ವಧು ಮಾರಾಟ ತಡೆಯಿರಿ

7

ವಧು ಮಾರಾಟ ತಡೆಯಿರಿ

Published:
Updated:

`ಗುಜ್ಜರ್' ಮದುವೆ ನೆಪದಲ್ಲಿ ಕಳೆದ ಒಂದು ದಶಕದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಆಗಾಗ ಸದ್ದು ಮಾಡಿ ತಣ್ಣಗಾಗುತ್ತಿದ್ದ ಯುವತಿಯರ ಮಾರಾಟ ಜಾಲ ಈಗ ಮತ್ತೆ ಸಕ್ರಿಯವಾಗಿರುವ ವರದಿ ಆತಂಕಕಾರಿ. ವಿವಾಹದ ಸೋಗಿನಲ್ಲಿ ನಡೆಯುವಂತಹ ಹೆಣ್ಣುಮಕ್ಕಳ ಮಾರಾಟ ಇದು. ಈ ಪಿಡುಗಿಗೆ ಬಂಡವಾಳವಾಗುವುದು ಹೆಣ್ಣುಮಕ್ಕಳ ಪೋಷಕರ ಬಡತನ, ಅಜ್ಞಾನ. ಮದುವೆಯ ನಂತರದ ಸುಖ ಸಂಸಾರದ ಕನಸನ್ನು ಮಧ್ಯವರ್ತಿಗಳು ಹೆಣ್ಣುಮಕ್ಕಳ ಪೋಷಕರಲ್ಲಿ ಬಿತ್ತುತ್ತಾರೆ.ಪೋಷಕರಿಗೆ ಪುಡಿಗಾಸು ಕೊಟ್ಟು ದೂರದ ರಾಜಸ್ತಾನ, ಗುಜರಾತ್, ಉತ್ತರಪ್ರದೇಶ, ಮಹಾರಾಷ್ಟ್ರ ರಾಜ್ಯಗಳ ಅನಾಮಿಕರ ಜೊತೆಗೆ ವಿವಾಹ ಮಾಡಿಸುತ್ತಾರೆ. ಇಂತಹ ಮದುವೆಗಳಿಗೆ `ಗುಜ್ಜರ್ ಮದುವೆ' ಎಂದು ಕರೆಯುವುದು ಉತ್ತರ ಕರ್ನಾಟಕದಲ್ಲಿ ಪ್ರಚಲಿತವಿದೆ. ವಧುವಿನ ತಂದೆತಾಯಿ ಮಾತ್ರ ಹಾಜರಿದ್ದು, ಕದ್ದುಮುಚ್ಚಿ ಮಾಡಿಸುವ ಈ ಮದುವೆಯ ನಂತರ ಹುಡುಗಿಯ ಕತೆ ಏನಾಗುತ್ತದೆ ಎಂಬುದು ಯಾರಿಗೂ ತಿಳಿಯುವುದಿಲ್ಲ ಎಂಬ ವಿಚಾರವೇ ಘೋರವಾದದ್ದು.ರಾಜಸ್ತಾನದ ಉದಯಪುರ ಸುತ್ತಲಿನ ಕಟೀಶ್ವರ, ಡೋಂಗರಪುರ, ಆಗವಾಡ, ಆಕಪುರ ಗ್ರಾಮಗಳಲ್ಲಿ, ಹೀಗೆ ಮದುವೆಯಾಗಿ ಹೋದಂತಹ ಕರ್ನಾಟಕದ 30ಕ್ಕೂ ಹೆಚ್ಚು ಯುವತಿಯರಿದ್ದಾರೆಂಬ ವಿಷಯದ ಬಗ್ಗೆ ತನಿಖೆಯಾಗಬೇಕು. ಹೊಸ ಭಾಷೆ, ಸಂಸ್ಕೃತಿ, ಆಹಾರ ಕ್ರಮ, ರೀತಿ-ರಿವಾಜುಗಳಿಗೆ ಒಗ್ಗಿಕೊಳ್ಳಬೇಕಾದ ಹುಡುಗಿ ಮನೆಗೆಲಸವಲ್ಲದೆ, ಜಮೀನುಗಳಲ್ಲೂ ದುಡಿಯಬೇಕು. ಗಂಡನಿಗೆ ಮಾತ್ರವಲ್ಲ, ಆತನ ಸಹೋದರರಿಗೂ ಪತ್ನಿಯಾಗಿ `ಲೈಂಗಿಕ ಜೀತ'ಕ್ಕೆ ಒಳಪಡಬೇಕೆಂಬ ಅಂಶವಂತೂ ಆಘಾತಕಾರಿ.ಈ  ವಿಚಾರಗಳಿಗೆ ಒಗ್ಗಿಕೊಳ್ಳದಿದ್ದಲ್ಲಿ, ಪುಣೆ ಅಥವಾ ಮುಂಬೈನ ಕೆಂಪು ದೀಪ ಪ್ರದೇಶಗಳಿಗೆ ಬಲವಂತವಾಗಿ ಮಾರಾಟ ಮಾಡಲಾಗುತ್ತಿರುವುದು ಗಂಭೀರ ಪರಾಮರ್ಶೆಗೆ ಒಳಪಡಬೇಕಾದ ವಿಚಾರ. ಮದುವೆ ಹೆಸರಲ್ಲಿ ನಡೆಯುವ ಆಧುನಿಕ `ಜೀತ ಪದ್ಧತಿ' ಇದು.ಮಾನವ ಜೀವಿಗಳ ಈ ಅಕ್ರಮ ಸಾಗಣೆ ತಡೆಗೆ ಸರ್ಕಾರ ಗಂಭೀರ ಗಮನ ಹರಿಸದಿರುವುದು ಅಕ್ಷಮ್ಯ. ಕಾಣೆಯಾಗುತ್ತಿರುವ ಹೆಣ್ಣುಮಕ್ಕಳ ಬಗ್ಗೆ ರಾಜ್ಯ ಮಹಿಳಾ ಆಯೋಗ, ಇತ್ತೀಚೆಗೆ 110ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯಲ್ಲಿ, `ಕಾಣೆಯಾಗುವವರು' ಎಂಬುದನ್ನು `ಮನೆಯಿಂದ ತಪ್ಪಿಸಿಕೊಂಡು ಓಡಿ ಹೋಗುವವರು' ಎಂಬಂಥ ಅರ್ಥದಲ್ಲಿ ಪ್ರಧಾನವಾಗಿ ಬಳಸಿರುವುದು ಈಗಾಗಲೇ ಟೀಕೆಗಳಿಗೆ ಗುರಿಯಾಗಿದೆ. ಆದರೆ `ಗುಜ್ಜರ್' ಮದುವೆಗೆ ಒಳಗಾಗುವ ಹೆಣ್ಣುಮಕ್ಕಳೂ, ಸ್ವಂತ ಊರಿನ ಬೇರು ಕಡಿದುಕೊಂಡು `ಕಾಣೆಯಾಗುವವರೇ'. ವಿವಾಹದ ಸೋಗಿನಲ್ಲಿ ಸಂಘಟಿತವಾಗಿ ನಡೆಯುವಂತಹ ಅಪರಾಧವಿದು. ಇದರಲ್ಲಿ ತೊಡಗಿರುವ ಜಾಲವನ್ನು ಭೇದಿಸುವತ್ತ ರಾಜ್ಯ ಮಹಿಳಾ ಆಯೋಗ  ಸರ್ಕಾರದ ಮೇಲೆ ಒತ್ತಡವನ್ನು ತರಬೇಕಿದೆ.ಈ ಸಮಸ್ಯೆಗೆ ಮೂಲವಾದದ್ದು ಬಡತನ ಎಂಬುದರಲ್ಲಿ ಎರಡು ಮಾತಿಲ್ಲ. ಇಂತಹ ಗುಜ್ಜರ್ ಮದುವೆಗಳಿಗೆ ಒಳಪಡುತ್ತಿರುವವರಲ್ಲಿ ಹೆಚ್ಚಿನವರು ಕೆಳಜಾತಿಗಳ ಹೆಣ್ಣುಮಕ್ಕಳು. ಹೆಣ್ಣುಮಗುವಿನ ಕುರಿತಾದ ತಾರತಮ್ಯವೇ, ಇಂತಹದೊಂದು ಕ್ರೂರ ಸಾಮಾಜಿಕ ಸ್ಥಿತಿ ಸೃಷ್ಟಿಗೆ ಕಾರಣವಾಗಿದೆ ಎಂಬುದನ್ನೂ ಸಮಾಜ ಅರಿಯಬೇಕು. ಹೆಣ್ಣುಭ್ರೂಣ ಹತ್ಯೆ ಪಿಡುಗಿನಿಂದಾಗಿ, ಮದುವೆಗೆ ಹೆಣ್ಣು ಅರಸಿಕೊಂಡು ಬೇರೆಬೇರೆ ರಾಜ್ಯಗಳ ಯುವಕರು ಉತ್ತರಕರ್ನಾಟಕಕ್ಕೆ ಬರುವಂತಾಗಿದೆ. `ಲೈಂಗಿಕ ಜೀತ'ಕ್ಕೆ ಹೆಣ್ಣುಮಕ್ಕಳನ್ನು ದೂಡುತ್ತಿರುವ ಈ ಪ್ರವೃತ್ತಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಅಗತ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry