ವರುಷ ಅಳಿಯಿತು, ಸಮಸ್ಯೆಗಳು ಉಳಿದವು...

7

ವರುಷ ಅಳಿಯಿತು, ಸಮಸ್ಯೆಗಳು ಉಳಿದವು...

Published:
Updated:

ಮೊಳಕಾಲ್ಮುರು: 2013 ವರ್ಷ ವೇನೋ ಮುಗಿಯಿತು, ಆದರೆ, ಈ ವರ್ಷದಲ್ಲಿ ತಾಲ್ಲೂಕಿನಲ್ಲಿ ಅನೇಕ ಆಗು–ಹೋಗುಗಳು ನಡೆದಿದ್ದು, ಅಭಿವೃದ್ಧಿ ವಿಷಯದಲ್ಲಿ ಸಾಕಷ್ಟು ’ಇಲ್ಲ’ಗಳ ಮಧ್ಯೆಯೇ ನೂತನ ವರ್ಷಕ್ಕೆ ತಾಲ್ಲೂಕಿನ ಜನತೆ ಕಾಲಿಡುತ್ತಿದ್ದಾರೆ.ಸದಾ ಬರಗಾಲದಿಂದ ಬಳಲುತ್ತಿರುವ ಈ ತಾಲ್ಲೂಕಿಲ್ಲಿ ಈ ವರ್ಷವೂ ವರುಣ ಕಣ್ಣಾಮುಚ್ಚಾಲೆ ಆಡಿದ್ದು, ಪ್ರಮುಖ ಬೆಳೆ ಶೇಂಗಾ ಕೈಕೊಟ್ಟಿದೆ. ಕೈಗೆ ಸಿಕ್ಕಿರುವ ಅಲ್ಪಸ್ವಲ್ಪ ಶೇಂಗಾ ಮಾರಾಟಬೆಲೆ ಕುಸಿತ ಗುಮ್ಮ ಬೆಳೆಗಾರರನ್ನು ಕಾಡುತ್ತಿದೆ. ಈರುಳ್ಳಿಯಿಂದ ಈ ಭಾಗದ ರೈತರಿಗೆ ತುಸು ಸಮಾಧಾನ ಸಿಕ್ಕರೂ ಮತ್ತೆ ನಾಟಿ ಮಾಡಲು ಇತಿಹಾಸದಲ್ಲೇ ಕಾಣದಷ್ಟು ಬೆಲೆಗೆ ಬೀಜ ದರ ಏರಿಕೆಯಾಗಿರುವುದು ಆತಂಕ ತಂದಿದೆ.ಕಳೆದ 10 ವರ್ಷಗಳಿಗೆ ಹೋಲಿಕೆ ಮಾಡಿದಲ್ಲಿ ಈ ವರ್ಷ ಇಲ್ಲಿ ಅತೀ ಕಡಿಮೆ ಮಳೆ ಬಿದ್ದಿದೆ. ಅಂತರ್ಜಲ 500 ಅಡಿಗೂ ಹೆಚ್ಚು ಆಳಕ್ಕೆ ಕುಸಿದಿದ್ದು, 65 ಜನವಸತಿ ಪ್ರದೇಶದ ಕುಡಿಯುವ ನೀರಿನಲ್ಲಿ ತೀವ್ರ ಫ್ಲೋರೈಡ್‌ ಅಂಶವಿರುವುದು ದೃಢಪಟ್ಟಿದೆ. ದೇವಸಮುದ್ರ ಹೋಬಳಿಯಲ್ಲಿ 3000 ಟಿಡಿಎಸ್‌ ಲವಣಾಂಶ ಪತ್ತೆಯಾಗಿ ಜಾನುವಾರುಗಳು ಕುಡಿಯಲೂ ಯೋಗ್ಯವಲ್ಲ ಎಂಬುದು ಕಂಡುಬಂದಿದೆ. ಇದಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮಾತು ವರ್ಷ ಮುಗಿದರೂ ಕಾರ್ಯರೂಪಕ್ಕೆ ಇಳಿದಿಲ್ಲ ಎನ್ನಲಾಗಿದೆ.ತಾಲ್ಲೂಕಿನಲ್ಲಿ ಹಾದುಹೋಗಿರುವ ರಾಜ್ಯಹೆದ್ದಾರಿ ಅಪಘಾತಗಳಿಗೆ ಕುಖ್ಯಾತಿ ಪಡೆದಿದೆ. 2013ರಲ್ಲಿ ಒಟ್ಟು 112 ಅಪಘಾತ ನಡೆದಿದ್ದು, 33 ಮಂದಿ ಮೃತಪಟ್ಟು, 264 ಮಂದಿ ಗಾಯಗೊಂಡಿದ್ದಾರೆ. ಒಂದೇ ವರ್ಷದಲ್ಲಿ ಐದು ಮಂದಿ ತಹಶೀಲ್ದಾರ್‌ಗಳು ಬದಲಾದ ಖ್ಯಾತಿ ಈ ವರ್ಷಕ್ಕೆ ಸೇರ್ಪಡೆಯಾಗಿದೆ. ರೇಷ್ಮೆಕೃಷಿಯಲ್ಲಿ ತಾಲ್ಲೂಕಿನ ಬೆಳೆಗಾರರು ದಾಖಲೆ ಉತ್ಪನ್ನ ಮಾಡುವ ಮೂಲಕ ರಾಜ್ಯದ

ಗಮನ ಸೆಳೆದಿರುವುದು ಈ ವರ್ಷದ ಸಾಧನೆ.16 ವರ್ಷ ಕಾಂಗ್ರೆಸ್‌ನ ಭದ್ರಕೋಟೆ ಎಂಬ ಹೆಸರು ಪಡೆದಿದ್ದ ಈ ಕ್ಷೇತ್ರ ಈ ಬಾರಿ ಅಚ್ಚರಿಯಾಗಿ ಬಿಎಸ್ಆರ್‌ ಕಾಂಗ್ರೆಸ್‌ಗೆ ಒಲಿಯುವ ಮೂಲಕ ಎನ್‌.ವೈ. ಗೋಪಾಲಕೃಷ್ಣ ಪರಾಭವಗೊಂಡು ಎಸ್‌. ತಿಪ್ಪೇಸ್ವಾಮಿ ಶಾಸಕರಾಗಿ ಆಯ್ಕೆಯಾದರು. ಈ ಮೂಲಕ ತಾಲ್ಲೂಕಿಗೆ ಸಚಿವ ಸ್ಥಾನ ಅದೃಷ್ಟ ಸಹ ಕೈತಪ್ಪಿತು ಎಂಬ ಮಾತು ಕೇಳಿಬಂದವು. ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ಈ ವರ್ಷ ನೀರಾವರಿ ಹೋರಾಟಗಳು ಸದೃಢವಾಗಿ ಆರಂಭವಾಗಿವೆ.ತಾಲ್ಲೂಕಿನ ಕೊಂಡ್ಲಹಳ್ಳಿಯ ಬಡಕುಟುಂಬದಿಂದ ಬಂದ ಹಿರಿಯ ವಕೀಲ ಎಚ್. ಕಾಂತರಾಜ್‌ ರಾಜ್ಯಸರ್ಕಾರದ ಹೆಚ್ಚುವರಿ

ಅಡ್ವೊಕೇಟ್‌ ಜನರಲ್‌ ಆಗಿ ಆಯ್ಕೆಯಾಗಿರುವುದು. 371 ಜೆ ಕಾಲಂಗೆ ತಾಲ್ಲೂಕನ್ನು ಸೇರ್ಪಡೆ ಮಾಡಿ ಎಂಬ ಹೋರಾಟ ಆರಂಭ, ನೀರಿನ ಮೂಲವೇ ಇಲ್ಲದ ರಂಗಯ್ಯದುರ್ಗ ಜಲಾ ಶಯಕ್ಕೂ  ಮುನ್ನ ಎರಡು ಬೃಹತ್‌ ಬ್ಯಾರೇಜ್‌ ಮಂಜೂರು ಆಗಿರುವುದು 2013ರಲ್ಲಿ ತಾಲ್ಲೂಕಿನ ಪ್ರಮುಖ ಘಟನಾವಳಿಯಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry