ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಜ್ರದ ಸ್ಥಿತ್ಯಂತರ

Last Updated 12 ಜೂನ್ 2015, 19:30 IST
ಅಕ್ಷರ ಗಾತ್ರ

ನಕಲಿ ವಜ್ರವನ್ನು ಪತ್ತೆ ಹಚ್ಚುವುದು ಹೇಗೆ, ವಜ್ರದ ಸದ್ಯದ ಸ್ಥಿತಿ–ಗತಿಗಳೇನು, ಹೊಸ ಬದಲಾವಣೆಗಳೇನು,  ಹೇಗಿದೆ ವಜ್ರದ ಭವಿಷ್ಯ... ಈ ಬಗೆಗೆ ‘ಡಿವೈನ್ ಸಾಲಿಟರ್ಸ್‌’ನ ಸಂಸ್ಥಾಪಕ ನಿರ್ದೇಶಕ ಜಿಗ್ನೇಶ್‌ ಮೆಹೆತಾ  ‘ಮೆಟ್ರೊ’ ಜೊತೆ ನಡೆಸಿದ ಮಾತುಕತೆ.

ಜ್ರ’ ಗುಣದಲ್ಲಿ ಅತ್ಯಂತ ಕಠಿಣವಾದ, ಆದರೆ ಎಂಥವರ ಮನಸ್ಸನ್ನೂ ಕ್ಷಣದಲ್ಲಿಯೇ ಕರಗಿಸಿ ಬಿಡುವ ಮಾಂತ್ರಿಕ ಶಕ್ತಿಯನ್ನು ಹೊಂದಿರುವ ಹರಳು. ವಜ್ರದ ವ್ಯಾಮೋಹ ಅನಾದಿ ಕಾಲದಿಂದಲೂ ಬೆಳೆಯುತ್ತಲೇ ಬಂದಿದೆ.   ರಾಜ-ಮಹಾರಾಜರ ಕಾಲದಿಂದಲೂ ವಜ್ರಕ್ಕೆ ವಿಶೇಷ ಮನ್ನಣೆ ಇತ್ತು. ತದನಂತರ ರಾಯಲ್ ಕುಟುಂಬಗಳಿಗೆ, ಅತಿ ಶ್ರೀಮಂತ ಮನೆತನಗಳಿಗೆ ಸೀಮಿತಗೊಂಡಿದ್ದ ವಜ್ರ, ಶತಮಾನಗಳ ಕಾಲ ಸಾಮಾನ್ಯ ಜನರಿಂದ ದೂರವೇ ಉಳಿದಿತ್ತು.

ಆದರೆ ಈಗೀಗ ಕಾಲ ಬದಲಾಗುತ್ತಿದೆ. ಅಂತೆಯೇ ವಜ್ರವೂ ಇಷ್ಟಿಷ್ಟೇ ಬದಲಾವಣೆಗಳಿಗೆ ಒಡ್ಡಿಕೊಳ್ಳುತ್ತ, ಹೊಸ ಕಲ್ಪನೆಗಳಿಗೆ ತಕ್ಕಂತೆ ತುಸು ಮೃದುವಾಗುತ್ತಿದೆ. ಮೇಲ್ವರ್ಗ, ಸಾಮಾನ್ಯ ವರ್ಗದ ಜನರಿಗೂ ಒಂದಿಷ್ಟು ಹತ್ತಿರವಾಗುತ್ತಿದೆ. ಈ ಬಗ್ಗೆ ದೆಹಲಿಯ ವಜ್ರದ ವ್ಯಾಪಾರಿ, ‘ಡಿವೈನ್ ಸಾಲಿಟರ್ಸ್‌’ನ ಸಂಸ್ಥಾಪಕ ನಿರ್ದೇಶಕ ಜಿಗ್ನೇಶ್‌ ಮೆಹೆತಾ ಮಾತನಾಡಿದ್ದಾರೆ. ಇತ್ತೀಚೆಗೆ ನಗರದ ಕೆಲ ಚಿನ್ನದ ಮಳಿಗೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ದೆಹಲಿಯಿಂದ ಆಗಮಿಸಿದ್ದ ಅವರು, ವಜ್ರಲೋಕದ ಹೊಸ ಬೆಳವಣಿಗೆ, ಹೊಸ ರೂಪ, ಹೊಸ ಪರಿಕಲ್ಪನೆ ಬಗ್ಗೆ ನಡೆಸಿದ ಚರ್ಚೆ ಇಲ್ಲಿದೆ–

ವಜ್ರ ಬದಲಾದ ಬಗೆಯನ್ನು ವಿವರಿಸಿ.
ಶ್ರೀಮಂತರಿಗಷ್ಟೇ ಸೀಮಿತವಾಗಿದ್ದ ಹರಳುಗಳ ರಾಜ ‘ವಜ್ರ’ ಈಚಿಗಿನ ದಿನಗಳಲ್ಲಿ ಎಲ್ಲರ ಕೈಗೂ ಸಿಗುವಂತಾಗಿದೆ. ಈಗ ₨15–20

ಸಾವಿರ ರೂಪಾಯಿಗೆ ವಜ್ರ ಧರಿಸಿ ಸಂಭ್ರಮಿಸಬಹುದು. ಬೆಲೆಯಲ್ಲಿ ಮಾತ್ರವಲ್ಲ, ರೂಪ, ಆಕಾರ, ತೂಕದಲ್ಲೂ ವಜ್ರ ಹಗುರವಾಗುತ್ತಿದೆ. ಹೆಚ್ಚು ಜನರ ಮನ ಮುಟ್ಟುತ್ತಿದೆ, ಕೈಗೆಟುಕುತ್ತಿದೆ.

ಕಡಿಮೆ ಬೆಲೆಗೆ ಸಿಗುತ್ತಿದೆ, ಆದರೆ ಈ ಬೆಲೆಗೆ ಅದೇ ಗುಣಮಟ್ಟವನ್ನು ಉಳಿಸಿಕೊಂಡಿರಲು ಸಾಧ್ಯವೇ?
ಅದು ನೀವು ಆಯ್ಕೆ ಮಾಡಿಕೊಂಡಿರುವ ವರ್ತಕರನ್ನು ಅವಲಂಬಿಸಿರುತ್ತದೆ. ಆದರೆ ಕಡಿಮೆ ಬೆಲೆಯಲ್ಲಿ ಸಿಗುವುದೆಲ್ಲ ಕಳಪೆ ಅಥವಾ ಗುಣಮಟ್ಟದಲ್ಲಿ ರಾಜಿಯಾಗಿದೆ ಎಂದೇ ಅರ್ಥೈಸಿಕೊಳ್ಳಬೇಕಾದ ಅಗತ್ಯವಿಲ್ಲ. ಇತ್ತೀಚೆಗೆ ಸೂಕ್ಷ್ಮವಾದ, ಪುಟ್ಟ, ತೆಳುವಾದ ಹರಳುಗಳ ಟ್ರೆಂಡ್‌ ಆರಂಭವಾಗಿದೆ. ಆದರೆ ನಕಲಿ ವಜ್ರಗಳ ಬಗ್ಗೆ ನೀವು ಜಾಗೃತರಾಗಿರಬೇಕು.

ನಕಲಿ ವಜ್ರವನ್ನು ಗುರುತಿಸುವುದು ಹೇಗೆ?
ಇತ್ತೀಚೆಗೆ ನಕಲಿ ವಜ್ರದ ಹಾವಳಿ ಹೆಚ್ಚಿರುವುದನ್ನು ಅಲ್ಲಗಳೆಯುವಂತಿಲ್ಲ. ಆ ವ್ಯತ್ಯಾಸವನ್ನು ಸಾಮಾನ್ಯ ಜನರು ಕಂಡುಹಿಡಿಯಲೂ ಸಾಧ್ಯವಿಲ್ಲ. ಆದ್ದರಿಂದ ಯಾವುದೇ ವಜ್ರದಾಭರಣ ಖರೀದಿಸಬೇಕಾದರೂ ಪ್ರಮಾಣೀಕೃತ ಮಳಿಗೆಗಳಿಗೇ ಹೋಗಬೇಕು ಎನ್ನುವ ಸಲಹೆ ನಮ್ಮದು.

ವಜ್ರದ ಬೆಲೆಯಲ್ಲಿ ಏಕರೂಪತೆ ಏಕಿಲ್ಲ, ಇದರ ಆದಿ–ಅಂತ್ಯ ಸಾಮಾನ್ಯ ಜನರಿಗೆ ತಿಳಿಯುವುದೇ ಇಲ್ಲವಲ್ಲ, ಯಾಕೆ?
ನಾಲ್ಕು ಅಂಶಗಳ ಮೇಲೆ ವಜ್ರದ ಬೆಲೆ ನಿರ್ಧಾರವಾಗುತ್ತದೆ–4C ಎಂದರೆ: ಕಟ್, ಕಲರ್, ಕ್ಲಾರಿಟಿ ಮತ್ತು ಕ್ಯಾರೆಟ್. ಈ ನಾಲ್ಕೂ ಪ್ರಮುಖ ಅಂಶಗಳು ಸೇರಿದಂತೆ ಇದರಲ್ಲಿ ಒಟ್ಟು 123 ಮಾನದಂಡಗಳು ಇರುತ್ತವೆ. ಇವುಗಳಲ್ಲಿ ಕನಿಷ್ಠ 40 ಮಾನದಂಡಗಳನ್ನು ನೋಡಿಯೇ ಲ್ಯಾಬ್‌ಗಳಲ್ಲಿ ವಜ್ರಕ್ಕೆ ಪ್ರಮಾಣಪತ್ರ ಕೊಡಲಾಗುತ್ತದೆ. ಈ ಅಂಶಗಳನ್ನು ಆಧರಿಸಿಯೇ ವಜ್ರದ ಬೆಲೆ ನಿರ್ಧಾರವಾಗುತ್ತದೆ. ಈ ಕಾರಣಗಳಿಂದಲೇ ಒಂದು ಮಳಿಗೆಯಿಂದ ಮತ್ತೊಂದು ಮಳಿಗೆಯ ವಜ್ರಾಭರಣಗಳ ಬೆಲೆಯಲ್ಲಿ ವ್ಯತ್ಯಾಸ ಇರುತ್ತದೆ.

ಗಣಿಗಳಿಂದ–ಮಳಿಗೆಗೆ ಬರುವ ದಾರಿಯ ವಿವರ...
ನಿಸರ್ಗದಲ್ಲಿ ದೊರೆಯುವ ವಜ್ರಕ್ಕೂ, ಗ್ರಾಹಕರ ಕೈ ಸೇರುವಾಗ ಇರುವ  ರೂಪಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನೈಸರ್ಗಿಕವಾಗಿ ಒಂದು ಕಲ್ಲಿನ ಆಕಾರದಲ್ಲಿ ದೊರೆಯುವ ವಜ್ರವನ್ನು ನಿರ್ದಿಷ್ಟ ರೂಪ ನೀಡಿ, ಕಲಾತ್ಮಕ ಆಕಾರ ಕೊಡಲಾಗುತ್ತದೆ.  ವಜ್ರಕ್ಕೆ ನಿಜವಾದ ಮೌಲ್ಯ ಬರುವುದು ಅದರ ‘ಕಟಿಂಗ್’ ಅನ್ನು ಅವಲಂಬಿಸಿರುತ್ತದೆ. ಪರಿಣತ ಕುಶಲಕರ್ಮಿಗಳು ಈ ಕೆಲಸ ಮಾಡುತ್ತಾರೆ. ವೇಗವಾಗಿ ತಿರುಗುವ ತಟ್ಟೆಗಳ ನೆರವಿನಿಂದ ವಜ್ರವನ್ನು ಕತ್ತರಿಸಲಾಗುತ್ತದೆ.

ಹೂಡಿಕೆಯ ದೃಷ್ಟಿಯಿಂದ ವಜ್ರ ಎಷ್ಟು ಸೂಕ್ತ? ಮರು ಮಾರಾಟದಲ್ಲಿ ಲಾಭವಿದೆಯೇ?
ಸಾಂಪ್ರದಾಯಿಕವಾಗಿ ಹೂಡಿಕೆಯಾಗಿ ಚಿನ್ನವನ್ನೇ ನೆಚ್ಚಿಕೊಂಡು ಬಂದ ದೇಶ ನಮ್ಮದು. ಆದರೆ ಇತ್ತೀಚೆಗೆ ವಜ್ರಗಳು ಸಹ  ಹೆಚ್ಚು ಆಕರ್ಷಕ ಹೂಡಿಕೆಯ ಆಯ್ಕೆಯಾಗಿ ಮನ್ನಣೆ ಪಡೆಯುತ್ತಿವೆ. ವಜ್ರದ ಬಗ್ಗೆ ಜನರಲ್ಲಿರುವ ಭಯ ಹಾಗೂ ತಪ್ಪು ಕಲ್ಪನೆಗಳನ್ನು ಮನಗಂಡು ಅನೇಕ ವರ್ತಕರು ಅವರನ್ನು ತಪ್ಪು ಹಾದಿಗೆ ಎಳೆಯುತ್ತಿದ್ದಾರೆ. ಆದರೆ ವಾಸ್ತವದಲ್ಲಿ ವಜ್ರದ ಮರುಮಾರಾಟದಲ್ಲಿ  ಹೆಚ್ಚಿನ ನಷ್ಟವಿಲ್ಲ.
ಅದರಲ್ಲೂ, ‘ಡಿವೈನ್ ಸಾಲಿಟರ್ಸ್‌’ನಲ್ಲಿ ನಾವು ಪಾರದರ್ಶಕ ಹಾಗೂ ಪ್ರಮಾಣಿತ ದರ ಪಟ್ಟಿಯನ್ನೇ ಸಿದ್ಧಗೊಳಿಸಿದ್ದೇವೆ. ವಜ್ರವನ್ನು ಕೊಳ್ಳುವಾಗಲೇ ಅದರ ಮರು ಮಾರಾಟದ ಬಗ್ಗೆ ಸ್ಪಷ್ಟ ಮಾನದಂಡಗಳನ್ನು, ಸೂಚನೆಗಳನ್ನು ನೀಡಲಾಗಿರುತ್ತದೆ. ಇಲ್ಲಿಂದ ಖರೀದಿಸುವ ವಜ್ರದ ಮರುಮಾರಾಟಕ್ಕೆ ನಾವೇ ಖಾತರಿ.

ಭಾರತದ ಮೆಟ್ರೊ ನಗರಗಳಲ್ಲಿ ವಜ್ರ ವ್ಯಾಪಾರದಲ್ಲಿ ಎದುರಾಗುವ ಸವಾಲುಗಳೇನು?
ಇಲ್ಲಿ ವಜ್ರ ಎನ್ನುವುದು ಒಂದು ‘ಫ್ಯಾಷನ್’, ‘ಪ್ಯಾಷನ್’ ಎರಡೂ ಆಗಿದೆ. ಇಲ್ಲಿ ವಜ್ರದ ಬಹುದೊಡ್ಡ ಪರಂಪರೆ ಇದೆ, ಇತಿಹಾಸವಿದೆ. ಇದರದೇ ಆದ ಮೌಲ್ಯವೂ ಇದೆ. ಇದೆಲ್ಲದರ ಜೊತೆಗೆ ಸಾಮಾನ್ಯ ಜನರ ಮನದಲ್ಲಿ ವಜ್ರದ ಬಗೆಗೊಂದು ಅನುಮಾನ, ಅಳುಕೂ ಇದೆ. ಇದೆಲ್ಲದರೊಂದಿಗೆ ವಜ್ರವನ್ನು ಸಾಮಾನ್ಯನ ವರೆಗೂ ತಲುಪಿಸಬೇಕಾದ ಹೊಣೆ ನಮ್ಮದು.

ಮೊದಲ ಹೆಜ್ಜೆಯಾಗಿ ವಜ್ರದ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಬೇಕು. ಅದರ ಬಗ್ಗೆ ಸ್ಪಷ್ಟ ಮಾಹಿತಿ ಹರಡಬೇಕು. ಅದರ ಬಗೆಗಿರುವ ಭಯ, ಅನುಮಾನಗಳು ದೂರವಾದ ಮೇಲಷ್ಟೇ  ಮುಂದಿನ ಹೆಜ್ಜೆಗಳು ಸುಲಭ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT