ಗುರುವಾರ , ಮಾರ್ಚ್ 4, 2021
30 °C

ವರುಣನ ಅಬ್ಬರ: ಜನ ಜೀವನ ತತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರುಣನ ಅಬ್ಬರ: ಜನ ಜೀವನ ತತ್ತರ

ಹಾಸನ: ಕಳೆದ ಕೆಲವು ದಿನಗಳಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಮಳೆಯಿಂದ ನೂರಾರು ಮನೆಗಳಿಗೆ ಹಾನಿಯಾಗಿರುವುದಲ್ಲದೆ ಹಲವು ಎಕರೆಗಳಲ್ಲಿ ಬೆಳೆದಿರುವ ವಿವಿಧ ಬೆಳೆಗಳಿಗೂ ಹಾನಿಯಾಗಿದೆ.ಜಿಲ್ಲಾಡಳಿತ ಸಂಗ್ರಹಿಸಿರುವ ಮಾಹಿತಿಯ ಪ್ರಕಾರ ಏ.26ರಿಂದ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟಾರೆ 20ಲಕ್ಷ ರೂಪಾಯಿಗೂ ಹೆಚ್ಚಿನ ಹಾನಿ ಸಂಭವಿಸಿದೆ.

ಜಿಲ್ಲೆಯಾದ್ಯಂತ 161 ಮನೆಗಳಿಗೆ ಹಾನಿಯಾಗಿದೆ. 41.52 ಎಕರೆ ಭೂಮಿಯಲ್ಲಿ ಬೆಳೆದಿರುವ ವಿವಿಧ ಬೆಳೆಗಳಿಗೆ ಮಳೆಯಿಂದ ಹಾನಿ ಉಂಟಾಗಿದೆ ಎಂದು ವರದಿ ತಿಳಿಸಿದೆ.ಅರಕಲಗೂಡು ತಾಲ್ಲೂಕಿನಲ್ಲಿ ಅತಿ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದರೆ, ಅರಸೀಕೆರೆ ತಾಲ್ಲೂಕಿನಲ್ಲಿ ಗರಿಷ್ಠ ಬೆಳೆಹಾನಿ ಸಂಭವಿಸಿದೆ. ಅರಕಲಗೂಡಿನಲ್ಲಿ ಒಟ್ಟು 55 ಮನೆಗಳಿಗೆ ಹಾನಿಯಾಗಿದೆ. ಆದರೆ ಅಲ್ಲಿ ಬೆಳೆಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಅರಸೀಕೆರೆಯಲ್ಲಿ 18 ಮನೆಗಳು ಹಾಗೂ 21.05 ಎಕರೆ ಜಮೀನಿನಲ್ಲಿ ಬೆಳೆದ ಬೆಳೆಗೆ ಹಾನಿಯಾಗಿದೆ. ಉಳಿದಂತೆ ಬೇಲೂರಿನಲ್ಲಿ 18 ಮನೆಗಳು ಹಾಗೂ ಸುಮಾರು ಅರ್ಧ ಎಕರೆ ಬೆಳೆಗೆ, ಹಾಸನದಲ್ಲಿ 70  ಮನೆಗಳು ಹಾಗೂ 20 ಎಕರೆ ಬೆಳೆ, ಹೊಳೆನರಸೀಪುರದಲ್ಲಿ 4 ಮನೆಗಳಿಗೆ ಹಾಗೂ ಸಕಲೇಶಪುರದಲ್ಲಿ ಒಂದು ಮನೆಗೆ ಹಾನಿಯಾದ ವರದಿಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 20ಲಕ್ಷ ರೂಪಾಯಿ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಶುಕ್ರವಾರವೂ ಮಳೆ ಮುಂದುವರಿದಿತ್ತು. ಶುಕ್ರವಾರ ಮಧ್ಯಾಹ್ನವೇ ಆರಂಭವಾದ ಮಳೆ ರಾತ್ರಿ ಒಂಬತ್ತು ಗಂಟೆ ವರೆಗೂ ಸುರಿಯುತ್ತಿತ್ತು. ಬರಪೀಡಿತ ತಾಲ್ಲೂಕು ಚನ್ನರಾಯಪಟ್ಟಣದಲ್ಲಿ ಶುಕ್ರವಾರ ಸರಾಸರಿ 48.6 ಮಿ.ಮೀ. ಮಳೆಯಾಗಿದೆ. ಉಳಿದಂತೆ ಆಲೂರಿನಲ್ಲಿ 40.1, ಅರಕಲಗೂಡಿನಲ್ಲಿ 12.2, ಅರಸೀಕೆರೆಯಲ್ಲಿ 27, ಬೇಲೂರಿನಲ್ಲಿ 31, ಹಾಸನದಲ್ಲಿ 20.2, ಹೊಳೆನರಸೀಪುರದಲ್ಲಿ 8.3 ಹಾಗೂ ಸಕಲೇಶಪುರದಲ್ಲಿ 13.8 ಮಿ.ಮೀ. ಮಳೆಯಾಗಿದೆ.ಬರದಿಂದ ಕುಡಿಯುವ ನೀರಿಗೂ ಸಂಕಷ್ಟ ಅನುಭವಿಸುತ್ತಿದ್ದ ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ, ಜಾವಗಲ್, ಬಾಣಾವರ ಹೋಬಳಿಗಳಲ್ಲೂ ಮಳೆಯಾಗಿದೆ.ಜಿಲ್ಲೆಯಾದ್ಯಂತ ಮಳೆಯಾಗಿರುವುದರಿಂದ ಹೇಮಾವತಿ ಜಲಾಶಯದ ಒಳಹರಿವಿನಲ್ಲೂ ಗಮನಾರ್ಹ ಏರಿಕೆಯಾಗಿದೆ. ಏ.26ರಂದು ಒಳಹರಿವು 396 ಕ್ಯೂಸೆಕ್ ಇದ್ದರೆ ಶನಿವಾರ ಅದರ ಪ್ರಮಾಣ 1673 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ದಿನ 21ಕ್ಯೂಸೆಕ್ ಒಳಹರಿವಿತ್ತು ಎಂದು ಎಂಜಿನಿಯರ್‌ಗಳು `ಪ್ರಜಾವಾಣಿ~ಗೆ ತಿಳಿಸಿದರು.

ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು!

ಹಳೇಬೀಡು: ಪಟ್ಟಣ ಸೇರಿದಂತೆ ಸುತ್ತಲಿನ ಭಾಗದಲ್ಲಿ ಶುಕ್ರವಾರ ಗಾಳಿಯೊಂದಿಗೆ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಬಸ್ತಿಹಳ್ಳಿ ಗ್ರಾಮದಲ್ಲಿ 15 ಮನೆಗಳ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿದೆ.ಮಳೆಯ ರುದ್ರನರ್ತನಕ್ಕೆ ಹಳೇಬೀಡು ಹೋಬಳಿಯಲ್ಲಿ ತೆಂಗು, ಬಾಳೆ ಮೊದಲಾದ ಬೆಳೆಗಳು ನೆಲಕಚ್ಚಿವೆ. ಪ್ರತಿ ಗ್ರಾಮದಲ್ಲೂ ಮಳೆ ಸುರಿದಿದ್ದು, ರೂ. 80 ಲಕ್ಷ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.ಪಟ್ಟಣದ ಮುಖ್ಯರಸ್ತೆಯ ಚರಂಡಿ ಹಾಗೂ ಫುಟ್‌ಫಾತ್ ಅವ್ಯವಸ್ಥೆಯಿಂದ ಚರಂಡಿಯಲ್ಲಿ ನೀರು ಹರಿಯದೆ, ಮುಖ್ಯರಸ್ತೆ ಹಾಗೂ ದೇವಸ್ಥಾನ ರಸ್ತೆಗಳಲ್ಲಿ ಅಪಾಯ ಮಟ್ಟದಲ್ಲಿ ಹೊಳೆಯಂತೆ ಹರಿಯಿತು. ಬೂದಿಗುಂಡಿ, ಪರಿಶಿಷ್ಟ ಜನಾಂಗದ ಕಾಲೊನಿ ಮುಂತಾದ ತಗ್ಗು ಪ್ರದೇಶದ ಸ್ಥಳಗಳ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪಡಬಾರಾದ ಕಷ್ಟ ಅನುಭವಿಸಿದರು.

ವಿದ್ಯುತ್ ಕಂಬ ಮುರಿದು ಬಿದ್ದು, ಲೈನ್‌ಗಳು ತುಂಡಾಗಿದ್ದರಿಂದ ವಿದ್ಯುತ್ ಸರಬರಾಜು ಮಾಡಲು

ಸೆಸ್ಕ್ ಕಂಪೆನಿ ಸಿಬ್ಬಂದಿ ಮಳೆಯಲ್ಲೂ ಶ್ರಮ ವಹಿಸಿದರು. ನಾಡ ಕಚೇರಿ ಕಟ್ಟಡ ಸೋರಿಕೆಯಾ ಗುತ್ತಿ ರುವುದರಿಂದ ಮೊಳಕಾಲು ತನಕ ನೀರು ನಿಂತು ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಖಲೆಗಳ ರಕ್ಷಣೆಗೆ ಪರದಾಡಿದರು. ಹೊಯ್ಸಳ ದೇವಾಲಯ ಆವರಣದ ಉದ್ಯಾನಲ್ಲಿ ಮರಗಳು ಧರೆಗುರುಳಿವೆ.ಬೇಲೂರು ರಸ್ತೆಯಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ನಿಗಮದವರು ಕುಂಟಮ್ಮ ದೇಗುಲ ಬಳಿ ದ್ವಾರಸಮುದ್ರ ಕೆರೆಯ ಕೋಡಿಹಳ್ಳಕ್ಕೆ ರಸ್ತೆಗೆ ಅಡ್ಡಲಾಗಿ ಸಮರ್ಪಕವಾಗಿ ಪೈಪ್ ಜೋಡಿಸದ ಕಾರಣ ಕಸಕಡ್ಡಿ ತುಂಬಿ ಹಳ್ಳದಲ್ಲಿ ಹರಿಯುವ ನೀರು ಜಮೀನುಗಳಿಗೆ ನುಗ್ಗಿದ್ದರಿಂದ ಮಣ್ಣು ಕೊಚ್ಚಿಹೋಗಿದೆ.

ಆಲೂರು: ಮನೆ ನೆಲಸಮ

ಆಲೂರು: ಸಮೀಪದ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಭರತವಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಗಾಳೀ ಸಹಿತ ಮಳೆಗೆ ಮನೆಯೊಂದು ಕುಸಿದಿದೆ.ಭಾರಿ ಬಿರುಗಾಳಿಯೊಂದಿಗೆ ಬಂದ ಮಳೆಯಿಂದ ಭರತವಳ್ಳಿ ಗ್ರಾಮದ ಸಾಬು ಸಾಹೇಬರಿಗೆ ಸೇರಿದ ಮಂಗಳೂರು ಹೆಂಚಿನ ಮನೆ ಕುಸಿದು ಬಿದ್ದಿದೆ. ಮಳೆ ನೀರು ಮನೆಗೆ ನುಗ್ಗಿದ್ದರಿಂದ ಮನೆಯಲ್ಲಿದ್ದ ಸಾಮಾನುಗಳು ಹಾಳಾಗಿವೆ. ಇದರಿಂದ ಅಪಾರ ಹಾನಿ ಉಂಟಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.