ಸೋಮವಾರ, ಏಪ್ರಿಲ್ 12, 2021
26 °C

ವನ ಚೇತನ ಚಿಣ್ಣರ ನಂದನ

ಶಿವಾನಂದ ಕರ್ಕಿ Updated:

ಅಕ್ಷರ ಗಾತ್ರ : | |

ವನ ಚೇತನ ಚಿಣ್ಣರ ನಂದನ

ಹಸಿರು ಹೊದ್ದ ಬೆಟ್ಟಗುಡ್ಡ. ಜೋಗುಳದಂತೆ ಕೇಳಿಸುವ ಹಕ್ಕಿಗಳ ಕಲರವ. ಅಡಿಕೆ ತೋಟಗಳು ಮತ್ತು ಸಾಲು ಗದ್ದೆಗಳು ಕಲಾಕೃತಿ. ನಂದನವನದಂತೆ ಕಾಣಿಸುವ ಈ ಪರಿಸರದಲ್ಲಿ ಮಕ್ಕಳ ಸೆಳೆಯುವ ಚುಂಬಕದಂತಿದೆ `ವನಚೇತನ~ ಮನೆ.`ವನಚೇತನ~ದಲ್ಲಿ ನೋಡಿದರೂ ಬಣ್ಣ ಬಣ್ಣದ ಆಟಿಕೆಗಳು. ಮಕ್ಕಳ ಭಾವಕೋಶಕ್ಕೆ ಜೀವ ತುಂಬುವ ಶಕ್ತಿ ಕೇಂದ್ರವದು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪೇಟೆಯಿಂದ ದೇವಂಗಿ ಮಾರ್ಗವಾಗಿ 25 ಕಿ.ಮೀ. ಕ್ರಮಿಸಿದರೆ ಹೆದ್ದೂರು ಸಿಗುತ್ತದೆ. ಅಲ್ಲಿದೆ ಈ `ವನಚೇತನ~. ದೇವಿತೋನಾಗೇಶ್ ಇದರ ರೂವಾರಿ.ಅವರು ಮಕ್ಕಳ ಆಟಕ್ಕಾಗಿ ಅಟ್ಟದ ಮನೆಯನ್ನು ರೂಪಿಸಿದ್ದಾರೆ, ಅದು ಪಾಠದ ಮನೆಯೂ ಹೌದು.ಆ ಮನೆಯಲ್ಲಿ ಮಕ್ಕಳ ಮನಸ್ಸಿನಲ್ಲಿ ನೂರುಕಾಲ ಉಳಿಯಬಲ್ಲ ಆಟಿಕೆಗಳಿವೆ. ದೊಡ್ಡವರೂ ಮಕ್ಕಳಾಗಿ ನಲಿಯಬೇಕು ಎಂಬ ಕನಸು ನಾಗೇಶ್ ಅವರದು.ಅದಕ್ಕಾಗಿಯೇ ತಮ್ಮ ಹಿರಿಯರು ನಿರ್ಮಿಸಿರುವ ಮಲೆನಾಡಿನ ಅಪ್ಪಟ ಸಾಂಪ್ರದಾಯಿಕ ಮನೆಯನ್ನು ನಾಡಿನ ಮಕ್ಕಳಿಗೆ ಸಮರ್ಪಿಸಿದ್ದಾರೆ. ಅಲ್ಲಿ ವರ್ಷ ಪೂರ್ತಿ ಮಕ್ಕಳ ಚಿಲಿಪಿಲಿ.`ವನಚೇತನ~ ರೂಪುಗೊಂಡಿದ್ದು 1980ರಲ್ಲಿ. ಕಲಾ ಕುಟೀರ, ಗ್ರಂಥ ಕುಟೀರ, ಚೇತನ ಕುಟೀರಗಳು ಇಲ್ಲಿವೆ. ಸರಳ ಬದುಕು ಹಾಗೂ ಸಹಜ ಚಿಂತನೆ ಇಲ್ಲಿನ ಪರಿಸರದಲ್ಲೇ ಅಡಕವಾದಂತಿದೆ. ಈ ನಿಸರ್ಗ ಧಾಮದಲ್ಲಿ ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತವೆ.ಸ್ಥಳೀಯ ಪರಿಕರಗಳನ್ನು ಬಳಸಿಕೊಂಡು ರಚಿಸಿರುವ ಜೀವನೋತ್ಸಾಹ ಚಿಮ್ಮಿಸುವ ಆಟಗಳನ್ನು ಇಲ್ಲಿ  ಆಡಬಹುದಾಗಿದೆ. ಹಗ್ಗ ರಾಟಿ ಆಟ, ಹುಲಿ ದನದ ಆಟ, ಬ್ರಹ್ಮ ಗೋಪುರ ಆಟ, ಗಣಿತ ಚಮತ್ಕಾರ, ಸಾಹಿತ್ಯ ಚಮತ್ಕಾರ, ಜೋಕಾಲಿ, ಯಾತ್ರಾದಂತಹ ಆಟಗಳು ಮಕ್ಕಳ ಮನಸ್ಸು ಸೆಳೆಯುತ್ತವೆ.ಚಿಕ್ಕ ಬೆಂಕಿ ಪೊಟ್ಟಣದೊಳಗೆ ಇಡಬಲ್ಲ ಭಗವದ್ಗೀತೆ ಪುಸ್ತಕಗಗಳು ಮಕ್ಕಳನ್ನು ಸೆರೆಹಿಡಿಯುತ್ತವೆ. `ನನ್ನ ಕೈಲಿರುವ ದುಡ್ಡು ನನ್ನದಲ್ಲ, ನನ್ನ ಕೈಗೆ ಬರುವ ದುಡ್ಡು ಮತ್ತೊಬ್ಬರದಲ್ಲ~, ಎನ್ನುವಂಥ ಬರಹಗಳು ನೆಲಹಾಸಿನಿಂದ ಹಿಡಿದು ಗೋಡೆಮೇಲೆಲ್ಲ ಕಾಣಸಿಗುತ್ತವೆ. ಮಕ್ಕಳಿಗಾಗಿ ರೂಪಿಸಿರುವ ಗಣಪೆಕಾಯಿಯ ಹಾಸಿಗೆ ಮುದ ನೀಡುತ್ತದೆ.`ಮನೆ ಹಬ್ಬ~ ಕಾರ್ಯಕ್ರಮದಲ್ಲಿ ನೂರಾರು ಮಕ್ಕಳು ಪಾಲ್ಗೊಳ್ಳುತ್ತಾರೆ. ಹರಿಕಥೆ, ಚಂಡೆ, ಭಾಗವತಿಕೆ, ಯೋಗಾಸನ, ಹಾಸ್ಯಹೊನಲು, ಹಸೆ ಚಿತ್ರರಚನೆ ಕಲಿಕೆ, ಕಾವ್ಯವಾಚನ, ವ್ಯಂಗ್ಯಚಿತ್ರ ಪ್ರದರ್ಶನ, ಕುರ‌್ರುಮಾಮ, ಕೊರಗ ನೃತ್ಯ, ಕೋಲೇಬಸವ, ಒಳಲು, ಅಂಟಿಕೆ ಪಂಟಿಗೆ, ಜಾದೂ ಪ್ರದರ್ಶನಗಳು ಮಕ್ಕಳ ಮನಸ್ಸನ್ನು ಕಟ್ಟಿ ನಿಲ್ಲಿಸುತ್ತದೆ.