ವನರಕ್ಷಣೆಗೆ ಸ್ತ್ರೀಶಕ್ತಿ

7

ವನರಕ್ಷಣೆಗೆ ಸ್ತ್ರೀಶಕ್ತಿ

Published:
Updated:

‘ಏ ಹುಡುಗಿ,  ಡಿಗ್ರಿ ಮಾಡಿದ್ದೀನಿ ಅಂತೀಯಾ, ಯಾವುದಾದರೂ ಆಫೀಸ್ ಡ್ಯೂಟಿ ಮಾಡು. ಕುದುರೆಮುಖ ವೈಲ್ಡ್‌ಲೈಫ್ ಹುಡುಗಿಯರಿಗೆ ಅಲ್ಲವೇ ಅಲ್ಲ. ಬೀಟ್‌ಗೆ ಹಾಕಿದರಂತೂ ನಿನ್ನ ಕಥೆ ಮುಗಿದಂತೆಯೇ!’‘ಹೇಗೂ ಡಿ.ಎಡ್‌ ಮಾಡಿದಿಯಾ, ಸರ್ಕಾರಿ ನೌಕರಿ ಸಿಗದಿದ್ದರೂ, ಪ್ರೈವೇಟ್ ಸ್ಕೂಲ್‌ನಲ್ಲಂತೂ ಕೆಲಸ ಸಿಕ್ಕೇ ಸಿಗುತ್ತೆ. ಸುಮ್ನೆ ಮಕ್ಕಳಿಗೆ ಪಾಠ ಮಾಡಿಕೊಳ್ತಾ ಇರೋದು ಬಿಟ್ಟು ನಿನಗ್ಯಾಕಮ್ಮೋ ಆ ಅರಣ್ಯದ ಸಹವಾಸ?’‘ಏನು ! ಫಾರೆಸ್ಟ್ ಗಾರ್ಡಾ?! ಆ ಖಾಕಿ ಡ್ರೆಸ್ ಹಾಕ್ಕೊಂಡು ಕಾಡು ಸುತ್ತೋ ಕೆಲಸ ಮಾಡೋಕೆ ನಿನಗೇನೇ ಬಂತು... ನಾ ಮನೆಯಲ್ಲಿದ್ರೂ ಪರವಾಗಿಲ್ಲ. ನನಗೆ ಅಂತಹ ಕೆಲಸ ಆಗಲ್ಲಪ್ಪಾ...’ಇಂತಹ ಹೀಯಾಳಿಕೆಗಳನ್ನು, ಮೂದಲಿಕೆಗಳನ್ನು, ಆತ್ಮವಿಶ್ವಾಸವನ್ನೇ ಕುಗ್ಗಿಸುವಂತಹ ಅದೆಷ್ಟೋ ಮಾತುಗಳನ್ನು ಕೇಳಿ ಬಂದಿದ್ದಾರೆ ಈ ಯುವತಿಯರು. ಅವರೆಲ್ಲರೂ ವನ ರಕ್ಷಕ (ಫಾರೆಸ್ಟ್ ಗಾರ್ಡ್) ಹುದ್ದೆಗೆ ಆಯ್ಕೆಯಾಗಿರುವವರು.ಸದ್ಯ ಧಾರವಾಡದ ಗುಂಗರಗಟ್ಟಿಯಲ್ಲಿರುವ ಅರಣ್ಯ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಇವರಿಗೆ ಅರಣ್ಯ ರಕ್ಷಣೆಯಂತಹ ದೊಡ್ಡ ಹೊಣೆಯನ್ನು ಯಶಸ್ವಿಯಾಗಿ ನಿಭಾಯಿಸುವ ತವಕ. ಅರಣ್ಯ ರಕ್ಷಕ ಹುದ್ದೆಗೆ ದ್ವಿತೀಯ ಪಿಯು ವಿದ್ಯಾರ್ಹತೆ ಸಾಕಾಗಿದ್ದರೂ, ಅವರಲ್ಲಿ ಬಹುತೇಕರು ಪದವಿ, ಡಿ.ಎಡ್, ಬಿ.ಎಡ್ ಶಿಕ್ಷಣ ಪಡೆದಿದ್ದಾರೆ. ಬಡತನವೋ ಉದ್ಯೋಗದ ಅನಿವಾರ್ಯತೆಯೋ, ಸರ್ಕಾರಿ ನೌಕರಿ ಎಂಬ ಕಾರಣವೋ ಅಥವಾ ಅರಣ್ಯ ಇಲಾಖೆ ಸೇರಬೇಕೆಂಬ ಬಯಕೆಯೋ ಅವರನ್ನು ಇಲ್ಲಿಗೆ ತಂದು ನಿಲ್ಲಿಸಿದೆ.‘ನಿನಗೆಂತಕ್ಕೆ ಯೋಚನೆ. ನಾವು ವ್ಯವಸಾಯ ಮಾಡೇ ಬದುಕಿದೋರು. ನಾವು ಇಲ್ಲಿ ಮಾಡೋ ಕೆಲಸಾನೇ, ನೀನು ಅಲ್ಲಿ ಮಾಡು. ಅದು ಕೂಡ ಭೂಮ್ತಾಯಿ ಸೇವೇನೇ...’ ಹೀಗೆ ಹುರಿದುಂಬಿಸಿ ಕೆಲಸಕ್ಕೆ ಕಳುಹಿಸಿಕೊಟ್ಟವರು ಹೀರಗವ್ವ ಕುಸನೂರ ಎಂಬ ಯುವತಿಯ ತಾಯಿ. ಹೀರಗವ್ವ ತಾಯಿಗೆ ಒಬ್ಬಳೇ ಮಗಳು.

