ವನ್ಯಜೀವಿಗಳಿಗೆ ಕುತ್ತಾಗಿರುವ ಮುಳ್ಳು ತಂತಿ!

7

ವನ್ಯಜೀವಿಗಳಿಗೆ ಕುತ್ತಾಗಿರುವ ಮುಳ್ಳು ತಂತಿ!

Published:
Updated:
ವನ್ಯಜೀವಿಗಳಿಗೆ ಕುತ್ತಾಗಿರುವ ಮುಳ್ಳು ತಂತಿ!

ಮೈಸೂರು: ಬಿಳಿಗಿರಿ ರಂಗನಾಥಸ್ವಾಮಿ  ದೇಗುಲ (ಬಿಆರ್‌ಟಿ) ವನ್ಯಧಾಮದೊಳಗಿನ ರಸ್ತೆ ಬದಿಯಲ್ಲಿ ಪ್ರಯಾಣಿಕರಿಗಾಗಿ ಹಾಕಿರುವ ಹಲವಾರು ಸೂಚನಾ ಫಲಕಗಳ ಆಧಾರ ಕಂಬಗಳಿಗೆ ಅರಣ್ಯ ಇಲಾಖೆಯು ಮುಳ್ಳು ತಂತಿಯನ್ನು ಸುತ್ತಿದ್ದು, ಅವು ವನ್ಯಜೀವಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.ಚಾಮರಾಜನಗರ ಜಿಲ್ಲೆಯ ಬಿಆರ್‌ಟಿ ವನ್ಯಧಾಮದಲ್ಲಿನ ಗುಂಬಳ್ಳಿಯಿಂದ ಬಿಆರ್‌ಟಿ, ಕೆ.ಗುಡಿ ಮತ್ತು ಹೊಂಡರಬಾಳುವರೆಗೆ ಹೋಗುವ ರಸ್ತೆಯ ಉದ್ದಕ್ಕೂ ನಿಲ್ಲಿಸಿರುವ ಸೂಚನಾ ಫಲಕಗಳಿಗೆ ಕಾಡಾನೆಗಳು ಹಾನಿ ಮಾಡಬಾರದು ಎಂದು ಮುಳ್ಳು ತಂತಿಗಳನ್ನು ಸುತ್ತಲಾಗಿದೆ! ಈ ಮೂಲಕ ವನ್ಯಜೀವಿಗಳ ಸಂರಕ್ಷಣೆಯ ಹೊಣೆ ಹೊತ್ತಿರುವ ಅರಣ್ಯ ಇಲಾಖೆಯೇ ಅವುಗಳ ಪ್ರಾಣಕ್ಕೆ ಸಂಚಕಾರ ತಂದಿದೆ.

 

ತನ್ನ ಎದುರಿಗಿರುವ ಯಾವುದೇ ನೈಸರ್ಗಿಕವಲ್ಲದ ಆಕೃತಿಗಳನ್ನು ಆನೆಗಳು ಸಹಿಸುವುದಿಲ್ಲ. ಇದು ಅವುಗಳ ಸಹಜ ಗುಣ. ಹೀಗಾಗಿ ಸೂಚನಾ ಫಲಕಗಳನ್ನು ಆನೆಗಳು ಕಿತ್ತೆಸೆಯುತ್ತವೆ ಇಲ್ಲವೆ ಮುರಿದು ಹಾಕುತ್ತವೆ. ಹೀಗಾಗಿ ಆನೆಗಳಿಂದ ಸೂಚನಾ ಫಲಕಗಳನ್ನು ರಕ್ಷಿಸಲು ಅರಣ್ಯ ಇಲಾಖೆ ಸೂಚನಾ ಫಲಕಗಳಿಗೆ ಮುಳ್ಳು ತಂತಿಯನ್ನು ಸುತ್ತಿದೆ!ಆನೆ ಸೇರಿದಂತೆ ಹಲವು ವನ್ಯಜೀವಿಗಳಿಗೆ ಮನುಷ್ಯರಿಗಿರುವಷ್ಟು ಬೆವರು ಗ್ರಂಥಿಗಳಿಲ್ಲ. ಬೇಸಿಗೆಯ ಸೆಕೆಗೆ ಮೈ ತುರಿಕೆ ಉಂಟಾದಾಗ ಇಲ್ಲವೆ ಕಾಟ ಕೊಡುವ ನೊಣ, ಕೀಟಗಳನ್ನು ಓಡಿಸಲು ಆನೆ, ಕಡವೆ. ಜಿಂಕೆ, ಕಾಟಿ, ಕಾಡುಹಂದಿಗಳು ಎದುರಿಗಿರುವ ಮರ ಇಲ್ಲವೆ ಇತರ ಆಕೃತಿಗಳಿಗೆ ಸಹಜವಾಗಿ ಒರಗಿ ಮೈ ತುರಿಸಿಕೊಳ್ಳುತ್ತವೆ. ಈ ಮುಳ್ಳು ತಂತಿಗಳಿರುವ ಸೂಚನಾ ಫಲಕಗಳಿಗೆ ವನ್ಯಜೀವಿಗಳು ಒರಗಿ ಮೈ ತುರಿಸಿಕೊಂಡರೆ ಅವುಗಳ ದೇಹಕ್ಕೆ ಗಾಯವಾಗುವುದು ಖಚಿತ. ತುಕ್ಕು ಹಿಡಿದ ಕಬ್ಬಿಣದ ಮುಳ್ಳುಗಳಿಂದ ವನ್ಯಜೀವಿಗಳ ದೇಹದಲ್ಲಿ ಉಂಟಾದ ಗಾಯ ಅವುಗಳ ಸಾವಿಗೆ ಕಾರಣವಾಗಬಹುದು.

 

ವನ್ಯಜೀವಿಗಳ ದಟ್ಟ ಸಾಂದ್ರತೆ ಇರುವ ಬಿಆರ್‌ಟಿ ವನ್ಯಧಾಮದೊಳಗಿನ ಈ ಸೂಚನಾ ಫಲಕಗಳತ್ತ ಸೂಕ್ಷ್ಮವಾಗಿ ಯೋಚಿಸದೆ ಮುಳ್ಳು ತಂತಿ ಸುತ್ತಿರುವುದಕ್ಕೆ ವನ್ಯಜೀವಿ ಪ್ರೇಮಿಗಳು ಅರಣ್ಯ ಇಲಾಖೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಸೂಚನಾ ಫಲಕಗಳನ್ನು ವನ್ಯಜೀವಿಗಳಂತೂ ಓದುವುದಿಲ್ಲ. ಅರಣ್ಯದೊಳಗೆ ಸೂಚನಾ ಫಲಕಗಳನ್ನು ನೆಡುವ ಬದಲು ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿ ವಾಹನವನ್ನು ನಿಲ್ಲಿಸಿ ಪ್ರಯಾಣಿಕರಿಗೆ ಸೂಚನಾ ಫಲಕಗಳಲ್ಲಿರುವ ಮಾಹಿತಿಗಳನ್ನು ಕರಪತ್ರಗಳ ಮೂಲಕ ನೀಡಬಹುದು.

ಇದರಿಂದ ಸೂಚನಾ ಫಲಕಗಳಿಗೆ ತಗಲುವ ವೆಚ್ಚವನ್ನೂ ಕಡಿತಗೊಳಿಸಬಹುದು.ಸೂಚನಾ ಫಲಕಗಳಿಗೆ ತಗಲುವ ಒಟ್ಟು ವೆಚ್ಚದಲ್ಲಿ ಶೇ 10ರಷ್ಟನ್ನು ಕರಪತ್ರಗಳಿಗಾಗಿ ಬಳಸಿದರೂ ಸಾಕು. ಅದರಿಂದಲೇ ಪ್ರಯಾಣಿಕರಿಗೆ ವನ್ಯಜೀವಿ, ಪರಿಸರ ಸಂರಕ್ಷಣೆ ಹಾಗೂ ಅವರ ಜವಾಬ್ದಾರಿಯ ಕುರಿತು ಶಿಕ್ಷಣ ನೀಡಬಹುದು ಎನ್ನುತ್ತಾರೆ ಪರಿಸರ ಪ್ರೇಮಿಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry