ಶುಕ್ರವಾರ, ಮೇ 14, 2021
25 °C

ವನ್ಯಜೀವಿ ರಕ್ಷಣೆಗೆ `ಕಳ್ಳಬೇಟೆ ತಡೆ ಶಿಬಿರ'

ಪ್ರಜಾವಾಣಿ ವಾರ್ತೆ/ಎಂ. ರವಿ Updated:

ಅಕ್ಷರ ಗಾತ್ರ : | |

ಮೈಸೂರು: ಅರಣ್ಯ ಸಂಪತ್ತು ರಕ್ಷಿಸಲು ಮತ್ತು ಬೇಟೆ ತಡೆಗಟ್ಟಲು ಬಂಡೀಪುರ ಹುಲಿ ರಕ್ಷಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ `ಆ್ಯಂಟಿ ಪೌಚಿಂಗ್ ಕ್ಯಾಂಪ್' (ಕಳ್ಳಬೇಟೆ ತಡೆ ಶಿಬಿರ)ಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿವೆ. ಕಳ್ಳಬೇಟೆ ತಡೆ ಶಿಬಿರ ಹಾಕಿದ ಮೇಲೆ ಕಾಡಿನಲ್ಲಿ ಕಳ್ಳಬೇಟೆಗಳು ಗಣನೀಯವಾಗಿ ಕಡಿಮೆಯಾಗಿವೆ.ಬಂಡೀಪುರ ಅರಣ್ಯ ವಲಯದಲ್ಲಿ 13 ಅರಣ್ಯ ವಲಯಗಳಿದ್ದು, ಒಟ್ಟು38 ಶಿಬಿರಗಳು ಇವೆ. ಪ್ರತಿ ಶಿಬಿರಕ್ಕೆ ಒಟ್ಟು 5 ಮಂದಿ ಸಿಬ್ಬಂದಿಯನ್ನು ನೇಮಿಸಲಾಗಿದೆ. ಕಾಯಂ ಗಾರ್ಡ್ ಮತ್ತು ವಾಚರ್ ಹಾಗೂ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾದ ಮೂವರು ವಾಚರ್‌ಗಳು ಇರುತ್ತಾರೆ. ಅರಣ್ಯ ಸಿಬ್ಬಂದಿ ಪಾಳಿ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಾರೆ.ಬೆಳಿಗ್ಗೆ 7 ಗಂಟೆಗೆ ಅರಣ್ಯದ ಒಳಗೆ ಗಸ್ತು ಹಾಕುವ ಸಿಬ್ಬಂದಿ ಸಂಜೆ 5 ಗಂಟೆಗೆ ವಾಪಸ್ಸಾಗಲಿದ್ದಾರೆ. ಕಳ್ಳತನ ತಡೆ ಶಿಬಿರದಲ್ಲಿ ಸಿಬ್ಬಂದಿ ವಾಸ್ತವ್ಯ ಹೂಡಲು ಮನೆಯೊಂದನ್ನು ಕಾಡಿನ ಮಧ್ಯದಲ್ಲಿ ನಿರ್ಮಿಸಲಾಗಿದೆ. ಮನೆಗೆ ಸೋಲಾರ್ ದೀಪದ ವ್ಯವಸ್ಥೆ ಇದೆ. ಸಿಬ್ಬಂದಿಗೆ ಡಬಲ್ ಬ್ಯಾರಲ್ ಗನ್ ಮತ್ತು ವೈರ್‌ಲೆಸ್ ಉಪಕರಣವನ್ನು ನೀಡಲಾಗಿದೆ.ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿ ಗಸ್ತು ತಿರುಗುವ ಸಂದರ್ಭದಲ್ಲಿ ಅರಣ್ಯ ಸಂಪತ್ತನ್ನು ಲೂಟಿ ಮಾಡುವವರು, ಪ್ರಾಣಿಗಳ ಬೇಟೆಯಾಡುವವರು, ಮರಗಳ್ಳರು ಹಾಗೂ ಅನುಮತಿ ಇಲ್ಲದೆ ಅರಣ್ಯ ಹೊಕ್ಕವರು ಕಣ್ಣಿಗೆ ಬಿದ್ದರೆ ಕೂಡಲೇ ಮೇಲಿನ ಅಧಿಕಾರಿಗಳಿಗೆ ಸಿಬ್ಬಂದಿ ವೈರ್‌ಲೆಸ್ ಮೂಲಕ ಸಂದೇಶವನ್ನು ರವಾನಿಸುತ್ತಾರೆ. ಮಾಹಿತಿ ದೊರೆತ ಕೂಡಲೇ ವಾಹನದಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಿ ಮರಗಳ್ಳತನ ಇಲ್ಲವೇ ಪ್ರಾಣಿಗಳ ಬೇಟೆಯಾಡುವುದನ್ನು ತಡೆಯಲಾಗುತ್ತದೆ.ಮರಗಳ್ಳರ ಪತ್ತೆ: ಕಳ್ಳತನ ತಡೆ ಶಿಬಿರಕ್ಕೆ ನಿಯೋಜನೆಗೊಂಡು ಗಸ್ತು ತಿರುಗುವ ಸಿಬ್ಬಂದಿಗೆ ಸಿಕ್ಕಿಬಿದ್ದವರು ಮರಗಳ್ಳರೇ ಹೆಚ್ಚು. ಗಸ್ತು ತಿರುಗುವಾಗ ಕಾಡಿನ ಒಳಹೊಕ್ಕು ಬೆಳೆಬಾಳುವ ಮರಮುಟ್ಟುಗಳನ್ನು ಕಳ್ಳತನ ಮಾಡುವ ಸಂದರ್ಭದಲ್ಲಿ ಗಸ್ತು ತಿರುಗುವ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾರೆ. ಕಳ್ಳರ ಸಂಖ್ಯೆ ಕಡಿಮೆ ಇದ್ದಲ್ಲಿ ಅರಣ್ಯ ಸಿಬ್ಬಂದಿಯೇ ತಮ್ಮ ಬಳಿ ರಕ್ಷಣೆಗಾಗಿ ಇಟ್ಟುಕೊಂಡಿರುವ ಡಬಲ್ ಬ್ಯಾರಲ್ ಗನ್‌ನಿಂದ ಬೆದರಿಸಿ ಕಳ್ಳರನ್ನು ಸೆರೆಹಿಡಿಯುತ್ತಾರೆ. ಒಂದು ವೇಳೆ ಕಳ್ಳರು ಗುಂಪಿನಲ್ಲಿ ಬಂದಿದ್ದರೆ ಹೆಚ್ಚಿನ ಸಿಬ್ಬಂದಿ ನಿಯೋಜಿಸುವಂತೆ ವೈರ್‌ಲೆಸ್ ಮುಖಾಂತರ ಅಧಿಕಾರಿಗಳಿಗೆ ಸಂದೇಶ ರವಾನಿಸುತ್ತಾರೆ.ಕಾಡಿನ ಮಧ್ಯೆ ಶಿಬಿರಗಳನ್ನು ಹಾಕಿರುವುದರಿಂದ ಕಳ್ಳಕಾಕರು ಕಾಡಿನತ್ತ ಮೊದಲಿನಂತೆ ಸುಳಿಯುತ್ತಿಲ್ಲ. ಕಾಡಿನಲ್ಲಿ ಸಿಬ್ಬಂದಿ ಸದಾ ಗಸ್ತು ತಿರುಗುತ್ತಿರುತ್ತಾರೆ. ಒಂದು ವೇಳೆ ಸಿಕ್ಕಿಬಿದ್ದರೆ ಜೈಲು ವಾಸ ಕಟ್ಟಿಟ್ಟ ಬುತ್ತಿ ಎಂಬ ಭಯ ಕಾಡುತ್ತಿದೆ. ಹಾಗಾಗಿ, ಕಳ್ಳಬೇಟೆಗಾರರ ಹಾವಳಿ ಕಡಿಮೆಯಾಗಿದೆ. ಶಿಬಿರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವುದರಿಂದ 38 ಶಿಬಿರಗಳಿಗೆ ಮತ್ತೆ ಹೆಚ್ಚುವರಿ 2 ಶಿಬಿರ ಸೇರಿಸಲು ಅರಣ್ಯ ಇಲಾಖೆ ಮುಂದಾಗಿದೆ.