ಅರಣ್ಯದತ್ತ ಯುವಪಡೆ

ಗುಂಗರಗಟ್ಟಿ ಅರಣ್ಯ ತರಬೇತಿ ಸಂಸ್ಥೆಯಲ್ಲಿ ಕಳೆದ ಸಾಲಿನಲ್ಲಿ ಅರಣ್ಯ ರಕ್ಷಕ ಹುದ್ದೆಗೆ ಆಯ್ಕೆಯಾಗಿ ತರಬೇತಿ ಪಡೆದ ಯುವತಿಯರ ಸಂಖ್ಯೆ ಕೇವಲ 12. ಈ ಬಾರಿ ಆ ಸಂಖ್ಯೆ 30ಕ್ಕೆ ಬಂದು ನಿಂತಿದೆ! 80 ಯುವಕರಿಗೆ ಸರಿಸಮನಾಗಿ ಈ 30 ಯುವತಿಯರು ಕಠಿಣ ತರಬೇತಿಯಲ್ಲಿ ಪಾಲ್ಗೊಳ್ಳುವ ಮೂಲಕ ಕಾಡು ಕಾಯಲು ಸನ್ನದ್ಧರಾಗುತ್ತಿದ್ದಾರೆ.ಮಹಿಳಾ ವರ್ಗಕ್ಕೆ ಶೇ 33 ಮೀಸಲಾತಿ ಕಲ್ಪಿಸಿರುವುದು, ಪೊಲೀಸ್ ಪೇದೆ ಹುದ್ದೆಗೆ ಹೋಲಿಸಿದರೆ, ಅರಣ್ಯ ರಕ್ಷಕ ಹುದ್ದೆಗೆ ನಿಗದಿ ಪಡಿಸಿರುವ ದೈಹಿಕ ಸಾಮರ್ಥ್ಯ, ಓಟದ ಪರೀಕ್ಷೆಯಲ್ಲಿ ಕಡಿಮೆ ಸಾಮರ್ಥ್ಯ ನಿಗದಿಪಡಿಸಿರುವುದು ಮತ್ತು ಶೀಘ್ರ ಬಡ್ತಿ ಸಿಗುವ ಕಾರಣಕ್ಕಾಗಿ ಯುವತಿಯರು ಅರಣ್ಯ ಇಲಾಖೆಯತ್ತ ಆಕರ್ಷಿತರಾಗುತ್ತಿದ್ದಾರೆ.

ಗುರಿ’ ನಿಖರವಾಗುತ್ತಿದೆ!

