ಗುರುವಾರ , ಡಿಸೆಂಬರ್ 12, 2019
17 °C

ವರಿಷ್ಠರಿಗೆ ತೊಂದರೆ ಕೊಡಲ್ಲ: ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರಿಷ್ಠರಿಗೆ ತೊಂದರೆ ಕೊಡಲ್ಲ: ಬಿಎಸ್‌ವೈ

ಹುಬ್ಬಳ್ಳಿ: `ಮುಖ್ಯಮಂತ್ರಿ ಹುದ್ದೆ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಸೇರಿದಂತೆ ನನಗೆ ಯಾವುದೇ ಹುದ್ದೆ ಬೇಡ. ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರೇ ಬಜೆಟ್ ಮಂಡಿಸಲಿದ್ದು ಇದರಲ್ಲಿ ಯಾವುದೇ ಅನುಮಾನ ಬೇಡ~ ಎಂದು ಬಿಜೆಪಿ ಮುಖಂಡ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಆರ್‌ಎಸ್‌ಎಸ್ ಶಿಬಿರದಲ್ಲಿ ಪಾಲ್ಗೊಳ್ಳಲು ಭಾನುವಾರ ನಸುಕಿನಲ್ಲಿ ನಗರಕ್ಕೆ ಆಗಮಿಸಿದ ಅವರು, ರೈಲು ನಿಲ್ದಾಣದಲ್ಲಿ ವರದಿಗಾರರ ಜತೆ ಮಾತನಾಡಿದರು.

`ಬಜೆಟ್ ತಯಾರಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಅಪೇಕ್ಷಿಸಿದ ಸಲಹೆಗಳನ್ನು ಈಗಾಗಲೇ ನೀಡಿದ್ದೇನೆ. ಅಗತ್ಯವಾದ ಸಹಕಾರವನ್ನೂ ಕೊಡುತ್ತೇನೆ~ ಎಂದು ತಿಳಿಸಿದರು.

`ನಾಯಕತ್ವ ವಿವಾದ ಮುಗಿದ ಅಧ್ಯಾಯವಾಗಿದ್ದು, ನಾನೊಬ್ಬ ಬಿಜೆಪಿ ಸಾಮಾನ್ಯ ಕಾರ್ಯಕರ್ತ ಹಾಗೂ ಶಾಸಕ ಮಾತ್ರ. ಇನ್ನು ಮುಂದೆ ಯಾವುದೇ ಕಾರಣಕ್ಕೂ ವರಿಷ್ಠರಿಗೆ ತೊಂದರೆ ಕೊಡುವುದಿಲ್ಲ. ಅವರೆಲ್ಲ ಚುನಾವಣಾ ಕಾರ್ಯದಲ್ಲಿ ತಲ್ಲೆನರಾಗಿದ್ದಾರೆ~ ಎಂದು ಅವರು ಹೇಳಿದರು.

`ಹೋಮ-ಹವನವನ್ನು ಕಳೆದ 25 ವರ್ಷಗಳಿಂದ ಮಾಡಿಸುತ್ತಲೇ ಬಂದಿದ್ದೇನೆ. ಮುಖ್ಯಮಂತ್ರಿ ಹುದ್ದೆಯನ್ನು ಬಯಸಿ ಯಾವುದೇ ಹೋಮ ನಡೆಸಿಲ್ಲ~ ಎಂದು ಸ್ಪಷ್ಟಪಡಿಸಿದರು. `ನಮ್ಮಲ್ಲಿ ಈಶ್ವರಪ್ಪ ಬಣ, ಯಡಿಯೂರಪ್ಪ ಬಣ ಎಂದೇನೂ ಬಣಗಳಿಲ್ಲ. ಇರುವುದೊಂದೇ ಬಣ. ಅದು ಬಿಜೆಪಿಯದ್ದು~ ಎಂದು ಅವರು ವಿವರಿಸಿದರು.

`ಮೂರು ದಿನಗಳ ಕಾಲ ಆರ್‌ಎಸ್‌ಎಸ್ ಶಿಬಿರವನ್ನು ಆಯೋಜಿಸಲಾಗಿತ್ತು. ಅನಿವಾರ್ಯ ಕಾರಣಗಳಿಂದ ಮೊದಲ ಎರಡು ದಿನಗಳಲ್ಲಿ ಇತ್ತ ಬರಲು ಸಾಧ್ಯವಾಗಿರಲಿಲ್ಲ. ಈಶ್ವರಪ್ಪ, ಅನಂತಕುಮಾರ್ ಜತೆ ಮುಖಾಮುಖಿ ಆಗುವುದನ್ನು ತಪ್ಪಿಸಿಕೊಳ್ಳಲೇನೂ ಹಾಗೆ ಮಾಡಿರಲಿಲ್ಲ. ನಾನು ಯಾವ ವಿಷಯವನ್ನೂ ಮುಚ್ಚಿಡುವುದಿಲ್ಲ~ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

`ಆರ್‌ಎಸ್‌ಎಸ್‌ಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಶಿಬಿರದಲ್ಲಿ ರಾಜಕೀಯ ಚರ್ಚೆ ಏನೂ ನಡೆದಿಲ್ಲ. ನನ್ನ ಭೇಟಿಗೆ ಯಾವುದೇ ರಾಜಕೀಯ ಅಜೆಂಡಾ ಇರಲಿಲ್ಲ~ ಎಂದು ಅವರು ಹೇಳಿದರು.  ಯಡಿಯೂರಪ್ಪ ಇಡೀ ದಿನ ಶಿಬಿರದಲ್ಲೇ ಇದ್ದರು. ಸಮಾರೋಪ ಸಮಾರಂಭದಲ್ಲೂ ಅವರು ಗಣವೇಷಧಾರಿಯಾಗಿ ಪಾಲ್ಗೊಂಡಿದ್ದರು.

ತಮ್ಮ ಬೆಂಬಲಿಗ ಸಚಿವ-ಶಾಸಕರ ಪಡೆಯನ್ನು ಕಟ್ಟಿಕೊಂಡು ಶಿಬಿರದಲ್ಲಿ ಸುತ್ತಾಡಿದರು. ಪ್ರದರ್ಶಿನಿ ವೀಕ್ಷಿಸುವಾಗ ಜತೆಯಲ್ಲಿದ್ದ ಬೆಂಬಲಿಗರು `ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಜಯವಾಗಲಿ~ ಎಂದು ಘೋಷಣೆಯನ್ನು ಕೂಗಿದರು.

ಪ್ರದರ್ಶಿನಿ ನೋಡಲು ಬಂದ ಜನಸಾಮಾನ್ಯರಿಗೆ ತೊಂದರೆ ಆಗುವುದು ಎಂದು ಸ್ವಯಂಸೇವಕರು ಬಿಎಸ್‌ವೈ ಬೆಂಬಲಿಗರ ವಿರುದ್ಧ ಆಕ್ಷೇಪ ಎತ್ತಿದರು. ನೂಕಾಟ-ತಳ್ಳಾಟದಲ್ಲಿ ಕೆಲವು ಹೂವಿನ ಕುಂಡಗಳು ಒಡೆದವು.

ಬೆಂಬಲಿಗರಿಂದ `ಮುಖ್ಯಮಂತ್ರಿ~ ಎನಿಸಿಕೊಳ್ಳುತ್ತಾ ಸುತ್ತಾಡಿದ ಯಡಿಯೂರಪ್ಪ ಕೊನೆಗೆ ಕಾರು ಏರಿ ಹೊರಟರು.

ಈ ಸಂದರ್ಭದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿದರೂ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)