ಸೋಮವಾರ, ಡಿಸೆಂಬರ್ 9, 2019
25 °C

ವಯಸ್ಸು 55, ದಾಖಲೆ 52

Published:
Updated:
ವಯಸ್ಸು 55, ದಾಖಲೆ 52

ರಮೇಶ್ ಬಾಬು ಮಾತಿಗೆ ನಿಂತರೆ ಚಲಿಸುವ ಗಡಿಯಾರದ ಮುಳ್ಳುಗಳೂ ಕ್ಷಣಕಾಲ ನಿಂತಂಥ ಅನುಭವ. ಇಷ್ಟೆಲ್ಲಾ ಒಬ್ಬ ವ್ಯಕ್ತಿಯಿಂದ ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರರೂಪವೇ ಅವರು. ಈವರೆಗೆ 52 ದಾಖಲೆ (42 ವಿಶ್ವದಾಖಲೆ, 9 ರಾಷ್ಟ್ರೀಯ ದಾಖಲೆ) ಬರೆದು ಭಾರತದ ಅತಿ ಹೆಚ್ಚು ದಾಖಲೆಗಳ ಸರದಾರ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಡಾ.ರಮೇಶ್‌ಬಾಬು.`ಬಾಲ್ಯದ ನನ್ನ ಆಸಕ್ತಿಯ ಕ್ಷೇತ್ರಗಳೇ ಈ ಎಲ್ಲಾ ಸಾಧನೆಗೆ ಪ್ರೇರಣೆ. ಎಸ್‌ಎಸ್‌ಎಲ್‌ಸಿ ಮುಗಿಸುವ ವೇಳೆಗೆ ಭಾಷಣ, ಪ್ರಬಂಧ, ಚರ್ಚೆ, ಕ್ರೀಡೆ ಎಲ್ಲ ಹೀಗೆ ವಿವಿಧ ಚಟುವಟಿಕೆಗಳಲ್ಲಿ ನೂರಕ್ಕೂ ಹೆಚ್ಚು ಪ್ರಶಸ್ತಿ ಪಡೆದಿದ್ದೆ. ಎಲ್ಲೆಡೆಯೂ ಮುನ್ನುಗ್ಗಿ ಹೊಸ ಸಾಧನೆ ಮಾಡಬೇಕೆಂಬ ನನ್ನ ಹುರುಪು ಇವೆಲ್ಲವುಗಳಿಗೆ ಪ್ರೇರಣೆಯಾಯಿತು~ ಎಂದು ದುಂಡಗಿನ ಮುಖವನ್ನು ಇನ್ನೂ ಅಗಲವಾಗಿಸುತ್ತಾರೆ ರಮೇಶ್.`ಬ್ಯಾಡ್ಮಿಂಟನ್‌ನಲ್ಲಿ ಸತತ ಒಂದು ಗಂಟೆ ಅವಧಿಯಲ್ಲಿ ಎರಡೂ ಬದಿ ಒಬ್ಬಂಟಿಗನಾಗಿ ಓಡಾಡುತ್ತಾ 3977  ಹೊಡೆತಗಳನ್ನು ಎದುರಿಸಿದೆ. ಕ್ರೀಡಾಂಗಣದ ಒಂದು ಬದಿಯಲ್ಲಿ ನಿಂತು ರ‌್ಯಾಕೆಟ್‌ಗೆ ಹೊಡೆದು ನೆಟ್ ಅಡಿಯಿಂದ ಅತ್ತ ಕಡೆಗೆ ಓಡಿ, ಅದು ನೆಲಕ್ಕೆ ಬೀಳುವಷ್ಟರಲ್ಲಿ ಅತ್ತಲಿಂದ ರಿಟರ್ನ್ ಮಾಡುತ್ತಿದ್ದೆ.

 