ನಾಡಿನ ಅನೇಕ ಊರುಗಳಿಂದ ಈ ಮನೆಗೆ ಬರುವ ಪ್ರವಾಸಿಗರು ತಾವೇ ಅಡುಗೆ ಮಾಡಿಕೊಂಡು ಆಡಿ ನಲಿಯುತ್ತಾರೆ. ಆ ಮನೆಯನ್ನು ತಮ್ಮದಾಗಿ ಮಾಡಿಕೊಳ್ಳುತ್ತಾರೆ. ನಂತರ ಬೇರೆಯವರಿಗೆ ಬಿಟ್ಟು ಆನಂದ ಪಡುತ್ತಾರೆ. ಇಂಥ ಸೋಜಿಗದ ಮನೆಯನ್ನು ಯಾವ ಸ್ವಾರ್ಥವಿಲ್ಲದೇ ನಿರ್ಮಿಸಿಕೊಟ್ಟ ಹೆಗ್ಗಳಿಕೆ ನಾಗೇಶ್ ಅವರದ್ದು.`ವನಚೇತನ~ದ ಪರಿಸರದಲ್ಲಿ `ಪ್ರತಿಭಾನ ಶಿಬಿರ~ ಮಕ್ಕಳಿಗಾಗಿ ಹಳ್ಳಿ ಮನೆಯಲ್ಲಿ ನಡೆಯುತ್ತದೆ. ಶಿಬಿರ ಶುಲ್ಕವಿಲ್ಲ. ಉಳ್ಳವರು ಉಪಕರಿಸಬಹುದು. ಆಟ, ಊಟ, ಪಾಠ ನಡೆಯುತ್ತದೆ. ಸ್ಥಳೀಯ ಪ್ರವಾಸಿ ಸ್ಥಳಗಳಾದ ಚಿಬ್ಬಲುಗುಡ್ಡೆ, ನವಿಲುಕಲ್ಲಿಗೆ ಪ್ರವಾಸ ಇಲ್ಲಿನ ಸಾಮಾನ್ಯ ಚಟುವಟಿಕೆ.ಪ್ರವಾಸದ ನೆಪದಲ್ಲಿ ಹತ್ತಾರು ಊರಿಗೆ ಹೋಗುತ್ತೇವೆ. ಈ ಪಟ್ಟಿಯಲ್ಲಿ `ವನಚೇತನ~ ಇದ್ದರೆ ಚೆನ್ನ. ಶೈಕ್ಷಣಿಕ ಪ್ರವಾಸದಲ್ಲಂತೂ `ವನಚೇತನ~ ಕಡ್ಡಾಯವಾಗಿ ಸೇರಿಕೊಳ್ಳಬೇಕು.ಪಿಯು ಶಿಕ್ಷಣ ಪಡೆದ ದೇವಮ್ಮ ತೋಪಯ್ಯ ನಾಗೇಶ್ ಕಾಲೇಜು ಶಿಕ್ಷಣವನ್ನು ಇಷ್ಟ ಪಟ್ಟವರಲ್ಲ. ಮೂರ್ತಿ ಪೂಜೆ, ಜಾತೀಯತೆ ಬಿಟ್ಟು ಊರು ಬಿಟ್ಟೆ. `ವಿಶ್ವವಿದ್ಯಾಲಯದ ಪ್ರಮಾಣಪತ್ರ ಬೇಕಿಲ್ಲ, ವಿದ್ಯೆ ಅಷ್ಟೇ ಸಾಕು~ ಎನ್ನುವ ನಾಗೇಶ್- ಲಲಿತಕಲಾ ವಿಭಾಗದಲ್ಲಿ ಎರಡು ವರ್ಷ ಶಿಕ್ಷಣಪಡೆದು ಹೊರ ಬಂದಿದ್ದಾರೆ. ಲೇಖಕರೂ ಆದ ಅವರು `ಮಿಶ್ರಿತಾ~, `ಪ್ರತಿಭಾನ~, `ವನಚೇತನ~, `ಓ ನುಡಿ ಗೀತಿಕಾ~, `ಸಂಸ್ವಾರಸ್ಯಂ~ ಕೃತಿಗಳನ್ನು ರಚಿಸಿದ್ದಾರೆ. `ದೊಡ್ಡವರು ಮಕ್ಕಳ ರೀತಿ ಆಗಬೇಕು. ಬದುಕನ್ನು ಸರಳವಾಗಿ ನೋಡಬೇಕು~ ಎನ್ನುವುದು ನಾಗೇಶ್‌ರ ಹಂಬಲ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.