ರಿ ನಾಟಕಗಳ ಹಿನ್ನೆಲೆಯಲ್ಲಿ `ವಚನ ಚಳವಳಿಯ ಪುನರಾವಲೋಕನ~ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.`ವಚನಗಳನ್ನು ಜಾತಿ ಸ್ವತ್ತು ಎಂದು ಅಂದುಕೊಳ್ಳ ಬಾರದು. ವಚನಗಳ ಬಗ್ಗೆ ಯಾರು ಏನೇ ಹೇಳಿದರೂ ನಂಬಬಾರದು. ದಿನಕ್ಕೆ ಒಂದು ವಚನವನ್ನು ಓದಬೇಕು. ಆ ಮೂಲಕ ವಚನಗಳ ಅರ್ಥ, ವಿಸ್ತಾರವನ್ನು ತಿಳಿದುಕೊ ಳ್ಳಬೇಕು. ಒಟ್ಟು 25 ಸಾವಿರ ವಚನಗಳಿದ್ದು, ಅವುಗಳಲ್ಲಿ ಸರಳವಾಗಿ ಅರ್ಥವಾಗುವ, ಓದಿಸಿಕೊಂಡು ಹೋಗುವ ಸುಮಾರು 2 ಸಾವಿರ ವಚನಗಳು ಇವೆ. ಒಟ್ಟು 160 ಮಂದಿ ವಚನಕಾರರಿದ್ದು ಅವರೆಲ್ಲರ ಕಸಬು, ಜಾತಿ ಬೇರೆ ಬೇರೆಯಾಗಿರುವಂತೆ ವಚನಗಳಲ್ಲೂ ವೈವಿಧ್ಯ, ವೈರುಧ್ಯ ಕಾಣಬಹುದು~ ಎಂದು ಹೇಳಿದರು.`12ನೇ ಶತಮಾನದ ವಚನಕಾರರ ಬದುಕನ್ನು ಆಧುನಿಕ ಸಾಹಿತ್ಯಕ್ಕೆ ಪ್ರಸ್ತುತ ಪಡಿಸಿ ನೋಡುವ ಕೆಲಸ 15ನೇ ಶತಮಾನದಿಂದ ಈಚೆಗೆ ನಡೆಯುತ್ತಿದೆ. 15ನೇ ಶತಮಾನದ ಉತ್ತರಾರ್ಧದ ವಚನಗಳ ಹಸ್ತಪ್ರತಿಗಳು ಮಾತ್ರ ಲಭ್ಯ ಇವೆ. 60ರ ದಶಕದ ನವ್ಯದಲ್ಲಿ ವಚನವನ್ನು ಸಾಹಿತ್ಯ ದೃಷ್ಟಿಯಿಂದ, ದಲಿತ ಮತ್ತು ಬಂಡಾಯದ ಸಂದರ್ಭದಲ್ಲಿ ಚಳವಳಿ ರೂಪದಲ್ಲಿ ವಚನಗಳನ್ನು ನೋಡಲಾಗಿದೆ. ಕಾಲ ಯಾವುದೇ ಆದರೂ ವಚನಗಳ ವಿಶೇಷ ಅಧ್ಯಯನ ಅಗತ್ಯ~ ಎಂದು ತಿಳಿಸಿದರು.`ವಚನಗಳನ್ನು ವೈಜ್ಞಾನಿಕ ಮತ್ತು ಚಾರಿತ್ರಿಕ ಸತ್ಯದ ದೃಷ್ಟಿಕೋನ ಹಾಗೂ ವರ್ತಮಾನದ ಬಿಂದುವಿನಲ್ಲಿ ನಿಂತು ನೋಡಬೇಕು. ಜೊತೆಗೆ ಬೇರೆ ಬೇರೆ ಗುರಿ, ಉದ್ದೇಶಗಳು, ದೃಷ್ಟಿಕೋನದಿಂದಲೂ ಭಿನ್ನವಾಗಿ ನೋಡಬೇಕು.12ನೇ ಶತಮಾನದ ವಚನಗಳನ್ನು ವರ್ತಮಾನಕ್ಕೆ ಪ್ರಸ್ತುತ ಮಾಡಿ ಕೊಳ್ಳುವ ದೃಷ್ಟಿ ಇರಬೇಕು. ಚರಿತ್ರೆ ಬರೆಯುವವನ ದೃಷ್ಟಿಕೋನಕ್ಕೆ ತಕ್ಕಂತೆ ಸಾಕ್ಷಿಗಳು ಲಭ್ಯವಾಗಿವೆ. ಇದರಿಂದ ಯಾವ ಚರಿತ್ರೆ ಸತ್ಯ ಎಂಬ ಸಂದೇಹವೂ ಕಾಡುತ್ತದೆ~ ಎಂದು ಅಭಿಪ್ರಾಯಪಟ್ಟರು.`ಮಹಾಚೈತ್ರ~ ನಾಟಕ ಕುರಿತು ಸಂಶೋಧನಾ ವಿದ್ಯಾರ್ಥಿ ಕೆ.ಎಂ.ಭೈರಪ್ಪ, `ಸಂಕ್ರಾಂತಿ~ ಕುರಿತು ವಿಜಯಕುಮಾರ್ ಸಿ.ಹುಲಕಲ್, `ತಲೆದಂಡ~ ಬಗ್ಗೆ ಎಚ್.ಟಿ.ಮಂಜುನಾಥ್, `ಶಿವರಾತ್ರಿ~ ಕುರಿತು ಬಸವರಾಜ ನಾಗವ್ವನವರ ಪ್ರತಿಕ್ರಿಯೆ ನೀಡಿದರು. ಎಸ್.ಸುಂದರ್ ಕಲಿವೀರ್ `ಕಾವ್ಯ ವಾಚನ~ ಮಾಡಿದರು. ಲಕ್ಷ್ಮೀರಾಮ್ ಮತ್ತು ರಾಮಚಂದ್ರ ಅವರು `ವಚನ ಗಾಯನ~ ನಡೆಸಿಕೊಟ್ಟರು. ಎನ್.ಯೋಗೇಶ್, ಟಿ.ವಿ.ಭಾರತಿ ಹಾಗೂ ಬಿ.ಕೆ.ಪುಟ್ಟನಂಜಯ್ಯ ನಿರ್ವಹಿಸಿದರು.ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ಕೆ.ಎನ್.ಗಂಗಾನಾಯಕ್ ಅಧ್ಯಕ್ಷತೆ ವಹಿಸಿದ್ದರು. ಡಾ.ಎಂ.ನಂಜಯ್ಯ ಹೊಂಗನೂರು ಸ್ವಾಗತಿಸಿ, ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.