ಶುಕ್ರವಾರ, ಏಪ್ರಿಲ್ 23, 2021
22 °C

ವರುಣನಿಗೊಂದು ಸುಗ್ರೀವಾಜ್ಞೆ ನೀಡು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಯೋಧ್ಯಾ ರಾಮನಿಗೆ ನಮಿಸುತ್ತಾ, ನಾವೆಲ್ಲಾ ಮಳೆಯಿಂದ ವಂಚಿತರಾಗಿರುವುದು ನಿನಗೇ ಗೊತ್ತಿದೆ. ಅದೇನೋ ನಿಮ್ಮ ರಾಜ್ಯದಲ್ಲಿ `ಮಳೆ ಸುರಿಸದ ತಪ್ಪಿಗೆ ಇಂದ್ರನಿಗೇ ನೋಟಿಸ್~ ಜಾರಿ ಮಾಡಿದ್ದಾರಂತಲ್ಲ, ಈ ವಿಚಾರ ನಮಗೆ ತಡವಾಗಿ ತಿಳಿದು ಸಿಕ್ಕಾಪಟ್ಟೆ ಸಿಡುಕಾಟ ಶುರುವಾಗಿದೆ. ಸದರಿ ವಿಚಾರ ನಮಗೆ ಮೊದಲೇ ಹೊಳೆದಿದ್ದರೆ ನಾವೂ ಇಂದ್ರನಿಗೆ ನೋಟಿಸ್ ಕೊಟ್ಟು ಜವಾಬ್ದಾರಿಯಿಂದ ಜಾರಿಕೊಳ್ಳಬಹುದಿತ್ತು.ಆದರೂ ನಮಗೂ ನಿನಗೂ ಇರುವ ಸಂಬಂಧ ಇನ್ನೂ ಪೂರ್ತಿ ಹದಗೆಟ್ಟಿಲ್ಲದಿರುವುದರಿಂದ ನಿನಗೇ ನೇರವಾಗಿ ಈ ಪತ್ರ ಬರೆಯುತ್ತಿದ್ದೇನೆ. ಅಯ್ಯೋ `ರಾಮ~, ನಿನ್ನ ರಾಜ್ಯದಲ್ಲೇ ನಿನಗೆ ಈ ಸ್ಥಿತಿ ಬಂತೇ? ಭಕ್ತರು ನೇರವಾಗಿ ನಿನ್ನ ಬಳಿ ಬರದೆ ಇಂದ್ರನಿಗೆ ನೋಟಿಸ್ ಏಕೆ ಜಾರಿ ಮಾಡಿದರು? ಅವನೇನಾದರೂ ಒಳಗೊಳಗೇ ಲಾಬಿ ಮಾಡುತ್ತಿರಬಹುದೇ? ಮೋಡಗಳನ್ನು ಕಳುಹಿಸಿಯೂ ಮಳೆ ಸುರಿದಿಲ್ಲ ಎಂದರೆ ಇಂದ್ರನಿಗೆ ಅವನ ಭಾಗ ಸರಿಯಾಗಿ ತಲುಪಿಲ್ಲ ಎಂದಾಯಿತು. ಅಥವಾ ಈ ಸಂವತ್ಸರದಲ್ಲಿ ಇನ್ನೂ ಅನಿವಾರ್ಯ ಕಾರಣಗಳಿಂದ ಖಾತೆ ಹಂಚಿಕೆಯಾಗದೇ ಎಲ್ಲಾ ಖಾತೆಗಳೂ ನಿನ್ನ ಬಳಿಯೇ ಇದ್ದು ನಿನಗೆ ಒತ್ತಡವಾಗಿದೆಯೋ ತಿಳಿಯುತ್ತಿಲ್ಲ.ಅಲ್ಲಿ ನಿನ್ನ ರಾಜ್ಯದಲ್ಲಿ ಏನೇ ಆಗಿರಲಿ, ಇಲ್ಲಿ ನೀನು, ಇನ್ನೂ ಸರಿಯಾಗಿ ಕಣ್ಣು ಬಿಟ್ಟು ನೋಡಿ, ಕಿವಿಗೊಟ್ಟು ಕೇಳಿ, ಜನರ ಪ್ರಾರ್ಥನೆ ಏಕೆ ಸ್ವೀಕರಿಸುತ್ತಿಲ್ಲಾ? ನೀನೇ ಹೈಕಮಾಂಡ್ ಎಂದುಕೊಂಡು ನಾವು ನೇರವಾಗಿ ನಿನ್ನನ್ನೇ ನಂಬಿಕೊಂಡಿದ್ದೇವೆ. ಇನ್ನೂ ನೋಡದ ಬಗ್ಗೆ ಯೋಚನೆಯೇ ಇಲ್ಲದಿರುವಾಗ, ಆಗಿನ್ನೂ ಚಳಿಗಾಲ ಮುಗಿದು ಬಿಸಿಲು ಈ ಕಡೆ ಮುಖ ಮಾಡುತ್ತಿರುವಾಗಲೇ, ನಾವು ದೇವರೊಂದು ನಾಮ ಹಲವು ಎಂದು ನಂಬಿ ಎಲ್ಲಾ ಮಠ, ಮಂದಿರ, ಮಸೀದಿ, ಚರ್ಚ್‌ಗಳಿಗೂ ಬಜೆಟ್‌ನಲ್ಲೇ ನಿನ್ನ ಪಾಲು ನಿನಗೆ ಸಲ್ಲಿಸಿದ್ದೇವೆ.ಆದರೂ ನೀನು ಈ ಕಡೆ ಗಮನ ಹರಿಸಲೇ ಇಲ್ಲ. ನಾವು ಕಳುಹಿಸಿದ ಭಕ್ತಿಪೂರ‌್ವಕ ಕಾಣಿಕೆ ನಿನಗೆ ತಲುಪಿತೋ ಇಲ್ಲವೋ, ಮದ್ಯೆ ಏನಾದರೂ `ಕೈವಾಡ~ವಾಯಿತೋ ಗೊತ್ತಾಗದೆ ಚಡಪಡಿಕೆ ಆಗಿದೆ. ಆದರೂ ಮತ್ತೆ ಕಳೆದ ತಿಂಗಳು ನಾವು ಸರ್ಕಾರದಿಂದ ಆದೇಶ ಹೊರಡಿಸಿ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲೂ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸುವಂತೆ ಸೂಚಿಸಿದ್ದೇವೆ.ಏನೇ ಆದರೂ ಬರ ಪರಿಹಾರದ ಹಣ ಪೂರ್ತಿ ಬಿಡುಗಡೆಯಾಗಿ ಬರುವವರೆಗೂ, ಮೋಡಗಳು ದಟ್ಟೈಸಿ ಬಂದರೂ, ಮಳೆ ಸುರಿಸದಂತೆ ನೀನು ವರುಣನಿಗೆ ಸುಗ್ರೀವಾಜ್ಞೆ ನೀಡು. ನಂತರ ಮಳೆ ಚಚ್ಚಿ ಬಾರಿಸಿ ನೆರೆ ಪರಿಹಾರವೂ ಬಂದು, ರಾಜ್ಯ ಸುಭಿಕ್ಷವಾಗಿರುವಂತೆ ಮಾಡು. ನಮ್ಮ ಮೇಲೆ ನಿನಗೆ ಕರುಣೆ ಇರಲಿ.ನೀನು ಹೀಗೆ ಮಾಡಿದ್ದೇ ಆದರೆ, ನಾವು ನಮ್ಮ ನಾಡಹಬ್ಬ ದಸರಾವನ್ನು ಅದ್ದೂರಿಯಾಗಿ ಯಾವುದೇ ತಕರಾರಿಲ್ಲದೆ ಮಾಡಬಹುದು. ಆಗ ಸಹ ನಾವು ತಾಯಿ ಚಾಮುಂಡೇಶ್ವರಿ ಮೂಲಕ ನಿನ್ನ ಪೂಜೆ ಮಾಡುತ್ತೇವೆ. ಹಾಗೇ ನಮ್ಮ ಮೇಲಿನ ನಿನ್ನ ಕೃಪಾಕಟಾಕ್ಷ ಇನ್ನು ಮುಂದುವರೆದರೆ, ನವೆಂಬರ್‌ನಲ್ಲಿ ತಾಯಿ ಭುವನೇಶ್ವರಿಯ ಮೂಲಕವೂ ನಿನ್ನ ಭಜನೆ ಮಾಡುತ್ತೇವೆ ಅಲ್ಲದೆ ಕಾಲಕಾಲಕ್ಕೆ ಮಳೆಯಾಗಿ, ಕೆರೆ, ಕಟ್ಟೆಗಳು ತುಂಬಿದ್ದರೆ ನೆರೆಹೊರೆಯವರೊಡನೆಯೂ ಸೌಹಾರ್ದವಾಗಿದ್ದು ಆದರ್ಶ ರಾಮರಾಜ್ಯವಾಗಬಹುದು.ನಿನಗೆ ಕಾಲ ಕಾಲಕ್ಕೆ ನಾವು ಕಳುಹಿಸುತ್ತಿರುವ ಕಪ್ಪ ಕಾಣಿಕೆ ಸಾಲುತ್ತಿದೆಯೋ ಇಲ್ಲವೋ ತಿಳಿಯುತ್ತಿಲ್ಲ. ಇಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಹೆಚ್ಚು ಕಾಣಿಕೆ ಕೊಡಲು ಸಾಧ್ಯವಾಗದಿರುವುದಕ್ಕೆ ಅನ್ಯಥಾ ಭಾವಿಸುವುದು ಬೇಡ. ಲೋಕಾಯುಕ್ತರ ಕಣ್ಣೋಟಕ್ಕೆ ಹೆದರಿ `ಕಪ್ಪ~ವಂತೂ ಗಪ್ ಎಂದು ನಿಂತು ಹೋಗಿದೆ.ದಯವಿಟ್ಟು ನಮ್ಮ ಮೊರೆ ಆಲಿಸಿ, ನಿನ್ನ ಸಂಪುಟ ಸಭೆಯಲ್ಲಿ, ನಿನ್ನ ದಿಕ್ಪಾಲಕರಿಗೆ ನಮ್ಮ ರಾಜ್ಯದ ಬಗ್ಗೆ ವಿಶೇಷ ಆಸ್ಥೆ ತೋರಿಸುವಂತೆ ನೀನು ಹೇಳಿದ್ದೇ ಆದರೆ ಅದರ ಫಲ ನಿನಗೆ ಚುನಾವಣೆನಂತರ ತಲುಪಿಸಲು ವ್ಯವಸ್ಥೆ ಮಾಡುತ್ತೇವೆ.

ಇಂತಿ .....ಸುಭಿಕ್ಷ ರಾಮ ರಾಜ್ಯದ ಕನಸಿನಲ್ಲಿರುವ, ಮಣ್ಣಿನ ಮಕ್ಕಳಿಂದ ಹಿಡಿದು, ಚಿನ್ನದ ಮಕ್ಕಳವರೆಗೂ .... ಕೋಟಿ ಕೋಟಿ ಕನ್ನಡಿಗರ ಪರವಾಗಿ ... ಕರ್ನಾಟಕ ಪ್ರಜೆ.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು.                    

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.