ವನದಲ್ಲಿ ಜೀವನ ಧ್ಯಾನ

7

ವನದಲ್ಲಿ ಜೀವನ ಧ್ಯಾನ

Published:
Updated:

ಭಾನುವಾರದ ಮುಸ್ಸಂಜೆಗೆ ಕೆಂಪೇರುವ ದಿನಕರನ ಕಂಡರೆ ಅದೇನೋ ಮುನಿಸು. ಮತ್ತೆ ರಾತ್ರಿ ಕಳೆದರೆ ಅದೇ ಜಂಜಡಗಳ ದೈನಂದಿನ ಬದುಕು. ಆ ರಾತ್ರಿಯ ಚಂದ್ರ ಮುಳುಗದಿರಲಿ ಎಂಬ ದಯನೀಯ ಭಾವ. ಗೋಧೂಳಿ ಹೊತ್ತಿಗೆ ಎಲ್ಲಾ ವರ್ಗದವರ ಸಾಮಾಜಿಕ ತಾಣವಾಗುವ ಕಬ್ಬನ್ ಪಾರ್ಕ್‌ನಲ್ಲಿ ಬಿಚ್ಚಿದ ಭಾವಲಹರಿಯ ತಲ್ಲಣ, ಮನದ ರೂಪಕಗಳ ನರ್ತನ...

ಬದುಕು ಜಟಕಾಬಂಡಿ...ವಿಧಿ ಅದರ ಸಾಹೇಬ ಎಂಬ ಮಾತು ಇಲ್ಲಿ ನಿರರ್ಥಕ. ಅನಿವಾರ್ಯದ ಬದುಕಿನಲ್ಲಿ ಸಾರ್ಥಕ್ಯ ಕಾಣಬೇಕಾದ ಸಂದಿಗ್ಧತೆ. ಕುದುರೆ ಕಡಿವಾಣದಲ್ಲೇ ಜೀವನ ಸವೆಸುವ ಮಂದಿಗೂ ಅದರ ನೆಗೆತದಂತೆ ಬದುಕಿನ ಬಂಡಿಯೂ ಒಮ್ಮೆ ಮೇಲೇರುವುದೆಂಬ ಭರವಸೆ. `10 ರೂಪಾಯಿಗೆ ಒಂದು ರೌಂಡ್~ ಎನ್ನುವ ಅವನ ಮಾತಿನಲ್ಲಿ ಕುದುರೆಯ ಹಸಿವೂ ಅಡಗಿರುತ್ತದಲ್ಲಾ...?

ಸೂರ್ಯನ ಪ್ರಖರತೆ ಕಡಿಮೆಯಾಗುತ್ತಿದ್ದಂತೆ ಕರಗುವ ಶಾಖದ ಮಧ್ಯೆಯೂ ಐಸ್‌ಕ್ರೀಂ ಮಾರುವವನ ಮುಖದಲ್ಲಿ ಬೆವರು. ಇಂದಿನ ವ್ಯಾಪಾರದಲ್ಲಿ ಮನೆಯ ಎರಡು ಹಿರಿಜೀವಗಳೂ ಸೇರಿ ಐವರ ಹೊಟ್ಟೆ ತುಂಬಿಸುವ ಚಿಂತೆ. ಚಳಿರಾಯನ ಅವತಾರ ಹೀಗೆಯೇ ಮುಂದುವರೆದರೆ ಮುಂದಿನ ವರ್ಷವೂ ಹಿರಿಯ ಮಗಳ ಶಾಲೆಯ ಕನಸು ಕಸದ ತೊಟ್ಟಿಗೆ ಬಿದ್ದಂತೆಯೇ. ಇವನಂತೆ ಎಲ್ಲಾ ವಿಷಾದಗಳನ್ನು ಕಣ್ಣಿನಲ್ಲೇ ಹೇಳುವ ಶಕ್ತಿ ಎಷ್ಟು ಜನರಿಗಿದೆ...!

ಅಲ್ಲೇ ಕುಳಿತು ಕಡ್ಲೆಪುರಿ ಮಾರುವ ಯುವತಿಯ ಕೈಯಲ್ಲಿ ಎರಡರ ಹರೆಯದ ಕೂಸು... ಪಕ್ಕದಲ್ಲೇ ಟ್ರಾಲಿ ಮೇಲೆ ಮಲಗಿ ಕೈಯಲ್ಲಿ ಬಾಟಲಿ ಹಿಡಿದ ಎಂಟು ತಿಂಗಳ ಮಗುವನ್ನು ಬಿಟ್ಟ ಕಣ್ಣುಗಳಿಂದ ನೋಡುತ್ತಿದೆ. ಟ್ರಾಲಿಯಲ್ಲಿದ್ದ ಮಗುವಿಗೆ ಹಾಕಿದ ಪ್ಯಾಡ್ ಮೃದುವಾದ ತೊಡೆಯನ್ನೊತ್ತಿ  ನೋವಾಯಿತೋ ಏನೋ? ರಸ್ತೆ ಬದಿಯ ಮಗುವಿನ ಮೊಗದ ಉಲ್ಲಾಸ ಟ್ರಾಲಿಯ ಮಗುವಲ್ಲಿಲ್ಲ. ಸ್ವತಂತ್ರ ಓಡಾಟದ ಮಟ್ಟಿಗಾದರೂ ನೀನು ಅದೃಷ್ಟವಂತೆ ಎನ್ನುತ್ತಿವೆಯೇ ಆ ನೋಟಗಳು?

