ವಚನ, ಕೀರ್ತನೆ ಮಹತ್ವದ ಚಳವಳಿಗಳು

7

ವಚನ, ಕೀರ್ತನೆ ಮಹತ್ವದ ಚಳವಳಿಗಳು

Published:
Updated:

ಹಾವೇರಿ: ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ವಚನ ಹಾಗೂ ಕೀರ್ತನೆಗಳು ಬಹುದೊಡ್ಡ ಹಾಗೂ ಮಹತ್ವದ ಜನಪರ ಸಾಹಿತ್ಯದ ಚಳವಳಿಗಳಾಗಿವೆ ಎಂದು ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.ನಗರದ ಜಿ.ಎಚ್.ಕಾಲೇಜು ಸಭಾಂಗಣದಲ್ಲಿ ಈಚೆಗೆ ನಡೆದ ದಾಸ ಶ್ರೇಷ್ಠ ಕನಕದಾಸರ ಸಾಹಿತ್ಯ ಕುರಿತ ವಿಚಾರ ಸಂಕಿರಣದ ಮೊದಲ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.12ನೇ ಶತಮಾನದಲ್ಲಿ ವಚನ ಚಳುವಳಿ ಸರಳ ಕನ್ನಡದ ಮೂಲಕ ಜನಮನ ತಟ್ಟಿತಲ್ಲದೇ, ಅಂದಿನ ಸಾಮಾಜಿಕ ವ್ಯವಸ್ಥೆಯನ್ನು ವಿಮರ್ಶೆ ಮಾಡಿತು. ಆ ಕಾಲದ ಕಸಬುಗಳ ಪರಿಭಾಷೆಯಲ್ಲಿ ಶರಣರು ತಮ್ಮ ಜೀವನ  ಧರ್ಮದ ಜತೆಗೆ ಜನರಲ್ಲಿ ಸಮಾನತೆ ಮತ್ತು ಕಾಯಕ ಗೌರವ ಹಾಗೂ ಸ್ತ್ರೀ ಸಮಾನತೆಯ ಅರಿವು ಮೂಡಿಸಿದರು ಎಂದರು.ಅವರಂತೆ ಕನಕದಾಸರು ಹಾಗೂ ಮತ್ತಿತರ ದಾಸ ಶ್ರೇಷ್ಠರು ತಮ್ಮ ಕೀರ್ತನೆಗಳ ಮೂಲಕ ವಚನ ಸಾಹಿತ್ಯದ ಆಶಯಗಳನ್ನು ಮುನ್ನಡೆಸಿಕೊಂಡು ಬಂದರು. ಆದರೆ, ವಚನ ಚಳುವಳಿಗೆ ಇದ್ದ ವ್ಯಾಪಕತೆ ಮತ್ತು ಸ್ವಾಯತ್ತ ನೆಲೆ ಈ ಭಕ್ತಿ ಚಳುವಳಿಗೆ ಇರಲಿಲ್ಲವಾದರೂ, ದಾಸ ಪರಂಪರೆಯ ಕೀರ್ತನಕಾರರು ರಚಿಸಿದ ಕೀರ್ತನೆಗಳು ಜನಮನ ತಲುಪಿ ಸಾಮಾಜಿಕ ಪರಿವರ್ತನೆಗೆ ದಾರಿಯಾದವು ಎಂದು ಹೇಳಿದರು.ಕನಕರು ಬೆಳೆದ ಕಾಲಘಟ್ಟದಲ್ಲಿನ ತಳ ಸಂಸ್ಕೃತಿ ಮತ್ತು ಕೆಳವರ್ಗದವರ ಮೇಲೆ ಆಗುತ್ತಿದ್ದ ಸಾಂಸ್ಕೃತಿಕ  ಆಕ್ರಮಣಗಳನ್ನು ಕನಕರು ತಮ್ಮ ಸಾಹಿತ್ಯದಲ್ಲಿ ವಿವೇಚಿಸಿದ್ದಾರೆ. ಈಗ ಕಾಲ ಬದಲಾದರೂ ಈ ಆಕ್ರಮಣಗಳು ಇನ್ನೂ ನಿಂತಿಲ್ಲ. ಆದ್ದರಿಂದ ಇಂದಿನ ಯುವಕರು ಇಂಥ ಒಳ ಹಾಗೂ ಸೂಕ್ಷ್ಮ ಆಕ್ರಮಣಗಳ ಬಗ್ಗೆ ಎಚ್ಚತ್ತು ಜನಾಂದೋಲನ ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.‘ಆಧುನಿಕ ಸಾಮಾಜಿಕ ನೆಲೆಯಲ್ಲಿ ಕನಕರ ಪ್ರಸ್ತುತತೆ’ ಕುರಿತು ಮಾತನಾಡಿದ ಸೇಡಂನ ಡಾ. ಚಂದ್ರಕಲಾ ಬಿದರಿ, ‘ಕನಕದಾಸರು ಕಾವ್ಯದ ಜೊತೆ ಕೀರ್ತನೆಯನ್ನು ಏಕಕಾಲದಲ್ಲಿ ಸಮಾಜಕ್ಕೆ ಕೊಟ್ಟ ಏಕೈಕ ದಾಸರು. ಇವರು ಸ್ವಸಾಮರ್ಥ್ಯದ ಮೂಲಕ ಸಮಾಜದ ಮೇಲ್ವರ್ಗಗಳ ಗುರುವಿನ ಪ್ರೀತಿಗೆ ಪಾತ್ರರಾದವರು ಪ್ರತಿಭಾ ಸಂಪನ್ನರು ಆಗಿದ್ದರು ಎಂದು ಹೇಳಿದರು.ಇಂದಿನ ಕಲುಷಿತ ಸಾಮಾಜಿಕ ವಾತಾವರಣದಲ್ಲಿ ಅದ್ಭುತ ಅರ್ಥವನ್ನೊಳಗೊಂಡ ಕನಕರ ಕೀರ್ತನೆಗಳ ಮರ್ಮವನ್ನು ಅರಿತುಕೊಳ್ಳುವುದು ಅಗತ್ಯವಾಗಿದೆ. ‘ಕನಕದಾಸರ ಕಾವ್ಯದಲ್ಲಿ ಸ್ತ್ರೀಪರ ಚಿಂತನೆ’ ಕುರಿತು ಚಿತ್ರದುರ್ಗದ ಆರ್. ತಾರಿಣಿ ಶುಭದಾಯಿನಿ ಮಾತನಾಡಿ, ಕನಕರ ಸಾಹಿತ್ಯದಲ್ಲಿನ ಸ್ತ್ರೀಪರ ಕಾಳಜಿ, ಸಾಮಾಜಿಕ ವ್ಯವಸ್ಥೆಯಲ್ಲಿ ಸ್ತ್ರೀಯರನ್ನು ಅದೆಷ್ಟು ಉನ್ನತವಾಗಿವಾಗಿತ್ತು ಎಂಬುದನ್ನು ತಮ್ಮ ಸಾಹಿತ್ಯದಲ್ಲಿ ವಿವರಿಸಿದ್ದಾರೆ. ಮೋಹನ ತರಂಗಿಣಿ ಕಾವ್ಯದಲ್ಲಿ ಬರುವ ತಾಯಿ-ಮಗನ ಸಂಬಂಧ, ಕಾಮನ ವರ್ಣನೆ ಹಾಗೂ ಸ್ತ್ರೀ ಸೌಂದರ್ಯವನ್ನು ಸ್ತ್ರೀಪರ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿವೆ ಎಂದು ವಿಶ್ಲೇಷಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry