ವರದಹಳ್ಳಿ: ಶ್ರೀಧರ ಸ್ವಾಮಿಗಳ ಕರ್ಮ ಭೂಮಿ

7

ವರದಹಳ್ಳಿ: ಶ್ರೀಧರ ಸ್ವಾಮಿಗಳ ಕರ್ಮ ಭೂಮಿ

Published:
Updated:

ಸಹ್ಯಾದ್ರಿ ಪರ್ವತ ಶ್ರೇಣಿಯ ಒಂದು ಭಾಗವಾದ ಶ್ರೀ ಕ್ಷೇತ್ರ ವರದಪುರ ಅಥವಾ ವದ್ದಳ್ಳಿ ನಯನ ಮನೋಹರ ತಾಣ. ಇದು ಆಧ್ಯಾತ್ಮಿಕ ಗುರು ಶ್ರೀಧರಸ್ವಾಮಿಗಳ ಕಾರ್ಯ ಭೂಮಿ. ಇಲ್ಲಿನ ಗುಡ್ಡದ ಮೇಲಿರುವ ಶ್ರೀಧರಾಶ್ರಮದಿಂದ ಸುತ್ತಲೂ ದೃಷ್ಟಿ ಹಾಯಿಸಿದರೆ ನಿಸರ್ಗ ಸೌಂದರ್ಯ ಮನಸೆಳೆಯುತ್ತದೆ.



ಆಕಾಶಕ್ಕೆ ಕೈ ಚಾಚಿರುವ ಗುಡ್ಡಬೆಟ್ಟಗಳ ಸಾಲು ಸಾಲು, ಹಸಿರು ಹಂದರವಾಗಿ ಕಂಗೊಳಿಸುವ ಅಡಕೆ ತೋಟ, ತಂಪು ಸೂಸುವ ತಂಗಾಳಿ, ಕಣ್ಣಂಚಿನವರೆಗೂ ಕಾಣುವ ಹಸಿರು ವನಸಿರಿ ನಮ್ಮನ್ನು ಪುಳಕಗೊಳಿಸುತ್ತದೆ.



 




ಸೇವಾ ವಿವರ (ರೂ ಗಳಲ್ಲಿ)

ಸ್ವಹಸ್ತ ಪಾದುಕಾ ಪೂಜೆ - 200

ನೈವೇದ್ಯ ಸಹಿತ ಕಲ್ಪೋಕ್ತ

ಮಹಾಪೂಜೆ  - 250

ಅಭಿಷೇಕ ಸೇವಾ -175

ಅರ್ಚನಾ ಸೇವೆ - 100

ನಿತ್ಯ ಗುರುಸೇವಾ- 365

ನಂದಾ ದೀಪ 1 ತಿಂಗಳಿಗೆ-  300

ಗೋ ಸೇವಾ- 1000


 

ಸದ್ಗುರು ಭಗವಾನ್ ಶ್ರೀಧರ ಸ್ವಾಮೀಜಿಯವರು ಲೋಕೋದ್ಧಾರ ಗೈಯುತ್ತ 1951ರಲ್ಲಿ ಈ ರಮಣೀಯ ಸ್ಥಳಕ್ಕೆ ಪಾದಾರ್ಪಣೆ  ಮಾಡಿದರು. ಇಲ್ಲಿ ಆಧ್ಯಾತ್ಮದ ಬೆಳಕು ಬೀರಿದರು. ಇಲ್ಲಿಯೇ ಭಗವಂತನ ಪಾದ ಸೇರಿದರು. ಈ ಸ್ಥಳದಲ್ಲಿಯೇ ಶ್ರೀಧರಾಶ್ರಮ ತಲೆ ಎತ್ತಿದೆ.



ದೇಶಾದ್ಯಂತ ಜಾತಿ ಮತ, ಭೇದವಿಲ್ಲದೆ ಶ್ರೀಧರ ಸ್ವಾಮೀಜಿಯವರನ್ನು ಆರಾಧಿಸುವ ಭಕ್ತರಿದ್ದಾರೆ. ಮಲೆನಾಡು ಪ್ರಾಂತ್ಯದ್ಲ್ಲಲಿ ಅದರಲ್ಲೂ ಹವ್ಯಕರಲ್ಲಿ ಶ್ರೀಧರ ಸ್ವಾಮೀಜಿಯವರ ಭಾವಚಿತ್ರ ಇಲ್ಲದ ಮನೆಯೇ ಇಲ್ಲವೆನ್ನಬಹುದು.

 

ಭಕ್ತರಿಂದ ಪಾದ ಕಾಣಿಕೆ  ಸೇರಿದಂತೆ ಯಾವುದೇ ರೀತಿಯ ಕಾಣಿಕೆಯನ್ನು ಅವರು ಸ್ವೀಕರಿಸುತ್ತಿರಲಿಲ್ಲ. ಆದರೂ ಈ ಕ್ಷೇತ್ರಕ್ಕೆ ಬಂದ ಭಕ್ತರು ಹಸಿದು ಹಾಗೇ ಹಿಂದಿರುಗಬಾರದೆಂಬ ದೃಷ್ಟಿಯಿಂದ ಆಶ್ರಮದಲ್ಲಿ ಅನ್ನ ದಾಸೋಹ ಪ್ರಾರಂಭಿಸಿದ್ದರು. ಅದು ಈಗಲೂ ನಡೆದುಕೊಂಡು ಬಂದಿದೆ. ಸಾವಿರ ಭಕ್ತರು ಏಕಕಾಲಕ್ಕೆ ಊಟ ಮಾಡುವ ವ್ಯವಸ್ಥೆಯಿದೆ.



1973ರಲ್ಲಿ ಶ್ರೀಧರ ಸ್ವಾಮೀಜಿಯವರು ಲೌಕಿಕ ಜಗದಿಂದ ದೂರವಾದರು. ಶ್ರೀಗಳ ಸಮಾಧಿ ಸ್ಥಳದಲ್ಲಿ ಭವ್ಯ ಕಟ್ಟಡವೊಂದು ನಿರ್ಮಾಣವಾಗಿದೆ. ಆಶ್ರಮದ ಆವರಣದ ಶ್ರೀಧರ ತೀರ್ಥದಲ್ಲಿ ಸ್ನಾನ ಮಾಡಿದರೆ ಮನೋಭಿಲಾಷೆ ಈಡೇರುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಆಶ್ರಮದ ವತಿಯಿಂದ ಗೋಶಾಲೆ, ವೇದ ಪಾಠಶಾಲೆ ಜತೆಗೆ ವಿವಿಧ ಸಾಮಾಜಿಕ ಸೇವಾ ಕಾರ್ಯಗಳು ನಡೆಯುತ್ತವೆ.



ಶ್ರೀಧರ ಆರೋಗ್ಯ ಘಟಕದಿಂದ ಆರೋಗ್ಯ ತಪಾಸಣಾ ಶಿಬಿರ ನಡೆಸಿ ಉಚಿತ ಔಷಧಿ ನೀಡಲಾಗುತ್ತಿದೆ. ಶ್ರೀಧರ ಸಂಜೀವಿನಿ ಯೋಜನೆಯಡಿ ಆರ್ಥಿಕವಾಗಿ ದುರ್ಬಲರಾದವರಿಗೆ ವೈದ್ಯಕೀಯ ಚಿಕಿತ್ಸೆ, ಫ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದೆ.



ಪ್ರತಿ ವರ್ಷ ಶ್ರೀದತ್ತ ಜಯಂತಿ, ಶ್ರೀಗಳ ಆರಾಧನೆ, ಗುರುಪೂರ್ಣಿಮೆಯಂದು ವಿಶೇಷ ಕಾರ್ಯಕ್ರಮ, ಪ್ರತಿ ಹುಣ್ಣಿಮೆಯಂದು ಹೋಮ ಹವನ ನಡೆಯುತ್ತವೆ. ಪರಸ್ಥಳದ ಭಕ್ತರಿಗೆ ವಸತಿ ಸೌಕರ್ಯವಿದೆ. ಸಾಗರದಿಂದ ಬಸ್ ಸೌಲಭ್ಯವಿದೆ. ಮಾಹಿತಿಗೆ 08183- 236166, 236011, 296583

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry