ಮಂಗಳವಾರ, ಜೂನ್ 22, 2021
22 °C

ವನಮಾತೆ ಸಾಲುಮರದ ತಿಮ್ಮಕ್ಕ

ಪ್ರಜಾವಾಣಿ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ತವರು ಮನೆಯಲ್ಲಿ ಕಡು ಬಡತನ, ಗಂಡನ ಮನೆಯಲ್ಲೂ ಕಿತ್ತು ತಿನ್ನುವ ಬಡತನ, ಹುಲ್ಲು ನೆರಕೆಯ ಗುಡಿಸಲು ವಾಸ. ಕೂಲಿ ಕಾಯಕ ಮಾಡಿಕೊಂಡಿದ್ದ ತಿಮ್ಮಕ್ಕ ಹುಲಿಕಲ್‌ನಿಂದ ಕುದೂರಿನವರೆಗೆ ಸುಮಾರು ನಾಲ್ಕು ಕಿ. ಮೀ. ರಸ್ತೆಯ ಎಡ-ಬಲದಲ್ಲಿ ಆಲದ ಮರಕ್ಕೆ ನೀರು ಹಾಕಿ ಪೋಷಿಸುತ್ತ ಬಂದುದರಿಂದಲೇ ಸಾಲುಮರದ ತಿಮ್ಮಕ್ಕ ಎಂದು ನಾಮಾಂಕಿತರಾದರು.ಒಪ್ಪತ್ತು ಕೂಲಿಗೆ ಹೋಗಿ ಬಂದು ಗಿಡಗಳಿಗೆ ಮುಳ್ಳುಬೇಲಿ ಹಾಕುವುದು, ದೂರದಿಂದ ಗಡಿಗೆಯಲ್ಲಿ ನೀರನ್ನು ಹೊತ್ತು ತಂದು ಗಿಡಗಳಿಗೆ ಹಾಕುವುದು ಅವರ ದಿನಿತ್ಯದ ಕಾಯಕವಾಗಿತ್ತು. 20 ವರ್ಷ ಕಳೆದರೂ ಬಿಕ್ಕಯ್ಯ-ತಿಮ್ಮಕ್ಕನವರಿಗೆ ಮಕ್ಕಳಾಗಿರಲಿಲ್ಲ. ಆದರೇನಂತೆ ಗಿಡಗಳನ್ನೇ ತನ್ನ ಒಡಹುಟ್ಟಿದ ಮಕ್ಕಳಂತೆ ಆರೈಕೆ ಮಾಡುತ್ತ ಬಂದಳು.ಇವರ ಕಾಯಕವನ್ನು ಮೊದಲು ಗುರುತಿಸಿದ ಶಾಮನೂರು ಶಿವಶಂಕರಪ್ಪನವರು ರೂ. 5,000 ನೀಡಿದರು. ನಂತರ ಮಾಧ್ಯಮಗಳಲ್ಲಿ ಬಂದ ವರದಿಯಿಂದಾಗಿ ತಿಮ್ಮಕ್ಕ ಜಗತ್ಪ್ರಸಿದ್ಧರಾದರು. ರಾಷ್ಟ್ರೀಯ ನಾಗರಿಕ, ರಾಷ್ಟ್ರೀಯ ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ, ನಾಡೋಜ, ಕನ್ನಡ ರಾಜ್ಯೋತ್ಸವ, ಕರ್ನಾಟಕ ರಾಜ್ಯ ಪರಿಸರ, ಸಂಜೀವಿನಿ, ಪಂಪಾಪತಿ ಪರಿಸರ, ಶಿವರಾಮ ಕಾರಂತ ಹುಟ್ಟೂರ, ಸಾಗರ, ಸುವರ್ಣ ಶ್ರೀ, ವನಸಿರಿ, ವನದೇವಿ, ವನರಾಣಿ, ವೃಕ್ಷ ಮಾತೆ, ಮರಗಳ ಮಾತೆ ಮುಂತಾದ ಪ್ರಶಸ್ತಿಗಳು ಸೇರಿದಂತೆ ನೂರಾರು ಪ್ರಶಸ್ತಿಗಳು, ಸಾವಿರಾರು ಸನ್ಮಾನಗಳು ಅರಸಿ ಬಂದವು. ಆದರೇನಂತೆ ತಿಮ್ಮಕ್ಕ ಅನಾರೋಗ್ಯಕ್ಕೀಡಾದಾಗ ಸರ್ಕಾರ ಸೇರಿದಂತೆ ಯಾರೊಬ್ಬರೂ ಇವರ ನೆರವಿಗೆ ಬರಲಿಲ್ಲ.ತಮ್ಮ ಊರಿಗೆ ಹೆರಿಗೆ ಆಸ್ಪತ್ರೆ ಬೇಕು ಎಂದು ಈ ಇಳಿವಯಸ್ಸಿನಲ್ಲೂ ಹಿಂದೊಮ್ಮೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದರು.ಇವರ ನಿಸ್ವಾರ್ಥ ಕೆಲಸಕ್ಕೆ ಮಾರುಹೋಗಿರುವ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಳ್ಳೂರು ಗ್ರಾಮದ ಉಮೇಶ ಅವರು ತಿಮ್ಮಕ್ಕನ ಸಾಕು ಮಗನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ನಿಸ್ವಾರ್ಥ, ನಿಷ್ಪೃಹ ಸೇವೆಯ ಸಾಲುಮರದ ತಿಮ್ಮಕ್ಕ ಬುಧವಾರ ಗುಲ್ಬರ್ಗ ನಗರಕ್ಕೆ ಆಗಮಿಸಲಿದ್ದಾರೆ. ಇಲ್ಲಿನ ಸರ್ವಜ್ಞ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯ ನಗರದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಮಾ. 7ರ ಬೆಳಿಗ್ಗೆ 10.30ಕ್ಕೆ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.