ಐನೂರರ ಚೇಂಜ್‌ಗೆ ತಳ್ಳುಗಾಡಿಯವನ ಬಳಿ ಚರ್ಚೆಗಿಳಿದ ಸಾಫ್ಟ್‌ವೇರ್ ಕುಟುಂಬಕ್ಕೆ ರಸ್ತೆಬದಿ ತಿನ್ನುವ ಅನಿವಾರ್ಯತೆಯಿಲ್ಲ. ಪಕ್ಕದಲ್ಲಿ ಕುಳಿತ ಆರರ ಹರೆಯದ ಮಗಳ ಹಠ. ಆದರೂ ಕಾರು ಬಿಟ್ಟು ಕೆಳಗಿಳಿಯಲು ಒಲ್ಲದ ಅಹಂ. ಅಲ್ಲೇ ಕುಳಿತು, ಮಗಳಿಗೆ ಪಾನಿಪೂರಿ, ಮಡದಿಗೆ ಮಸಾಲೆ, ತನಗೆ ಸೇವ್‌ಪೂರಿ. ತಿನಿಸಿನಂತೆ ಮೂವರ ಕಲ್ಪನಾ ಲೋಕದಲ್ಲೂ ಅಜಗಜಾಂತರ. ಕುಂಟುತ್ತಾ ಸಾಗಿ ಬಂದ ಭಿಕ್ಷುಕನ ಪುಡಿಗಾಸಿನ ಆಸೆಗೆ ಕಾರಿನ ಗಾಜುಗಳಲ್ಲಿ ಕಂಡ ಪ್ರತಿಬಿಂಬವೇ ಉತ್ತರ ನೀಡಬೇಕೇನೋ.

ತುಸು ಪಕ್ಕದ ಕಲ್ಲು ಹಾಸಿನ ಮೇಲೆ ಕಾಲುಚಾಚಿ ಕುಳಿತ ಪ್ರೇಮಿಗಳು. ಅಕ್ಕಪಕ್ಕದಲ್ಲೇ ಕುಳಿತಿದ್ದರೂ ಇಬ್ಬರ ಮಧ್ಯೆ ಹುಸಿಮುನಿಸು. ಆಕೆ ಉತ್ತರ, ಆತ ದಕ್ಷಿಣ. ಅವರಿಬ್ಬರ ಕೈಯಲ್ಲಿರುವ ಮೊಬೈಲ್‌ಗಳು ಮಾತ್ರ ಎಸ್‌ಎಂಎಸ್ ಭಾಷೆಯಲ್ಲಿ ಪಿಸುಗುಡುತ್ತಿವೆ. ಇನ್ನೊಂದಷ್ಟು ದೂರದ ಮುರುಕು ಬೆಂಚಿನ ಮೇಲೆ ಕುಳಿತ ಪ್ರೇಮಿಯ ಕೈಬೆರಳು ಆಕೆಯ ಮುಂಗುರುಳಲ್ಲಿ. ಅವರಿಬ್ಬರಲ್ಲಿ ಮಾತಿನ ಮಿಳಿತ, ಭಾವಗಳ ಭೋರ್ಗರೆತ!

ಆಟಿಕೆ ವಸ್ತುಗಳನ್ನು ಮುಂದೆ ಹರಡಿ ಕೂತಿರುವ ಅಜ್ಜಿ ವೀಳ್ಯದೆಲೆ ಪೊಟ್ಟಣದೊಂದಿಗೆ ನೆನಪಿನ ಬುತ್ತಿಯನ್ನೂ ಬಿಚ್ಚುತ್ತಾಳೆ. ಇದೇ ಸ್ಥಳದಲ್ಲಿ ಎರಡು ವರ್ಷಗಳ ಹಿಂದೆ ಕುಳಿತಿದ್ದ ಕಾರೊಂದರ `ಅವತಾರ~ಕ್ಕೆ ಯಜಮಾನ ಬಲಿಯಾಗಿದ್ದು. ಫುಟ್‌ಪಾತ್ ಏರಿ ಬಂದಿದ್ದ ಯಮರೂಪಿ ಗಾಡಿ ಬದುಕಿಗೆ ಆಧಾರವಾಗಿದ್ದ ಪತಿಯನ್ನೇ ಕೊಂಡೊಯ್ದಿದ್ದು ನೆನಪಾದಾಗೆಲ್ಲ ಕಣ್ಣಂಚಲಿ ನೀರು ಜಿನುಗುತ್ತದೆ. ತನ್ನ ಬದುಕು ಇಷ್ಟೇ...ಸೂತ್ರಧಾರ ಆಡಿಸಿದಷ್ಟು ದಿನ ಮಾತ್ರ, ಬಳಿಕ ಮುರಿದು ಹೋಗುವ ಆಟಿಕೆಯಂತೆ ಎಂಬ ಅರಿವು ಆಕೆಗೂ ಇದ್ದಂತಿದೆ...!

ಬಣ್ಣದ ಗಿರಗಿಟ್ಲೆ, ಬಲೂನು ಮಾರುವವನ ಮಗನ ಕಣ್ಣಲ್ಲೂ ಅದೇ ಬಣ್ಣದ ಕನಸುಗಳ ಕೇಕೆ. ಅಪ್ಪನೋ ಗಂಭೀರ, ಪೋಲಿ ಹುಡುಗರ ಸೂಜಿಗೆ ತಾಕದಂತೆ ಬಲೂನನ್ನು ರಕ್ಷಿಸುವ ತುಡಿತ, ಬಲೂನಿನೊಂದಿಗೆ ಕಟ್ಟಿಕೊಳ್ಳುವ ಬದುಕಿನ ಆಯುಸ್ಸಾದರೂ ಎಷ್ಟೆಂಬ ಆತಂಕ.

ಕೈಹಿಡಿದು ನಡೆಯುತ್ತಿದ್ದ ಆ ವೃದ್ಧ ದಂಪತಿಯ ಮುಖದಲ್ಲಾದರೂ ಸುಖದ ಸುಕ್ಕುಗಳಿವೆಯೇ? ಇಲ್ಲ...ಅಲ್ಲೂ ಒಂದಷ್ಟು ವಿಷಾದದ ಛಾಯೆ. ವಾರಕ್ಕೊಮ್ಮೆ ಸಿಗುವ ಈ ವಿರಾಮದ್ಲ್ಲಲಿ ಸುತ್ತಲ ಪ್ರಪಂಚ ಕಾಣುವ ಬಯಕೆ. ಉನ್ನತ ಹುದ್ದೆಯ ಮಗ- ಸೊಸೆ ಮನೆಯಲ್ಲುಳಿದು ಮುದಿ ತಂದೆ-ತಾಯಿ ಸ್ವತಂತ್ರವಾಗಿ ಗಾಳಿ ಸೇವಿಸಲು ನಿಗದಿಪಡಿಸಿದ ಸಮಯ ಗಂಟೆಯ ಗಡಿಯನ್ನೂ ದಾಟಿಲ್ಲವಲ್ಲ... ನಮ್ಮದೇ ಮನೆಯಲ್ಲಿ ಗೃಹಬಂಧಿಗಳು ಎಂಬ ಭಾವ ಕಾಡಿ ನಿಟ್ಟುಸಿರು ಬಿಟ್ಟು ಮೌನವಾಗಬೇಕಷ್ಟೆ.

ಪಾರ್ಕ್‌ನಲ್ಲಿರುವ ಪ್ರತಿಯೊಂದು ಮರ, ಗಿಡವೂ ಒಂದು ಬಾರಿ ಚಿಗುರಿ, ಮತ್ತೆ ಮುದುಡುತ್ತದೆ. ಅವುಗಳ ಬದುಕಿನಲ್ಲೂ ಒಂದು ತೆರನಾದ ನಿರಂತರತೆ. ಬೀದಿ ಬದಿಯಲ್ಲೇ ಸ್ವಚ್ಛಂದವಾಗಿ ಮಲಗಿರುವ ಅನಾಮಿಕನಿಗಾಗಲೀ, ಬಲೂನನ್ನು ರಕ್ಷಿಸುವ ವ್ಯಾಪಾರಿಗಾಗಲೀ, ಪತಿ ಕಳೆದುಕೊಂಡ ಅಜ್ಜಿಗಾಗಲೀ ನಿರಾಶೆಯ ಭಾವ ಜೀವ ಹಿಂಡಿದ್ದಿಲ್ಲ. ಹಾಗೆಂದ ಮಾತ್ರಕ್ಕೆ ಬದುಕಿನ ಛಲ, ಭರವಸೆಯ ಆಶಾಕಿರಣವೂ ಕುಸಿದಿಲ್ಲ. ಅವರೆಲ್ಲರ ಭಾವದ ಲಹರಿಗೆ ಪೂರ್ಣ ವಿರಾಮ ಹಾಕುವುದೂ ಅಸಾಧ್ಯ. ಪ್ರತಿ ವರ್ಷದ ವಸಂತ ಕಾಲಕ್ಕೆ ಎಲೆ ಚಿಗುರಲೇ ಬೇಕು. ಅಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry