ಶುಕ್ರವಾರ, ನವೆಂಬರ್ 22, 2019
22 °C

ವಚನ ಸಂಶೋಧನೆಯ ವಿಮರ್ಶೆ: ನಿರ್ಬಲ ವಾದ, ತಾರ್ಕಿಕ ಸಮಸ್ಯೆ

Published:
Updated:

`ಪ್ರಜಾವಾಣಿ'ಯಲ್ಲಿ ವಚನಗಳ ಕುರಿತ ನಮ್ಮ ಸಂಶೋಧನೆಯ ಬಗ್ಗೆ ನಡೆಯುತ್ತಿರುವ ಚರ್ಚೆಯಲ್ಲಿ ಒಂದು ಸಮಸ್ಯೆ ಮತ್ತೆ ಮತ್ತೆ ಚರ್ಚೆಗೆ ಬಂದಿದೆ. ಈ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಈ ಮುಂದಿನ ಮಾತುಗಳನ್ನು ಕುರಿತು ನಾವು ಚಿಂತಿಸಬೇಕು: “ವಚನಕಾರರು ಜಾತಿಯ ಬಗ್ಗೆ ತಮ್ಮ ಸಿಟ್ಟು, ಅಸಮಾಧಾನ ಮತ್ತು ಕೊರಗುಗಳನ್ನು ಹೇಳಿದ್ದಾರೆಂಬುದಕ್ಕೆ ಸಾಕಷ್ಟು ಪುರಾವೆಗಳನ್ನು ವಚನಗಳಲ್ಲಿ ತೋರಿಸಬಹುದು. ಅವುಗಳ ಸಂಖ್ಯೆ ವಿರಳವೆಂಬುದು ಅವುಗಳ ಪ್ರಾಮುಖ್ಯವನ್ನು ಕುಂದಿಸುವುದಿಲ್ಲ”.ಶಿವಪ್ರಕಾಶರ ಈ ಹೇಳಿಕೆಯ ಎರಡನೇ ಸಾಲನ್ನು ಗಮನಿಸಿ. ಈ ಸಾಲನ್ನು ನೋಡಿದಾಗಲೆಲ್ಲಾ ನನಗೆ ಅನಿಸಿದ್ದು ಈ ಆಕ್ಷೇಪಣೆಗೆ ಸಮರ್ಪಕವಾದ ಉತ್ತರ ನಮ್ಮ ಲೇಖನದಲ್ಲೇ ಇದೆಯಲ್ಲಾ ಎಂದು. ಹಾಗೇಕೆ ಅನಿಸುತ್ತದೆ ಎಂದೂ ಹೇಳಿ ಬಿಡುತ್ತೇನೆ. ಸಮಗ್ರ ವಚನ ಸಂಪುಟಗಳಲ್ಲಿರುವ ಒಟ್ಟು 21,788 ವಚನಗಳಲ್ಲಿ, ನಮ್ಮ ಲೇಖನ ತೋರಿಸುವ ಪ್ರಕಾರ, ಜಾತಿ ವಿರೋಧಿ ಚಳವಳಿ ಎಂಬ ವಿಷಯದ ಚರ್ಚೆಗೆ ಸರಿಯಾಗಿ ಉಳಿದುಕೊಳ್ಳುವ ವಚನಗಳು 72 ಮಾತ್ರ.ಇರುವ ಈ 72 ವಚನಗಳಲ್ಲಿ, ವಚನಗಳು ಜಾತಿಯನ್ನು ವಿರೋಧಿಸುತ್ತವೆ ಎಂದು ಸಾಧಿಸ ಹೊರಡುವ ಚಿಂತಕರು ಬಳಸುವುದು ಕೇವಲ ಎಂಟು ಹತ್ತು ವಚನಗಳನ್ನು ಮಾತ್ರ. ಕೇವಲ ಎಂಟು ಹತ್ತು ವಚನಗಳನ್ನು ಆಯ್ದುಕೊಂಡು ಎಂಟುನೂರು ವರ್ಷಗಳ ಸುದೀರ್ಘ ಇತಿಹಾಸ ಉಳ್ಳ ಇಡಿಯ ವಚನ ಸಂಪ್ರದಾಯದ ಬಗ್ಗೆ ಮಾತನಾಡುವುದಾದರೆ, ಯೋಚಿಸಿ ನೋಡಿ, ನಾವು ಏನನ್ನು ಬೇಕಾದರೂ ಸಾಧಿಸಿಬಿಡಬಹುದು.ವಚನಗಳು ಕಪ್ಪು ಕಲ್ಲಿನ ಕುರಿತು ಬರೆದಿರುವ ಸಾಹಿತ್ಯ, ಕೂದಲು ಮತ್ತು ಕಪ್ಪೆಗಳ ಕುರಿತ ಸಾಹಿತ್ಯ, ಪರದೈವ ದೂಷಣೆ ಮಾಡುವ ಸಾಹಿತ್ಯ ಇತ್ಯಾದಿ. ಏಕೆಂದರೆ, ಸಮಗ್ರ ವಚನಗಳಲ್ಲಿ ಕಪ್ಪು ಕಲ್ಲಿನ ಕುರಿತು ಅಥವಾ ಕೂದಲು ಮತ್ತು ಕಪ್ಪೆಗಳ ಕುರಿತು ಮಾತನಾಡುವ ಕೆಲವು ವಚನಗಳಂತೂ ಸಿಕ್ಕೇ ಸಿಗುತ್ತವೆ. ಪರಿಸ್ಥಿತಿ ಹೀಗಿರುವಾಗ, ವಚನಗಳ ಕುರಿತು ಮಾತನಾಡುವಾಗ ಅಂಕೆ ಸಂಖ್ಯೆಗಳನ್ನು ತರಬಾರದು ಎಂಬ ಪ್ರಚಲಿತ ವಾದ ಅರ್ಥವಾಗುವುದು ಕಷ್ಟವೇ.ಇಲ್ಲದೇ ಇರುವುದನ್ನು ಇಲ್ಲವೆಂದು ತೋರಿಸುವ ಬಗೆ: ಶಿವಪ್ರಕಾಶರು ಎತ್ತಿದ್ದ ಈ ಪ್ರಶ್ನೆ, ಚರ್ಚೆ ನಡೆದಾಗಿನಿಂದ ಹಲವು ರೂಪಗಳಲ್ಲಿ, ಹಲವು ಕಡೆಗಳಲ್ಲಿ ಮತ್ತೆ ಮತ್ತೆ ಎತ್ತಲಾಗಿದೆ. ಅಂದಮೇಲೆ, ಇಲ್ಲೊಂದು ಕಾಣದ ಸಮಸ್ಯೆ ಅಡಗಿದೆ ಅನಿಸಿದರೆ ಅದು ತಪ್ಪಲ್ಲ. ಈ ಸಮಸ್ಯೆಯನ್ನು ತಾತ್ವಿಕ ಭಾಷೆಯಲ್ಲಿ ಹೀಗೆ ಇಡಬಹುದು: ಇಲ್ಲದೇ ಇರುವುದನ್ನು ಇಲ್ಲವೆಂದು ತೋರಿಸುವುದು ಹೇಗೆ?ಒಂದು ಉದಾಹರಣೆಯ ಮೂಲಕ ಹೇಳುವುದಾದರೆ, ನಾವು ಕಥೆಗಳಲ್ಲಿ ಕೇಳುವ `ಮಿನುಗುವ ಬಂಗಾರದ ಜಿಂಕೆಯು' ಈ ಜಗತ್ತಿನಲ್ಲಿ ನಿಜವಾಗಿಯೂ ಇಲ್ಲ ಎಂದು ನಮ್ಮ ಸಾಮಾನ್ಯಜ್ಞಾನಕ್ಕೆ ತಿಳಿಯುತ್ತದೆ. ಆದರೆ ಇದನ್ನು ವೈಜ್ಞಾನಿಕ ಚರ್ಚೆಯ ಮೂಲಕ (ತಾರ್ಕಿಕವಾಗಿ) ತೋರಿಸಿ ಕೊಡುವುದು ಹೇಗೆ? ಒಂದೊಮ್ಮೆ ಇದನ್ನು ಸಾಧಿಸಿ ತೋರಿಸಲು ನಾವು ಈ ಜಗತ್ತಿನಲ್ಲಿ `ಇರುವ' ವಸ್ತು,ವಿಷಯಗಳನ್ನು ಬಳಸುವುದಾದರೆ ಒಂದು ಹೊಸ ಸಮಸ್ಯೆ ಹುಟ್ಟುತ್ತದೆ: ಈ ಜಗತ್ತಿನಲ್ಲಿರುವ ಒಂದು ವಿಷಯ ಈ ಜಗತ್ತಿನಲ್ಲಿರದ ಒಂದು ವಿಷಯ ಇಲ್ಲ ಎಂದು ಸಾಧಿಸಲು ಪುರಾವೆ ಹೇಗಾದೀತು?ವಚನ ಕುರಿತ ಪ್ರಸ್ತುತ ಚರ್ಚೆಗೆ ಅನ್ವಯಿಸಿ ಹೇಳುವುದಾದರೆ ನಮ್ಮ ಸಂಶೋಧನೆಯ ವಿಮರ್ಶಕರು ಎತ್ತುತ್ತಿರುವ ಪ್ರಶ್ನೆ ಇದು: `ವಚನಗಳು ಜಾತಿಯ ವಿರುದ್ಧ ಮಾತನಾಡುತ್ತಿಲ್ಲ' ಎಂಬ ಇಲ್ಲದ್ದನ್ನು, ವಚನಗಳಲ್ಲಿನ ಪದಬಳಕೆಯನ್ನು ಬಳಸಿಕೊಂಡು ತೋರಿಸಲು ಹೇಗೆ ಸಾಧ್ಯ? ಉದಾಹರಣೆಗೆ, ಅಡಿಗರ ಕವನವನ್ನೇ ತೆಗೆದುಕೊಳ್ಳಿ. ಕನ್ನಡದ ಪದಕೋಶವೊಂದರಲ್ಲಿ ಇರುವ ಪದಗಳನ್ನೆಲ್ಲಾ ಇವರು ತಮ್ಮ ಕವನಗಳಲ್ಲಿ ಬಳಸಿರುವುದಕ್ಕೆ ಸಾಧ್ಯವೇ ಇಲ್ಲ. ಬಹುಶಃ `ಕ್ಷ-ಕಿರಣ' ಎಂಬುದು ಅಂತಹದ್ದೊಂದು ಪದವಿರಬಹುದು. ಅಂದ ಮಾತ್ರಕ್ಕೆ ಅಡಿಗರಿಗೆ ಕ್ಷ-ಕಿರಣದ ಕುರಿತು ತಿಳಿದೇ ಇಲ್ಲ ಎನ್ನಲು ಸಾಧ್ಯವೇ? ಅಂತಹ ಮಾತು ತಾರ್ಕಿಕವೇ?ಜಗತ್ತಿನಲ್ಲಿ ಇಲ್ಲದ್ದನ್ನು ಇಲ್ಲ ಎಂದು ತೋರಿಸುವುದು ಹೇಗೆ ಎಂಬುದಕ್ಕೆ ತರ್ಕಶಾಸ್ತ್ರ ಕೊಡುವ ಉತ್ತರ ಹೀಗಿದೆ. ಇಲ್ಲದೇ ಇರುವ ವಿಷಯವನ್ನು ಇಲ್ಲವೆಂದು ರುಜುವಾತುಪಡಿಸಲು ಇರುವ ಒಂದೇ ಒಂದು ಮಾರ್ಗವೆಂದರೆ ಅದು ತಾರ್ಕಿಕವಾಗಿ ಅದು ಸ್ವವಿರುದ್ಧವಾಗಿದೆ (logically selfcontradictory ಯಾಗಿದೆ) ಎಂದು ಸಾಬೀತು ಮಾಡುವುದು.