ಬುಧವಾರ, ಏಪ್ರಿಲ್ 14, 2021
31 °C

ವನರಾಜನ ಸತ್ಯ-ಮಿಥ್ಯೆ

ಎನ್. ವಾಸುದೇವ್ Updated:

ಅಕ್ಷರ ಗಾತ್ರ : | |

ವನರಾಜನ ಸತ್ಯ-ಮಿಥ್ಯೆ

`ಸಿಂಹ~ ಈ ಹೆಸರೇ ಪ್ರಾಚೀನ ಕಾಲದಿಂದಲೂ ಭಾರೀ ಶಕ್ತಿಗೆ, ಅಪಾರ ಧೈರ್ಯಕ್ಕೆ, ಅಸೀಮ ಶೌರ್ಯಕ್ಕೆ ಸಮಾನಾರ್ಥಕ. ಅನುಪಮ ಬೇಟೆ ಸಾಮರ್ಥ್ಯದ ಪ್ರತಿಮಾ ಸ್ವರೂಪ ಕೂಡ. ಹಾಗಾಗಿಯೇ ಸಕಲ ಪ್ರಾಣಿ ಕಥಾನಕಗಳಲ್ಲೂ ಸಿಂಹವೇ ನಾಯಕ.ಗಂಡು ಸಿಂಹಗಳದು ರುದ್ರ ಸುಂದರ ರೂಪ: `ದೊಡ್ಡ ಶರೀರ, ಹೊಳೆವ ಕಣ್ಣುಗಳು, ಕತ್ತನ್ನು ಸುತ್ತುವರಿದ ಕೇಶರಾಶಿ (ಚಿತ್ರ - 5, 6, 9)~ ತೀವ್ರ ಶಬ್ದದ ಘರ್ಜನಾ ಶಕ್ತಿಯೂ ಸೇರಿ (ಚಿತ್ರ - 8) ಒಟ್ಟಾರೆ ಅದಕ್ಕೇ ಸಿಂಹಕ್ಕೆ `ವನರಾಜ~ನ ಪಟ್ಟ!ವಿಪರ್ಯಾಸ ಏನೆಂದರೆ, ಬಾಹ್ಯ ರೂಪವೊಂದನ್ನು ಬಿಟ್ಟರೆ ಸಿಂಹದ ಬಗೆಗಿನ ಈ ಕಲ್ಪನೆಗಳೆಲ್ಲ ಸತ್ಯದೂರ. ಅವೆಲ್ಲ ಕೇವಲ ಜನಜನಿತ, ಕಪೋಲ ಕಲ್ಪಿತ ಮಿಥ್ಯಭಾವಗಳು ಅಷ್ಟೆ! ಅದೆಲ್ಲ ಸ್ಪಷ್ಟವಾಗಲು ಸಿಂಹಗಳ ಗುಂಪೊಂದರ ದಿನಚರಿಯ ಈ ಸತ್ಯ ನಿದರ್ಶನವನ್ನು ಗಮನಿಸಿ:ಸ್ಥಳ: ಆಫ್ರಿಕದ ಹುಲ್ಲುಬಯಲಿನ ಒಂದು ಪ್ರದೇಶ. ಸಮಯ: ಮಧ್ಯಾಹ್ನ ಸುಮಾರು ಮೂರು ಗಂಟೆ. ಆ ವಿಸ್ತಾರ ಹುಲ್ಲು ಬಯಲಲ್ಲಿ ಸಿಂಹಗಳ ಕುಟುಂಬವೊಂದು ಮೈಚೆಲ್ಲಿ ಮಲಗಿದೆ. ಒಂದು ಯಜಮಾನ ಐದು ಹೆಣ್ಣು ಸಿಂಹಗಳು ಮತ್ತು ಏಳು ಮರಿಗಳಿರುವ ಆ ಇಡೀ ತಂಡ ತುಂಬ ಹಸಿದಿದೆ. ಆದರೂ ಆ ತಂಡದ ಯಾವ ಸಿಂಹಕ್ಕೂ ಮೇಲೆದ್ದು ಓಡಿ ಬೇಟೆಯಾಡಿ ಆಹಾರಗಳಿಸುವ ಆಸಕ್ತಿ ಇಲ್ಲ.`ಹಸಿವನ್ನೇ ಜಯಿಸುವಷ್ಟು ಸೋಮಾರಿತನ~ ಅವುಗಳನ್ನು ಆವರಿಸಿದೆ. ಸಿಂಹಗಳ ಸ್ವಭಾವವೇ ಹಾಗೆ.ಹಾಗೆಂದು ಆ ಎಲ್ಲ ಸಿಂಹಗಳೂ `ಉಪವಾಸ ವ್ರತ~ವನ್ನೇನೂ ಕೈಗೊಂಡಿಲ್ಲ. ಅದಕ್ಕೇ ಅವೆಲ್ಲ ಆಗಾಗ ತಲೆ ಎತ್ತಿ ಏನನ್ನೋ ನಿರೀಕ್ಷಿಸುವಂತೆ ಆಕಾಶವನ್ನು ನೋಡುತ್ತಿವೆ.ಸ್ವಲ್ಪ ಹೊತ್ತಿನಲ್ಲೇ ಒಂದು ರಣಹದ್ದು ಆಗಸದಲ್ಲಿ ನಿಧಾನವಾಗಿ ಹಾರುತ್ತ ಅಲ್ಲಲ್ಲೇ ಸುತ್ತುತ್ತ ಆಗಾಗ ಒಮ್ಮಮ್ಮೆ ಧುಮುಕಿ ಮತ್ತೆ ಮೇಲೇರಿ ಹಾರುತ್ತಿದೆ. ರಣಹದ್ದಿನ ಈ ವರ್ತನೆ ಅದು ನೆಲದ ಮೇಲೆ ಆಹಾರವನ್ನು ಕಂಡಿರುವ ಸಂಕೇತ; ಆ ಸುದ್ದಿಯನ್ನು ದೂರ ದೂರ ಹಾರಾಡುತ್ತಿರುವ ಅದರ ಸಂಗಾತಿಗಳಿಗೆ ತಿಳಿಸಲು ಬಳಸುವ ಕ್ರಮ ಎಂಬುದು ಸಿಂಹಗಳಿಗೆ ಗೊತ್ತು. ಕೂಡಲೇ ಎಲ್ಲ ಸಿಂಹಗಳೂ ಎದ್ದು ಅತ್ತಲೇ ಹೊರಟಿವೆ.ಸಿಂಹಗಳ ನಿರೀಕ್ಷೆ ಚೂರೂ ತಪ್ಪಾಗದೆ ಅವು ಊಹಿಸಿದ ಸ್ಥಳದಲ್ಲೇ `ಊಟ~ ಸಿದ್ಧವಾಗಿದೆ. ಚಿರತೆಯೊಂದು ಬೇಟೆಯಾಡಿದ್ದ ಜೀಬ್ರಾವೊಂದನ್ನು ಮೂರು ಕಿರುಬಗಳು ಕಸಿದು ಬೇಗ ಬೇಗ ತಿನ್ನುತ್ತಿವೆ. ಆ ವೇಳೆಗೆ ಮೇಲೆ ಹದ್ದುಗಳೂ ಗುಂಪಾಗುತ್ತಿವೆ. ಸತ್ತ ಜೀಬ್ರಾವನ್ನು ಕಂಡೊಡನೆ ಸಿಂಹಗಳು ಘರ್ಜಿಸುತ್ತ ಮುಗಿಬಿದ್ದು ಕಿರುಬಗಳನ್ನು ಓಡಿಸಿವೆ.ಸಿಂಹ ಕುಟುಂಬದ ಯಜಮಾನ ತಾನು ಮೊದಲು ಭೋಜನ ಆರಂಭಿಸಿದೆ. ಯಾರನ್ನೂ - ಮರಿಗಳನ್ನೂ ಕೂಡ - ಹತ್ತಿರ ಬಿಡದೆ ಹೊಟ್ಟೆ ತುಂಬ ತಿಂದು ಅಲ್ಲೇ ಅನತಿ ದೂರದಲ್ಲೇ ಮೈಚಾಚಿ ಮಲಗಿದೆ. ಆ ನಂತರವಷ್ಟೇ ಉಳಿದೆಲ್ಲ ಸಿಂಹಗಳೂ ಒಟ್ಟಾಗಿ ಊಟ ಆರಂಭಿಸಿವೆ. ಸಿಕ್ಕಷ್ಟರಲ್ಲೇ ಸಮಾಧಾನಪಟ್ಟು ಅಲ್ಲಲ್ಲೇ ಮಲಗಿವೆ. ಮತ್ತೆ ಹಸಿವಾಗುವವರೆಗೂ ಆಗಸವನ್ನು ಗಮನಿಸುವ ಆಸಕ್ತಿಯನ್ನೂ ತೋರದೆ ಉರುಳಿವೆ. ಎಂಥ ದಿನಚರಿ!ಸಿಂಹಗಳನ್ನು ಅವುಗಳ ನೈಸರ್ಗಿಕ ನೆಲೆಗಳಲ್ಲೇ ವಿವರವಾಗಿ ಅಭ್ಯಸಿಸಿರುವ, ಚಿತ್ರೀಕರಿಸಿರುವ ತಜ್ಞರು ಪತ್ತೆ ಮಾಡಿರುವ ಅಂಶಗಳು ಸಿಂಹಗಳ ಬಗೆಗಿನ ಎಲ್ಲ ಕಲ್ಪನೆಗಳನ್ನೂ ಬುಡಮೇಲು ಮಾಡುತ್ತವೆ. ನೀವೇ ನೋಡಿ:* ಸಿಂಹಗಳಷ್ಟು ಸೋಮಾರಿ ಪ್ರಾಣಿಗಳು ಈ ಜಗದಲ್ಲಿ ಅತಿ ವಿರಳ. ಪ್ರತಿ ದಿನವೂ ಸಿಂಹಗಳು ಕನಿಷ್ಠ ಹದಿನಾರು ತಾಸುಗಳಷ್ಟು ಕಾಲವನ್ನು ನಿದ್ರಿಸುತ್ತ ಉರುಳಾಡುತ್ತ ವ್ಯಯಿಸುತ್ತವೆ (ಚಿತ್ರ - 11)* ಸಿಂಹಗಳದು ಬಹಳ ಕಳಪೆ ಬೇಟೆ ಸಾಮರ್ಥ್ಯ. ಹುಲಿಯ (ಚಿತ್ರ -2) ಧೈರ್ಯವಾಗಲೀ, ಚಿರತೆಯ (ಚಿತ್ರ - 3) ವೇಗವಾಗಲೀ, ಇತರ ಬೆಕ್ಕುಗಳಿಗಿರುವ (ಚಿತ್ರ - 4) ವಿಧ ವಿಧ ಚಾಣಾಕ್ಷತನಗಳಾಗಲೀ ಸಿಂಹಗಳಿಗೆ ಇಲ್ಲ. ಒಂಟಿಯಾಗಿ (ಚಿತ್ರ - 1) ಬಲಿಯ ಬೆನ್ನುಹತ್ತಿ ಬೇಟೆಯಾಡುವ ಶಕ್ತಿ ಸಿಂಹಗಳಿಗಿಲ್ಲ. ಆದ್ದರಿಂದಲೇ `ಗೆಜೆಲ್~ಗಳಂತಹ ಮಿಂಚಿನ ವೇಗದ ಬಲಿಪಶುಗಳು ಸಿಂಹಗಳನ್ನು ಸನಿಹದಲ್ಲೇ ಕಂಡರೂ ಕಿಂಚಿತ್ತೂ ಲಕ್ಷಿಸುವುದಿಲ್ಲ.* ಆದ್ದರಿಂದಲೇ ಸಿಂಹಗಳು ಆದಷ್ಟೂ ಇತರ ಬೇಟೆಗಾರರಿಂದ ಬಲಿಯನ್ನು ಕಸಿಯಲೇ ಯತ್ನಿಸುತ್ತವೆ. ಇತರ ಪ್ರಾಣಿಗಳು ತಿಂದು ಉಳಿಸಿಹೋದ, ಹಳಸಿದ, ಕೊಳೆಯುತ್ತಿರುವ ಅವಶೇಷಗಳನ್ನೂ ಸಿಂಹಗಳು ಚೂರು ಹಿಂಜರಿಯದೆ ತಿನ್ನುತ್ತವೆ.* ಹಾಗೆಲ್ಲ ಏನೂ ಸಿಗದಿದ್ದರೆ ಮಾತ್ರ ಸಿಂಹಗಳು ಬೇಟೆಗಿಳಿಯುತ್ತವೆ. ಬಲಿ ಪ್ರಾಣಿಗಳ ಹಿಂಡುಗಳನ್ನು ಗಮನಿಸಿ ಗಾಯಾಳುಗಳನ್ನೋ ಮುದಿ ದುರ್ಬಲರನ್ನೋ, ಮರಿಗಳನ್ನೋ ಗುರುತಿಸಿ, ಗುಟ್ಟಾಗಿ ನಡೆದು ಗುಂಪಾಗಿ ಸುತ್ತುವರೆದು ಬಲಿಯನ್ನು ಹಿಡಿಯುತ್ತವೆ.ಪ್ರತಿ ಹತ್ತು ಪ್ರಯತ್ನಗಳಲ್ಲಿ ಒಮ್ಮೆಯಷ್ಟೇ ಯಶಸ್ವಿಯಾಗುವ (ಚಿತ್ರ - 12) ಈ ಬೇಟೆ ಕಾರ್ಯ ಸಂಪೂರ್ಣ ಹೆಣ್ಣುಗಳದೇ ಹೊಣೆ. ಬೇಟೆ ಸಿಕ್ಕೊಡನೆ ಊಟಕ್ಕೆ ಹಾಜರಾಗಿ `ಸಿಂಹಪಾಲು~ ಪಡೆಯುವುದಷ್ಟೇ ಗಂಡು ಸಿಂಹದ ಕೆಲಸ.* ಎಲ್ಲ ವಿಧದ ಬೆಕ್ಕುಗಳಲ್ಲೂ ಸಿಂಹಗಳದು ಮಾತ್ರ ಗುಂಪು ಜೀವನ ಕ್ರಮ (ಚಿತ್ರ - 10, 11) ಪ್ರತಿ ಗುಂಪಿಗೂ ಬಲಿಷ್ಠ ಗಂಡೊಂದು ಯಜಮಾನನಾಗಿರುವುದು ಅವುಗಳ ಕ್ರಮ. ಬೇರೆ ಗುಂಪುಗಳ ವಯಸ್ಕ ಗಂಡುಗಳು ದುರ್ಬಲ ಯಜಮಾನನನ್ನು ಓಡಿಸಿ ತಾವು ಹಿಂಡುಗಳ `ಮಾಲೀಕ~ ರಾಗುವುದು, ಹಾಗೆ `ನಾಯಕತ್ವ~ ಬದಲಾಗುವುದು ಸಿಂಹಗಳಲ್ಲಿ ಸಾಮಾನ್ಯ.

 

ಆದರೆ ಹಾಗೆ ಬರುವ ಹೊಸ ಯಜಮಾನನ ಮೊದಲ ಕೆಲಸ ತಂಡದ ಎಲ್ಲ ಎಳೆ ಮರಿಗಳನ್ನೂ ತಿಂದು ಹಾಕುವುದು. ಹಾಗೆ ಹಿಂದಿನ ನಾಯಕನ ಸಂತಾನವನ್ನಿಡೀ ಅಳಿಸಿ ಹಾಕಿ, ತನ್ನಿಂದಲೇ ಜನಿಸುವ ಮರಿಗಳಣ್ನು ಮಾತ್ರ ಅದು `ತಂದೆಯ ರಕ್ಷಣೆ~ ಒದಗಿಸುತ್ತದೆ. ಎಂಥ ಕ್ರಮ!  ಪ್ರಸ್ತುತ ಆಫ್ರಿಕದಲ್ಲಿ ಮತ್ತು ಭಾರತದಲ್ಲಿ ಮಾತ್ರ ಸಿಂಹಗಳಿವೆ. ಅವು ಪ್ರಧಾನವಾಗಿ ಅಭಯಾರಣ್ಯಗಳಿಗೆ ಮಾತ್ರ ಸೀಮಿತವಾಗಿವೆ. ಕೆಲವೇ `ಬಿಳಿ ಸಿಂಹ~ (ಚಿತ್ರ - 9) ಸೇರಿದಂತೆ ಆಫ್ರಿಕನ್ ಸಿಂಹಗಳ ಒಟ್ಟೂ ಸಂಖ್ಯೆ ನಾಲ್ಕು - ಐದು ಸಾವಿರ ಮೀರಿಲ್ಲ. ಏಷಿಯನ್ ಸಿಂಹಗಳದಂತೂ ಅತ್ಯಲ್ಪ ಸಂಖ್ಯೆ - ಸುಮಾರು ಇನ್ನೂರೈವತ್ತು ಅಷ್ಟೆ.ಅವುಗಳ ಏಕೈಕ ನೈಸರ್ಗಿಕ ನೆಲೆ ನಮ್ಮ ದೇಶದ `ಗಿರ್ ಸಿಂಹಧಾಮ~ ಸಿಂಹಗಳ ಈ ಅಲ್ಪ ಸಂಖ್ಯೆಗಳಿಗೆ ಮನುಷ್ಯರ ದುರಾಕ್ರಮಣ ಮತ್ತು ಕೋಟಿ ಪ್ರಯೋಗಗಳೇ ಕಾರಣ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.