ಬುಧವಾರ, ಅಕ್ಟೋಬರ್ 16, 2019
26 °C

ವಜ್ರಮುನಿ: ಒಂದು ನೆನಪು

Published:
Updated:
ವಜ್ರಮುನಿ: ಒಂದು ನೆನಪು

ಚಿತ್ರರಂಗದಲ್ಲಿ ಖಳನಟರ ಕಾಲ ಮುಗಿದುಹೋಯಿತೇ? ಶಾರುಕ್‌ಖಾನ್ ಅಭಿನಯದ `ಡಾನ್-2~, `ಜೇಡ್ರಳ್ಳಿ~- ಹೀಗೆ ಯಾವುದೇ ಭಾಷಾಚಿತ್ರಗಳನ್ನು ನೋಡಿದರೂ ನಾಯಕನಟರೇ ಖಳನಟರಾಗಿ ಪರಿವರ್ತನೆಯಾಗಿರುವುದು ಗೋಚರವಾಗುತ್ತಿದೆ.ಸಿನಿಮಾದ ಬೆಳವಣಿಗೆಯಲ್ಲಿ ಖಳರ ಪಾತ್ರ ಈಗ ದಂತಕತೆ. ಸಿನಿಮಾದಲ್ಲಿ ಖಳರಾಗಿ ಅಬ್ಬರಿಸುವವರದೂ ಒಂದು ಸುವರ್ಣಯುಗವಿತ್ತು. ಸಿನಿಮಾಗಳಲ್ಲಿ ಮಹಿಷಾಸುರನಾಗಿ, ರಾವಣನಾಗಿ, ಹಿರಣ್ಯಕಶಿಪುವಾಗಿ ಅಬ್ಬರಿಸುವ ಮನಸ್ಸು ಎಲ್ಲ ಕಲಾವಿದರಿಗೂ ಇರುತ್ತದೆ.

 

ಡಾ.ರಾಜಕುಮಾರ್ ಅಂತಹವರೇ ಇಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಇಷ್ಟಪಟ್ಟು ಅಭಿನಯ ಸಾಮರ್ಥ್ಯವನ್ನು ಮೆರೆದಿರುವ ಉದಾಹರಣೆಗಳಿವೆ (ಸತಿಶಕ್ತಿ, ಮಹಿಷಾಸುರ ಮರ್ದಿನಿ, ಭಕ್ತ ಪ್ರಹ್ಲಾದ, ದಾರಿ ತಪ್ಪಿದ ಮಗ...).

 

ಇಂಥ, ಮಹತ್ವದ ಖಳ ಪಾತ್ರಗಳಲ್ಲಿ ಅಬ್ಬರಿಸುತ್ತಾ, ಕಂಚಿನಕಂಠದಲ್ಲಿ ತಮ್ಮದೇ ಛಾಪು ಮೂಡಿಸಿದ ವಜ್ರಮುನಿ `ಪ್ರಚಂಡ ರಾವಣ~ ನಾಗಿ ಸಿನಿಮಾ ಪ್ರವೇಶಿಸಿ ಕನ್ನಡ ಚಿತ್ರರಂಗದಲ್ಲಿನ ಖಳನಟರ ಪೈಕಿ ಇತಿಹಾಸವನ್ನೇ ಸೃಷ್ಟಿಸಿದ ವಿಶಿಷ್ಟ ನಟ. ಅವರು ಕಣ್ಮರೆಯಾಗಿ ಇಂದಿಗೆ ಆರು ವರ್ಷ. ಆದರೂ, ಸಿನಿಮಾ ಪ್ರೇಮಿಗಳ ಮನಸ್ಸಿನಿಂದ ಅವರು ಮರೆಯಾಗಿಲ್ಲ.ಬೆಂಕಿ ಉಂಡೆ ಉಗುಳುವ ವಿಶಾಲ ಕೆಂಪು ಕಣ್ಣುಗಳನ್ನು ತಿರುಗಿಸಿ ನಾಯಕನ ಎದೆ ನಡುಗುವಂತೆ ಗಹಗಹಿಸಿ ನಗುವ ವಜ್ರಮುನಿ ಈಗಲೂ ನಮ್ಮ ನೆನಪಿನ ಪರದೆಯ ಮೇಲೆ ಜೀವಂತವಾಗಿದ್ದಾರೆ.ಅಂದಹಾಗೆ, ವಜ್ರಮುನಿ ಇಷ್ಟಪಟ್ಟು ಖಳನಟರಾದವರಲ್ಲ. ನಾಯಕನಾಗಲು ಸಿನಿಮಾಗೆ ಬಂದ ಅವರು, ಅನಿವಾರ್ಯವಾಗಿ ಖಳನಾಗಲೇ ಬೇಕಾಯಿತು. ಒಳ್ಳೆಯ ಪಾತ್ರ ನೀಡಿ ಎಂದು ನಿರ್ದೇಶಕರ ಬಳಿ ಗೋಗರೆದದ್ದು ಫಲ ನೀಡಲಿಲ್ಲ. `ಪ್ರೇಕ್ಷಕರು ನಿಮ್ಮನ್ನು ಖಳನಾಯಕನಾಗಿಯೇ ಇಷ್ಟಪಡುತ್ತಾರೆ.

 

ಹಾಗಾಗಿ ಅದೇ ಪಾತ್ರ ಮಾಡಬೇಕು~ ಎಂದು ನಿರ್ಮಾಪಕರು - ನಿರ್ದೇಶಕರು ಒತ್ತಾಯಿಸಿದಾಗ ಅವರಿಗೆ ಬೇರೆ ದಾರಿಯಿರಲಿಲ್ಲ. ಆದರೆ, ಖಳ ಪಾತ್ರಗಳ ನಿರ್ವಹಣೆಯ ಮೂಲಕವೇ ನಾಯಕನಷ್ಟೇ ಜನಪ್ರಿಯತೆ ಗಳಿಸಿಕೊಂಡ ಅಗ್ಗಳಿಕೆ ಅವರದು (`ಗಂಡಭೇರುಂಡ~ ಚಿತ್ರದಲ್ಲಿ ಉತ್ತಮ ಗುಣಗಳ ಪೋಷಕ ಪಾತ್ರ ವಜ್ರಮುನಿ ಅವರಿಗೆ ದೊರೆತಿತ್ತು).ಖಳನಟನ ಮೊದಲ ಹೆಜ್ಜೆ

ಕಣಗಾಲ್ ಪ್ರಭಾಕರ ಶಾಸ್ತ್ರಿಯವರ `ಪ್ರಚಂಡ ರಾವಣ~ ನಾಟಕಕ್ಕೆ ತಯಾರಿ ನಡೆದಿತ್ತು. ಬೇರೆ ನಾಟಕ ತಂಡಗಳ ಉತ್ತಮ ನಟರನ್ನು ಕರೆಸಿ ರಾವಣನ ಪಾತ್ರ ಮಾಡುವಂತೆ ಒಪ್ಪಿಸಲಾಯಿತು. ಆದರೆ ಅವರ‌್ಯಾರೂ ಎರಡು ದಿನಕ್ಕಿಂತ ಹೆಚ್ಚು ನಿಲ್ಲುತ್ತಲೇ ಇರಲಿಲ್ಲ. `ನಿಮ್ಮ ಭಾಷೆ ಕಬ್ಬಿಣದ ಕಡಲೆ.

 

ಡೈಲಾಗ್ ಹೇಳಿ ಹೇಳಿ ಬಾಯಲ್ಲೆಲ್ಲಾ ರಕ್ತ ಬರುತ್ತಿದೆ~ ಎಂದು ಹೊರಟು ಹೋಗುತ್ತಿದ್ದರು. ನಾಟಕ ಪ್ರದರ್ಶನಕ್ಕೆ ಉಳಿದದ್ದು ಎರಡೇ ದಿನ. ಆದರೆ ರಾವಣನ ಪಾತ್ರ ಯಾರ ಕೈಲಿ ಮಾಡಿಸೋದು ಎಂದು ಚಿಂತಿಸಿದ ಶಾಸ್ತ್ರಿಗಳು, ಮೂಲೆಯಲ್ಲಿ ಕುಳಿತಿದ್ದ ವಜ್ರಮುನಿಯವರಿಗೆ ರಾವಣನ ಪಾತ್ರ ಮಾಡುವಂತೆ ಒಪ್ಪಿಸಿದರಂತೆ.ಪಾತ್ರ ಮಾಡುವುದು ಮುಖ್ಯವಲ್ಲ, ಆ ಪಾತ್ರದ ವ್ಯಕ್ತಿತ್ವಕ್ಕೆ ಜೀವ ತುಂಬಬೇಕು ಎನ್ನುವುದು ಕಲಾವಿದನಾಗಿ ವಜ್ರಮುನಿ ಅವರ ನಂಬಿಕೆ. ಕಣಗಾಲರಿಂದ ರಾವಣನಿಗೆ ಸಂಬಂಧಿಸಿದ ಕಥೆಯನ್ನೆಲ್ಲ ಕೇಳಿಕೊಂಡರು. ಹಗಲು ರಾತ್ರಿ ಎನ್ನದೆ ಆ ಪಾತ್ರಕ್ಕಾಗಿ ಶ್ರಮಿಸಿದರು. ಪ್ರಚಂಡ ರಾವಣ ಗೆದ್ದಿದ್ದ. ಆ ಪಾತ್ರದ ಮೂಲಕ ಅವರು ಪುಟ್ಟಣ್ಣ ಕಣಗಾಲ್ ಕಣ್ಣಿಗೆ ಬಿದ್ದರು (ಚಿತ್ರ: ಮಲ್ಲಮ್ಮನ ಪವಾಡ). ಅಲ್ಲಿಂದ ಅವರ ಓಟ 300 ಚಿತ್ರಗಳವರೆಗೆ.ಸಿನಿಮಾದಲ್ಲಿ ಖಳನಾಯಕನಿಗೆ ಜೀವ ತುಂಬುವ ಉದ್ದೇಶದಿಂದ ಮೃದು ಸ್ವಭಾವದ ವಜ್ರಮುನಿ ಕಠೋರವಾಗುತ್ತಿದ್ದರು. ತನ್ನದಲ್ಲದ ಕಠೋರತೆಯನ್ನು ಮೈಗೂಡಿಸಿಕೊಳ್ಳಲು ಅವರು ಪಡುತ್ತಿದ್ದ ಪಾಡು ಅಷ್ಟಿಷ್ಟಲ್ಲ. ಭಯಂಕರ ಸಿಟ್ಟು-ಆಕ್ರೋಶದ ಪಾತ್ರಗಳಲ್ಲಿ ಅಭಿನಯಿಸಲು ಪಟ್ಟ ಪರಿಶ್ರಮದಿಂದ ವಜ್ರಮುನಿ ಬಹುಬೇಗ ಅನಾರೋಗ್ಯ ಪೀಡಿತರಾದರಂತೆ. 1999ರ ಸುಮಾರಿಗೆ ಕಿಡ್ನಿ ವೈಫಲ್ಯದಿಂದ ಬಳಲಿದ ಅವರು ನಟನೆಯನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟರು.ವಜ್ರಮುನಿಯವರೇ ಹೇಳಿಕೊಂಡಂತೆ ಒಂದು ಪಾತ್ರಕ್ಕೆ ಅವರು ಒಪ್ಪಿಕೊಂಡರು ಎಂದರೆ, `ನಿರ್ದೇಶಕ ಕೊಟ್ಟ ಆ ಪಾತ್ರ ನನ್ನದಲ್ಲ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಆದರೂ ಆ ಪಾತ್ರದೊಳಗೆ ನನ್ನನ್ನು ಬಲವಂತವಾಗಿ ತೂರಿಸಿಕೊಳ್ಳಬೇಕು. ಕಳ್ಳನೋ, ದಡ್ಡನೋ, ಕ್ರೂರಿಯೋ... ಅವ್ಯಾವುವೂ ನನ್ನದಲ್ಲ. ಹೀಗಿದ್ದೂ ಅವನ್ನು ನನ್ನದನ್ನಾಗಿಸಿಕೊಳ್ಳಬೇಕು.

 

ವ್ಯಕ್ತಿಗೂ ಪಾತ್ರಕ್ಕೂ ಹಾಗೂ ಆತನ ನಡವಳಿಕೆಗೂ ಸಂಬಂಧಪಡದ ಪಾತ್ರವನ್ನು ರೂಢಿಸಿಕೊಳ್ಳುವ ಮಧ್ಯೆ ಅದೆಷ್ಟು ಪ್ರಯತ್ನಗಳಿವೆ! ಈ ದಡದಲ್ಲಿ ನಿಂತು ಆ ದಡದ ಪಾತ್ರದ ಬಗ್ಗೆ ನನ್ನಲ್ಲಿ ನಾನೇ ಚರ್ಚಿಸಿಕೊಳ್ಳುತ್ತಿದ್ದೆ.ನಿಜ ಜೀವನದ ವ್ಯಕ್ತಿತ್ವಕ್ಕೂ ತೆರೆಯ ಮೇಲಿನ ಪಾತ್ರಕ್ಕೂ ನಡುವೆ ಇರುವ ವ್ಯತ್ಯಾಸ ಗುರುತಿಸುತ್ತಿದ್ದೆ. ನಿರ್ದೇಶಕ `ಈ ರೀತಿಯ ಪಾತ್ರ ನಿನ್ನದು ವಜ್ರಮುನಿ~ ಎನ್ನುತ್ತಿದ್ದಂತೆಯೇ ಆ ಪಾತ್ರದೊಳಗೆ ವಿಲೀನವಾಗಿಬಿಡುತ್ತಿದ್ದೆ~ ಎಂದು ವಜ್ರಮುನಿ ಹೇಳುತ್ತಿದ್ದರು.ಕಲೆಗಾಗಿ ಹಂಬಲಿಸಿ ಜೀವ ಸವೆದ ವಜ್ರಮುನಿ ಸ್ವಂತ ಖುಷಿ, ಆರೋಗ್ಯದ ರಕ್ಷಣೆ ಎರಡನ್ನೂ ಸಂಪೂರ್ಣ ಮರೆತಿದ್ದರು. ಖಳನಾಯಕನ ಕಣ್ಣು ರೌದ್ರವಾಗಿ ಕೆಂಪಗೆ ಕಾಣಬೇಕೆಂದು ಸಿಗರೇಟಿನ ಹೊಗೆಯನ್ನು ಕಣ್ಣಿಗೆ ಉಗುಳಿಸಿಕೊಳ್ಳುತ್ತಿದ್ದರು. ಕಣ್ಣು ಮಂಜಾದಾಗಲೇ ಆ ಎಲ್ಲಾ ಪ್ರಯತ್ನಗಳ ದುಷ್ಟರಿಣಾಮ ಅರಿವಿಗೆ ಬಂದಿದ್ದು.ಕನ್ನಡ ಸಿನಿಮಾದ ಖಳನಾಯಕರ ಮೊದಲ ಸಾಲಿನಲ್ಲಿ ನಿಲ್ಲುವವರು ವಜ್ರಮುನಿ. ವಜ್ರಮುನಿ ನಂತರ ಪೂರ್ಣ ಪ್ರಮಾಣದ ಖಳನಾಯಕನೊಬ್ಬ ಕನ್ನಡ ಸಿನಿಮಾಕ್ಕೆ ದೊರೆಯಲೇ ಇಲ್ಲ ಎನ್ನುವುದು ಅವರ ನೆನಪನ್ನು ಇನ್ನಷ್ಟು ಗಾಢವಾಗಿಸುತ್ತದೆ.

 

Post Comments (+)