ಸಿಬ್ಬಂದಿ ಕೊರತೆ: ಬಂಡೀಪುರ ಹುಲಿ ರಕ್ಷಿತ ಪ್ರದೇಶದಲ್ಲಿ ಸಿಬ್ಬಂದಿ ಕೊರತೆ ಇದೆ. ಹಾಗಾಗಿ, ಕಳ್ಳತನ ತಡೆ ಶಿಬಿರಗಳಿಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲು ಸಾಧ್ಯವಾಗುತ್ತಿಲ್ಲ. ಹುಲಿ ರಕ್ಷಿತ ಪ್ರದೇಶದಲ್ಲಿ ಒಟ್ಟು 624 ಸಿಬ್ಬಂದಿ ಇದ್ದಾರೆ. ಕಳ್ಳಬೇಟೆ ತಡೆ ಶಿಬಿರಕ್ಕೆ ತಲಾ ಐದು ಮಂದಿಯಂತೆ 38 ಶಿಬಿರಕ್ಕೆ ಒಟ್ಟು 190 ಸಿಬ್ಬಂದಿ ಅಗತ್ಯ ಇದೆ. ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ತಾತ್ಕಾಲಿಕ ವಾಚರ್‌ಗಳು ವಾರದ ರಜೆಯನ್ನು ಕಡ್ಡಾಯವಾಗಿ ಪಡೆಯುತ್ತಾರೆ. ವಾರದ ರಜೆ ಪಡೆದ ಕೆಲವರು ಕರ್ತವ್ಯಕ್ಕೆ ವಾಪಸ್ಸಾಗುವುದಿಲ್ಲ. ಹಾಗಾಗಿ, ಶಿಬಿರದಲ್ಲಿ ಸಿಬ್ಬಂದಿ ಕೊರತೆ ಎದುರಾಗುತ್ತದೆ. ಬಂಡಿಪುರ ಅರಣ್ಯ ಒಟ್ಟು 872 ಚ.ಕಿ.ಮೀ. ವ್ಯಾಪ್ತಿ ಇದ್ದು, ದೊಡ್ಡದಾದ ಕಾಡನ್ನು ಕಾಯಲು ಇರುವ ಸಿಬ್ಬಂದಿ ಸಾಕಾಗುತ್ತಿಲ್ಲ. ಸಿಬ್ಬಂದಿ ಕೊರತೆ ಇದ್ದರೂ ಸರಿದೂಗಿಸಿಕೊಂಡು ಹೋಗಲಾಗುತ್ತಿದೆ. ಹೆಚ್ಚಿನ ಸಿಬ್ಬಂದಿ ನಿಯೋಜಿಸುವಂತೆ ಅಧಿಕಾರಿಗಳು ಸರ್ಕಾರವನ್ನು ಕೋರಿದ್ದಾರೆ.`ಹೆಚ್ಚಿನ ಸಿಬ್ಬಂದಿಯನ್ನು ನೀಡಿದ್ದೇ ಆದಲ್ಲಿ ಕಳ್ಳಬೇಟೆ ತಡೆ ಶಿಬಿರ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲವು. ವನ್ಯಜೀವಿ ಮತ್ತು ವನ್ಯ ಸಂಪತ್ತನ್ನು ಉಳಿಸುವ ನಿಟ್ಟಿನಲ್ಲಿ ಆರಂಭಿಸಲಾದ ಕಳ್ಳಬೇಟೆ ತಡೆ ಶಿಬಿರದಿಂದಾಗಿ ಕಳ್ಳಬೇಟೆ ಪ್ರಕರಣಗಳು ಕಡಿಮೆಯಾಗಿವೆ. ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸುವಂತೆ ಸರ್ಕಾರವನ್ನು ಕೋರಲಾಗಿದೆ' ಎಂದು ಬಂಡೀಪುರ ಹುಲಿ ರಕ್ಷಿತ ಪ್ರದೇಶ ನಿರ್ದೇಶಕ ಎಚ್.ಸಿ. ಕಾಂತರಾಜು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.