ಈ ಸಾಧನೆಯ ಹಿಂದೆ ಹಲವು ವರ್ಷಗಳ ಪರಿಶ್ರಮವಿತ್ತು. ದೇಹದ ವ್ಯಾಯಾಮಕ್ಕಾಗಿ ಮಾಡುತ್ತಿದ್ದ ಈ ಪ್ರಯತ್ನ ಬಳಿಕ ಸಾಧನೆಗೆ ದಾರಿಯಾಯಿತು. ಇದಲ್ಲದೆ ಒಂದು ನಿಮಿಷದಲ್ಲಿ ರ‌್ಯಾಕೆಟ್ ಪರಿಧಿಯನ್ನು ತಪ್ಪಿಸಿಕೊಳ್ಳದಂತೆ ಚೆಂಡನ್ನು 130 ಬಾರಿ ಹಿಟ್ ಮಾಡಿದ್ದು, ಜೊತೆಗಾರನೊಂದಿಗೆ 3,600 ಕಿಕ್‌ಗಳನ್ನು ನೆಲಕ್ಕೆ ಬೀಳಿಸಿದೆ ಆಡಿದ್ದು ವಿಶ್ವ ದಾಖಲೆಗಳಾಗಿವೆ.“ಬಡವರಾದ ನಮಗೆ ಟೇಬಲ್ ಟೆನ್ನಿಸ್ ಆಡಲು ಕ್ಲಬ್‌ಗೆ ತೆರಳಲು ಸಾಧ್ಯವಿಲ್ಲವಲ್ಲ. ಅದಕ್ಕಾಗಿ ಮನೆಯ ಗೋಡೆಯನ್ನೇ ಬಳಸಿಕೊಂಡು ಒಂದು ಗಂಟೆಯಲ್ಲಿ 18,000 ಹೊಡೆತಗಳ ಮೂಲಕ ದಾಖಲೆ ಬರೆದೆ. `ದಾಖಲೆಯಲ್ಲೇ ಸಮಯ ಕಳೆಯುತ್ತಿದ್ದೀಯಾ, ಮಡದಿಗೂ ಸಹಾಯ ಮಾಡು~ ಎಂಬ ಆರೋಪ ಕೇಳಿ ಬಂದುದಕ್ಕೆ ಸೌತೆಕಾಯಿಯನ್ನು ಒಂದು ಲಕ್ಷ ಇಪ್ಪತ್ತು ಸಾವಿರ ತುಂಡಾಗಿ ಕತ್ತರಿಸಿದೆ. ಒಂದು ಗಂಟೆಯ ಅವಧಿಯಲ್ಲಿ ಹಿಟ್ಟು ಕಲಸಿ, 132 ಪೂರಿ ತಯಾರಿಸಿ ಆಕೆಯ ಹುಬ್ಬೇರಿಸುವಂತೆ ಮಾಡಿದೆ” ಎನ್ನುವಾಗ ನಗುವಿನ ಜೊತೆಗೆ ಬೆರೆತದ್ದು ಒಂದಿಷ್ಟು ಹಿಗ್ಗು.ಈವರೆಗೆ ಐದು ದೇಶಗಳಲ್ಲಿ ದುಡಿದಿರುವ ರಮೇಶ್ ಬಾಬು ಪದೇಪದೇ ಮನೆ ಬದಲಾಯಿಸುವ ಅನಿವಾರ್ಯತೆಗೆ ಒಳಗಾದವರು. ಅಂಥ ಸಂದರ್ಭದಲ್ಲಿ ಪ್ಯಾಕ್ ಮಾಡುವ ಜರೂರಿರುತ್ತದೆ. ಅದನ್ನು ಕೂಡ ದಾಖಲೆಯಾಗಿ ಪರಿವರ್ತಿಸಿದ ಅಪರೂಪದ ವ್ಯಕ್ತಿ ಇವರು.ಒಂದು ಗಂಟೆಯಲ್ಲಿ 216 ಕಾಂಜೀವರಂ ಸೀರೆಗಳನ್ನು `ಗಿಫ್ಟ್ ಪ್ಯಾಕ್~ ಮಾಡಿ ನಿರ್ಮಿಸಿದ ದಾಖಲೆಗೆ ಅದೇ ಸ್ಫೂರ್ತಿ. ಒಂದು ಗಂಟೆಯಲ್ಲಿ 169 ಗಾಳಿಪಟ ತಯಾರಿಸಿ ಹಾರಿಸಿದ್ದು, 1 ನಿಮಿಷದಲ್ಲಿ 296 ಪೇಪರ್‌ಪ್ಲೇನ್ ತಯಾರಿಸಿದ್ದು, 624 ಮೀಟರ್‌ನ ಉದ್ದದ ಗಾಳಿಪಟ ತೇಲಿಬಿಟ್ಟಿದ್ದು, 245 ಚದರ ಅಡಿ ಗಾತ್ರದ ಗಾಳಿಪಟ ತಯಾರಿಸಿದ್ದು, 39 ಸೆಕೆಂಡ್‌ಗಳಲ್ಲಿ ಕೇರಂನ 19 ಪಾನ್‌ಗಳನ್ನೂ ಗುಂಡಿಗೆ ಬೀಳಿಸಿದ್ದು ಇವೆಲ್ಲಕ್ಕೂ ಚಿಕ್ಕಂದಿನ ಆಟದ ಆಸಕ್ತಿಗಳೇ ಪ್ರೇರಕ.`ಮೂರರ ವಯಸ್ಸಿನಲ್ಲೇ ಅಮ್ಮ ಹೇಳಿಕೊಟ್ಟಿದ್ದ ವೆಂಕಟೇಶ್ವರ ಸ್ವಾಮಿ ಸ್ತೋತ್ರಗಳನ್ನು (ಬರೆದರೆ ಎ4 ಪೇಪರ್‌ನಲ್ಲಿ ಎರಡೂವರೆ ಪುಟ) ಇತ್ತೀಚೆಗೆ ಎರಡು ಉಸಿರಿನಲ್ಲಿ ಕೇವಲ 39 ಸೆಕೆಂಡಿನಲ್ಲಿ ಪಠಣ ಮಾಡಿದೆ. ಮುಂದೆ ಬಾಲ್ಯದಲ್ಲಿ ಆಡುತ್ತಿದ್ದ ಕುಂಟಾಟದಲ್ಲಿ 100ಮೀ. ಒಳಗಿನ ಅತಿ ವೇಗದ ದಾಖಲೆ ಬರೆಯಬೇಕೆಂದಿದ್ದೇನೆ~ ಎನ್ನುವಾಗ 55 ವರ್ಷದ ವೃತ್ತಿ ಬದುಕಿನ ಸುಸ್ತು ಅವರಲ್ಲಿ ಕಾಣುತ್ತಿರಲಿಲ್ಲ.1993ರಿಂದ ಈವರೆಗೆ ಮಾಡಿರುವ 51 ದಾಖಲೆಗಳಲ್ಲಿ ಎಂದೂ ರಮೇಶ್ ಪ್ರಚಾರ ಬಯಸಿದವರಲ್ಲ. ಸರ್ಕಾರದ ನೆರವಿಗೂ ಅಂಗಲಾಚಿಲ್ಲ. ಹನ್ನೆರಡು ವರ್ಷದಿಂದ `ಟಾಪ್ ಆಫ್ ದಿ ವರ್ಲ್ಡ್~ ಸಂಸ್ಥೆ ಕಟ್ಟಿ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ತರಬೇತಿ ನೀಡಿದ ರಮೇಶ್ ಬಾಬು ಲೋಹಶಾಸ್ತ್ರ ವಿಜ್ಞಾನದಲ್ಲಿ ಪಿಎಚ್.ಡಿ.ಯನ್ನೂ ಪಡೆದವರು.ದಾಖಲೆ ಮಾಡಿದವರ ಬಗ್ಗೆ ಕೇಳುವಾಗ ಇದು ಸಾಮಾನ್ಯ ಸಂಗತಿ ಎಂದು ಅನಿಸಬಹುದು. ಆದರೆ, ಅದು ಸುಲಭವಲ್ಲ. ಅದಕ್ಕೆ ಹಲವಾರು ವರ್ಷಗಳ ಅಭ್ಯಾಸ ಅಗತ್ಯ. ದೃಢೀಕರಣಕ್ಕೆ ಅನೇಕ ಕ್ಷೇತ್ರದ ಉನ್ನತ ಅಧಿಕಾರಿಗಳನ್ನು, ಅಥ್ಲೆಟಿಕ್ ಕೋಚ್‌ಗಳನ್ನು ಕರೆಸಬೇಕು. ಸಂಪೂರ್ಣ ಘಟನಾವಳಿಗಳನ್ನು ಚಿತ್ರೀಕರಿಸಬೇಕು.

 

ಈ ಕುರಿತು ಟೀವಿ ಇಲ್ಲವೇ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಯನ್ನು ಕತ್ತರಿಸಿ ಅವನ್ನೆಲ್ಲಾ `ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್~ಗೆ ಕಳುಹಿಸಬೇಕು. ಇವೆಲ್ಲವೂ ಒಂದು ತಿಂಗಳ ಅವಧಿಯ ಕೆಲಸ. ಆರ್ಥಿಕವಾಗಿ ಸಶಕ್ತರಾಗಿದ್ದರಷ್ಟೇ ಈ ಎಲ್ಲಾ ಹಂತಗಳನ್ನು ಸಲೀಸಾಗಿ ದಾಟಿ ಮುಂದೆ ಹೋಗಬಹುದು ಎನ್ನುವ ರಮೇಶ್ ಕಣ್ಣಲ್ಲಿ ಇನ್ನಷ್ಟು ದಾಖಲೆ ಸೃಷ್ಟಿಸುವ ಹುಮ್ಮಸ್ಸಿದೆ.  

 

 

 

ಪ್ರತಿಕ್ರಿಯಿಸಿ (+)