ಶನಿವಾರ, ಮೇ 21, 2022
23 °C
ಬಿಜೆಪಿಗೆ ಬಿಎಸ್‌ವೈ ಸೇರ್ಪಡೆ ವಿಚಾರ, ಬೆಂಗಳೂರಿಗೆ ನಿಯೋಗ ವಾಪಸ್

ವರಿಷ್ಠರಿಂದ ದೊರೆಯದ ಸಕಾರಾತ್ಮಕ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಯಡಿಯೂರಪ್ಪ ಅವರನ್ನು ಮರಳಿ ಬಿಜೆಪಿಗೆ ಕರೆತರುವ ಪ್ರಯತ್ನವನ್ನು ರಾಜ್ಯ ಬಿಜೆಪಿ ನಾಯಕರ ಒಂದು ಗುಂಪು ಮಂಗಳವಾರ ಮುಂದುವರಿಸಿತು.  ದೆಹಲಿ ನಾಯಕರಿಂದ ಸಕಾರಾತ್ಮಕ ಭರವಸೆ ದೊರೆಯದ ಹಿನ್ನೆಲೆಯಲ್ಲಿ ಬಂದ ದಾರಿಗೆ ಸುಂಕವಿಲ್ಲವೆನ್ನುವಂತೆ ಬೆಂಗಳೂರಿಗೆ ಹಿಂತಿರುಗಿತು.ಯಡಿಯೂರಪ್ಪರನ್ನು ಪುನಃ ಬಿಜೆಪಿ ಸೇರಿಸಿಕೊಳ್ಳುವಂತೆ ಒತ್ತಡ ಹೇರಲು ಬಂದಿದ್ದ ಬಿಜೆಪಿ ನಾಯಕರ ನಿಯೋಗವು ಬೆಳಿಗ್ಗೆ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ರಾಜ್ಯದ ಉಸ್ತುವಾರಿ ತಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಚರ್ಚಿಸಿತು. ಆದರೆ, ಎರಡೂ ಬಣಗಳು ತಮ್ಮ ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ ಸಮಸ್ಯೆ ಬಗೆಹರಿಯಲಿಲ್ಲ ಎಂದು ಮೂಲಗಳು ತಿಳಿಸಿವೆ.ಒಂದು ಹಂತದಲ್ಲಿ ಮಾಜಿ ಸಚಿವ ಬಸವರಾಜ ಬೊಮ್ಮಾಯಿ, `ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಅನಂತ್ ಒಪ್ಪಿದ್ದಾರೆ' ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಆದರೆ, ಇದನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳ ಆಪ್ತ ವಲಯಗಳು ಖಚಿತಪಡಿಸಿಲ್ಲ. ತಾವರ್‌ಚಂದ್ ಗೆಹ್ಲೋಟ್, `ಯಡಿಯೂರಪ್ಪ ಅವರಿಂದಲೇ ಬಿಜೆಪಿ ಸೇರುವ ಪ್ರಸ್ತಾಪ ಬರಲಿ' ಎನ್ನುವ ಮೊದಲಿನ ಹೇಳಿಕೆಯನ್ನೇ ಪುನರುಚ್ಚರಿಸಿದ್ದಾರೆನ್ನಲಾಗಿದೆ.ರಾಜ್ಯ ಬಿಜೆಪಿ ನಾಯಕರಾದ ಮುರುಗೇಶ ನಿರಾಣಿ, ಅರವಿಂದ ಲಿಂಬಾವಳಿ, ಕೆ.ಜಿ. ಬೋಪಯ್ಯ, ಡಿ.ಬಿ.ಚಂದ್ರೇಗೌಡ, ಜಿ.ಎಂ. ಸಿದ್ದೇಶ್ವರ್, ಉಮೇಶ್ ಕತ್ತಿ ಮತ್ತಿತರರನ್ನು ಒಳಗೊಂಡ ರಾಜ್ಯ ಬಿಜೆಪಿ ನಾಯಕರ ನಿಯೋಗ ದೆಹಲಿಗೆ ಆಗಮಿಸಿತ್ತು. ಯಡಿಯೂರಪ್ಪ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳದಿದ್ದರೆ ಲೋಕಸಭೆ ಚುನಾವಣೆಯಲ್ಲೂ ಸೋಲು ಅನುಭವಿಸಬೇಕಾಗುತ್ತದೆ ಎಂದು ನಿಯೋಗ ಎಚ್ಚರಿಸಿತು.ಆದರೆ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, `ಯಡಿಯೂರಪ್ಪರ ಮರು ಸೇರ್ಪಡೆ ಕುರಿತು ಏನಾದರೂ ತೀರ್ಮಾನ ಕೈಗೊಳ್ಳಿ. ನಿಧಾನ ಮಾಡಬೇಡಿ. ವಿಳಂಬ ಮಾಡಿದರೆ ಕಾರ್ಯಕರ್ತರಿಗೆ ಗೊಂದಲವಾಗುತ್ತದೆ' ಎಂದು ವರಿಷ್ಠರನ್ನು ಕೋರಿದ್ದಾರೆ. ಗೌಡರು ಯಾರ ಪರವೂ ವಕಾಲತ್ತು ವಹಿಸಲು ದೆಹಲಿಗೆ ಬಂದಿರಲಿಲ್ಲ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.