ವಜ್ರಸೇನಮುನಿ ಮಹಾರಾಜರ ಕೇಶಲೋಚನ

7

ವಜ್ರಸೇನಮುನಿ ಮಹಾರಾಜರ ಕೇಶಲೋಚನ

Published:
Updated:
ವಜ್ರಸೇನಮುನಿ ಮಹಾರಾಜರ ಕೇಶಲೋಚನ

ಅಣ್ಣಿಗೇರಿ: ಮಂತ್ರಪಠಣ ಭಕ್ತರ ಪ್ರಾರ್ಥನೆಯ ನಡುವೆ ಶಿಷ್ಯರ ಜೊತೆಗೂಡಿ ಅವರು ತಮ್ಮ ತಲೆ ಹಾಗೂ ಮುಖದ ಮೇಲಿನ ಕೇಶಗಳನ್ನು ಹಿಡಿದು, ಜಗ್ಗಿ ಕೀಳತೊಡಗಿದರು. ನೆರೆದ ಭಕ್ತರು ಅವಕ್ಕಾದರು. ಸಂಕಟಪಟ್ಟರು, ಚಡಪಡಿಸಿದರು. ಆ ಕಷ್ಟ ನೋಡಲಾರದೇ ತಲೆ ಕೆಳಗೆ ಮಾಡಿದರು. ಹಲವರ ಕಣ್ಣಲ್ಲಿ ನೀರು ಜಿನುಗಿತು.ಆ ನೋವು ಯಾತನೆಯ ಒಂದಿನಿತು ಭಾವವಿಲ್ಲದೇ ಅವರು ಕೇಶಗಳನ್ನು ಕೀಳುತ್ತಲೇ ಇದ್ದರು. ಎಲ್ಲ ಕೇಶ ಕಿತ್ತ ಮೇಲೆ ಉರಿಯ ಪರಿವಿಲ್ಲದೆ ಲಿಂಬೆ ಹಣ್ಣಿನ ರಸ ಲೇಪಿಸಿಕೊಂಡರು. ಎಲ್ಲ ಮುಗಿದ ಕ್ಷಣ ಅವರಲ್ಲಿ ಅದೇನೋ ಸಂತೃಪ್ತ ಭಾವ.ಇದು ಸ್ಥಳೀಯ ಪಾರ್ಶ್ವನಾಥ ತೀರ್ಥಂಕರ ದಿಗಂಬರ ಜೈನ ಬಸದಿಲ್ಲಿ ಸುಬಲಸಾಗರ ಮಹಾರಾಜರ ಶಿಷ್ಯ ವಜ್ರಸೇನಮುನಿ ಮಹಾರಾಜರ ಕೇಶಲೋಚನ ಕಾರ್ಯಕ್ರಮದಲ್ಲಿ ಕಂಡು ಬಂದ ಜೈನ ಧರ್ಮದ ಕಠೋರ ವೃತವೊಂದರ ದೃಶ್ಯ. ಅಣ್ಣಿಗೇರಿಯಲ್ಲಿ ಭಕ್ತ ಸಮೂಹಕ್ಕೆ ಹಲವು ದಶಕಗಳ ನಂತರ ನೋಡುವ ಅವಕಾಶ ಇದಾಗಿತ್ತು.ನಂತರ ಆ ಕೇಶಗಳನ್ನು ಸವಾಲ್ (ಹರಾಜು) ಮಾಡಲಾಯಿತು. ಆ ಕೇಶಗಳನ್ನು ಯಾವ ಭೂಮಿಯಲ್ಲಿ ಹೂಳಲಾಗುತ್ತದೆಯೋ ಅಲ್ಲಿ ದುಷ್ಟಶಕ್ತಿಗಳ ಪ್ರಭಾವ ಇರುವುದಿಲ್ಲ. ಹಾಗೂ ಆ ಸ್ಥಳದಲ್ಲಿ ಸಮೃದ್ಧಿಯಾಗುತ್ತದೆ ಎನ್ನುವ ಪ್ರತೀತಿ ನಂಬಿಕೆಯಂತೆ ಭಕ್ತರೊಬ್ಬರು ಅವುಗಳನ್ನು ಪಡೆದುಕೊಂಡರು. ವಜ್ರಸೇನಮುನಿ ಸರ್ವರಿಗೂ ಒಳ್ಳೆಯದಾಗಲೆಂದು ಆಶೀರ್ವದಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅಣ್ಣಿಗೇರಿ-ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗದೇವರು,  ಜೈನ ಧರ್ಮದ 24 ತೀರ್ಥಂಕರರು ಮೂಲತಃ ಕ್ಷತ್ರಿಯರು. ಇವನಾರವ ಎನ್ನುವುದೇ ಹಿಂಸೆ, ವ್ಯಕ್ತಿಯ ಒಳಗಿನಿಂದ ಗೆಲ್ಲುವುದೇ ವೀರತ್ವ ಎಂದರು.ಲಕ್ಕವಳ್ಳಿ ಜೈನ ಮಠದ ವೃಷಭಸೇನ ಭಟ್ಟಾರಕ ಸ್ವಾಮೀಜಿ, ಜೈನ್ ಧರ್ಮಿಯರು ತಮ್ಮ ದುರ್ಗುಣಗಳನ್ನು ಬಿಡದಿದ್ದರೆ ಅವರಿಗೆ ಅವನತಿ ಕಾದಿದೆ ಎಂದು ಎಚ್ಚರಿಸಿದರು.ಆದಿಕವಿ ಪಂಪನ ಜನ್ಮಸ್ಥಳವಾದ ಅಣ್ಣಿಗೇರಿಯಲ್ಲಿ ಆತನ ಸಮಾಧಿಯ ಹುಡುಕಾಟ ನಡೆಯಬೇಕು. ಬಸದಿಯ ಜೀಣೋದ್ಧಾರವಾಗಬೇಕು ಈ ದಿಶೆಯಲ್ಲಿ ಪಂಪನ ಜನ್ಮಭೂಮಿಯ ಪುನರ್ ಉದ್ದಾರಕ್ಕಾಗಿ ವಜ್ರಸೇನಮುನಿ ಮಹಾರಾಜರು ಇಲ್ಲಿಯೇ ನೆಲೆಸಲು ಅವರನ್ನು ತಾವು ಮನವೊಲಿಸುವುದಾಗಿ ಹೇಳಿದರು.ವಜ್ರಸೇನಮುನಿ ಮಹಾರಾಜರು ಸಂಕ್ಷಿಪ್ತ ಜೈನ ಕರ್ಮಸಿದ್ಧಾಂತ ಪುಸ್ತಕ ಬಿಡುಗಡೆ ಮಾಡಿದರು. ಜೈನ ಧರ್ಮಾನುರಾಗಿಗಳು ಹಾಜರಿದ್ದರು. ಶಾಂತಪ್ಪ ಅಂತಣ್ಣವರ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry