ಗುರುವಾರ , ನವೆಂಬರ್ 21, 2019
25 °C

ವಚನ ಸಾಹಿತ್ಯದ ಇತಿಹಾಸ, ಐತಿಹ್ಯ

Published:
Updated:

ವಚನಸಾಹಿತ್ಯದಲ್ಲಿ ವಿಶೇಷಜ್ಞನೇನೂ ಅಲ್ಲದಿರುವ ನನಗೆ ಡಂಕನ್ ಝಳಕಿ ಮತ್ತು ಅವರ ಪ್ರತಿವಾದಿಗಳ ನಡುವಿನ ವಾಗ್ವಾದದಲ್ಲಿ ಒಂದು ಮುಖ್ಯ ಸಮಸ್ಯೆಯಿರುವುದು ಕಂಡಿದೆ. ಅದನ್ನು ಇದುವರೆಗೆ ಯಾರೂ ಪ್ರಸ್ತಾಪಿಸಿಲ್ಲವೆಂಬ ಕಾರಣದಿಂದ ನಾನೀಗ ಈ ಚರ್ಚೆಗೆ ಪ್ರವೇಶಿಸುತ್ತಿದ್ದೇನೆ.ಮೊದಲಿಗೆ ಝಳಕಿ ಅವರನ್ನು ವಿರೋಧಿಸುವವರ ಧೋರಣೆಯ ಸಮಸ್ಯೆಯನ್ನು ಎತ್ತಿಕೊಳ್ಳುತ್ತೇನೆ.  ಈ ಧೋರಣೆಯನ್ನು ತಳೆಯುವ ಬಹುತೇಕರಲ್ಲಿ 12ನೆಯ ಶತಮಾನದ ವಚನಸಾಹಿತ್ಯದಲ್ಲಿಯೇ 20ನೆಯ ಶತಮಾನದ ಸಾಮಾಜಿಕ ನ್ಯಾಯದ ಪರಿಕಲ್ಪನೆಯೂ ಇತ್ತು - ಎಂಬ ಭಾವನೆಯು ಹಿನ್ನೆಲೆಯಲ್ಲಿ ಒಂದು ಸ್ಥಾಯಿಯಾಗಿ ಕಾಣಿಸಿಕೊಳ್ಳುತ್ತದೆ. ಇದು `ವೇದಕಾಲದಲ್ಲಿಯೇ ವಿಮಾನವೂ ಇತ್ತು' ಎಂಬ ಪ್ರಸ್ತಾಪದಷ್ಟೇ ಸಮಸ್ಯಾತ್ಮಕ. ವಚನಗಳು ಪ್ರಸ್ತಾಪಿಸುವ ಸಮಾನತೆಯು ಜಾತಿಮತಗಳ ರೂಢಿಯನ್ನು ಮೀರಿ ಯಾರೂ ಯಾವುದೇ ಬಗೆಯ ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸಬಹುದು ಎಂಬ ಅರ್ಥದ ಪಾರಮಾರ್ಥಿಕ ಸಮಾನತೆಯೇ ಹೊರತು, ಅದು ಫ್ರೆಂಚ್ ಕ್ರಾಂತಿಯ ಅನಂತರ ಹುಟ್ಟಿದ ಲೌಕಿಕ ಸ್ವಾತಂತ್ರ್ಯ, ಸಮಾನತೆಗಳಲ್ಲ. ಯಾವ ಕಾಯಕದವನೂ ಕೈಲಾಸಕ್ಕೆ ಅರ್ಹ ಎಂಬುದು ವಚನದ ಧೋರಣೆಯೇ ಹೊರತು, ಯಾವುದೇ ಕಾಯಕದವನಿರಲಿ ಅವನಿಗೆ ಅಥವಾ ಅವಳಿಗೆ ಸಮಾನ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಹಕ್ಕುಗಳಿವೆ - ಎಂಬರ್ಥದ ಆಧುನಿಕ ಸಮಾನತೆಯ ಪರಿಕಲ್ಪನೆ ಅಲ್ಲಿ ಇಲ್ಲ.  ಹಾಗೆಯೇ, ಗಂಡು-ಹೆಣ್ಣುಗಳ ನಡುವೆ ಸುಳಿಯುವುದು ಒಂದೇ ಆತ್ಮ ಎಂದು ವಚನ ಹೇಳುತ್ತದೆಯೇ ಹೊರತು, ಅವರಿಬ್ಬರೂ ಸಮಾನ ಹಕ್ಕುಳ್ಳವರು ಎಂದು ವಚನ ಹೇಳುವುದಿಲ್ಲ. ಈ ದೃಷ್ಟಿಯಿಂದ ವಚನಸಾಹಿತ್ಯವೂ ಸೇರಿದಂತೆ ಎಲ್ಲ ಕಾಲದ ಸಾಹಿತ್ಯಗಳೂ ಆಯಾ ಯುಗಧರ್ಮಕ್ಕೆ ಬದ್ಧವಾದ ಪ್ರಕಾರಗಳೇ ಹೊರತು ಅವನ್ನು ಅನಾಮತ್ತಾಗಿ ಇನ್ನೊಂದು ಕಾಲಕ್ಕೆ ಅನ್ವಯಿಸುವುದು ಅಸಾಧ್ಯ; ಹಾಗೆ ಮಾಡಹೊರಟರೆ ಎರಡೂ ಕಾಲಕ್ಕೂ ನಾವು ಅನ್ಯಾಯ ಮಾಡಿದ ಹಾಗೆ. ಝಳಕಿ ಅವರ ಲೇಖನವು ಪರೋಕ್ಷವಾಗಿ ಇಂಥ ಯುಗಲಂಘನವನ್ನು ವಿರೋಧಿಸುತ್ತ, ವಚನಗಳನ್ನು ಅದರ ಪಠ್ಯಪರಿಧಿಯ ಕಾಲದೇಶಗಳಲ್ಲೇ ಇಟ್ಟು ಹಿಸ್ಟಾರಿಸೈಸ್ ಮಾಡಲು ಹೊರಟಿರುವುದು ನನಗೆ ಸ್ವಾಗತಾರ್ಹವಾಗಿ ಕಾಣುತ್ತದೆ.ಆದರೆ, 12ನೆಯ ಶತಮಾನವನ್ನು ಒಂದು ರೂಪಕವಾಗಿ ಕಂಡು, ಅದನ್ನು ನಮ್ಮ ಕಾಲದ ಸಾಮಾಜಿಕ ಕ್ರಿಯಾಶೀಲತೆಗೆ ಸ್ಫೂರ್ತಿಯಾಗಿ ಬಳಸುವುದರಲ್ಲಿ ಸಮಸ್ಯೆಯೇನೂ ಇಲ್ಲ. ಅಂಥ ಹೋರಾಟಕ್ಕೆ ವಚನ ಪಠ್ಯಗಳ ನೆರವು ಪಡೆಯುವುದು, ಅದು ಸೃಜನಶೀಲವಾದ ತಪ್ಪು ಓದಿನಿಂದ ಕೂಡಿದ್ದಾಗಿದ್ದರೂ ಕೂಡ, ಅದು ಅಸಾಧುವಲ್ಲ. ಇಂಥ ಸೃಜನಶೀಲ `ತಪ್ಪು' ಓದುಗಳಿಂದಲೇ ಹೊಸ ಕಾಲದ ಸಾಹಿತ್ಯ-ಸಂಸ್ಕೃತಿಗಳು ಪ್ರೇರಿತವಾಗುತ್ತಿರುತ್ತವೆ ಎಂಬುದು ಜಾಗತಿಕ ಸಾಂಸ್ಕೃತಿಕ ಚರಿತ್ರೆಯ ಮೇಲೆ ಕಣ್ಣಾಡಿಸಿದವರಿಗೆಲ್ಲ ತಿಳಿದಿರುತ್ತದೆ. ಉದಾಹರಣೆಗೆ, ಹರಳಯ್ಯ, ಮಧುವರಸರ ಕುಟುಂಬದ ಮಧ್ಯೆ ನಡೆಯಿತೆಂದು ಉಲ್ಲೇಖಿಸಲಾಗುವ ಅಂತರ್ಜಾತೀಯ ವಿವಾಹಕ್ಕೆ ಐತಿಹಾಸಿಕವಾಗಿ ಯಾವ ಆಧಾರವಿಲ್ಲದಿದ್ದರೂ ಅದನ್ನು ಆಧುನಿಕ ಕನ್ನಡದ ಹಲವು ನಾಟಕ, ಕಾದಂಬರಿಗಳು ಆ ಕಾಲದ ಒಂದು ಕೇಂದ್ರ ಐತಿಹ್ಯವೆಂದು ಉಲ್ಲೇಖಿಸುವುದರಲ್ಲಿ ನನಗೆ ಯಾವ ಸಮಸ್ಯೆಯೂ ಕಾಣುವುದಿಲ್ಲ. ಝಳಕಿ ಅವರ ವಾದವು ಇಂಥ ಸೃಜನಶೀಲ ಲಂಘನ ಮಾಡುತ್ತಿರುವವರನ್ನೆಲ್ಲ ದಡ್ಡರು ಎಂದು ತಿರಸ್ಕಾರದಿಂದ ನೋಡುವುದು, ಈ ಕಾಲಕ್ಕೆ ಮಾಡುವ ಅನ್ಯಾಯವಾಗುತ್ತದೆ. 12ನೆಯ ಶತಮಾನವನ್ನು ಹಿಸ್ಟಾರಿಸೈಸ್ ಮಾಡುವಂತೆ 20ನೆಯ ಶತಮಾನವನ್ನೂ ನಾವು ಹಿಸ್ಟಾರಿಸೈಸ್ ಮಾಡಲು ಸಿದ್ಧರಿರಬೇಕಲ್ಲವೆ?ಹೀಗೆ, ಇತಿಹಾಸ ಮತ್ತು ಐತಿಹ್ಯಗಳ ನಡುವಿನ ಹಾಗೂ ವಾಸ್ತವ ಮತ್ತು ರೂಪಕಗಳ ನಡುವಿನ ಭಿನ್ನತೆಗಳಿಗೆ ಆದಷ್ಟೂ ಎಚ್ಚರವಾಗಿದ್ದುಕೊಂಡು - ಅದು ಭಾರತದ ಸಂದರ್ಭದಲ್ಲಿ ಸುಲಭದ ಕೆಲಸವೇನೂ ಅಲ್ಲ - ಅದರೊಂದಿಗೇ ಹಳೆಗಾಲದ ಸಾಹಿತ್ಯವೊಂದನ್ನು ಓದುವ ಪ್ರಯತ್ನಕ್ಕೆ ತೊಡಗಿದರೆ ಮಾತ್ರ, ಈಗ `ಪ್ರಜಾವಾಣಿ'ಯಲ್ಲಿ ನಡೆಯುತ್ತಿರುವ ಸಂವಾದಕ್ಕೆ ಒಂದು ಉಪಯುಕ್ತ ಭವಿಷ್ಯವಿದೆ. ಅರ್ಥಾತ್, ಇತಿಹಾಸ ಮತ್ತು ಐತಿಹ್ಯದ ದೃಷ್ಟಿಗಳಲ್ಲಿ ಒಂದು ಮಾತ್ರವೇ ಸಾಧ್ಯ ಎಂಬ ಹಠಕ್ಕಿಳಿಯದೆ, ಎರಡನ್ನೂ ಅದರದರ ಉಪಯುಕ್ತತೆಯಲ್ಲಿ ಬಳಸುವುದು ಸಾಧ್ಯ ಎಂಬ ವಿವೇಕದಲ್ಲಿ ಈ ಚರ್ಚೆ ಮುನ್ನಡೆದರೆ, ಇದರಿಂದ ತುಂಬ ಲಾಭವಾದೀತು - ಎಂಬುದು ನನ್ನ ಆಶಯ.

 

ಪ್ರತಿಕ್ರಿಯಿಸಿ (+)