ಫಾರೆಸ್ಟ್ ಗಾರ್ಡ್ ನೇಮಕಾತಿ ಆದೇಶ ಕೈಯಲ್ಲಿ ಹಿಡಿದುಕೊಂಡು ಖುಷಿ ಪಟ್ಟವರು ಅನೇಕರಾದರೆ, ನಾನು ಪದವಿ ಮಾಡಿ, ಪಿಯುಸಿ ಹುದ್ದೆಗೆ ಸಮವಾಗಿರುವ ಕೆಲಸ ಮಾಡಬೇಕಾ ಎಂದು ದುಃಖ ಪಟ್ಟವರೂ ಇದ್ದಾರೆ. ‘ಸರ್ಕಾರಿ ಕೆಲಸ ಸಿಗುವುದೇ ಪುಣ್ಯ. ಇನ್ನೊಂದು ಕೆಲಸ ಸಿಗೋವರೆಗೂ ಇದೇ ಕೆಲಸ ಮಾಡಿಕೊಂಡಿರು’ ಎಂಬ ‘ಅಮೂಲ್ಯ ಸಲಹೆ’ ಕೇಳಿ ಸಮಾಧಾನಕರ ಬಹುಮಾನದಂತೆ ಈ ಕೆಲಸವನ್ನು ಸ್ವೀಕರಿಸಿದವರೂ ಇದ್ದಾರೆ!. ಇಂತಹ ಅನೇಕ ಪೂರ್ವಗ್ರಹಗಳನ್ನು ತಲೆಯಲ್ಲಿ ತುಂಬಿಕೊಂಡು ಬಂದಿದ್ದ ಅವರಿಗೆ ಈಗೀಗ ಅರಣ್ಯದ ಅಗಾಧತೆ ಅರಿವಿಗೆ ಬರುತ್ತಿದೆ. ಇದು ಕೇವಲ ‘ಕೆಲಸ’ವಲ್ಲ, ನಮ್ಮ ‘ಕರ್ತವ್ಯ’ ಎಂದೆನಿಸುತ್ತಿದೆ.ಉತ್ತಮ ಆರೋಗ್ಯಕ್ಕಾಗಿ ದೈಹಿಕ ಕಸರತ್ತು, ಆತ್ಮ ರಕ್ಷಣೆಗಾಗಿ ಕರಾಟೆ, ಏಕಾಗ್ರತೆ ಕಾಪಾಡಿಕೊಳ್ಳಲು ಯೋಗ, ಕಾಡಿನ ಮಹತ್ವ, ಸಸ್ಯ ಸಂಪತ್ತು ಮುಂತಾದವುಗಳ ಬಗ್ಗೆ ತಿಳಿಸುವ ‘ಅರಣ್ಯ ಅಥವಾ ಪರಿಸರ ಶಾಸ್ತ್ರ’ ಅಭ್ಯಾಸ, ತಮ್ಮ ಜವಾಬ್ದಾರಿ, ಕಾರ್ಯವಿಧಾನದ ಬಗ್ಗೆ, ಕಾನೂನುಗಳ ಬಗ್ಗೆ ತಿಳಿಸಿಕೊಡುವ ‘ಕಾನೂನು ಶಾಸ್ತ್ರ’ ಅಭ್ಯಾಸ... ಹೀಗೆ ಗುಣಮಟ್ಟದ ತರಬೇತಿ ಸಾಗುತ್ತಿದೆ. ಫೈರಿಂಗ್ ತರಬೇತಿಯಲ್ಲಿ ಉತ್ತಮ ಸಾಧನೆ ಮಾಡಿರುವ ಈ ಯುವತಿಯರು, ಯುವಕರಿಗೆ ಸರಿ ಸಮನಾದ ‘ಗುರಿ’ಕಾರರಾಗಿದ್ದಾರೆ.‘ಲೇಡಿ ಪೊಲೀಸ್ ಕಾನ್‌ಸ್ಟೆಬಲ್‌ಗಿಂತ ನಮಗೆ ಹೆಚ್ಚು ಅಧಿಕಾರ ಇರುತ್ತದೆ. ನಾವೂ ಫೈರ್ ಮಾಡಬಹುದು. ಮೇಲಾಧಿಕಾರಿಗಳ ಆದೇಶ ಬೇಕೇ ಬೇಕು ಎಂಬ ನಿಯಮ ನಮಗಿಲ್ಲ. ಅಲ್ಲದೆ ನಾವೂ ಕೂಡ ಎಫ್‌ಐಆರ್ ಹಾಕಬಹುದು’ ಎಂದು ಹೆಮ್ಮೆಯಿಂದ ಹೇಳುತ್ತಾರೆ ವನರಕ್ಷಕಿ ಸಂಗೀತಾ ವೈ.ಕೆ.‘ನಾನು ಬಿಎಸ್‌ಸಿ ಮಾಡಿದ್ದೇನೆ. ಪದವಿ ಪಡೆದಿದ್ದರೂ ಕಡಿಮೆ ವಿದ್ಯಾರ್ಹತೆಯ ಕೆಲಸ ಮಾಡುತ್ತಿದ್ದೇನೆ ಎಂಬ ಬೇಸರ ನನಗಿಲ್ಲ. ಖಾಕಿ ಡ್ರೆಸ್ ಹಾಕುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಖಾಕಿ ಡ್ರೆಸ್ಸು, ಅದರ ಮೇಲಿನ ಸ್ಟಾರ್‌ಗಳು ನಮ್ಮಲ್ಲಿ ವಿಶ್ವಾಸ ಮೂಡಿಸುತ್ತವೆ. ಇದೇ ಹುದ್ದೆಯಲ್ಲಿ ಇದ್ದುಕೊಂಡೇ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡು, ಐಎಫ್‌ಎಸ್ ಆಗ್ತೀನಿ’ ಎಂದು ಬೀಗುತ್ತಾರೆ ಪ್ರಿಯಾಂಕ.

‘ಅರಣ್ಯ ಇಲಾಖೆ ಬಗ್ಗೆ ನನಗೆ ಏನಂದ್ರೆ ಏನೂ ಗೊತ್ತಿರಲಿಲ್ಲ. ತುಂಬಾ ಕಷ್ಟಪಡಬೇಕು ಅಂತೆಲ್ಲಾ ಹೆದರಿಸಿದ್ದರು. ಆದರೆ, ಇಲ್ಲಿ ಸಿಕ್ಕ ತರಬೇತಿಯಿಂದ ನಮಗೆ ನಮ್ಮ ಕೆಲಸ ನಿಭಾಯಿಸುವ ಸಾಮರ್ಥ್ಯ ಮತ್ತು ಧೈರ್ಯ ಬಂದಿದೆ’ ಎಂಬ ವಿಶ್ವಾಸ ಜಿ.ಕೆ. ಅರ್ಪಿತಾ ಅವರದ್ದು.ಈ ಯುವತಿಯರಿಗೆ ಸ್ಫೂರ್ತಿಯಾಗಿದ್ದವರು ಸೀಮಾ ಗರ್ಗ್. ಐಎಫ್‌ಎಸ್ ಅಧಿಕಾರಿಯಾಗಿರುವ ಸೀಮಾ ಗರ್ಗ್ ಗುಂಗರಗಟ್ಟಿ ಅರಣ್ಯ ತರಬೇತಿ ಸಂಸ್ಥೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಈಗ ವರ್ಗಾವಣೆಯಾಗಿದ್ದಾರೆ). ಅವರಂತೆಯೇ ಐಎಫ್‌ಎಸ್ ಅಧಿಕಾರಿಯಾಗುವ ಕನಸು ಕಟ್ಟಿಕೊಂಡು ಅದರತ್ತ ‘ಗುರಿ’ ಹೊಂದಿದ್ದಾರೆ ಆ ಯುವತಿಯರು.ಮಾಹಿತಿಯೇ ಇರುವುದಿಲ್ಲ!

‘ಮಾಧ್ಯಮದವರಿಗೆ ಎಂಜಿನಿಯರಿಂಗ್, ಮೆಡಿಕಲ್ ವಿದ್ಯಾರ್ಥಿಗಳು ಅಷ್ಟೇ ಕಾಣೋದು. ಅದು ಬಿಟ್ಟರೆ ಐಎಎಸ್, ಕೆಎಎಸ್ ಬಗ್ಗೆ ಮಾತ್ರ ಗಮನ. ಎಸ್ಸೆಸ್ಸೆಲ್ಸಿ, ಪಿಯು ವಿದ್ಯಾರ್ಹತೆ ಬೇಡುವ ಅದೆಷ್ಟೋ ಹುದ್ದೆಗಳ ಬಗ್ಗೆ ಪ್ರಚಾರ ಮಾಡುವುದೇ ಇಲ್ಲ. ಎಷ್ಟೋ ಬಾರಿ ಖಾಲಿ ಇರುವ ಹುದ್ದೆಗಳಷ್ಟೂ ಅರ್ಜಿ ಬಂದಿರುವುದಿಲ್ಲ. ಕೆಲಸಕ್ಕಾಗಿ ಅಲೆದಾಡುವ ಎಷ್ಟೋ ವಿದ್ಯಾರ್ಥಿಗಳಿದ್ದರೂ, ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಅವರಿಗೆ ಮಾಹಿತಿ ಇರುವುದಿಲ್ಲ. ಮಾಧ್ಯಮದವರಾದ ನೀವೂ ಇದನ್ನು ಯೋಚಿಸಬೇಕು’ ಎಂದು ಸ್ವಲ್ಪ ಗಡುಸಾಗಿಯೇ ಮಾತನಾಡಿದರು ರೇಖಾ ಈ.ಜಿ.ಮಾನವ -ಪ್ರಾಣಿ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರಭಾವಿಗಳಿಂದ ಅರಣ್ಯ ಒತ್ತುವರಿ ಎಗ್ಗಿಲ್ಲದೆ ಸಾಗಿದೆ. ಹೊಸ ತಂತ್ರಜ್ಞಾನಗಳನ್ನು ಬಳಸುವುದನ್ನು ಕಲಿತು, ಅವುಗಳ ಮೂಲಕ ಅರಣ್ಯ ರಕ್ಷಿಸುವ ದೊಡ್ಡ ಸವಾಲು ಈ ಯುವ ಪಡೆಯ ಮುಂದಿದೆ. ಒಣಗಿ ಹೋಗಿರುವ ಅರಣ್ಯ ಭೂಮಿಯಲ್ಲಿ ಹಸಿರು ಚಿಗುರಿಸುವ, ಮರ ಕಡಿಯುವುದನ್ನು, ಅವುಗಳ ಕಳ್ಳ ಸಾಗಾಟವನ್ನು ತಡೆಯುವ, ಅರಣ್ಯ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಹೊಸ ಹುರುಪಿನಿಂದ ಈ ಸಿಂಹಿಣಿಯರು ಸಜ್ಜಾಗುತ್ತಿದ್ದಾರೆ.ಧೈರ್ಯ ಇರಬೇಕು

ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಅರಣ್ಯ ಇಲಾಖೆಗೆ ಬರುತ್ತಿರುವುದು ಖುಷಿಯ ಸಂಗತಿ. ಆದರೆ, ಏಕಾಂಗಿಯಾಗಿ ಅರಣ್ಯದಲ್ಲಿ ಕೆಲಸ ಮಾಡುವ ಸಂದರ್ಭ ಬರುತ್ತದೆ. ಆಗ ಕುಟುಂಬವನ್ನು ಬಿಟ್ಟಿರಬೇಕಾಗುತ್ತದೆ. ದೈಹಿಕವಾಗಿ ಸದೃಢರಾಗಿದ್ದು, ಧೈರ್ಯವಂತರಾಗಿದ್ದರೆ ಫಾರೆಸ್ಟ್ ಗಾರ್ಡ್ ಕೆಲಸ ನಿಭಾಯಿಸಬಹುದು.

ಸೀಮಾ ಗರ್ಗ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ,

ಅರಣ್ಯ ತರಬೇತಿ ಸಂಸ್ಥೆ, ಗುಂಗರಗಟ್ಟಿ, ಧಾರವಾಡ

ಕರ್ನಾಟಕದ ಹೆಮ್ಮೆ

ಧಾರವಾಡದ ಗುಂಗರಗಟ್ಟಿಯಲ್ಲಿರುವ ಅರಣ್ಯ ಇಲಾಖೆ ತರಬೇತಿ ಸಂಸ್ಥೆ, ಅಕಾಡೆಮಿಯಾಗಿ ಬಡ್ತಿ ಹೊಂದಿದ್ದು, ವಲಯ ಅರಣ್ಯಾಧಿಕಾರಿ (ರೇಂಜ್ ಫಾರೆಸ್ಟ್ ಆಫೀಸರ್ಸ್‌)ಗಳಿಗೂ ತರಬೇತಿ ನೀಡುವ ಮಟ್ಟಕ್ಕೇರಿದೆ. ದಕ್ಷಿಣ ಭಾರತದಲ್ಲಿ ಕೊಯಮತ್ತೂರು ಮತ್ತು ಹೈದರಾಬಾದ್ ಬಿಟ್ಟರೆ ಇಂಥ ಅರಣ್ಯ ತರಬೇತಿ ಅಕಾಡೆಮಿ ಇರುವುದು ಧಾರವಾಡದಲ್ಲಿ ಮಾತ್ರ. ಅಂದರೆ, ರಾಜ್ಯದ ಮುಖ್ಯ ಅರಣ್ಯ ತರಬೇತಿ ಅಕಾಡೆಮಿ ಇದು. ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶ (ದಕ್ಷಿಣ ಭಾರತ ರಾಜ್ಯಗಳ)ದಲ್ಲಿ ಹೊಸದಾಗಿ ನೇಮಕವಾಗುವ ಎಲ್ಲ ವಲಯ ಅರಣ್ಯಾಧಿಕಾರಿಗಳು ಇಲ್ಲಿಯೇ ತರಬೇತಿ ಪಡೆಯಲಿದ್ದಾರೆ. ಡೆಹ್ರಾಡೂನ್‌ನಲ್ಲಿರುವ ಅರಣ್ಯ ಶಿಕ್ಷಣ ನಿರ್ದೇಶನಾಲಯ ನಿಗದಿ ಪಡಿಸಿರುವ ಪಠ್ಯಕ್ರಮದ ಅನುಸಾರವೇ ಇಲ್ಲಿ ತರಬೇತಿ ನೀಡಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry