ವಧು ವಸ್ತ್ರಲೋಕದ ಸವ್ಯಸಾಚಿ

ಅಪ್ಪ–ಅಮ್ಮನಿಗೆ ಮಗ ಎಂಜಿನಿಯರ್ ಆಗಲಿ ಎಂಬ ಬಯಕೆ. ಆದರೆ ಮಗನಿಗೆ ತನ್ನದೇ ಒಂದು ಸ್ವಂತ ಕೆಲಸ ಮಾಡುವ ಆಸೆ. ಕೊನೆಗೆ ಮಗನ ಆಸೆಯೇ ಈಡೇರಿದ್ದು. ಆ ಕನಸುಗಾರನ ಹೆಸರು ಸವ್ಯಸಾಚಿ. ಹುಟ್ಟಿ ಬೆಳೆದಿದ್ದು ಬಂಗಾಳದಲ್ಲಿ. ವಿನ್ಯಾಸಗಾರನಾಗಬೇಕು ಎಂಬ ಅವರ ಕನಸು ತಂದೆ–ತಾಯಿಯಲ್ಲಿ ಮೊದಲು ಆತಂಕ ಮೂಡಿಸಿತು. ಬಟ್ಟೆ ಹೊಲಿದು ಭವಿಷ್ಯ ಹೇಗೆ ಕಟ್ಟಿಕೊಳ್ಳುತ್ತೀಯಾ ಎಂಬ ಪ್ರಶ್ನೆಯನ್ನು ಸಾಕಷ್ಟು ಸಲ ಎದುರಿಸಿದರು.
ಇಂತಹ ಸವಾಲುಗಳ ಮಧ್ಯೆ ಡಿಸೈನಿಂಗ್ ಕೋರ್ಸ್ಗೆ ಸೇರಿ ಸಹೋದರಿಗಾಗಿ ಹೊಸ ವಿನ್ಯಾಸದ ದಿರಿಸೊಂದನ್ನು ಉಡುಗೊರೆಯಾಗಿ ನೀಡಿದರು ಸವ್ಯಸಾಚಿ. ಬಾಲಿವುಡ್ ಬೆಡಗಿಯರಿಗೆ ಇವರು ವಿನ್ಯಾಸ ಮಾಡುವ ದಿರಿಸು ಅಚ್ಚುಮೆಚ್ಚಂತೆ. ವಿದ್ಯಾ ಬಾಲನ್ ಅವರ ಮದುವೆಗೆ ಇವರು ವಿನ್ಯಾಸ ಮಾಡಿದ ದಿರಿಸು ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಶಬಾನಾ ಅಜ್ಮಿ, ಕರೀನಾ ಕಪೂರ್, ಐಶ್ವರ್ಯಾ ರೈ, ಸುಷ್ಮಿತಾ ಸೇನ್ ಮುಂತಾದ ನಟಿಯರು ಇವರು ವಿನ್ಯಾಸ ಮಾಡಿದ ಉಡುಪು ತೊಟ್ಟು ಬೀಗಿದ್ದಾರೆ. ಎನ್.ಡಿ.ಟಿ.ವಿ ಆಯೋಜಿಸಿದ ಬ್ಯಾಂಡ್ ಬಾಜಾ ಬ್ರೈಡ್ ರಿಯಾಲಿಟಿ ಷೋನ ಭಾಗವಾಗಿದ್ದ ವಿನ್ಯಾಸಕ ಸವ್ಯಸಾಚಿ ಮಾತು ಹಂಚಿಕೊಂಡಿದ್ದಾರೆ.
ನಿಮ್ಮ ಪ್ರಕಾರ ಫ್ಯಾಷನ್ ಎಷ್ಟು ಮುಖ್ಯ?
ಫ್ಯಾಷನ್ ಎನ್ನುವುದು ಅವರವರ ಇಷ್ಟ. ಇಂದು ನಾವು ಏನೇ ತೊಟ್ಟರೂ ಅದು ಫ್ಯಾಷನ್. ನಮ್ಮ ಮೈಕಟ್ಟಿಗೆ ಯಾವ ಉಡುಪು ಸರಿಹೊಂದುತ್ತದೆಯೋ ಅದನ್ನು ಧರಿಸಬೇಕು. ನೋಡುವವರ ಕಣ್ಣಿಗೆ ತುಂಬಾ ಚೆನ್ನಾಗಿ ಕಾಣಿಸಬೇಕು ಎಂಬ ಆಸೆಯಿಂದ ಸ್ಟೈಲ್ ಆಗಿರುವ ಉಡುಪು ತೊಡುತ್ತಾರೆ. ಆದರೆ ಅದನ್ನು ಸರಿಯಾಗಿ ಪ್ರಸ್ತುತಪಡಿಸಲು ಹಿಂದೆ ಬೀಳುತ್ತಾರೆ. ಇದಕ್ಕಿಂತ ನಮಗೆ ಕಂಫರ್ಟ್ ಆಗಿರುವ ಬಟ್ಟೆ ತೊಡಬೇಕು ಎಂಬುದು ನನ್ನ ಅಭಿಪ್ರಾಯ.
ವಿನ್ಯಾಸ ವೃತ್ತಿಯತ್ತ ನಿಮ್ಮ ಚಿತ್ತ ಹರಿದಿದ್ದು ಹೇಗೆ?
ಕಚೇರಿಯಲ್ಲಿ ಕೂತು ಮಾಡುವ ಕೆಲಸ ನನಗೆ ಇಷ್ಟವಿರಲಿಲ್ಲ. ಅನಿಸಿದ್ದನ್ನು ಮಾಡುವ ಸ್ವಾತಂತ್ರ್ಯ ಬೇಕು ಎಂಬ ಹಂಬಲದಿಂದ ಈ ಕ್ಷೇತ್ರ ಆಯ್ಕೆ ಮಾಡಿಕೊಂಡೆ. ನನ್ನ ಅದೃಷ್ಟಕ್ಕೆ ಕೋಲ್ಕತ್ತದಲ್ಲಿ ‘ನಿಫ್ಟ್’ ಶುರುವಾಯಿತು. ಅಲ್ಲಿಗೆ ಹೋಗಿ ತರಬೇತಿ ಪಡೆದುಕೊಂಡೆ. ಇನ್ನು ಉಳಿದಿದ್ದೆಲ್ಲಾ ಇತಿಹಾಸ!
ನೀವು ಮೊದಲು ವಿನ್ಯಾಸ ಮಾಡಿದ ಉಡುಪು ಯಾವುದು?
ಕಪ್ಪು ಬಣ್ಣದ ಉಡುಗೆಯೊಂದನ್ನು ನನ್ನ ಸಹೋದರಿಗಾಗಿ ವಿನ್ಯಾಸ ಮಾಡಿದ್ದೆ. ಮಕಮಲ್ ಬಟ್ಟೆಯಿಂದ ವಿನ್ಯಾಸ ಮಾಡಿದ ದಿರಿಸು ಅದು. ನನ್ನ ಸಹೋದರಿಗೆ ಅದು ತುಂಬಾ ಇಷ್ಟವಾಗಿತ್ತು.
‘ಬ್ಯಾಂಡ್ ಬಾಜಾ ಬ್ರೈಡ್’ ಕಾರ್ಯಕ್ರಮ ಮಾಡಲು ಕಾರಣ?
ನನಗೆ ಸಿಕ್ಕಿದ ಒಳ್ಳೆಯ ಅವಕಾಶವಿದು. ಜನರ ಫ್ಯಾಷನ್ ಅಭಿರುಚಿ ನನಗೆ ಈ ಕಾರ್ಯಕ್ರಮದಿಂದ ಅರಿವಾಯಿತು. ಜತೆಗೆ ಅವರೊಂದಿಗೆ ಮಾತನಾಡಲು ಇದು ನನಗೊಂದು ಉತ್ತಮ ವೇದಿಕೆಯಾಯಿತು.
ಈ ಷೋನಲ್ಲಿ ಮರೆಯಲಾಗದ ನೆನಪು ಯಾವುದು?
ನನ್ನ ಮೊದಲ ಷೋ ಪ್ರೋಮೊ ತುಂಬಾ ಕೆಟ್ಟದ್ದಾಗಿತ್ತು. ನನ್ನ ದನಿ ಸರಿಯಾಗಿ ಹೊಂದುತ್ತಿರಲಿಲ್ಲ. ಅದಕ್ಕಾಗಿ 300 ಟೇಕ್ಸ್ ತೆಗೆದುಕೊಂಡಿದ್ದೆ. ಎಲ್ಲಕ್ಕಿಂತ ಹೆಚ್ಚು ನನ್ನನ್ನು ಕಾಡಿದ್ದು ದಿಶಾ ಥಾನಿ ಎಂಬ ಹುಡುಗಿ. ನಾನು ಈ ಷೋನಲ್ಲಿ ಮರೆಯಲಾಗದ ಹುಡುಗಿ ಅವಳು. ಕಾರ್ ಅಪಘಾತದಲ್ಲಿ ಆ ಹುಡುಗಿ ತನ್ನ ತಂದೆ, ಸಹೋದರರನ್ನು ಕಳೆದುಕೊಂಡಿದ್ದಳು. ಆ ಆಕ್ಸಿಡೆಂಟ್ನಿಂದ ಆಕೆಯ ಕಾಲಿಗೂ ಪೆಟ್ಟಾಗಿತ್ತು. ಇಷ್ಟಾದರೂ ಆಕೆಯ ಮುಖದ ಮೇಲಿನ ನಗು ಮಾಸಿರಲಿಲ್ಲ. ಜೀವನದ ಬಗ್ಗೆ ಅವಳಿಗೊಂದು ಸಕಾರಾತ್ಮಕ ಯೋಚನೆ ಇತ್ತು. ಫ್ಯಾಷನ್ ಕುರಿತು ಅವಳಿಗಿರುವ ನಿಲುವು ನನಗೆ ತುಂಬಾ ಆಶ್ಚರ್ಯವೆನಿಸಿತು. ಆಕೆ ನನ್ನ ಮೇಲೆ ತುಂಬಾ ಪ್ರಭಾವ ಬೀರಿದ್ದಾಳೆ.
ರೂಪದರ್ಶಿ/ನಟಿಯರ ಜತೆ ಕೆಲಸ ಮಾಡುವಾಗಿನ ಅನುಭವ ಹೇಗಿತ್ತು?
ಮಾಡೆಲ್ಗಳ ಜತೆ ಕೆಲಸ ಮಾಡುವುದು ಸುಲಭ. ನಾವು ಮಾರ್ಗದರ್ಶನ ನೀಡಿದಂತೆ ಅವರು ಅದನ್ನು ಅನುಸರಿಸುತ್ತಾರೆ. ನಟ/ನಟಿಯರ ಜತೆ ಕೆಲಸ ಮಾಡುವುದು ಭಿನ್ನ ಅನುಭವ. ಅಲ್ಲಿ ಕತೆಗೆ ತಕ್ಕ ಉಡುಪಿಗೆ ಹೆಚ್ಚು ಪ್ರಾಮುಖ್ಯ. ನಿರ್ಮಾಪಕ, ನಿರ್ದೇಶಕನ ಮೇಲೆ ನಮ್ಮ ವಿನ್ಯಾಸ ಅವಲಂಬಿತವಾಗಿರುತ್ತದೆ.
ಯಾವ ಸೆಲೆಬ್ರಿಟಿ ಜತೆ ಕೆಲಸ ಮಾಡುವುದು ನಿಮಗೆ ಇಷ್ಟ?
ಮಡೋನಾ ಎಂದರೆ ನನಗಿಷ್ಟ.
ತಮ್ಮ ಮದುವೆಯ ದಿರಿಸನ್ನು ಆಯ್ಕೆ ಮಾಡಿಕೊಳ್ಳುವಾಗ ಮದುಮಕ್ಕಳು ಮಾಡುವ ತಪ್ಪು ಯಾವುದು?
ತಮಗೆ ಯಾವುದು ಸರಿಹೊಂದುತ್ತದೆಯೋ ಎಂದು ಆಯ್ಕೆ ಮಾಡುವ ಬದಲು ಇತರರ ಆಯ್ಕೆಗೆ ತಲೆಬಗ್ಗಿಸುತ್ತಾರೆ. ಇನ್ನು ಕೆಲವರು ತಮ್ಮ ದೇಹದ ಆಕಾರಕ್ಕೆ ತಕ್ಕ ಉಡುಪು ಬಿಟ್ಟು ಭಿನ್ನವಾದದ್ದನ್ನು ಆಯ್ಕೆ ಮಾಡುತ್ತಾರೆ. ಇಂಥ ಸಣ್ಣಪುಟ್ಟ ತಪ್ಪುಗಳು ಮದುವೆ ಸಂದರ್ಭದಲ್ಲಿ ಕಿರಿಕಿರಿ ಅನಿಸುತ್ತದೆ. ದಿರಿಸಿನೊಂದಿಗೆ ಆಭರಣದ ಬಗ್ಗೆಯೂ ನಿಗಾ ವಹಿಸಬೇಕು.
ಈಗಿನ ‘ಬ್ರೈಡಲ್ ಫ್ಯಾಷನ್ ಟ್ರೆಂಡ್’ ಯಾವುದು?
ಕೆಂಪು ಮತ್ತು ಬಂಗಾರ ಬಣ್ಣದ ಉಡುಪು ಮದುಮಕ್ಕಳಿಗೆ ತುಂಬಾ ಸುಂದರವಾಗಿ ಕಾಣುತ್ತದೆ.
ವಧುವಿಗೆ ನೀವು ಹೇಳುವ ಕಿವಿಮಾತು?
ಮದುವೆ ಎಂಬುದು ವಿಶೇಷ ಕಾರ್ಯಕ್ರಮ. ಸಾಕಷ್ಟು ಖುಷಿ ಖುಷಿಯಾಗಿರಿ. ನಿಮ್ಮ ಸುತ್ತಮುತ್ತಲಿನವರೊಂದಿಗೆ ಖುಷಿಯಾಗಿರಲು ಪ್ರಯತ್ನಿಸಿ. ಸರಿಯಾದ ದಿರಿಸು ಆಯ್ಕೆ ಮಾಡಿಕೊಳ್ಳಿ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.