ವಿವರಿಸಿ ಹೇಳುವುದಾದರೆ, ಎರಡು ವಿಚಾರಗಳು ತಾರ್ಕಿಕವಾಗಿ ತದ್ವಿರುದ್ಧವಾಗಿದೆ ಎಂದು ತೋರಿಸಿ, ಅದರಲ್ಲಿ ಒಂದು ವಿಚಾರ ಇದೆ ಎಂದು ಸಾಬೀತು ಪಡಿಸಿದರೆ, ಇನ್ನೊಂದು ವಿಚಾರ ಇರಲು ಸಾಧ್ಯವೇ ಇಲ್ಲವೆಂದು ತೋರಿಸಬಹುದು. ಉದಾಹರಣೆಯಾಗಿ ವಿಜ್ಞಾನ ಮತ್ತು ಬೈಬಲ್ ಹೇಳುವ ಈ ಎರಡು ಹೇಳಿಕೆಗಳನ್ನು ನೋಡಿ: `ಬ್ರಹ್ಮಾಂಡವು ಕೆಲವು ಶತಕೋಟಿ ವರ್ಷಗಳಷ್ಟು ಹಳೆಯದು' ಮತ್ತು `ಬ್ರಹ್ಮಾಂಡವನ್ನು ಗಾಡ್ ಕೆಲವೇ ಸಾವಿರ ವರ್ಷಗಳ ಹಿಂದೆ ಸೃಷ್ಟಿ ಮಾಡಿದ.'ಇವೆರಡೂ ತಾರ್ಕಿಕವಾಗಿ ತದ್ವಿರುದ್ಧವಾಗಿರುವ ಹೇಳಿಕೆಗಳು. ಅಂದರೆ, ಇದರಲ್ಲಿ ಒಂದು ನಿಜವಾಗಿದ್ದರೆ ಇನ್ನೊಂದು ಸುಳ್ಳಾಗಿರಲೇ ಬೇಕು. ಇಂದಿನ ವಿಜ್ಞಾನಗಳನ್ನು ಬಳಸಿ ಈ ಬ್ರಹ್ಮಾಂಡ ಕೆಲವು ಶತಕೋಟಿ ವರ್ಷಗಳಷ್ಟು ಹಳೆಯದು ಎಂದು ನಾವು ಸಾಬೀತು ಮಾಡಿದ್ದಾದರೆ ಬೈಬಲ್ಲಿನ ಹೇಳಿಕೆ ತಪ್ಪು ಎಂದು ಸಾಬೀತು ಮಾಡಬಹುದು.ವಚನಗಳ ಕುರಿತು: ಇನ್ನು ವಚನದ ವಿಚಾರಕ್ಕೆ ಬರುವುದಾದರೆ, ಇಲ್ಲದ್ದನ್ನು ಇಲ್ಲವೆಂದು ತೋರಿಸುವುದಕ್ಕೂ ಮುನ್ನ ಅದು ಇದೆ ಎಂದು ತೋರಿಸಿದವರಾರು ಮತ್ತು ಹೇಗೆ ಎಂಬ ಪ್ರಶ್ನೆ ಬರುತ್ತದೆ. `ವಚನಗಳು ಜಾತಿ ವಿರೋಧಿ ಸಾಹಿತ್ಯ ಹೌದು', ಅಥವಾ `ಅದು ಹೌದು ಎಂದು ಪ್ರತಿಪಾದಿಸಿ ತೋರಿಸುವ ಅವಶ್ಯಕತೆಯೇ ಇಲ್ಲ' ಇತ್ಯಾದಿ ಹೇಳಿಕೆಗಳನ್ನು ನಾವು ನಿತ್ಯವೂ ಕೇಳುತ್ತಿದ್ದೇವೆ. ಆದರೆ ಸಂಶೋಧನೆಯಲ್ಲಿ ಇದೆ ಎನ್ನುವುದನ್ನು ಇದೆ ಎಂದೂ ತೋರಿಸುವ ಅವಶ್ಯಕತೆ ಇರುತ್ತದೆ.ಇಲ್ಲವಾದರೆ ಬಹುಸಂಖ್ಯಾತರು ಹೇಳಿದ್ದೇ ನಿಜವೆಂದು ಒಪ್ಪಿಕೊಳ್ಳಬೇಕಾಗುತ್ತದೆ. ವಿಪರ್ಯಾಸವೆಂದರೆ, ವಚನಗಳು ಜಾತಿ ವಿರೋಧಿ ಸಾಹಿತ್ಯ ಹೌದು ಎಂದು ಇದುವರೆಗೂ ಯಾರೂ ತೋರಿಸಿಯೂ ಇಲ್ಲ, ಹೇಗೆ ತೋರಿಸಬಹುದು ಎಂಬುದರ ಕುರಿತು ಯೋಚಿಸಿದವರೂ ಯಾರೂ ಇಲ್ಲ. ಇಂದಿನ ವಚನ ಕುರಿತ ಚರ್ಚೆ ನೋಡಿದರೆ ಅಲ್ಲಿ ನಮಗೆ ಕಾಣಿಸುವುದು `ವಚನಗಳು ಜಾತಿ-ವಿರೋಧಿ ಸಾಹಿತ್ಯ' ಎಂಬ ಬಲವಾದ ನಂಬಿಕೆ ಮಾತ್ರ.ಇಲ್ಲೇ ಇನ್ನೊಂದು ವಿಚಾರವನ್ನೂ ಹೇಳಿಬಿಡುತ್ತೇನೆ. ತಪ್ಪು ಎಂದು ತೋರಿಸಲಾಗದ ವಾದವು ಎಂದೂ ವೈಜ್ಞಾನಿಕ ವಾದವಾಗುವುದಿಲ್ಲ. ಒಂದು ಸಿದ್ಧಾಂತದ ವಿಮರ್ಶೆಯ ಸಂದರ್ಭದಲ್ಲಿ ಈ ವಿಚಾರವನ್ನು ಪ್ರತಿಪಾದಿಸಿದವರು ಪ್ರಸಿದ್ಧ ವಿಜ್ಞಾನದ ತತ್ವಚಿಂತಕ ಕಾರ್ಲ್ ಪಾಪರ್. ಈತನ ವಾದವನ್ನು ಅರ್ಥ ಮಾಡಿಕೊಳ್ಳಲು ಈ ಉದಾಹರಣೆಯನ್ನು ಗಮನಿಸಿ. ಹೀಗೊಂದು ವಾದವನ್ನು ಯಾರಾದರೂ ಮಂಡಿಸಬಹುದು: ``ನಮ್ಮೂರಿನ ಕೆರೆಯಲ್ಲಿನ ಕಮಲದ ಹೂಗಳೆಲ್ಲವು ರಾತ್ರಿಯಲ್ಲಿ ಹಕ್ಕಿಗಳಾಗಿ ಹಾರಾಡ ತೊಡಗುತ್ತವೆ.ಆದರೆ ಯಾರಾದರು ಯಾವುದೇ ರೀತಿಯಲ್ಲಿ ಇದನ್ನು ಪರೀಕ್ಷಿಸ ಹೋದರೆ ಅವು ಹಕ್ಕಿಗಳಾಗುವುದಿಲ್ಲ.'' ಈ ವಾದದಲ್ಲಿನ ತೊಂದರೆ ಎಂದರೆ ಇದನ್ನು ಅಲ್ಲಗಳೆದು ತೋರಿಸುವ ಯಾವ ಮಾರ್ಗವೂ ಇಲ್ಲ. ಏಕೆಂದರೆ ಇದನ್ನು ಪರೀಕ್ಷಿಸಿ ನೋಡುವ ಮಾರ್ಗಗಳೇ ಇಲ್ಲ. ಆದ್ದರಿಂದಲೇ ಪಾಪರ್ ಹೇಳುವುದು: “the unfalsifiable is unscientific.”ಈ ಪರಿಸ್ಥಿತಿ ನಮ್ಮ ಸಂಶೋಧನೆಯ ಮುಂದೆ ಕೆಲವು ಸಮಸ್ಯೆಗಳನ್ನು ಒಡ್ಡುತ್ತದೆ. ವಚನಗಳು ಜಾತಿ ವಿರೋಧಿ ಎಂದು ಹೇಳುವ ನಮ್ಮ ಪೂರ್ವ ಪಕ್ಷ ತಾನು ಈ ಹೇಳಿಕೆಯನ್ನು ಯಾವ ಆಧಾರದ ಮೇಲೆ ಮಂಡಿಸಿದೆ ಎಂದು ಹೇಳುವುದೇ ಇಲ್ಲ. ಆದರಿಂದ ಈ ವಾದವನ್ನು ಅಲ್ಲಗಳೆದು ತೋರಿಸುವುದು ಹೇಗೆ ಎಂಬುದೇ ಸ್ಪಷ್ಟವಾಗುವುದಿಲ್ಲ.ಈ ವಾದವನ್ನು ಅಲ್ಲಗಳೆಯ ಹೊರಟ ನಮ್ಮಂಥ ಉತ್ತರ ಪಕ್ಷದವರು ಹಾಗಾಗಿ ಮೊದಲು ನಮ್ಮ ಪೂರ್ವ ಪಕ್ಷದ ವಾದವನ್ನೂ ತಾವೇ ಕಟ್ಟಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಪೂರ್ವ ಪಕ್ಷದ ವಾದವನ್ನು ನಾವು ಕಟ್ಟಿಕೊಳ್ಳುವುದು ಹೀಗೆ: ವಚನಗಳು ಜಾತಿಯ ವಿರುದ್ಧದ ಚಳವಳಿಯನ್ನು ಪ್ರತಿನಿಧಿಸುತ್ತವೆ ಎಂಬ ಪ್ರಚಲಿತ ಜನಪ್ರಿಯ ನಂಬಿಕೆಯು ನಿಜವೇ ಆಗಿದ್ದರೆ, ಬಹುತೇಕ ವಚನಗಳು ಜಾತಿಯ ಕುರಿತು ಮಾತನಾಡಲೇಬೇಕು. ಏಕೆಂದರೆ ಜಾತಿ ವಿರುದ್ಧದ ಚಳವಳಿಯ ಭಾಗವಾಗಿದ್ದುಕೊಂಡೂ ವಚನಗಳು ಜಾತಿಯ ವಿರುದ್ಧ ಮಾತನಾಡದೆ ಉಳಿದಿರಬಹುದಾದ ಪರಿಸ್ಥಿತಿ ಸಾಧ್ಯವಿಲ್ಲದ ಮಾತು.ಇನ್ನು ನಾವು ಕಟ್ಟಿಕೊಂಡ ಈ ಪೂರ್ವ ಪಕ್ಷದ ವಾದದ ವಿರುದ್ಧ ನಮ್ಮ ವಾದವೇನೆಂದರೆ, ಒಂದುವೇಳೆ ನಾವು ವಚನಗಳು ಜಾತಿಯ ವಿರುದ್ಧ ಮಾತನಾಡುವುದಿಲ್ಲ ಅಥವಾ ಜಾತಿಯ ವಿಚಾರ ವಚನಗಳಿಗೆ ಮಹತ್ವದ ವಿಚಾರವೇ ಅಲ್ಲವೆಂದು ತೋರಿಸಿದರೆ, ವಚನಗಳು ಜಾತಿವಿರೋಧಿ ಸಾಹಿತ್ಯವೆಂಬ ಪ್ರಚಲಿತ ವಾದವನ್ನು ತಳ್ಳಿ ಹಾಕಿದಂತಾಗುತ್ತದೆ. ಏಕೆಂದರೆ ಇಲ್ಲಿ `ವಚನಗಳು ಮುಖ್ಯವಾಗಿ ಜಾತಿ ವಿರೋಧಿ ಸಾಹಿತ್ಯ' ಮತ್ತು `ಅವು ಜಾತಿಯ ವಿರುದ್ಧ ಮಾತನಾಡುವುದಿಲ್ಲ' ಎಂಬುದು ತಾರ್ಕಿಕವಾಗಿ ತದ್ವಿರುದ್ಧವಾದ ಹೇಳಿಕೆಗಳು. ಇದರಲ್ಲಿ ಒಂದು ಹೇಳಿಕೆ ನಿಜವಾದರೆ ಇನ್ನೊಂದು ಸುಳ್ಳಾಗಲೇ ಬೇಕು. ಈ ನಿಟ್ಟಿನಲ್ಲಿಯೇ ನಾವು ವಚನಗಳಲ್ಲಿ ಜಾತಿಯ ವಿಚಾರ ಬರುವುದಿಲ್ಲ ಎಂದು ಅಂಕಿ ಸಂಖ್ಯೆಗಳ ಮೂಲಕ ತೋರಿಸುವುದು.ಹಾಗೊಮ್ಮೆ (ನಮ್ಮ ಚಿಂತಕರು ಹೇಳುತ್ತಿರುವಂತೆ) `ವಚನಗಳು ಜಾತಿ-ವಿರೋಧಿ ಸಾಹಿತ್ಯ' ಎಂಬ ವಾದವನ್ನು ಅಲ್ಲಗಳೆದು ತೋರಿಸುವುದು ಸಾಧ್ಯವೇ ಇಲ್ಲವೆಂದಾದರೆ ಇದೊಂದು ಅವೈಜ್ಞಾನಿಕ ವಾದ ಎಂದು ಒಪ್ಪಿಕೊಳ್ಳಲೇ ಬೇಕಾಗುತ್ತದೆ.

ಒಂದು ವೈಜ್ಞಾನಿಕ ಸಂಶೋಧನೆಯಲ್ಲಿನ ತಾರ್ಕಿಕ ವಾದದ ರೂಪುರೇಷೆಗಳನ್ನರಿಯದ ನಮ್ಮ ಪೂರ್ವ ಪಕ್ಷ ಅಂಕಿ ಸಂಖ್ಯೆಗಳ ಮೂಲಕ ವಚನಗಳು ಜಾತಿ ವಿರೋಧಿ ಎಂದು ತೋರಿಸಲು ಬರುವುದಿಲ್ಲ ಎಂದು ನಂಬುತ್ತಾ ಮತ್ತು ಪ್ರಚಾರ ಮಾಡುತ್ತಾ ಬಂದಿದೆ.ಈ ನಮ್ಮ ಪೂರ್ವ ಪಕ್ಷದವರ ಮುಂದೆ ಇಂದು ಎರಡು ಸವಾಲುಗಳಿವೆ:  ವಚನಗಳು ಜಾತಿ ವಿರೋಧಿ ಎಂದು ಯಾವ ಆಧಾರದ ಮೇಲೆ ಹೇಳಬಹುದು ಎಂದು ಅದು ಸಾಧಿಸಿ ತೋರಿಸ ಬೇಕು ಮತ್ತು ತಮ್ಮ ಈ ವಾದವನ್ನು ಹೇಗೆ ಅಲ್ಲಗಳೆಯಬಹುದು ಎಂಬುದನ್ನು ತೋರಿಸಿಕೊಡಬೇಕು. ಇಲ್ಲವಾದರೆ ಹೊಸ ವಾದವೊಂದನ್ನು ಒಪ್ಪಿಕೊಳ್ಳುವ ಔದಾರ್ಯತೆಯನ್ನು ತೋರಿಸಬೇಕು.

 

ಪ್ರತಿಕ್ರಿಯಿಸಿ (+)