ಶುಕ್ರವಾರ, ನವೆಂಬರ್ 22, 2019
26 °C
ಜಿಲ್ಲೆಯಾದ್ಯಂತ ಮೊದಲ ಮಳೆಯ ಸ್ಪರ್ಶ: ತಣಿದ ಇಳೆ

ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತ

Published:
Updated:
ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತ

ಹಾವೇರಿ: ಜಿಲ್ಲೆಯಲ್ಲಿ ಮೊದಲ ಮಳೆಯ ಸ್ಪರ್ಶ ಜೋರಾಗಿದ್ದು, ಬುಧವಾರ ಕೆಲವಡೆ ಬಿದ್ದ ಮಳೆಯ ಅರ್ಭಟಕ್ಕೆ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿತಲ್ಲದೇ, ಬಿಸಿಲಿನ ತಾಪಕ್ಕೆ ತತ್ತರಿಸಿದ್ದ ಜನತೆಗೆ ತಂಪೆರೆಯಿತು.ನಗರ ಸೇರಿದಂತೆ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದಲೇ ಬಿಸಿಲಿನ ತಾಪ ಹೆಚ್ಚಾಗಿತ್ತು. ಸಂಜೆ ಇದ್ದಕ್ಕಿಂತ ಮೋಡ ಕವಿದ ವಾತಾವರಣ ನಿರ್ಮಾಣವಾಯಿತು. ನಂತರದ ಕೆಲವೇ ನಿಮಿಷಗಳಲ್ಲಿ  ಸಿಡಿಲು, ಗುಡುಗು ಮಿಶ್ರಿತ ಬಿರುಗಾಳಿ ಸಹಿತ ಮಳೆ ಸುರಿದಿದೆ. ಹಾವೇರಿ ನಗರ ಸೇರಿದಂತೆ ತಾಲ್ಲೂಕಿನ ಇತರಡೆ, ಬ್ಯಾಡಗಿ ಪಟ್ಟಣ, ಹಾನಗಲ್, ಶಿಗ್ಗಾವಿ, ಸವಣೂರು ಹಾಗೂ ರಾಣೆಬೆನ್ನೂರಿನಲ್ಲಿ ವರ್ಷದ ಮೊದಲ ಮಳೆ ತಂಪೆರೆದಿದೆ.ಎಲ್ಲ ಕಡೆಗಳಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು, ಆದರೆ, ಹಾವೇರಿ ನಗರದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದನ್ನು ಹೊರತುಪಡಿಸಿ ಬೇರೆಡೆ ಎಲ್ಲಿಯೂ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.ಸಂಚಾರ ಅಸ್ತವ್ಯಸ್ತ: ಹಾವೇರಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಬಿರುಗಾಳಿ ಮಿಶ್ರಿತ ಮಳೆಗೆ ನಗರದ ಎಲ್ಲ ಚರಂಡಿಗಳು ತುಂಬಿ ಹೊರಚೆಲ್ಲಿದವು. ಚರಂಡಿ ನೀರು ರಸ್ತೆಗಳ ಮೇಲೆ ಹರಿದು ಸಂಪೂರ್ಣ ಜಲಾವೃತಗೊಂಡಿದ್ದವು. ನಗರದ ಗೂಗಿಕಟ್ಟಿ ಪ್ರದೇಶ, ಬಸ್ ನಿಲ್ದಾಣದ ಎದುರು ಹಾಗೂ ಹಾವೇರಿ- ಹಾನಗಲ್ ರಸ್ತೆಯಲ್ಲಿ ಸುಮಾರು ಎರಡು ಅಡಿ ನೀರು ನಿಂತ ಪರಿಣಾಮ ಸಂಚಾರ ಹಾಗೂ ಜನಜೀವನ ಅಸ್ತವ್ಯಸ್ತಗೊಂಡಿತ್ತು.ನೀರಿನಲ್ಲಿ ವಾಹನಗಳು ಚಲಿಸಲಾಗದೇ ಮಳೆ ನಿಂತ ಮೇಲೆಯೂ ಸುಮಾರು ಒಂದು ಗಂಟೆಗಳ ಕಾಲ ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ನೀರು ಹರಿದು ಹೋಗುವವರೆಗೆ ವಾಹನಗಳು ಅತ್ತಿತ್ತ ಅಲುಗಾಡದ ಪರಿಸ್ಥಿತಿ ನಿರ್ಮಾಣವಾಗಿತ್ತು. ನೀರು ಹರಿದು ಹೋದ ಮೆಲೆಯೂ ಚರಂಡಿಯಲ್ಲಿನ ಹೊಲು, ಪ್ಲಾಸ್ಟಿಕ್ ಹಾಗೂ ಕಸಕಡ್ಡಿ ರಸ್ತೆ ಮೆಲೆ ನಿಂತು ಜನರಿಗೆ ಕಿರಿಕಿರಿಯನ್ನುಂಟು ಮಾಡಿತು.ಮಳಿಗೆಗಳು ಜಲಾವೃತ: ಪ್ರತಿಸಲ ಮಳೆ ಬಂದಾಗ ನಗರದ ಗೂಗಿಕಟ್ಟಿ ಪ್ರದೇಶದಲ್ಲಿ ನೀರು ನುಗ್ಗಿ ಚರಂಡಿ ನೀರಿನ ಹೊಂಡ ನಿರ್ಮಾಣವಾದಂತೆ ಈ ಬಾರಿ ಮೊದಲ ಮಳೆಗೆ ಇಡೀ ಗೂಗಿಕಟ್ಟಿ ಪ್ರದೇಶ ಹಾಗೂ ಮಳಿಗೆಗಳು ಜಲಾವೃತಗೊಂಡವು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅಂಗಡಿಕಾರರು ಅಂಗಡಿ ಬಿಟ್ಟು ಹೊರ ಬರದ ಸ್ಥಿತಿ ನಿರ್ಮಾಣವಾಗಿತ್ತು. ನೀರಿನ ಮಟ್ಟ ಕಡಿಮೆಯಾದ ಮೆಲೆ ಅಂಗಡಿಗಳಿಂದ ಹೊರಬಂದರೂ ವ್ಯಾಪಾರ ಮಾತ್ರ ಮಾಡಲು ಸಾಧ್ಯವಾಗಲಿಲ್ಲ.ಈ ಪ್ರದೇಶದಲ್ಲಿ ಗಟಾರು ನಿರ್ಮಾಣ ಮಾಡಿದ್ದರೂ ಅವೈಜ್ಞಾನಿಕವಾಗಿವೆ. ಅದು ಅಲ್ಲದೇ ಗಟಾರುಗಳನ್ನು ಸ್ವಚ್ಛಗೊಳಿಸದಿರುವುದರಿಂದ ಈ ರೀತಿ ಸಮಸ್ಯೆ ಉಂಟಾಗುತ್ತದೆ. ಪ್ರತಿಬಾರಿ ಮಳೆ ಬಂದು ಜಲಾವೃತಗೊಂಡ ಮೇಲೆ ನೀರು ಹರಿದು ಹೋಗಲು ಹಾಗೂ ಅದು ಒಣಗಿ ಅಡ್ಡಾಡಲು ನಾಲ್ಕೈದು ದಿನಗಳು ಬೇಕಾಗುತ್ತದೆ. ಅಲ್ಲಿವರೆಗೆ ಇಲ್ಲಿನ ಮಳಿಗೆಯ ವ್ಯಾಪಾರ ಸಂಪೂರ್ಣ ಸ್ಥಗಿತಗೊಳ್ಳುತ್ತಿದೆ.

ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ಬಂದರೂ ಯಾವುದೇ ಪ್ರಯೋಜನವಾಗಿಲ್ಲ. ನಗರಸಭೆ ಅಧಿಕಾರಿಗಳು ಬಾಡಿಗೆ ವಸೂಲಿಗೆ ಸರಿಯಾಗಿ ಬರುತ್ತಾರೆ. ಆದರೆ, ಯಾವುದೇ ಮೂಲಸೌಕರ್ಯಗಳನ್ನು ಒದಗಿಸಿಲ್ಲ ಎಂದು ಗೂಗಿಕಟ್ಟಿ ಮಳಿಗೆಯ ಬಳಕೆದಾರರಾದ ಸಂಘದ ಅಧ್ಯಕ್ಷ ರಾಮಣ್ಣ ಅಗಡಿ ಆರೋಪಿಸಿದ್ದಾರೆ.ತಂಪೆರೆದ ಮಳೆ: ಜಿಲ್ಲೆಯಾದ್ಯಂತ ಮಂಗಳವಾರ ಬಿದ್ದ ಮಳೆ ಬಿಸಿಲಿನ ತಾಪದಿಂದ ತತ್ತರಿಸಿದ್ದ ಜನಕ್ಕೆ ತಂಪನ್ನೆರೆಯಿತಲ್ಲದೇ, ಬಿಸಿಲಿನ ಝಳಕ್ಕೆ ಬಿಸಿಗೊಂಡ ವಾತಾವರಣವನ್ನು ತಂಪುಗೊಳಿಸಿತು.

ಪ್ರತಿಕ್ರಿಯಿಸಿ (+)